ಎಚ್‌ಪಿವಿ ಲಸಿಕಾ ಅಭಿಯಾನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ —- ‎ಪ್ರತಿ ಹೆಣ್ಣುಮಕ್ಕಳಿಗೆ ಎಚ್‌ಪಿವಿ ಲಸಿಕೆ ಕಡ್ಡಾಯವಾಗಿ ಹಾಕಿಸಿ: ಡಾ.ಲಿಂಗರಾಜು ಟಿ. ————

MK HasiruKranti
ಎಚ್‌ಪಿವಿ ಲಸಿಕಾ ಅಭಿಯಾನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ —- ‎ಪ್ರತಿ ಹೆಣ್ಣುಮಕ್ಕಳಿಗೆ ಎಚ್‌ಪಿವಿ ಲಸಿಕೆ ಕಡ್ಡಾಯವಾಗಿ ಹಾಕಿಸಿ: ಡಾ.ಲಿಂಗರಾಜು ಟಿ. ————
WhatsApp Group Join Now
Telegram Group Join Now

ಕೊಪ್ಪಳ ಮಾರ್ಚ್ 13, (ಕರ್ನಾಟಕ ವಾರ್ತೆ): ಸಾರ್ವಜನಿಕರು ತಮ್ಮ ಕುಟುಂಬದ 14 ವರ್ಷದ ಹೆಣ್ಣುಮಕ್ಕಳಿಗೆ ತಪ್ಪದೇ ಎಚ್‌ಪಿವಿ ಲಸಿಕೆಯನ್ನು ಹಾಕಿಸಿ ಜಿಲ್ಲೆಯನ್ನು ಗರ್ಭಕಂಠದ ಕ್ಯಾನ್ಸರ್ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಹಕರಿಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಲಿಂಗರಾಜು ಟಿ. ಅವರು ಹೇಳಿದರು.
ಜಿಲ್ಲೆಯಲ್ಲಿ ಇಂದಿನಿAದ ಹಮ್ಮಿಕೊಂಡಿರುವ ಎಚ್‌ಪಿವ ಲಸಿಕಾ ಅಭಿಯಾನದ ಅಂಗವಾಗಿ ಅವರು ಶುಕ್ರವಾರದಂದು ಮುನಿರಾಬಾದ್‌ನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಮುನಿರಾಬಾದ್ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಹ್ಯೂಮನ್ ಪ್ಯಾಪಿಲೋಮಾ ವೈರಸ್(ಎಚ್‌ಪಿವಿ) ಲಸಿಕಾ ಅಭಿಯಾನದ ಉದ್ಘಾಟನಾ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಇಂದಿನಿAದ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಎಚ್‌ಪಿವಿ ಲಸಿಕೆ ನೀಡುವ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದ್ದು, ಇದರ ಉದ್ದೇಶ ಹೆಣ್ಣುಮಕ್ಕಳಲ್ಲಿ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವುದಾಗಿದೆ. ಇದು ನಮ್ಮ ದೇಶದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿಯೂ ಸಾರ್ವಜನಿಕರ ಆರೋಗ್ಯದ ಒಂದು ಮಹತ್ವಪೂರ್ಣ ಅಭಿಯಾನವಾಗಿದೆ. ಗರ್ಭಕಂಠದ ಕ್ಯಾನ್ಸರ್ ಹ್ಯೂಮನ್ ಪ್ಯಾಪಿಲೋಮಾ ವೈರಸ್‌ನಿಂದ ಉಂಟಾಗುತ್ತದೆ. ಈ ಖಾಯಿಲೆ ತಡೆಗಟ್ಟಲು ಏಕೈಕ ಮಾರ್ಗ ಈ ಎಚ್‌ಪಿವಿ ಲಸಿಕೆ ಪಡೆಯುವುದಾಗಿದೆ. 14 ವರ್ಷದ ವಯಸ್ಸಿನ ಹೆಣ್ಣುಮಕ್ಕಳಿಗೆ ಎಚ್‌ಪಿವಿ ಲಸಿಕಾ ಅಭಿಯಾನವನ್ನು ದೇಶಾದ್ಯಂತ ಹಮ್ಮಿಕೊಂಡಿದೆ. ಈ ಅಭಿಯಾನದಡಿ ನಮ್ಮ ಕೊಪ್ಪಳ ಜಿಲ್ಲೆಯಾದ್ಯಂತ 14 ವರ್ಷದ ವಯಸ್ಸಿನ ಎಲ್ಲಾ ಅರ್ಹ ಹೆಣ್ಣುಮಕ್ಕಳಿಗೆ ಸರ್ಕಾರಿ ಆರೋಗ್ಯ ಸಂಸ್ಥೆಗಳಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ, ತಾಲೂಕಾ ಆಸ್ಪತ್ರೆಗಳಲ್ಲಿ ಮತ್ತು ಜಿಲ್ಲಾ ಆಸ್ಪತ್ರೆ (ತಾಯಿ-ಮಕ್ಕಳ ಆಸ್ಪತ್ರೆ) ಯಲ್ಲಿ ಈ ಲಸಿಕೆಯನ್ನು ನೀಡಲಾಗುತ್ತದೆ. ಒಂದು ಡೋಸ್ ಗಾರ್ಡಸಿಲ್-4 ಎಚ್‌ಪಿವಿ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತಿದ್ದು, ಸಾರ್ವಜನಿಕರು ತಮ್ಮ 14 ವರ್ಷದ ಹೆಣ್ಣುಮಕ್ಕಳಿಗೆ ತಪ್ಪದೇ ಈ ಲಸಿಕೆ ಹಾಕಿಸಿ, “ಗರ್ಭಕಂಠದ ಕ್ಯಾನ್ಸರ್ ಮುಕ್ತ ಕೊಪ್ಪಳ ಜಿಲ್ಲೆ”ಯನ್ನಾಗಿ ಮಾಡಲು ಸಹಕರಿಸಬೇಕೆಂದು ತಿಳಿಸಿದರು.
ಜಿಲ್ಲಾ ಆರ್.ಸಿ.ಹೆಚ್ ಹಾಗೂ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಪ್ರಕಾಶ ವಿ. ಮಾತನಾಡಿ, ಹೆಣ್ಣುಮಕ್ಕಳ ಆರೋಗ್ಯ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಅದರಲ್ಲೂ ಹದಿ-ಹರೆಯದ ಹೆಣ್ಣುಮಕ್ಕಳ ಆರೋಗ್ಯ ರಕ್ಷಣೆ ಪ್ರಮುಖವಾಗಿದೆ. ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಈ ಎಚ್‌ಪಿವಿ ಲಸಿಕೆ ಮಹತ್ವದ್ದಾಗಿದೆ. ಈ ಕ್ಯಾನ್ಸರ್ ಮುಕ್ತ ನಾಳೆಗಾಗಿ ನಾವೆಲ್ಲರೂ ಎಚ್‌ಪಿವಿ ಲಸಿಕೆಯನ್ನು ಅರ್ಹ ಬಾಲಕಿಯರಿಗೆ ನೀಡಿ, ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡಬೇಕು. ಇದು ಸುರಕ್ಷಿತ ಲಸಿಕೆಯಾಗಿದ್ದು, ಯಾವುದೇ ತೊಂದರೆ ಉಂಟುಮಾಡುವುದಿಲ್ಲ. ಸಾರ್ವಜನಿಕರು ಈ ಲಸಿಕಾ ಅಭಿಯಾನದ ಸದುಪಯೋಗ ಪಡೆದುಕೊಂಡು, ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಂತೆ ಕರೆ ನೀಡಿದರು. ನಂತರ 14 ವರ್ಷದ ಹೆಣ್ಣುಮಕ್ಕಳಿಗೆ ಲಸಿಕೆ ನೀಡಿ, ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.
‎ಕಾರ್ಯಕ್ರಮದಲ್ಲಿ ಕೊಪ್ಪಳ ತಾಲ್ಲೂಕಿನ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಬಾಲಚಂದ್ರನ್, ತಾಲ್ಲೂಕಾ ಆರೋಗ್ಯಾಧಿಕಾರಿ ಡಾ.ರಾಮಾಂಜನೇಯ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಕಮಲಾ ಹ್ಯಾರಿಸ್, ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಕೆ.ಹೆಚ್. ತೊಗರಿ, ಚಿಕ್ಕಮಕ್ಕಳ ತಜ್ಞ ಡಾ.ರಾಜಶೇಖರ, ದಂತ ವೈದ್ಯಾಧಿಕಾರಿ ಡಾ.ಶೃತಿ, ಡಾ.ಜ್ಯೋತಿ, ಆರೋಗ್ಯ ಶಿಕ್ಷಣಾಧಿಕಾರಿಗಳು, ಶುಶ್ರೂಷಣಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಇತರೆ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು, ಫಲಾನುಭವಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ, ಯಶಸ್ವಿಗೊಳಿಸಿದರು.
WhatsApp Group Join Now
Telegram Group Join Now
Share This Article