Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಿಶ್ವ ಪುಸ್ತಕ ದಿನ  ಮತ್ತು ಕನ್ನಡ ಪುಸ್ತಕೋದ್ಯಮ

 ಪ್ರತಿ  ಏಪ್ರಿಲ್ 23 ರಂದು ವಿಶ್ವದಾದ್ಯಂತ "ವಿಶ್ವ ಪುಸ್ತಕ ದಿನ" ಅಥವಾ "ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನ"ವನ್ನು (World Book and Copyright Day) ಆಚರಿಸಲಾಗುತ್ತದೆ. ಓದುವ ಹವ್ಯಾಸವನ್ನು ಉತ್ತೇಜಿಸಲು ಮತ್ತು ಲೇಖಕರಿಗೆ ಗೌರವ ಸಲ್ಲಿಸಲು ಯುನೆಸ್ಕೋ (UNESCO) ದಿನವನ್ನು ಜಾರಿಗೆ ತಂದಿದೆ.  ಇದು ತಲೆಮಾರುಗಳ ನಡುವೆ ಮತ್ತು ಸಂಸ್ಕೃತಿಗಳಾದ್ಯಂತ ಸೇತುವೆಯಾಗಿ ಪುಸ್ತಕಗಳ ಶಕ್ತಿಯನ್ನು ಗುರುತಿಸುತ್ತದೆ.

2026 ವಿಶ್ವ ಪುಸ್ತಕ ದಿನಾಚರಣೆಯ  ಥೀಮ್ "ಎಲ್ಲವನ್ನೂ ಓದಿ - ನೀವು ಆಸಕ್ತಿ ಹೊಂದಿದ್ದರೆ, ಓದಿ", ಇದು 2026 ರಾಷ್ಟ್ರೀಯ ಓದುವ ವರ್ಷದೊಂದಿಗೆ ಮಕ್ಕಳನ್ನು ಸಂತೋಷಕ್ಕಾಗಿ ಓದಲು ಮತ್ತು ಅವರ ಹವ್ಯಾಸಗಳನ್ನು ಅನ್ವೇಷಿಸಲು ಪ್ರೇರೇಪಿಸುತ್ತದೆ. ಅಭಿಯಾನವು ಜೀವನವನ್ನು ಸುಧಾರಿಸಲು ವಿನೋದಕ್ಕಾಗಿ ಓದುವುದನ್ನು ಪ್ರೋತ್ಸಾಹಿಸುತ್ತದೆ, ಹವ್ಯಾಸಗಳು, ಆಸಕ್ತಿಗಳು ಮತ್ತು ನೆಚ್ಚಿನ ವಿಷಯಗಳ ಮೇಲೆ ಕೇಂದ್ರೀಕರಿಸುವ ಉಡುಗೆ-ತೊಡುಗೆ ಕಲ್ಪನೆಗಳೊಂದಿಗೆ  ಮೆಚ್ಚಿನ ಪಾತ್ರಗಳೊಂದಿಗೆ ಆನಂದಿಸುವುದು.

1. ಇತಿಹಾಸ ಮತ್ತು ಹಿನ್ನೆಲೆ

 1995ರಲ್ಲಿ ಪ್ಯಾರಿಸ್ನಲ್ಲಿ ನಡೆದ ಯುನೆಸ್ಕೋ ಸಾಮಾನ್ಯ ಸಮ್ಮೇಳನದಲ್ಲಿ ಏಪ್ರಿಲ್ 23 ಅನ್ನು ವಿಶ್ವ ಪುಸ್ತಕ ದಿನವನ್ನಾಗಿ ಘೋಷಿಸಲಾಯಿತು.

 ದಿನಾಂಕದ ವಿಶೇಷತೆ: ಏಪ್ರಿಲ್ 23 ಸಾಹಿತ್ಯ ಲೋಕದ ದಿಗ್ಗಜರಾದ ವಿಲಿಯಂ ಶೇಕ್ಸ್ಪಿಯರ್, ಮಿಗುಯೆಲ್ ಡಿ ಸರ್ವಾಂಟೆಸ್ ಮತ್ತು ಇಂಕಾ ಗಾರ್ಸಿಲಾಸೊ ಡಿ ಲಾ ವೆಗಾ ಅವರ ಪುಣ್ಯಸ್ಮರಣೆಯ ದಿನವಾಗಿದೆ.

 2. ಆಚರಣೆಯ ಉದ್ದೇಶ

 * ಜನರಲ್ಲಿ, ವಿಶೇಷವಾಗಿ ಯುವಜನತೆಯಲ್ಲಿ "ಓದುವ ಆಸಕ್ತಿ"ಯನ್ನು ಬೆಳೆಸುವುದು.

 * ಪುಸ್ತಕ ಪ್ರಕಟಣೆ ಮತ್ತು ಕೃತಿಸ್ವಾಮ್ಯ (Copyright)"ಬಗ್ಗೆ ಜಾಗೃತಿ ಮೂಡಿಸುವುದು.

 * ಮಾನವಕುಲದ ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಗತಿಗೆ ಲೇಖಕರು ನೀಡಿದ ಕೊಡುಗೆಯನ್ನು ಸ್ಮರಿಸುವುದು.

 3. ವಿಶ್ವ ಪುಸ್ತಕ ರಾಜಧಾನಿ (World Book Capital)

ಪ್ರತಿ ವರ್ಷ ಯುನೆಸ್ಕೋ ಮತ್ತು ಅಂತರಾಷ್ಟ್ರೀಯ ಸಂಘಟನೆಗಳು ಒಂದು ನಗರವನ್ನು 'ವಿಶ್ವ ಪುಸ್ತಕ ರಾಜಧಾನಿ'ಯನ್ನಾಗಿ ಆಯ್ಕೆ ಮಾಡುತ್ತವೆ. 2026 ಸಾಲಿಗೆ ಮೊರಾಕೋದ ರಬತ್ (RABAT) ನಗರವನ್ನು ಆಯ್ಕೆ ಮಾಡಲಾಗಿದೆ.             ನಗರವು ವರ್ಷಪೂರ್ತಿ ಪುಸ್ತಕಗಳಿಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ

* ಓದುವ ಹವ್ಯಾಸವನ್ನು ಉತ್ತೇಜಿಸುವುದು ಮತ್ತು ಲೇಖಕರ ಹಕ್ಕುಗಳನ್ನು (Copyright) ಗೌರವಿಸುವುದು ದಿನದ ಮುಖ್ಯ ಉದ್ದೇಶ.

 ಭಾರತದಲ್ಲಿ ಪುಸ್ತಕ ದಿನ ಆಚರಣೆ

ಭಾರತದಲ್ಲಿ ಪುಸ್ತಕ ದಿನವನ್ನು ಕೇವಲ ಒಂದು ದಿನದ ಆಚರಣೆಯಾಗಿ ನೋಡದೆ, ಜ್ಞಾನದ ಹಬ್ಬವಾಗಿ ಆಚರಿಸಲಾಗುತ್ತದೆ:

 ಗ್ರಂಥಾಲಯಗಳಲ್ಲಿ ಕಾರ್ಯಕ್ರಮ:  ಶಾಲೆ, ಕಾಲೇಜು ಮತ್ತು ಸಾರ್ವಜನಿಕ ಗ್ರಂಥಾಲಯಗಳಲ್ಲಿ ಪುಸ್ತಕ ಪ್ರದರ್ಶನ, ಓದುವ ಸ್ಪರ್ಧೆಗಳು ಮತ್ತು ಸಾಹಿತ್ಯ ಗೋಷ್ಠಿಗಳು ನಡೆಯುತ್ತವೆ.

 ಪುಸ್ತಕ ಮೇಳಗಳು:   ಬೆಂಗಳೂರು, ದೆಹಲಿ ಸೇರಿದಂತೆ ಪ್ರಮುಖ ನಗರಗಳಲ್ಲಿ ವಿಶೇಷ ಪುಸ್ತಕ ಮೇಳಗಳನ್ನು ಆಯೋಜಿಸಲಾಗುತ್ತದೆ. ಪ್ರಕಾಶಕರು ದಿನದಂದು ಪುಸ್ತಕಗಳ ಮೇಲೆ ವಿಶೇಷ ರಿಯಾಯಿತಿಗಳನ್ನು ನೀಡುತ್ತಾರೆ.

 ದಾನ ಅಭಿಯಾನ:   'ಪುಸ್ತಕ ನೀಡಿ, ಜ್ಞಾನ ಹಂಚಿ' ಎಂಬ ಅಭಿಯಾನದಡಿ ಹಳೆಯ ಪುಸ್ತಕಗಳನ್ನು ಸಂಗ್ರಹಿಸಿ ಅಗತ್ಯವಿರುವ ಮಕ್ಕಳಿಗೆ ಅಥವಾ ಗ್ರಾಮೀಣ ಗ್ರಂಥಾಲಯಗಳಿಗೆ ದಾನ ಮಾಡುವ ಸಂಪ್ರದಾಯ ಭಾರತದಲ್ಲಿ ಜನಪ್ರಿಯವಾಗಿದೆ.


news_1776852059_0_943.webp

ಕರ್ನಾಟಕದಲ್ಲಿ ಪುಸ್ತಕೋದ್ಯಮ

 

ವಿಶ್ವ ಪುಸ್ತಕ ದಿನಾಚರಣೆಯನ್ನು ಕರ್ನಾಟಕದಲ್ಲೂ ಕೂಡ ಆಚರಿಸಲಾಗುತ್ತಿದೆ. ಆದರೆ ದುರದೃಷ್ಟವೆಂದರೆ ಕರ್ನಾಟಕದಲ್ಲಿ ಪುಸ್ತಕೋದ್ಯಮ ಹಾಗೂ ಗ್ರಂಥ ಸಂಸ್ಕೃತಿ ಅವನತಿಯತ್ತ ಸಾಗುತ್ತಿದೆ. ಕರ್ನಾಟಕದಲ್ಲಿ ಸುಭದ್ರವಾದ ಸಾರ್ವಜನಿಕ ಗ್ರಂಥಾಲಯ ಕಾಯಿದೆ 1965 ಇದ್ದರೂ ಕೂಡ ಕಳೆದ ಹಲವಾರು ವರ್ಷಗಳಿಂದ ಪುಸ್ತಕೋದ್ಯಮ ನಲುಗುತ್ತಿದೆ.

 ಪುಸ್ತಕೋದ್ಯಮ ಅಂದರೆ ಲೇಖಕರು, ಪ್ರಕಾಶಕರು,  ವಿತರಕರು, ಮಾರಾಟಗಾರರು, ಓದುಗರು ಎಲ್ಲರನ್ನೂ ಒಳಗೊಂಡಿರುವುದು. ನಮ್ಮ ರಾಜ್ಯದಲ್ಲಿ ಸಾವಿರಾರು ಲೇಖಕರು ಪುಸ್ತಕಗಳನ್ನ ಬರೆಯುತ್ತಿದ್ದಾರೆ. 2006 ರಲ್ಲಿ ಸನ್ಮಾನ್ಯ ಶ್ರೀ ಬಸವರಾಜ ಹೊರಟ್ಟಿಯವರು ಪ್ರಾಥಮಿಕ ಶಿಕ್ಷಣ ಹಾಗೂ  ಗ್ರಂಥಾಲಯದ ಸಚಿವರಾಗಿದ್ದಾಗ ಲೇಖಕರು ಇಲಾಖೆಯ ನಿರ್ದೇಶಕರಾಗಿದ್ದರು. ಸಮಯದಲ್ಲಿ  ಹಲವಾರು ಲೇಖಕರ ಜೊತೆ ಸಭೆಗಳನ್ನು ನಡೆಸಿದಾಗ ಲೇಖಕರು ಅನುಭವಿಸುತ್ತಿರುವ ತೊಂದರೆಗಳನ್ನು ಚರ್ಚಿಸಲಾಯಿತು. ಆಗ ಲೇಖಕರಿಗೆಲ್ಲಾ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಏಕ ಗವಾಕ್ಷಿ ಅಡಿಯಲ್ಲಿ ಪುಸ್ತಕಗಳ   ಸಗಟು ಖರೀದಿ ಯೋಜನೆಯನ್ನು 2006ರಲ್ಲಿ ಜಾರಿಗೆ ತರಲಾಯಿತು. ಅದರಂತೆ ಆಯ್ಕೆಯಾದ ಎಲ್ಲಾ ಪುಸ್ತಕಗಳ ತಲಾ 300 ಪ್ರತಿಯoತೆ ಖರೀದಿ ಮಾಡಿ ರಾಜ್ಯದ ನಗರ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯಗಳಿಗೆ ವಿತರಿಸಲಾಗುತ್ತಿತ್ತು

ಅವಾಗ ಕನ್ನಡದಲ್ಲಿ ಸುಮಾರು 2500 ಕನ್ನಡ ಪುಸ್ತಕಗಳು ಪ್ರಕಟವಾಗುತ್ತಿದ್ದವು. ಏಕೆಂದರೆ ಪ್ರಕಾಶಕರು ಪುಸ್ತಕಗಳ ಮಾರಾಟದ ದೃಷ್ಟಿಯಿಂದ ಖ್ಯಾತ ಲೇಖಕರ ಪುಸ್ತಕಗಳನ್ನು ಮಾತ್ರ ಪ್ರಕಟಿಸುತ್ತಿದ್ದರು. ಹೊಸದಾಗಿ ಬರೆಯುವ ಲೇಖಕರ ಪುಸ್ತಕಗಳನ್ನು  ಪ್ರಕಾಶಕರು ಪ್ರಕಟಿಸುತ್ತಿರಲಿಲ್ಲ. ಗ್ರಂಥಾಲಯ ಇಲಾಖೆಯಲ್ಲಿ ಕನ್ನಡ ಪುಸ್ತಕಗಳ ಸಗಟು ಖರೀದಿ ಯೋಜನೆ ಜಾರಿಗೆ ಬಂದ ಮೇಲೆ ಲೇಖಕರೇ ಪ್ರಕಾಶಕರಾಗುವ ವಾತಾವರಣ ನಿರ್ಮಾಣವಾಯಿತು . ಅನೇಕ ಜನ ಲೇಖಕರು ತಾವು ಬರೆದ ಪುಸ್ತಕಗಳನ್ನು ತಾವೇ  ಪ್ರಕಟಿಸ ತೊಡಗಿದರು. ಕನ್ನಡ ಪುಸ್ತಕಗಳ ಸಗಟು ಖರೀದಿ ಯೋಜನೆಯಿಂದಾಗಿ ವರ್ಷ ವರ್ಷ ಪುಸ್ತಕಗಳ ಪ್ರಕಟಣೆಯ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು. ಈಗ ಒಂದು ಅಂದಾಜಿನ ಪ್ರಕಾರ ಪ್ರತಿ ವರ್ಷ ಪ್ರಕಟವಾಗುವ  ಕನ್ನಡ ಪುಸ್ತಕಗಳ ಸಂಖ್ಯೆ ಸುಮಾರು  8000. ಆದರೆ ಪುಸ್ತಕಗಳು ಓದುಗರಿಗೆ ತಲುಪುತ್ತಿಲ್ಲ .ಇದಕ್ಕೆ ಪುಸ್ತಕೋದ್ಯಮದ ಬಗ್ಗೆ ಇರುವ ಸರ್ಕಾರದ ನಿರಾಸಕ್ತಿ ಅಂದರೆ ತಪ್ಪಾಗಲಾರದು.

ಕರ್ನಾಟಕ ರಾಜ್ಯದಲ್ಲಿ ಪುಸ್ತಕ ಹಾಗೂ ಲೇಖಕರಿಗೆ ಸಂಬಂಧಿಸಿದಂತೆ ಸರ್ಕಾರದ  ಸಾರ್ವಜನಿಕ ಗ್ರಂಥಾಲಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ , ಕನ್ನಡ ಅಭಿವೃದ್ಧಿ ಪ್ರಾಧಿಕಾರ,  ಕನ್ನಡ ಪುಸ್ತಕ ಪ್ರಾಧಿಕಾರ, (ಪುಸ್ತಕಗಳನ್ನು ಖರೀದಿಸುವ ಸಂಸ್ಥೆಗಳು), ಕನ್ನಡ ಸಾಹಿತ್ಯ ಪರಿಷತ್ತು ಅಲ್ಲದೆ ಅನೇಕ ಕನ್ನಡ ಸಂಘಟನೆಗಳಿವೆ. ದುರದೃಷ್ಟವಶಾತ್  ಮೇಲಿನ ಯಾವ ಸಂಸ್ಥೆಗಳು ಕನ್ನಡ ಗ್ರಂಥೋದ್ಯಮದ ಬಗ್ಗೆ ಇರಬೇಕಾದಂತ ಕಾಳಜಿಯನ್ನು ತೋರುತ್ತಿಲ್ಲ ಮೇಲಿನ ಎಲ್ಲ ಸರ್ಕಾರಿ ಸಂಸ್ಥೆಗಳು ಅವರವರ ಇಲಾಖೆಯ ಮಟ್ಟದಲ್ಲಿ ಪುಸ್ತಕಗಳನ್ನು ಖರೀದಿಸುತ್ತಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಗ್ರಂಥಾಲಯ ಇಲಾಖೆಗೆ ಪುಸ್ತಕ ಖರೀದಿಗಾಗಿ ಸರ್ಕಾರ ಯಾವುದೇ ಅನುದಾನವನ್ನು ನೀಡುತ್ತಿಲ್ಲ. ಸರ್ಕಾರ ಗ್ರಂಥಾಲಯ ಇಲಾಖೆಗೆ ನೀಡುತ್ತಿರುವ ಸರ್ಕಾರದ ಸಂಚಿತ ನಿಧಿಯಲ್ಲಿ ಕೇವಲ ಆಯುಕ್ತರ /ನಿರ್ದೇಶಕರ ಕಚೇರಿ ನಿರ್ವಹಣೆ, ರಾಜ್ಯ ಕೇಂದ್ರ ಗ್ರಂಥಾಲಯ ನಿರ್ವಹಣೆ, ಹಾಗೂ ಖಾಯಂ ನೌಕರರ ಸಿಬ್ಬಂದಿ ವರ್ಗದವರ ಸಂಬಳ ಸಾರಿಗೆ, ಕಟ್ಟಡಗಳ ರಿಪೇರಿ ಇತ್ಯಾದಿ ಪ್ರಮುಖ ವೆಚ್ಚಗಳಿಗೆ  ವೆಚ್ಚವಾಗುತ್ತಿದೆ. ಆದರೆ ಕನ್ನಡ ಪುಸ್ತಕಗಳ ಸಗಟು ಖರೀದಿಗಾಗಿ ಸರ್ಕಾರ ಯಾವುದೇ ಅನುದಾನವನ್ನು ನೀಡುತ್ತಿಲ್ಲ

ಆದರೆ ಸಾರ್ವಜನಿಕರು ಕೇವಲ ಗ್ರಂಥಾಲಯ ಇಲಾಖೆಯನ್ನು ದೂರುತ್ತಿರುತ್ತಾರೆ. ರಾಜ್ಯ ಸರ್ಕಾರ ಪುಸ್ತಕ ಖರೀದಿಗಾಗಿ ಗ್ರಂಥಾಲಯ ಇಲಾಖೆಗೆ ಯಾವುದೇ ಅನುದಾನವನ್ನು ನೀಡದಿರುವುದು ತಿಳಿದು ಬಂದಿದೆ. ಲೇಖಕರು ಗ್ರಂಥಾಲಯ ಇಲಾಖೆಯ ನಿರ್ದೇಶಕರಾಗಿದ್ದ ಸಮಯದಿಂದಲೂ ಪುಸ್ತಕಗಳ ಖರೀದಿಗಾಗಿ ವಿಶೇಷ ಅನುದಾನವನ್ನು ಆಯವ್ಯದಲ್ಲಿ ನೀಡುವಂತೆ ಸರ್ಕಾರದ ಮೇಲೆ ಒತ್ತಾಯ ತರಲಾಗುತ್ತಿತ್ತು. 2007 ಇಸವಿಯಲ್ಲಿ ಇಲಾಖೆಯ ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದಂತ ನಾಡೋಜ ಕಮಲ ಹಂಪನ ಅವರ ನೇತೃತ್ವದಲ್ಲಿ ಆಯ್ಕೆ ಸಮಿತಿ ಸದಸ್ಯರು ಆಗಿನ  ಉಪ ಮುಖ್ಯಮಂತ್ರಿಗಳು ಹಾಗೂ ಆರ್ಥಿಕ ಸಚಿವರಾಗಿದ್ದಂತ ಶ್ರೀಯುತ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಪುಸ್ತಕ ಖರೀದಿಗಾಗಿ 10 ಕೋಟಿ ರೂಪಾಯಿಯನ್ನು ಆಯವ್ಯಯದಲ್ಲಿ ಒದಗಿಸುವಂತೆ ವಿನಂತಿ ಮಾಡಿದ್ದೆವು. ಅವರು ಕೂಡ ಪುಸ್ತಕ ಖರೀದಿಗಾಗಿ  ಆಯವ್ಯಯದಲ್ಲಿ ಅನುದಾನವನ್ನು ಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ಅದು ಕೇವಲ ಭರವಸೆ ಆಗಿಯೇ ಉಳಿಯಿತು. ಲೇಖಕರ ಗಮನಕ್ಕೆ ಬಂದಿರುವಂತೆ ಕಳೆದ ಅನೇಕ ವರ್ಷಗಳಿಂದ ರಾಜ್ಯ ಸರ್ಕಾರದ ಆಯವ್ಯಯದಲ್ಲಿ ಕನ್ನಡ ಪುಸ್ತಕಗಳ ಖರೀದಿಗೆ ಯಾವುದೇ ಅನುದಾನವನ್ನು ಒದಗಿಸಿರುವುದಿಲ್ಲ . ಪ್ರಸಕ್ತ 2026 - 27 ನೇ ಸಾಲಿನ ಆಯವ್ಯಯದಲ್ಲೂ  ಗ್ರಂಥಾಲಯ ಇಲಾಖೆಗೆ ಸಗಟು ಪುಸ್ತಕಗಳ ಸಗಟು ಖರೀದಿಗಾಗಿ ಯಾವುದೇ ಅನುದಾನವನ್ನು ನೀಡಿರುವುದಿಲ್ಲ ಎಂದು ತಿಳಿದು ಬಂದಿದೆ

ರಾಜ್ಯ ಸರ್ಕಾರ ಅನೇಕ ಸಂಘ ಸಂಸ್ಥೆಗಳಿಗೆ ಕೋಟ್ಯಾಂತರ ರೂಪಾಯಿಗಳ ಅನುದಾನವನ್ನು ಪ್ರತಿ ವರ್ಷ ನೀಡುತ್ತಿದೆ. ಇದು ಒಳ್ಳೆಯದೇ, ಇದಕ್ಕೆ ಯಾವುದೇ ಅಭ್ಯಂತರವಿಲ್ಲ ನಾಡು, ನುಡಿ, ಜಲ, ಭಾಷೆ ಬಗ್ಗೆ ಆದ್ಯತೆಯನ್ನು ನೀಡುವುದು ಸರ್ಕಾರದ ಹೊಣೆ ಮತ್ತು ಜವಾಬ್ದಾರಿ. ಆದರೆ ಕರ್ನಾಟಕ ರಾಜ್ಯದ ರಾಜ್ಯ ಭಾಷೆಯಾದ ಕನ್ನಡ ಪುಸ್ತಕಗಳ ಗ್ರಂಥೋದ್ಯಮಕ್ಕೆ ಈ ರೀತಿಯ ನಿರಾಸಕ್ತಿ ಹೊಂದಿರುವುದು ಆಶ್ಚರ್ಯಕರ, ಇದಕ್ಕೆ ಕಾರಣ ಗೊತ್ತಿರುವುದಿಲ್ಲ

ಸಾಹಿತಿಗಳು ಅವರು ಅನುಭವಿಸುತ್ತಿರುವ ಭವಣೆಯ  ಒಂದು ದೃಷ್ಟಾಂತವನ್ನು ಇಲ್ಲಿ ವಿವರಿಸಲಾಗಿದೆ. ಇತ್ತೀಚಿಗೆ ಮಣಿಪಾಲ್ ನಗರದ ಟ್ಯಾಗೂರು ಸರ್ಕಲ್ ಬಳಿ ತಾಲೂಕಿನ ಲೇಖಕರಾದ ಶ್ರೀ ತಿಲಕನಾಥ ಮಂಜೇಶ್ವರರು ತಾವು ಬರೆದ ಪುಸ್ತಕವನ್ನು ಗ್ರಂಥಾಲಯ ಇಲಾಖೆ  ಆಯ್ಕೆ ಮಾಡಿಲ್ಲ. ಅವರು ಬರೆದು , ಮುದ್ರಿಸಿ, ಪ್ರಕಟಿಸಿದ  ಪುಸ್ತಕದ 300 ಪ್ರತಿಗಳು ಅವರ ಬಳಿ ಉಳಿದಿದ್ದವು. .ಆದಕಾರಣ 110 ರೂಪಾಯಿ ಬೆಲೆಯ ಪುಸ್ತಕಗಳನ್ನು ಸಂತೆಯಲ್ಲಿ ಕೇವಲ  10 ರೂಪಾಯಿಗೆ ಮಾರುವ ಮೂಲಕ  ಸರ್ಕಾರದ ವಿರುದ್ಧ  ವಿಭಿನ್ನ ಪ್ರತಿಭಟನೆಯನ್ನು ಮಾಡುತ್ತಿರುವ ವಿಚಾರ ಸಾಮಾಜಿಕ   ಜಾಲತಾಣಗಳಲ್ಲಿ  ಬರುತ್ತಿದೆ. ಅದನ್ನು ಸಾರ್ವಜನಿಕರ ಮಾಹಿತಿಗಾಗಿ ಈ ಕೆಳಗೆ ನೀಡಿದ.

 

ಪುಸ್ತಕಗಳ ಸಗಟು ಖರೀದಿ ಯೋಜನೆ

 ಪ್ರತಿ ವರ್ಷ ಕನ್ನಡದಲ್ಲಿ ಪ್ರಕಟವಾಗುವ ಪುಸ್ತಕಗಳ ಅಂದಾಜು ಸಂಖ್ಯೆ 8,000 ಅಂತಿಟ್ಟುಕೊಳ್ಳೋಣ. ಪ್ರತಿ ಪುಸ್ತಕಕ್ಕೆ ಸರಾಸರಿ 200 ರೂಪಾಯಿ ಬೆಲೆ ಆದಲ್ಲಿ 500 ಪ್ರತಿಗಳ (200x500) ಬೆಲೆ ರೂ 1,00,000 ಆಗುತ್ತದೆ. ಅದರಲ್ಲಿ 5000 ಪುಸ್ತಕಗಳು ಆಯ್ಕೆ ಸಮಿತಿಯಿಂದ ಆಯ್ಕೆಯಾಗುತ್ತವೆ ಅಂತಿಟ್ಟುಕೊಳ್ಳೋಣ. ಆಯ್ಕೆಯಾದ 5000 ಪುಸ್ತಕಗಳ ತಲಾ 500 ಪ್ರತಿ ಅಂತೆ ಖರೀದಿ ಮಾಡಲು ಸುಮಾರು  50 ಕೋಟಿ (5000x100000) ರೂಪಾಯಿ ಹಣ ಬೇಕಾಗುತ್ತದೆ. ಸರ್ಕಾರಕ್ಕೆ ಈ ಮೊತ್ತ ದೊಡ್ಡದೇನಲ್ಲ ಲಕ್ಷಾಂತರ ಕೋಟಿಯ ಆಯವ್ಯಯದಲ್ಲಿ  ಕನ್ನಡ ಪುಸ್ತಕಗಳಿಗಾಗಿ ಕೇವಲ ಐವತ್ತು ಕೋಟಿ ರೂಪಾಯಿಯನ್ನು  ಸರ್ಕಾರದ ಸಂಚಿತ ನಿಧಿಯಲ್ಲಿ  ವೆಚ್ಚ   ಮಾಡಿದಲ್ಲಿ ಪ್ರತಿವರ್ಷ ಹೊಸ 5000 ಪುಸ್ತಕಗಳು ಗ್ರಂಥಾಲಯದ ಮೂಲಕ ಓದುಗರ ಕೈ   ಸೇರುತ್ತವೆ. ಆ ಮೂಲಕ ಕನ್ನಡ ಸರಸ್ವತ ಲೋಕ ಬೆಳೆಯುತ್ತದೆ. ಕನ್ನಡ ಪುಸ್ತಕೋದ್ಯಮಕ್ಕೆ ಸರ್ಕಾರ ಉತ್ತೇಜನ ನೀಡಿದಂತಾಗುತ್ತದೆ.

ಈ ಸಗಟು ಯೋಜನೆ ಅಡಿಯಲ್ಲಿ ಪ್ರತಿ ವರ್ಷ 5000 ಕನ್ನಡ ಪುಸ್ತಕಗಳ ತಲಾ 500 ಪ್ರತಿಗಳಂತೆ ರಾಜ್ಯದ ಗ್ರಂಥಾಲಯಗಳಿಗೆ ವಿತರಿಸಬಹುದು. ಈ ಯೋಜನೆ ನೇರವಾಗಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಆಯುಕ್ತರ / ನಿರ್ದೇಶಕರ  ಕಾರ್ಯಾಲಯದಿಂದ ಜಾರಿಗೊಳ್ಳಲಿರುವ ಯೋಜನೆ. ಈ ಯೋಜನೆಗೆ ಈಗಾಗಲೇ ಮೇಲೆ ವಿವರಿಸಿದಂತೆ ರಾಜ್ಯ ಸರ್ಕಾರ  ಆಯವ್ಯಯದಲ್ಲಿ 50 ಕೋಟಿ ರೂಪಾಯಿ ನೀಡುವ ಮೂಲಕ ಸಾಧ್ಯವಾಗಿಸಬಹುದು.

 

2026-27ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್‌

ಮಾನ್ಯ ಮುಖ್ಯಮಂತ್ರಿ  ಶ್ರೀ ಸಿದ್ದರಾಮಯ್ಯ ನವರು 2026ರ ಮಾರ್ಚ್ 6 ರಂದು ಮಂಡಿಸಿದ  2026-27ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್‌ನ ಒಟ್ಟು ಗಾತ್ರವು "₹4,48,004 ಕೋಟಿ "ಎಂದು ನಿಗದಿಪಡಿಸಲಾಗಿದ್ದರೂ, ಸಹ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಪುಸ್ತಕಗಳ ಸಗಟು ಖರೀದಿ ಯೋಜನೆಗೆ ಯಾವುದೇ ಅನುದಾನ ಘೋಷಣೆಯಾಗಿಲ್ಲ

 ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಸಂಬಂಧಿಸಿದ ಪ್ರಮುಖ ಯೋಜನೆ ಎಂದರೆ .ಧಾರವಾಡ ಮತ್ತು ಬೆಂಗಳೂರಿನಲ್ಲಿ ಅತ್ಯಾಧುನಿಕ ಡಿಜಿಟಲ್ ಗ್ರಂಥಾಲಯಗಳು ಮತ್ತು ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಲು ತಲಾ ₹10 ಕೋಟಿ (ಒಟ್ಟು ₹20 ಕೋಟಿ) ಅನುದಾನ ಮೀಸಲಿಡಲಾಗಿದೆ.

ಅಂದರೆ ಈ ವರ್ಷವೂ ಕೂಡ  ಸರ್ಕಾರ ಅನುದಾನ  ನೀಡದ ಕಾರಣ ಸಗಟು ಪುಸ್ತಕ ಖರೀದಿ ಯೋಜನೆ ಜಾರಿಗೆ ಬರುವ ಲಕ್ಷಣಗಳು ಕಾಣುತ್ತಿಲ್ಲ ಆದರೂ ಸರ್ಕಾರ ದೊಡ್ಡ ಮನಸ್ಸು ಮಾಡಿ ವಿಶೇಷ ಅನುದಾನ ನೀಡಿದಲ್ಲಿ ಮಾತ್ರ  ಸಾಧ್ಯವಾಗಬಹುದು.

2026-27ನೇ ಸಾಲಿನ ಕರ್ನಾಟಕ ರಾಜ್ಯ  ಬಜೆಟ್ ಪುಸ್ತಕದ ಪುಟ 75  ಮತ್ತು ಪುಟ 81 ರಂದು ಗಮನಿಸಬಹುದಾಗಿದೆ. ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ        2026 - 27ನೇ ಸಾಲಿನಲ್ಲಿ ಮಂಜೂರಾಗಿರುವ ಅನುದಾನದ ವಿವರವನ್ನು ಈ ಕೆಳಗೆ ನೀಡಲಾಗಿದೆ

 news_1776852049_0_836.webp

 

ನಗರ/ಜಿಲ್ಲಾ ಗ್ರಂಥಾಲಯ ಪ್ರಾಧಿಕಾರಗಳ  ಬಜೆಟ್

ಇನ್ನೊಂದು ಪ್ರಮುಖವಾದ ವಿಚಾರವನ್ನು ಇಲ್ಲಿ  ಚರ್ಚಿಸಬೇಕಾಗಿದೆ.  ಅದೇನೆಂದರೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ಕಾಯ್ದೆ 1965 ಹಾಗೂ ನಿಯಮಗಳು 1966 ರ ಪ್ರಕಾರ ಎಲ್ಲಾ ನಗರ/  ಜಿಲ್ಲಾ ಗ್ರಂಥಾಲಯ ಪ್ರಾಧಿಕಾರಗಳು ಆಯಾಯ ಪ್ರಾಧಿಕಾರಗಳ ಆಯವ್ಯವನ್ನು ಫೆಬ್ರವರಿ ತಿಂಗಳಲ್ಲಿ ಸಿದ್ಧಪಡಿಸಿ ಅನುಮೋದನೆಗಾಗಿ ಇಲಾಖೆ ನಿರ್ದೇಶಕರಿಗೆ ಕಳುಹಿಸಿ ಕೊಡಬೇಕಾಗಿತ್ತು . ನಿರ್ದೇಶಕರು ಪರಿಶೀಲಿಸಿ ಆದಷ್ಟು ಶೀಘ್ರವಾಗಿ ಆಯವ್ಯಯಗಳ ಅನುಮೋದನೆ ನೀಡುತ್ತಿದ್ದರು. ನಗರ / ಜಿಲ್ಲಾ ಗ್ರಂಥಾಲಯದ ಅಧಿಕಾರಿಗಳು ಅನುಮೋದಿತ  ಆಯವ್ಯಯದ ಪ್ರಕಾರ ಮುಂದಿನ  ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದರು. ಆದರೆ ಕೆಲವು ವರ್ಷಗಳ ಹಿಂದೆ       ನಗರ /ಜಿಲ್ಲಾ ಗ್ರಂಥಾಲಯ ಪ್ರಾಧಿಕಾರಗಳ ಆಯವ್ಯಯವನ್ನು ಅನುಮೋದಿಸುವ ಅಧಿಕಾರವನ್ನು ನಿರ್ದೇಶಕರಿಂದ ಸರ್ಕಾರಕ್ಕೆ ವರ್ಗಾಯಿಸಲ್ಪಟ್ಟಿತು ಇದರಿಂದಾಗಿ ಆಯವ್ಯವನ್ನು ಅನುಮೋದಿಸುವ ಕೆಲಸ ತಡವಾಗತೊಡಗಿತು. ಎಷ್ಟೋ ಸಾರಿ ಆರ್ಥಿಕ ವರ್ಷದ ಹತ್ತು ಹನ್ನೊಂದು ತಿಂಗಳುಗಳು  ಆದರೂ ಕೂಡ ಆಯವ್ಯಯ ಅನುಮೋದಿತ ಆಗುತ್ತಿರಲಿಲ್ಲ ಉದಾಹರಣೆಗೆ 2025 - 26 ನೇ ಸಾಲಿನ  ರಾಜ್ಯದ ನಗರ /ಜಿಲ್ಲಾ  ಗ್ರಂಥಾಲಯಗಳ ಆಯವ್ಯಯ  ಅನುಮೋದನೆಯೇ ಆಗಿಲ್ಲ ಎಂದು ತಿಳಿದುಬಂದಿದೆ. ಅಂದರೆ ಇಡೀ ವರ್ಷ ನಗರ /ಜಿಲ್ಲಾ ಗ್ರಂಥಾಲಯಗಳಲ್ಲಿ ಯಾವುದೇ ಕಾರ್ಯಕ್ರಮ, ಖರೀದಿ ಇಲ್ಲ. ಇದರ ಪ್ರಭಾವ ಪುಸ್ತಕಗಳ ಖರೀದಿ ಮೇಲು ಕೂಡ ಆಗಿದೆ. ಪುಸ್ತಕಗಳು ಆಯ್ಕೆಯಾದರೂ ಪುಸ್ತಕಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ, ಇನ್ನು ಮುಂದೆ ಆದರೂ ಸರ್ಕಾರ  ಆಯವ್ಯಯವನ್ನು ಗರಿಷ್ಠ ಏಪ್ರಿಲ್ ತಿಂಗಳಲ್ಲಿ ಅನುಮೋದಿಸಲು ಕ್ರಮ ಕೈಗೊಳ್ಳುವುದು   ಸೂಕ್ತ. ಸರ್ಕಾರಕ್ಕೆ ಕೆಲಸದ ಒತ್ತಡ ಜಾಸ್ತಿ ಇರುವ ಕಾರಣ ನಗರ / ಜಿಲ್ಲಾ ಗ್ರಂಥಾಲಯ ಪ್ರಾಧಿಕಾರಗಳ ಆಯವ್ಯಯಗಳನ್ನು ಅನುಮೋದಿಸುವ ಅಧಿಕಾರವನ್ನು  ಈ ಹಿಂದಿನಂತೆ ಗ್ರಂಥಾಲಯ ಇಲಾಖೆಯ ಆಯುಕ್ತರಿಗೆ  ನೀಡುವುದು ಸೂಕ್ತ .

 

ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿ -2026

ಇತ್ತೀಚೆಗೆ ಸರ್ಕಾರದ ಆದೇಶ ಸಂಖ್ಯೆ   ಇಪಿ 156 ಎಲ್ಐಬಿ 2025, ಬೆಂಗಳೂರು ದಿನಾಂಕ 16/04/2026 ಮೂಲಕ ಪ್ರೊಫೆಸರ್ ರಾಜಪ್ಪ ದಳವಾಯಿ ಅವರ ಅಧ್ಯಕ್ಷತೆಯಲ್ಲಿ 21 ಜನರ ಪುಸ್ತಕ ಆಯ್ಕೆ ಸಮಿತಿಯನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಪುಸ್ತಕಗಳನ್ನು ಆಯ್ಕೆ ಮಾಡಲು ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿಯನ್ನು ಸರ್ಕಾರ ನೇಮಿಸಿದೆ. ಇದೇನೋ ಒಳ್ಳೆಯ ಬೆಳವಣಿಗೆ. ಆದರೆ  ರಾಜ್ಯ ಬಜೆಟ್ ನಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ಪುಸ್ತಕ ಖರೀದಿಗೆ ಅನುದಾನವನ್ನೇ ಒದಗಿಸಿರುವುದಿಲ್ಲ. ಅನುದಾನವೇ ಇಲ್ಲದೆ ಆಯ್ಕೆ ಸಮಿತಿ ಆಯ್ಕೆ ಮಾಡಿದ ಪುಸ್ತಕಗಳನ್ನು ಕೊಳ್ಳುವುದಾದರೂ ಹೇಗೆ? ಇದೊಂದು ರೀತಿ ಪ್ರಕಾಶಕರಿಗೆ /ಲೇಖಕರ ಕಣ್ಣೊರೆಸುವ ತಂತ್ರ ಅಷ್ಟೇ. ಈ ಹಿಂದೆ 2002, 2003, 2004  ವರ್ಷಗಳಲ್ಲಿ ಆಯ್ಕೆಯಾದ ಪುಸ್ತಕಗಳಿಗೆ ಇಲ್ಲಿಯವರೆಗೂ ಆದೇಶ ಬಂದಿರುವುದಿಲ್ಲ ಎಂದು ತಿಳಿದು ಬಂದಿದೆ. ಈ ವರ್ಷವೂ ಆಯ್ಕೆಯಾದ ಪುಸ್ತಕಗಳಿಗೆ ಆದೇಶ ಬರುವುದು ಯಾವಾಗಲೋ ಗೊತ್ತಿಲ್ಲ. ಆ ರೀತಿ ಬಂದಂತಹ ಆದೇಶಕ್ಕೆ ಅನುಗುಣವಾಗಿ ಪುಸ್ತಕಗಳನ್ನು ಸರಬರಾಜು ಮಾಡಿದ ಲೇಖಕರು ಹಾಗೂ ಪ್ರಕಾಶಕರಿಗೆ ಹಣ ತಲುಪುವುದು ಯಾವಾಗ ಅಂತ ಗೊತ್ತಿಲ್ಲ.

ಈ ಲೇಖನದ ಮೂಲಕ ವಿಶ್ವ ಪುಸ್ತಕ ದಿನಾಚರಣೆ ಸಂದರ್ಭದಲ್ಲಿ ಕರ್ನಾಟಕದಲ್ಲಿನ ಲೇಖಕರ ಮತ್ತು ಪುಸ್ತಕೋದ್ಯಮದ ಮತ್ತು ಸಾರ್ವಜನಿಕ ಗ್ರಂಥಾಲಯಗಳ ಹಣಕಾಸಿನ ಪರಿಸ್ಥಿತಿಯ ಆತ್ಮಾವಲೋಕನ ಮಾಡುವ ಪ್ರಯತ್ನ ಇದಾಗಿದೆ. 

news_1776851943_0_868.webp

ಡಾ.ಪಿ.ವೈ.ರಾಜೇಂದ್ರ ಕುಮಾರ್

ಮಾಜಿ ಮಹಾನಿರ್ದೇಶಕರು,

ನ್ಯಾಷನಲ್ ಲೈಬ್ರರಿ ಆಫ್ ಇಂಡಿಯಾ, ಕೋಲ್ಕತ್ತಾ

ನಿರ್ದೇಶಕರು (ನಿ),

ಸಾರ್ವಜನಿಕ ಗ್ರಂಥಾಲಯ ಇಲಾಖೆ, ಬೆಂಗಳೂರು

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಖಾಕಿ ಗೌರವಕ್ಕೆ ಸ್ತ್ರೀಶಕ್ತಿಯ ನಮನ: ದಾರಿದೀಪ ಸಂಸ್ಥೆಯಿಂದ ಮಹಿಳಾ ಪೊಲೀಸ್ ಅಧಿಕಾರಿ ಚೆನ್ನಮ್ಮ ಕರ್ನಾಲ್ ಅವರಿಗೆ ಸನ್ಮಾನ*ನಾಳೆ ಬಾಗಲಕೊಟೆ ವಿವಿಯ ಪ್ರಥಮ ಘಟಿಕೋತ್ಸವ ; ರಾಜ್ಯಪಾಲರು ಭಾಗಿವಿಶ್ವ ಪುಸ್ತಕ ದಿನ  ಮತ್ತು ಕನ್ನಡ ಪುಸ್ತಕೋದ್ಯಮಧಾರವಾಡದ ಎ ಜಿ ಎಂ ಆರ್ ಸಿ ಇ ಟಿ ಕಾಲೇಜಿಗೆ ‘ಟಿಸಿಎಸ್ ಟೆಕ್ ಬೈಟ್ಸ್’ ಹುಬ್ಬಳ್ಳಿ ವಲಯ ಮಟ್ಟದ ಪ್ರಶಸ್ತಿಅಶಿಸ್ತು ಮುಂದುವರೆಸಿದರೆ ಅಧಿಕಾರಿಗಳು, ಸಿಬ್ಬಂದಿ ಮೇಲೆ ಕ್ರಮ: ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಎಚ್ಚರಿಕೆಪ್ರಾಣೇಶರಿಂದ ನಗೆಹಬ್ಬ ಕಾರ್ಯಕ್ರಮಬಿ-ಖಾತಾ ಮಾಲೀಕರಿಗೆ ತೊಂದರೆ, ಜಿಲ್ಲಾ ಪ್ರಜಾ ಜಾಗೃತಿ ವೇದಿಕೆ ಮುಖ್ಯ ಎಫ್.ಐ.ಡಿ ರದ್ದು  ಹಾಗು   ರಸಗೊಬ್ಬರಗಳ ಬೆಲೆ ಏರಿಕೆ  ಹಾಗೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಗೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಒತ್ತಾಯಜೆಸಿಬಿ ಬಳಸಿ ಹಳೆಯ ಮಳಿಗೆ ಗಳು ನೆಲಸಮಮಹಿಳಾ ಅಧಿಕಾರಿಗೆ  ಕಿರುಕುಳ ,ಕಛೇರಿ ಅಧೀಕ್ಷಕನ ವಿರುಧ್ಧ   ಮೇಲಧಿಕಾರಿಗಳಿಗೆ  ದೂರು :