ಬಳ್ಳಾರಿ, ಅ.30:.ನಗರದ ಡಿಎಆರ್ ಪೊಲೀಸ್ ಮೈದಾನದಲ್ಲಿ ಗುರುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್ ಅವರ ನೇತೃತ್ವದಲ್ಲಿ ರೌಡಿ ಶೀಟರ್ಗಳ ಪರೇಡ್ ನಡೆಸಿ, ಅಪರಾಧ ಚಟುವಟಿಕೆಗಳಿಂದ ದೂರವಿದ್ದು ಕಾನೂನು ಪಾಲಿಸುವಂತೆ ಎಚ್ಚರಿಕೆ ನೀಡಲಾಯಿತು.
ಬ್ರೂಸ್ಪೇಟೆ, ಎಪಿಎಂಸಿ, ಕೌಲ್ಬಜಾರ್ ಹಾಗೂ ಗಾಂಧಿನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯ ರೌಡಿ ಶೀಟರ್ಗಳನ್ನು ಪರೇಡ್ಗೆ ಕರೆಸಿ, ಅವರ ಚಟುವಟಿಕೆಗಳ ಕುರಿತು ಮಾಹಿತಿ ಪಡೆಯಲಾಯಿತು. ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವ ಯಾವುದೇ ಕೃತ್ಯಗಳಲ್ಲಿ ತೊಡಗದಂತೆ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್ಪಿ ಡಾ. ಸುಮನ್ ಡಿ. ಪೆನ್ನೇಕರ್, ಸಾರ್ವಜನಿಕರಲ್ಲಿ ಭಯ ಮೂಡಿಸುವ ವರ್ತನೆಗಳನ್ನು ತಿದ್ದಿಕೊಂಡು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಸಾರ್ವಜನಿಕರಿಗೆ ತೊಂದರೆ ನೀಡುವುದು, ಶಾಂತಿ-ಸುವ್ಯವಸ್ಥೆಗೆ ಭಂಗ ತರುವುದು ಹಾಗೂ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗುವುದನ್ನು ಪೊಲೀಸ್ ಇಲಾಖೆ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಕಾನೂನನ್ನು ಗೌರವಿಸಿ ಶಾಂತಿಯುತ ಜೀವನ ನಡೆಸಬೇಕು. ಮತ್ತೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವುದು ಕಂಡುಬಂದರೆ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.
ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹಾಗೂ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ನಿರಂತರ ನಿಗಾ ವಹಿಸಿದೆ. ರೌಡಿ ಶೀಟರ್ಗಳ ಚಟುವಟಿಕೆಗಳ ಮೇಲೆ ನಿಗಾ ಇರಿಸುವುದರ ಜತೆಗೆ, ಕಾನೂನು ಪಾಲನೆಯ ಮಹತ್ವದ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಿಎಸ್ಪಿ ಗೋವಿಂದರಾಜು ವಿ., ಇನ್ಸ್ಪೆಕ್ಟರ್ಗಳಾದ ಮಹಾಂತೇಶ್, ಷಣ್ಮುಖಪ್ಪ, ಪಿಎಸ್ಐಗಳಾದ ವಿರೂಪಾಕ್ಷ, ಶೈನಾಜ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.