ಮುದ್ದೇಬಿಹಾಳ: ಸ್ವಚ್ಛತೆ, ಉತ್ತಮ ಆಡಳಿತ ಹಾಗೂ ಇ-ತ್ಯಾಜ್ಯ ವಿಲೇವಾರಿಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಅಂಚೆ ಇಲಾಖೆಯ ವತಿಯಿಂದ ವಿಶೇಷ ಅಭಿಯಾನ 6.0ರ ಅಂಗವಾಗಿ ಕೋಳೂರ ಎಲ್.ಟಿ. ಗ್ರಾಮದಲ್ಲಿ ಅಂಚೆ ಜನಸಂಪರ್ಕ ಅಭಿಯಾನ ಕಾರ್ಯಕ್ರಮ ನಡೆಯಿತು.
ಅ.23ರಂದು ನಡೆದ ಕಾರ್ಯಕ್ರಮವನ್ನು ಮುದ್ದೇಬಿಹಾಳ ಅಂಚೆ ಉಪವಿಭಾಗದ ಅಂಚೆ ನಿರೀಕ್ಷಕ ಈರಪ್ಪ ಬಡಿಗೇರ್ ಉದ್ಘಾಟಿಸಿ ಮಾತನಾಡಿ, ಅಂಚೆ ಇಲಾಖೆಯು ಸಾರ್ವಜನಿಕರ ಅನುಕೂಲಕ್ಕಾಗಿ ಹಲವು ಉಳಿತಾಯ ಮತ್ತು ವಿಮಾ ಯೋಜನೆಗಳನ್ನು ಜಾರಿಗೊಳಿಸಿದೆ. ಮಾರುಕಟ್ಟೆಯಲ್ಲಿ ಅನೇಕ ಖಾಸಗಿ ವಿಮಾ ಕಂಪನಿಗಳು ಹಾಗೂ ಬ್ಯಾಂಕುಗಳು ಬಂದಿದ್ದರೂ ಜನರು ಇಂದಿಗೂ ಅಂಚೆ ಇಲಾಖೆಯ ಮೇಲಿನ ವಿಶ್ವಾಸವನ್ನು ಉಳಿಸಿಕೊಂಡಿದ್ದಾರೆ. ಗ್ರಾಮೀಣ ಭಾಗದ ಜನರಿಗೂ ಇಲಾಖೆಯ ಸೌಲಭ್ಯಗಳು ತಲುಪುವಂತೆ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದರು.
ಸಾರ್ವಜನಿಕ ಭವಿಷ್ಯ ನಿಧಿ, ಕಿಸಾನ್ ವಿಕಾಸ ಪತ್ರ, ಸುಕನ್ಯಾ ಸಮೃದ್ಧಿ ಯೋಜನೆ, ಗ್ರಾಮೀಣ ಅಂಚೆ ಜೀವ ವಿಮೆ (RPLI), ಅಂಚೆ ಜೀವ ವಿಮೆ (PLI) ಹಾಗೂ ಇ-ಕಾಮರ್ಸ್ ಅಡಿಯಲ್ಲಿ ಪಾರ್ಸೆಲ್ ಸೇವೆ ಸೇರಿದಂತೆ ಹಲವು ಸೌಲಭ್ಯಗಳು ಇಲಾಖೆಯಲ್ಲಿದ್ದು, ಸಾರ್ವಜನಿಕರು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು. ತಮ್ಮ ಹಣದ ಸುರಕ್ಷತೆ ಮತ್ತು ಭವಿಷ್ಯದ ದೃಷ್ಟಿಯಿಂದ ಸರ್ಕಾರಿ ಸಂಸ್ಥೆಗಳ ಉಳಿತಾಯ ಯೋಜನೆಗಳಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಕಚೇರಿಯ ಇತರ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ದೂರವಾಣಿ ಮೂಲಕ ಸಂದೇಶ ನೀಡಿದ ವಿಜಯಪುರ ವಿಭಾಗದ ಅಂಚೆ ಅಧೀಕ್ಷಕ ಮಹಾಂತೇಶ ಎಸ್. ತೊಗರಿ ಅವರು, ಭಾರತ ಸರ್ಕಾರದ ಜನಸ್ನೇಹಿ ಹಾಗೂ ಸುದೀರ್ಘ ಇತಿಹಾಸ ಹೊಂದಿರುವ ಅಂಚೆ ಇಲಾಖೆಯ ಸೌಲಭ್ಯಗಳನ್ನು ಗ್ರಾಮದ ಪ್ರತಿಯೊಬ್ಬ ಅರ್ಹ ಫಲಾನುಭವಿಯೂ ಪಡೆದುಕೊಳ್ಳುವಂತಾಗಬೇಕು. ಇಲಾಖೆಯ ಯೋಜನೆಗಳ ಕುರಿತು ಗ್ರಾಮೀಣ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವುದು ಇಂತಹ ಜನಸಂಪರ್ಕ ಅಭಿಯಾನಗಳ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಂಚೆ ಇಲಾಖೆಯ ಸಹೋದ್ಯೋಗಿಗಳು, ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಅಂಚೆ ಮೇಲ್ವಿಚಾರಕ ಶಿವರಾಜ ಅಂಬಿಗೇರ, ಕಚೇರಿ ಸಹಾಯಕ ಸಂತೋಷ ಪಾಟೀಲ, ಸಿ.ಕೆ. ಚವಾಣ್ ಸೇರಿದಂತೆ ತಂಗಡಗಿ ಅಂಚೆ ಕಚೇರಿಯ ಸಿಬ್ಬಂದಿ ಹಾಗೂ ಸಿದ್ದನಗೌಡ, ಸಂಕೇತ್ ಅವರು ಗ್ರಾಮದ ಮನೆಮನೆಗೆ ತೆರಳಿ ಅಂಚೆ ಇಲಾಖೆಯ ವಿವಿಧ ಯೋಜನೆಗಳು ಮತ್ತು ಸೇವೆಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಿದರು. ಈ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.