ಹಸಿರು ಕ್ರಾಂತಿ ವರದಿ ಬೆಳಗಾವಿ
ಲಿಂ.ಶಿವಬಸವ ಸ್ವಾಮೀಜಿ ಅವರ 137ನೇ ಜಯಂತ್ಯುತ್ಸವದ ಅಂಗವಾಗಿ ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದಿಂದ ಪ್ರತಿವರ್ಷ ನೀಡಲಾಗುವ ಪ್ರತಿಷ್ಠಿತ ಕನ್ನಡ ನುಡಿಶ್ರೀ ಪ್ರಶಸ್ತಿಗೆ ಸುವರ್ಣ ನ್ಯೂಸ್ನ ವರದಿಗಾರ ಅನಿಲ ಕಾಜಗಾರ ಭಾಜನರಾಗಿದ್ದಾರೆ.
ಬೆಳಗಾವಿಯಲ್ಲಿ ಕನ್ನಡಮಯ ವಾತಾವರಣ ಬೆಳೆಯಲು ಮತ್ತು ಬೆಳಗಾವಿ ಕರ್ನಾಟಕದಲ್ಲೇ ಉಳಿಯಲು ಶಿವಬಸವ ಸ್ವಾಮೀಜಿಯವರ ಕೊಡುಗೆ ಅಪಾರವಾಗಿದ್ದು, ಅವರ ಜಯಂತಿ ಅಂಗವಾಗಿ ನಾಗನೂರು ರುದ್ರಾಕ್ಷಿ ಮಠದ ಹಿಂದಿನ ಪೀಠಾಧಿಪತಿ ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು (ಗದಗ-ಡಂಬಳ ತೋಂಟದಾರ್ಯ ಮಠದ ಪೀಠಾಧಿಪತಿ) ಹಾಗೂ ಹಾಲಿ ಪೀಠಾಧಿಪತಿ ಡಾ.ಅಲ್ಲಮಪ್ರಭು ಸ್ವಾಮೀಜಿಯವರು ಪ್ರತಿವರ್ಷ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುತ್ತ ಬಂದಿದ್ದಾರೆ. ಡಿ.6 ರಂದು ಬೆಳಗಾವಿಯ ರುದ್ರಾಕ್ಷಿ ಮಠದಲ್ಲಿ ನಡೆಯುವ ಲಿಂ.ಶಿವಬಸವ ಸ್ವಾಮೀಜಿ ಅವರ 137ನೇ ಜಯಂತ್ಯುತ್ಸವದಲ್ಲಿ ಸಂಜೆ 6 ಗಂಟೆಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಶ್ರೀಮಠವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಜಿಲ್ಲಾ ರಾಜ್ಯೋತ್ಸವ ಸೇರಿದಂತೆ ಕಾಶಿ ಪೀಠದಿಂದ ನೀಡುವ ಮಾಧ್ಯಮ ಭೂಷಣ ಪ್ರಶಸ್ತಿ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳಿಂದ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಅನಿಲ ಕಾಜಗಾರ ಅವರು ರಾಜ್ಯದ ಪ್ರತಿಷ್ಠಿತ ಪತ್ರಿಕೆಗಳಾದ ಪ್ರಜಾವಾಣಿ, ವಿಜಯ ಕರ್ನಾಟಕ, ವಿಜಯವಾಣಿ, ಈಟಿ ಭಾರತ ಸೇರಿದಂತೆ ಡಿಜಿಟಲ್, ಎಲೆಕ್ಟ್ರಾನಿಕ್ ಮಿಡಿಯಾದಲ್ಲಿ ಸುಮಾರು ಒಂದೂವರೆ ದಶಕಗಳ ಕಾಲ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಸುವರ್ಣ ನ್ಯೂಸ್ನಲ್ಲಿ ಬೆಳಗಾವಿ ಜಿಲ್ಲಾ ವರದಿಗಾರನಾಗಿ ಕಳೆದ ಮೂರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಮಾಧ್ಯಮ ಕ್ಷೇತ್ರದಲ್ಲಿನ ಅವರ ಸೇವೆ ಹಾಗೂ ಸಾಧನೆ ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಆಯ್ಕೆ ಸಮಿತಿ ತಿಳಿಸಿದೆ.