Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Bijapur

ಆತ್ಮೋದ್ಧಾರ ಅನುಭಾವ ಸಾಹಿತ್ಯದ ತಿರುಳು-ಮಹಾಲಿಂಗೇಶ್ವರಶ್ರೀ

’ಏನು ಹೇಳಲಿ ಚಿತ್ರಸಿಂಗಿ’ ಹಾಗೂ ’ಭಜನಿ ಸಂಪದ’ ಕೃತಿಗಳ ಲೋಕಾರ್ಪಣೆ



ತಾಳಿಕೋಟೆ, ಮನುಷ್ಯ ಜನ್ಮವೆತ್ತಿದ ಮೇಲೆ ಹಣ ಸಂಪಾದನೆ, ಆಸ್ತಿ ಸಂಪಾದನೆ, ಕೀರ್ತಿ ಸಂಪಾದನೆ ಹಾಗೂ ಜನ ಸಂಪಾದನೆ ಮಾಡುತ್ತಾನೆ. ಆದರೆ ಇವೆಲ್ಲ ಸಂಪಾದನೆಗಳಿಗಿಂತ ಭಜನಿ ಸಂಪಾದನೆ ಅತ್ಯಂತ ಶ್ರೇಷ್ಠವಾದದ್ದು. ಪ್ರತಿಯೊಂದು ಗ್ರಾಮದಲ್ಲಿಯೂ ಭಜನಿ ಪರಂಪರೆ ಜೀವಂತವಾಗಿದ್ದರೆ ಆ ಗ್ರಾಮವೇ ಆಧ್ಯಾತ್ಮಿಕವಾಗಿ ಸಂಪದ್ಭರಿತವಾಗಿರುತ್ತದೆ ಎಂದು ಬೋರಗಿ ಪುರದಾಳದ ಸದ್ಗುರು ವಿಶ್ವಾರಾಧ್ಯ ಮಠದ ಪೀಠಾಧಿಪತಿ ತಪೋರತ್ನಂ ಶ್ರೀ ಶ್ರೀ ಮಹಾಲಿಂಗೇಶ್ವರ ಮಹಾಸ್ವಾಮಿಗಳು ಹೇಳಿದರು.
       ಪಟ್ಟಣದ ಎಚ್.ಎಸ್. ಪಾಟೀಲ ಸಭಾಭವನದಲ್ಲಿ ಶುಕ್ರವಾರ ಸಂಜೆ ಕನ್ನಡ ಸಂಘ ಹಾಗೂ ಶರಣ ಸಾಹಿತ್ಯ ಪರಿಷತ್ತು ತಾಳಿಕೋಟೆ ಇವರ ಸಂಯುಕ್ತಾಶ್ರಯದಲ್ಲಿ ಡಾ. ಎಚ್.ಬಿ. ನಡವಿನಕೇರಿ ಅವರು ತಂದೆಯ ಸ್ಮರಣಾರ್ಥವಾಗಿ ಹೊರತಂದ ’ಏನು ಹೇಳಲಿ ಚಿತ್ರಸಿಂಗಿ’ ಹಾಗೂ ’ಭಜನಿ ಸಂಪದ’ ಎಂಬ ಎರಡು ಕೃತಿಗಳ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಭಜನಿ ಎಂದರೆ ಭವದ ಬಂಧನ ಹಾಗೂ ಜನನ-ಮರಣಗಳ ಚಕ್ರವನ್ನು ದಾಟಿ ಅಂತರಾತ್ಮದ ಅರಿವಿನೆಡೆಗೆ ಸಾಗುವ ಮಾರ್ಗವಾಗಿದೆ. ಭಜನೆಯಲ್ಲಿ ತೊಡಗಿಸಿಕೊಂಡವರು ಆನಂದ ಮತ್ತು ಸಂತೃಪ್ತಿಯ ಬದುಕನ್ನು ನಡೆಸುತ್ತಾರೆ. ತತ್ವಪದ ಹಾಗೂ ಭಜನಿ ಪರಂಪರೆ ಕಡಕೋಳ, ಶಿಶುವಿನಾಳದಂತೆ ತಿಳಗೂಳ, ಬೋರಗಿ, ಪುರದಾಳ ಭಾಗಗಳಲ್ಲಿಯೂ ಶ್ರೀಮಂತವಾಗಿ ಬೆಳೆದುಬಂದಿದೆ. ಸದ್ಗುರು ಭೀಮಾಶಂಕರರ ತತ್ವಪದ ಪರಂಪರೆ ಇಂದಿಗೂ ಜನಮಾನಸದಲ್ಲಿ ಜೀವಂತವಾಗಿದೆ ಎಂದರು.
      ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ’ಏನು ಹೇಳಲಿ ಚಿತ್ರಸಿಂಗಿ’ ಕವನ ಸಂಕಲನ ಕುರಿತು ಮುದ್ದೇಬಿಹಾಳದ ಎಂ.ಜಿ.ವಿ.ಸಿ. ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಸಾಹಿತಿ ಡಾ. ಪ್ರಕಾಶ ನರಗುಂದ ಅವರು ಮಾತನಾಡಿ ಸಾಹಿತ್ಯ ಕೃತಿಗಳು ಕೇವಲ ಓದಿನ ವಸ್ತುಗಳಲ್ಲ. ಅವು ಸಮಾಜದ ಬದುಕಿಗೆ ಮೌಲ್ಯ, ಮಾರ್ಗದರ್ಶನ ಹಾಗೂ ಹೊಸ ಚಿಂತನೆಗಳನ್ನು ನೀಡುವ ಶಕ್ತಿಯುತ ಮಾಧ್ಯಮಗಳಾಗಿವೆ ಎಂದರು. ಸಾಹಿತ್ಯವೆಂಬುದು ಮನುಷ್ಯನ ಅನುಭವ, ಅನುಭಾವ, ಸಂವೇದನೆ ಮತ್ತು ಜೀವನದರ್ಶನಗಳ ಅಭಿವ್ಯಕ್ತಿಯಾಗಿದೆ. ಸಾಹಿತಿಯ ಸೃಜನಶೀಲ ಮನಸ್ಸು ಸಮಾಜದ ವಿವಿಧ ಮುಖಗಳನ್ನು ತನ್ನ ಬರಹದ ಮೂಲಕ ಅನಾವರಣಗೊಳಿಸುತ್ತದೆ. ಹೀಗಾಗಿ ಕೃತಿಗಳ ಲೋಕಾರ್ಪಣೆ ಕೇವಲ ಪುಸ್ತಕ ಬಿಡುಗಡೆಗೆ ಸೀಮಿತವಾಗದೆ, ಓದುಗರೊಂದಿಗೆ ಹೊಸ ವಿಚಾರಗಳನ್ನು ಹಂಚಿಕೊಳ್ಳುವ ಮಹತ್ವದ ಸಾಂಸ್ಕೃತಿಕ ಕ್ರಿಯೆಯಾಗಿದೆ ಎಂದು ಅಭಿಪ್ರಾಯಪಟ್ಟರು.
        ಇನ್ನೋರ್ವ ಅತಿಥಿ ತತ್ವಪದ ಚಿಂತಕ, ಸಾಹಿತಿ ಹಾಗೂ ಬೆನಕನಹಳ್ಳಿ ಪ್ರೌಢಶಾಲೆಯ ಶಿಕ್ಷಕ ಸಾಹೇಬ್‌ಗೌಡ ಬಿರಾದಾರ ಅವರು ’ಭಜನಿ ಸಂಪದ’ ಕೃತಿ ಕುರಿತು ಕನ್ನಡ ಸಾಹಿತ್ಯದಲ್ಲಿ ಅದರಲ್ಲೂ ಜನಪದ ಸಾಹಿತ್ಯದಲ್ಲಿ ಭಜನೆಗೆ ವಿಶೇಷ ಸ್ಥಾನವಿದೆ. ದೇವರ ಸ್ಮರಣೆ ಹಾಗೂ ಆಧ್ಯಾತ್ಮಿಕ ಜಾಗೃತಿಗೆ ಭಜನೆ ಪ್ರಮುಖ ಸಾಧನವಾಗಿದೆ. ಗ್ರಾಮೀಣ ಭಾಗದ ದುಡಿಯುವ ಜನರ ದಣಿವಾರಿಸುವ ಶಕ್ತಿಯೂ ಭಜನೆಯಲ್ಲಿದೆ ಎಂದ ಅವರು ತತ್ವಪದಕಾರರ ಬದುಕು, ಅರಿವು ಹಾಗೂ ಆನಂದದ ಅನುಭಾವವನ್ನು ಈ ಕೃತಿ ಪರಿಚಯಿಸುತ್ತದೆ ಎಂದು ಹೇಳಿದರು.
      ಮುಖ್ಯ ಅತಿಥಿ ಶಂಕರಾನಂದ ಶಾಸ್ತ್ರಿಗಳು ಮಾತನಾಡಿ ಸಮಾಜದಲ್ಲಿ ಅನೇಕ ಸಮಸ್ಯೆಗಳಿದ್ದು, ಮನುಷ್ಯನ ಅಂತರಂಗದಲ್ಲಿ ದ್ವೇಷ, ಅಸೂಯೆ, ಜಿಗುಪ್ಸೆಯಂತಹ ಭಾವನೆಗಳು ಮನೆಮಾಡಿವೆ. ಇಂತಹ ಮನೋಭಾವಗಳಿಂದ ಹೊರಬಂದು ಮನಃಶಾಂತಿ ಪಡೆಯಲು ಸಾಹಿತ್ಯ ಕೃತಿಗಳ ಓದು ಸಹಕಾರಿಯಾಗಿದೆ ಎಂದರು.
       ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಚ್.ಎಸ್. ಪಾಟೀಲ, ಕನ್ನಡ ಸಂಘ ಹಾಗೂ ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಡಾ. ವಿ.ಎಸ್. ಕಾರ್ಚಿ ಮಾತನಾಡಿದರು. 
      ಕೃತಿಕಾರ ಡಾ. ಎಚ್.ಬಿ. ನಡವಿನಕೇರಿ ಮಾತನಾಡಿ, ಕವಿ ಮತ್ತು ಕವಿತೆಯನ್ನು ಜನಸಮುದಾಯ ಇಷ್ಟಪಟ್ಟಾಗ ಮಾತ್ರ ಸಾಹಿತ್ಯ ಬೆಳೆಯಲು ಸಾಧ್ಯ. ಜೀವನದ ಕಷ್ಟಗಳ ನಡುವೆಯೂ ಸಾಹಿತ್ಯ ಸೇವೆ ನನಗೆ ಸಂತಸ ನೀಡಿದೆ. ತಂದೆಯ ಜೀವನಾನುಭವ ಹಾಗೂ ಅವರ ಶರಣ ತತ್ವಗಳು ನನ್ನ ಮೇಲೆ ಪ್ರಭಾವ ಬೀರಿವೆ. ಗುರುಹಿರಿಯರ ಮಾರ್ಗದರ್ಶನ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಪ್ರೇರಣೆ ನೀಡಿದೆ ಎಂದು ತಮ್ಮ ಸಾಹಿತ್ಯ ಪಯಣದ ಅನುಭವ ಹಂಚಿಕೊಂಡರು.
      ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. ಅಕ್ಷತಾ ಬಿರಾದಾರ ಹಾಗೂ ಗುರುಪಾದ ಬಿರಾದಾರ ಸಂಗೀತ ಸೇವೆ ಸಲ್ಲಿಸಿದರು.
       ಕಾರ್ಯಕ್ರಮದಲ್ಲಿ ಕನ್ನಡ ಸಂಘದ ಪದಾಧಿಕಾರಿಗಳು, ಶರಣ ಸಾಹಿತ್ಯ ಪರಿಷತ್ತಿನ ಹಿರಿಯರು ಹಾಗೂ ಜೆ.ಎಸ್. ಜಮ್ಮಲದಿನ್ನಿ, ಆರ್.ವಿ. ಜಾಲವಾದಿ, ಅನೀಲ ಇರಾಜ್, ಈರಣ್ಣ ಕಲಬುರ್ಗಿ, ಶಿವಲಿಂಗಪ್ಪ ಪಾಲ್ಕಿ, ಭೀಮಣ್ಣ ಸುಳಿಭಾವಿ, ಅಪ್ಪು ಕಲ್ಲೂರ, ಅಶೋಕ ಚಿನಗುಡಿ, ಗುರುನಾಥ ಕುಂಬಾರ, ಭೀಮನಗೌಡ ಬಿರಾದಾರ, ಬಸವರಾಜ ಗೊರಜಿ ಮೊದಲಾದವರು ಉಪಸ್ಥಿತರಿದ್ದರು.
      ಅಪ್ಪಾಸಾಹೇಬ ಮೂಲಿಮನಿ ಸ್ವಾಗತಿಸಿದರು. ಸಿದ್ದು ಕರಡಿ ಸ್ವಾಗತಿಸಿದರು. ಕಾಶಿನಾಥ ಸಜ್ಜನ ವಂದಿಸಿದರು. ಸಂತೋಷಕುಮಾರ ಜಾಮಗುಂಡಿ ನಿರೂಪಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೊಲ್ಲಾಪುರದ ಮಹಾಲಕ್ಷ್ಮೀ ಹಾಗೂ ಜ್ಯೋತಿಬಾ ದೇವರ ದರ್ಶನ ಪಡೆದ ಲಕ್ಷ್ಮೀ ಹೆಬ್ಬಾಳಕರ್*43.44 ಲಕ್ಷ ರೂ. ವೆಚ್ಚದಲ್ಲಿ ಸೋನೋಲಿ ಶಾಲೆ ನವೀಕರಣ: ನೂತನ ಕಟ್ಟಡ ಉದ್ಘಾಟಿಸಿದ ಲಕ್ಷ್ಮೀ ಹೆಬ್ಬಾಳಕರ್**ಶ್ರೀ ಶಿವಯೋಗೀಶ್ವರ ಸಂಯುಕ್ತ ಪದವಿಪೂರ್ವ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿಗಳಿಂದ ಗುರುವಂದನೆ ಕಾರ್ಯಕ್ರಮ*ರಾಮದುರ್ಗ: ಸ್ಕೌಟ್ಸ್-ಗೈಡ್ಸ್ ಧ್ವಜ ದಿನದ ಸ್ಟಿಕರ್ ಬಿಡುಗಡೆ ಹಾಗೂ ಶಿಕ್ಷಕರ ಸಮಾವೇಶದೀಪಾವಳಿ ಹಬ್ಬದ ಪ್ರಯುಕ್ತ ರಾಮದುರ್ಗ ತಾ.ಪಂ. ಆವರಣದಲ್ಲಿ ದೀಪ ಸಂಜೀವಿನಿ ಸಂತೆ ಮೇಳ ಆರಂಭ.ಕುನ್ನಾಳ ಪಿಎಂಶ್ರೀ ಕೆಪಿಎಸ್‌ನಲ್ಲಿ ವೈಭವದ 'ಹುಲಕುಂದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ'ಬೆಳಗಾಂ ಶುಗರ್ಸ್‌ನಲ್ಲಿ ಕಬ್ಬು ನುರಿಸುವ ಹಂಗಾಮಿಗೆ ಚಾಲನೆಆತ್ಮೋದ್ಧಾರ ಅನುಭಾವ ಸಾಹಿತ್ಯದ ತಿರುಳು-ಮಹಾಲಿಂಗೇಶ್ವರಶ್ರೀಶಂಕರಗೌಡ ಭೊರಾವತ್ ನಿಧನವಿಧಾನ ಪರಿಷತ್ ಮಾಜಿ ಸದಸ್ಯರಾದ ಗಣೇಶ ಕಾರ್ಣಿಕ ಬಿಜೆಪಿ ಜಿಲ್ಲಾ ಕಾರ್ಯಾಲಯಕ್ಕೆ ಭೇಟಿ