ಹಸಿರು ಕ್ರಾಂತಿ ವರದಿ ವಿಜಯಪುರ
ನಗರದ ಅಂಜುಮನ್ ಪದವಿ ಕಾಲೇಜು ಪ್ರಥಮ ಬಾರಿಗೆ ಕಿತ್ತೂರ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಏಕವಲಯ ಅಂತರ ಕಾಲೇಜುಗಳ ಪುರುಷರ ಬಾಸ್ಕೆಟ್‌ಬಾಲ್ ಪಂದ್ಯಾವಳಿಯಲ್ಲಿ ಚಾಂಪಿಯನಶಿಪ್ ಪ್ರಶಸ್ತಿಯನ್ನು ಪಡೆದಿದೆ.
ಫೈನಲ್ ಪಂದ್ಯದಲ್ಲಿ ಬೆಳಗಾವಿಯ ಆರ್.ಎಲ್.ಎಸ್ ಕಾಲೇಜನ್ನು 50-18 ಅಂಕಗಳಿಂದ ಸೋಲಿಸಿ ಪ್ರಶಸ್ತಿಯನ್ನು ಪಡೆದಿದೆ. ನಗರದ ಬಂಜಾರಾ ಬಿ.ಪಿ.ಎಡ್ ಕಾಲೇಜಿನ ಆಶ್ರಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ (KRCU), ಬೆಳಗಾವಿಯ ಅಂತರ ಕಾಲೇಜು ಬಾಸ್ಕೆಟ್‌ಬಾಲ್ ಪಂದ್ಯಾವಳಿಯಲ್ಲಿ ಕಾಲೇಜಿನ ಪುರುಷರ ಬಾಸ್ಕೆಟ್‌ಬಾಲ್ ತಂಡವು ಅತ್ಯುತ್ತಮ ಪ್ರದರ್ಶನ ನೀಡಿ ಚಾಂಪಿಯನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಶಾಹಿದ್ ಹುಣಸಗಿ (ಬಿ.ಕಾಂ, ಮೂರನೇ ಸೆಮಿಸ್ಟರ್), ಫೈಜಲ್ ಹುಣಸಗಿ (ಬಿ.ಎ, ಪ್ರಥಮ ಸೆಮಿಸ್ಟರ್), ಲಾಲಸಾಬ್ ಶೇಖ್ (ಬಿ.ಎ, ಪ್ರಥಮ ಸೆಮಿಸ್ಟರ್) ಹಾಗೂ ಶ್ರೀಶೈಲ್ ಹಡಪದ್ (ಬಿ.ಎಸ್ಸಿ, ಪ್ರಥಮ ಸೆಮಿಸ್ಟರ್) ಇವರುಗಳು ಯುನಿವರ್ಸಿಟಿ ಬ್ಲ್ಯೂ ಆಗಿ ಆಯ್ಕೆಯಾದ ವಿದ್ಯಾರ್ಥಿಗಳು. ಕಾಲೇಜಿನ ಈ ಐತಿಹಾಸಿಕ ಸಾಧನೆಗೆ ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ತಖದ್ದುಸ್ ಮಾಬ್ ಹಝ್ರತ್ ಸೈಯದ್ ಶಾ ಮಹಮೂದ್ ಪೀರಾನ್ ಪೀರಜಾದೆ ಹುಸೇನಿ ಹಾಶ್ಮಿ, ಉಪಾಧ್ಯಕ್ಷ ತಖದ್ದುಸ್ ಮಾಬ್ ಹಝ್ರತ್ ಸೈಯದ್ ಶಾ ಝೈನಲ್ ಆಬಿದೀನ್ ಹುಸೇನಿ ಹಾಶ್ಮಿ, ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಜೆ.ಜಗೀರದಾರ್, ಐಕ್ಯೂಎಸಿ ಸಂಯೋಜಕ ಪ್ರೊ.ಕೆ.ಎ.ನಿಶಾನಿ, ದೈಹಿಕ ಶಿಕ್ಷಣ ನಿರ್ದೇಶಕ ಆರಿಫ್ ಹುಸೇನ್ ಇನಾಂದಾರ, ಉರ್ದು ವಿಭಾಗದ ಮುಖ್ಯಸ್ಥ ಡಾ.ಸೈಯ್ಯದ್ ಅಲೀಮುಲ್ಲಾ ಹುಸೇನಿ ಸೇರಿದಂತೆ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿಯವರು ಅಭಿನಂದಿಸಿದ್ದಾರೆ.
ಈ ಗಮನಾರ್ಹ ಸಾಧನೆಯೊಂದಿಗೆ ಕಾಲೇಜಿನ ನಾಲ್ವರು ಪ್ರತಿಭಾವಂತ ವಿದ್ಯಾರ್ಥಿಗಳು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿಯ ಪುರುಷರ ಬಾಸ್ಕೆಟ್‌ಬಾಲ್ ತಂಡಕ್ಕೆ ಯೂನಿವರ್ಸಿಟಿ ಬ್ಲೂ ಆಗಿ ತಂಡಕ್ಕೆ ಆಯ್ಕೆಯಾಗಿದ್ದು, ಡಿಸೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.
-ಆರೀಫ್ ಇನಾಮದಾರ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರು.