ರಾಮದುರ್ಗ: ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪನ ದಿನಾಚರಣೆ ಅಂಗವಾಗಿ ಸ್ಥಳೀಯ ವಿದ್ಯಾಚೇತನ ಶಾಲಾ ಆವರಣದಲ್ಲಿರುವ ಗುರುಭವನದಲ್ಲಿ ಧ್ವಜ ದಿನದ ಸ್ಟಿಕರ್ಗಳ ಬಿಡುಗಡೆ ಸಮಾರಂಭ ಹಾಗೂ ಸ್ಕೌಟ್-ಗೈಡ್ ಶಿಕ್ಷಕ ಶಿಕ್ಷಕಿಯರ ಸಮಾವೇಶ ಜರುಗಿತು.
ಈ ಸಂದರ್ಭದಲ್ಲಿ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶೇಖರ ಹಿರೇಮಠ ಮಾತನಾಡಿ, ಮಕ್ಕಳಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ಮಹತ್ವ ತಿಳಿಸುವಲ್ಲಿ ಮುಂದಾಗಬೇಕು ಎಂದು ತಿಳಿಸಿದ ಅವರು, ತಾವು ಸಹ ಬಾಲ್ಯದಲ್ಲಿದ್ದಾಗ ಸ್ಕೌಟ್ ಆಗಿದ್ದ ಅನುಭವವನ್ನು ವಿವರಿಸಿದರು.
ಜಿಲ್ಲಾ ಸ್ಕೌಟ್ ತರಬೇತಿ ಸಲಹೆಗಾರ ವೈ.ವಿ. ಗೊರವನಕೊಳ್ಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಸಮನ್ವಯಾಧಿಕಾರಿ ಶಿವಾನಂದ ಛಾಯಪ್ಪಗೋಳ, ಶಿಕ್ಷಣ ಸಂಯೋಜಕ ಎಸ್.ಪಿ ಕರಲಿಂಗಪ್ಪನವರ, ಪಿಎಂಶ್ರೀ ಶಾಲೆಯ ಮುಖ್ಯೋಪಾಧ್ಯಾಯ ಚಾಮುಕ್ನವರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ನಂತರ ನೂತನವಾಗಿ ಕಾರ್ಯಭಾರ ನಿರ್ವಹಿಸಿರುವ ಪ್ರಬಾರಿ ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶೇಖರ ಹಿರೇಮಠ ಅವರನ್ನು ಸನ್ಮಾನಿಸಲಾಯಿತು. ತಾಲೂಕ ಘಟಕದ ಕಾರ್ಯದರ್ಶಿ ಎಂ.ಎನ್. ಗವನ್ನವರ ಸ್ವಾಗತಿಸಿದರು. ಶಿಕ್ಷಕಿ ಬಡಿಗೇರ ಅವರು ನಿರೂಪಿಸಿ, ವಂದಿಸಿದರು.