ರಾಮದುರ್ಗ: ಪ್ರಾಥಮಿಕ ಹಾಗೂ ಪ್ರೌಢ ಹಂತದಲ್ಲಿಯೇ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವಲ್ಲಿ ಶಾಲಾ ಶಿಕ್ಷಣ ಇಲಾಖೆಯ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮಗಳು ಸಹಕಾರಿಯಾಗಿವೆ. ವಿದ್ಯಾರ್ಥಿಗಳಿಗೆ ಸೂಕ್ತ ವೇದಿಕೆ ಹಾಗೂ ಪ್ರೋತ್ಸಾಹ ನೀಡಿದಲ್ಲಿ ಉತ್ತಮ ಭವಿಷ್ಯ ನಿರ್ಮಾಣಕ್ಕೆ ಅನೂಕೂಲವಾಗುತ್ತದೆ ಎಂದು ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶೇಖರ ಹಿರೇಮಠ ಹೇಳಿದರು.
ತಾಲೂಕಿನ ಕುನ್ನಾಳ ಗ್ರಾಮದ ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ೨೦೨೬-೨೭ನೇ ಸಾಲಿನ ಹುಲಕುಂದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ವಿದ್ಯಾರ್ಥಿಗಳು ವಿವಿಧ ಕೌಶಲಗಳನ್ನು ಹೊಂದಿದಾಗ ಮಾತ್ರ ೨೧ನೇ ಶತಮಾನದ ಶೈಕ್ಷಣಿಕ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಪಡೆಯುತ್ತಾರೆ. ಕಾರಣ ಪ್ರತಿ ಮಗುವೂ ವಿಶಿಷ್ಟ ಎಂದು ಅರಿತು ಅವರ ಆಸಕ್ತಿ ಗುರುತಿಸಿ ಸೃಜನಶೀಲತೆಯನ್ನು ಬೆಳೆಸುವ ಜವಾಬ್ದಾರಿ ಶಿಕ್ಷಕರದು ಎಂದರು.
ಹುಲಕುಂದ ಸಮೂಹ ಸಂಪನ್ಮೂಲ ವ್ಯಕ್ತಿ ವಿ.ಡಿ ದಳವಾಯಿ ಪ್ರಾಸ್ತಾವಿಕ ಮಾತನಾಡಿ, ಸರಿಯಾದ ಸಮಯದಲ್ಲಿ ಅವಕಾಶಗಳನ್ನು ಮಕ್ಕಳಿಗೆ ಒದಗಿಸುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ಮೂಡುವಂತೆ ಮಾಡಬಹುದು, ಅಂತಹುದೇ ಆಶಯ ಹೊಂದಿದ ಈ ಕಾರ್ಯಕ್ರಮವನ್ನು ಕುನ್ನಾಳ ಗ್ರಾಮಸ್ಥರು ಉತ್ಕೃಷ್ಟ ಶಾಲಾ ಪ್ರೀತಿಯ ಮೂಲಕ ಯಶಸ್ವಿಗೊಳಿಸಿದ್ದಾರೆ ಎಂದರು.
ಹದಿಮೂರು ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿ ಪದೋನ್ನತಿ ಹೊಂದಿದ ದೈಹಿಕ ಶಿಕ್ಷಕ ಬಿ.ಬಿ.ಹಾಲೊಳ್ಳಿ ದಂಪತಿಯನ್ನು ಹಾಗೂ ಇಲಾಖೆಯ ಅಧಿಕಾರಿಗಳು, ಶಿಕ್ಷಕ ಸಂಘಟನೆಯ ಪದಾಧಿಕಾರಿಗಳು, ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕ್ಷೇತ್ರ ಸಮನ್ವಯಾಧಿಕಾರಿ ಶಿವಾನಂದ ಛಾಯಪ್ಪಗೋಳ, ಶಿಕ್ಷಣ ಸಂಯೋಜಕರಾದ ಎಸ್.ಪಿ ಕರಲಿಂಗಪ್ಪನವರ, ಎನ್.ಡಿ ರಾಮದುರ್ಗ, ಎಸ್.ಡಿ.ಎಮ್.ಸಿ ಅಧ್ಯಕ್ಷ ಸತೀಶ ಮಳಲಿ, ಸಿ.ಆರ್.ಪಿಗಳಾದ ವಿ.ಡಿ ದಳವಾಯಿ, ಪ್ರಕಾಶ ಜೇವೂರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ವಿ. ಪಾಟೀಲ, ಕಾರ್ಯದರ್ಶಿ ಎಸ್.ಸಿ. ಹುರಕಡ್ಲಿ, ಬಿ.ಬಿ ಸಂಗಣ್ಣವರ, ಪ್ರಕಾಶ ಕಂಬಳಿ, ಎಲ್.ಎಂ. ಅಣ್ಣಿಗೇರಿ, ಅಶೋಕ ಬೂದಿ, ಎನ್.ಎಸ್ ದೊಡಮನಿ, ವಿ.ಜಿ ಪಾಟೀಲ, ಜಿ.ಎಂ. ಪಾಟೀಲ, ಎಸ್.ಬಿ ಜಂಬಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಎಫ್.ಎನ್ ಕುರಬೇಟ ಸ್ವಾಗತಿಸಿದರು. ಎಸ್.ಎ ಕಳ್ಳಿ ನಿರೂಪಿಸಿದರು. ವಿ.ಆರ್ ಅಣ್ಣಿಗೇರಿ ವಂದಿಸಿದರು.
ಫೋಟೊ ಶೀರ್ಷಿಕೆ: ೦೭ಆರ್ಎಂಡಿ.೧
ರಾಮದುರ್ಗ: ಕುನ್ನಾಳ ಗ್ರಾಮದ ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ೨೦೨೬-೨೭ನೇ ಸಾಲಿನ ಹುಲಕುಂದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.