ಬೆಳಗಾವಿ: ಹುಕ್ಕೇರಿ ತಾಲ್ಲೂಕಿನ ಹುದಲಿ ಗ್ರಾಮದ ಬೆಳಗಾಂ ಶುಗರ್ಸ್ ಪ್ರೈವೇಟ್ ಲಿಮಿಟೆಡ್ ಸಕ್ಕರೆ ಕಾರ್ಖಾನೆಯಲ್ಲಿ 2026-27ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಶನಿವಾರ ಚಾಲನೆ ನೀಡಲಾಯಿತು.
ಕಾರ್ಖಾನೆಯ ಚೇರ್ಮನ್ ಹಾಗೂ ಮುಖ್ಯ ಹಣಕಾಸು ಅಧಿಕಾರಿ ಪ್ರದೀಪಕುಮಾರ ಇಂಡಿ ಅವರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ, ಕಬ್ಬು ನುರಿಸುವ ಯಂತ್ರಗಳಿಗೆ ಚಾಲನೆ ನೀಡುವ ಮೂಲಕ ಪ್ರಸಕ್ತ ಹಂಗಾಮಿನ ಕಾರ್ಯಾರಂಭಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರದೀಪಕುಮಾರ ಇಂಡಿ ಅವರು, ಕಾರ್ಖಾನೆಯ ಬೆಳವಣಿಗೆ ಮತ್ತು ಯಶಸ್ವಿ ಕಾರ್ಯನಿರ್ವಹಣೆಯಲ್ಲಿ ಕಬ್ಬು ಬೆಳೆಗಾರ ರೈತರ ಪಾತ್ರ ಮಹತ್ವದ್ದಾಗಿದೆ. ಕಾರ್ಖಾನೆಗೆ ಕಬ್ಬು ಪೂರೈಸುವ ಎಲ್ಲ ರೈತರು ಪ್ರಸಕ್ತ ಹಂಗಾಮಿನಲ್ಲಿ ಉತ್ತಮ ಗುಣಮಟ್ಟದ ಹಾಗೂ ಸಮರ್ಪಕವಾಗಿ ಬೆಳೆದ ಕಬ್ಬನ್ನು ಪೂರೈಸುವ ಮೂಲಕ ಕಾರ್ಖಾನೆಯ ಕಾರ್ಯಚಟುವಟಿಕೆಗಳಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ನಡುವೆ ಉತ್ತಮ ಬಾಂಧವ್ಯ ಹಾಗೂ ಪರಸ್ಪರ ಸಹಕಾರ ಅತ್ಯಗತ್ಯ. ರೈತರು ಗುಣಮಟ್ಟದ ಕಬ್ಬು ಪೂರೈಸುವುದರಿಂದ ಕಬ್ಬು ನುರಿಸುವ ಕಾರ್ಯ ಸುಗಮವಾಗಿ ನಡೆಯುವುದರ ಜೊತೆಗೆ ಉತ್ತಮ ಗುಣಮಟ್ಟದ ಸಕ್ಕರೆ ಉತ್ಪಾದನೆಗೂ ಅನುಕೂಲವಾಗುತ್ತದೆ. ಹೀಗಾಗಿ ರೈತರು ಕಾರ್ಖಾನೆಯೊಂದಿಗೆ ಸಹಕಾರದಿಂದ ನಡೆದುಕೊಂಡು ಪ್ರಸಕ್ತ ಹಂಗಾಮಿನ ಯಶಸ್ಸಿಗೆ ಕೈಜೋಡಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ಬಾಗನ್ನಾ ನರೋಟಿ, ಸುರೇಶ ಗೌವನ್ನವರ, ವಿಜಯ ಜಾಧವ, ಅನ್ನಪ್ಪಗೌಡ ಬಾರಿಗಿಡದ ಸೇರಿದಂತೆ ಹಲವು ರೈತರು ಉಪಸ್ಥಿತರಿದ್ದರು. ಕಾರ್ಖಾನೆಯ ಹಿರಿಯ ಉಪಾಧ್ಯಕ್ಷ ಎಲ್.ಆರ್. ಕಾರಗಿ, ಉಪಾಧ್ಯಕ್ಷ ಎ.ಎಸ್. ರಾಣಾ, ವಿವಿಧ ವಿಭಾಗಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಕಾರ್ಮಿಕರು ಪಾಲ್ಗೊಂಡಿದ್ದರು.