ಹಸಿರು ಕ್ರಾಂತಿ ವರದಿ ಬೆಳಗಾವಿ
ನಗರದ ಕೆಎಲ್ಎಸ್ ಗೋಗಟೆ ತಂತ್ರಜ್ಞಾನ ಸಂಸ್ಥೆಯ (ಕೆಎಲ್ಎಸ್ ಜಿಐಟಿ) ರಸಾಯನಶಾಸ್ತ್ರ ವಿಭಾಗವು ತನ್ನ ರಾಷ್ಟ್ರೀಯ ವಿಜ್ಞಾನ ದಿನದ ಉಪನ್ಯಾಸ ಮಾಲಿಕೆಯ ಭಾಗವಾಗಿ ಬಿ.ಇ ಮತ್ತು ಬಿ.ಎಸ್ಸಿ (ಆನರ್ಸ್) ವಿದ್ಯಾರ್ಥಿಗಳಿಗಾಗಿ ಗ್ರೀನ್ ಹೈಡ್ರೋಜನ್ ತಂತ್ರಜ್ಞಾನಗಳು ಕುರಿತು ತಜ್ಞರ ಉಪನ್ಯಾಸವನ್ನು ಶುಕ್ರವಾರ ಆಯೋಜಿಸಿತ್ತು.
ಗೋವಾದ ಐಐಟಿಯ ರಾಸಾಯನಿಕ ಮತ್ತು ಸಾಮಗ್ರಿ ವಿಜ್ಞಾನ ಶಾಲೆಯ ಸಹಾಯಕ ಪ್ರಾಧ್ಯಾಪಕ ಡಾ.ರವಿ ಸಂಕಣ್ಣವರ್ ಉಪನ್ಯಾಸ ನೀಡಿದರು. ಹೈಡ್ರೋಜನ್ನ ಮೂಲಭೂತ ಅಂಶಗಳು, ಅದರ ಅನುಕೂಲಗಳು ಮತ್ತು ವಿಭಿನ್ನ ಉತ್ಪಾದನಾ ತಂತ್ರಜ್ಞಾನಗಳ ಆಧಾರದ ಮೇಲೆ ಹೈಡ್ರೋಜನ್ನ ವರ್ಗೀಕರಣವನ್ನು ಪರಿಚಯಿಸಿದರು. ಅವರು ವಿವಿಧ ಪ್ರಕಾರದ ಎಲೆಕ್ಟ್ರೋಲೈಸರ್ಗಳು, ಗ್ರೀನ್ ಹೈಡ್ರೋಜನ್ ಉತ್ಪಾದನೆಗೆ ಸಂಬಂಧಿಸಿದ ಸವಾಲುಗಳು ಮತ್ತು ಸಂಭಾವ್ಯ ಪರಿಹಾರಗಳ ಕುರಿತು ವಿವರಿಸಿದರು.
ಶೈಕ್ಷಣಿಕ ಕ್ಷೇತ್ರದ ಪಾತ್ರವನ್ನು ಒತ್ತಿ ಹೇಳಿದ ಅವರು, ಪಠ್ಯಕ್ರಮದಲ್ಲಿ ಸಂಬಂಧಿತ ವಿಷಯಗಳನ್ನು ಅಳವಡಿಸುವ, ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ನೀಡುವ ಮತ್ತು ಉತ್ಪಾದನಾ ದಕ್ಷತೆಯನ್ನು ಹೆಚ್ಚಿಸಲು ಸುಧಾರಿತ ಸಾಮಗ್ರಿಗಳನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನು ಪ್ರತಿಪಾದಿಸಿದರು.
ಈ ಕಾರ್ಯಕ್ರಮವನ್ನು ಪ್ರಾಚಾರ್ಯ ಡಾ.ವಿಜಯ ಅಥವಾಲೆ ಮತ್ತು ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಪಿ.ಎಸ್.ಕೌಜಲಗಿ ಮಾರ್ಗದರ್ಶನದಲ್ಲಿ ಆಯೋಜಿಸಲಾಗಿತ್ತು. ಇದನ್ನು ಡಾ.ಜಾಹ್ನವಿ ಎಂ.ಕರೇಕರ್ ಸಂಯೋಜಿಸಿದ್ದು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು.