ಬಳ್ಳಾರಿ, ಜೂ.24: ಕಲ್ಯಾಣ ಕರ್ನಾಟಕ ಭಾಗದ ಲೇಖಕರು ಮತ್ತು ಪ್ರಕಾಶಕರನ್ನು ಉತ್ತೇಜಿಸುವ ಉದ್ದೇಶದಿಂದ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಪ್ರಕಟಿಸಿದ್ದ 1200 ಪ್ರತಿಗಳ ಪುಸ್ತಕ ಖರೀದಿ ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸುವಂತೆ ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ಬಳ್ಳಾರಿ ಜಿಲ್ಲಾ ಘಟಕ ಜಿಲ್ಲಾಡಳಿತವನ್ನು ಮನವಿ ಮಾಡಿದೆ.
ಈ ಕುರಿತು ಇಂದು ಮಂಗಳವಾರದಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ, 2018-19ರಿಂದ 2023-24ನೇ ಸಾಲಿನವರೆಗೆ ಕಲ್ಯಾಣ ಕರ್ನಾಟಕ ಭಾಗದ ಲೇಖಕರು ಮತ್ತು ಪ್ರಕಾಶಕರು ಪ್ರಕಟಿಸಿರುವ ಒಂದು ಶೀರ್ಷಿಕೆಯ 1200 ಪ್ರತಿಗಳ ಪುಸ್ತಕಗಳನ್ನು ಖರೀದಿಸಲು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧಿಸೂಚನೆ ಹೊರಡಿಸಿತ್ತು. ಆದರೆ ಅಧಿಸೂಚನೆ ಪ್ರಕಟವಾಗಿ ಹಲವು ವರ್ಷಗಳು ಕಳೆದಿದ್ದರೂ ಖರೀದಿ ಪ್ರಕ್ರಿಯೆ ಆರಂಭವಾಗದಿರುವುದು ಲೇಖಕರು ಮತ್ತು ಪ್ರಕಾಶಕರಲ್ಲಿ ತೀವ್ರ ನಿರಾಸೆ ಉಂಟುಮಾಡಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನಿಶ್ಟೀ ರುದ್ರಪ್ಪ ಬೇಸರವನ್ನು ವ್ಯಕ್ತಪಡಿಸಿದರು.
2017-18ನೇ ಸಾಲಿನಲ್ಲಿ ಇದೇ ಯೋಜನೆಯಡಿ ಕಲ್ಯಾಣ ಕರ್ನಾಟಕ ಭಾಗದ ಲೇಖಕರು ಮತ್ತು ಪ್ರಕಾಶಕರ ಪುಸ್ತಕಗಳನ್ನು ಖರೀದಿಸಿ, ಸಂಬಂಧಿತರಿಗೆ ಹಣ ಪಾವತಿಸಲಾಗಿತ್ತು. ಇದರಿಂದ ಲೇಖಕರು ಹಾಗೂ ಪ್ರಕಾಶಕರಿಗೆ ಆರ್ಥಿಕ ನೆರವು ದೊರೆತಿದ್ದು, ಹೊಸ ಕೃತಿಗಳ ಪ್ರಕಟಣೆಗೆ ಪ್ರೋತ್ಸಾಹ ಸಿಕ್ಕಿತ್ತು. ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಈ ಯೋಜನೆ ಮಹತ್ವದ ಕೊಡುಗೆ ನೀಡಿತ್ತು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಕೊರೊನಾ ಅವಧಿಯಲ್ಲಿ ಸ್ಥಗಿತಗೊಂಡಿದ್ದ ಯೋಜನೆಯನ್ನು 2025ರ ಫೆಬ್ರವರಿಯಲ್ಲಿ ಪುನರಾರಂಭಿಸಿ, 2018-19ರಿಂದ 2023-24ನೇ ಸಾಲಿನವರೆಗೆ ಪ್ರಕಟಗೊಂಡ ಪುಸ್ತಕಗಳ ಖರೀದಿಗೆ ಮಂಡಳಿ ಮತ್ತೆ ಅಧಿಸೂಚನೆ ಹೊರಡಿಸಿತ್ತು. ಈ ನಿರ್ಧಾರದಿಂದ ಕಲ್ಯಾಣ ಕರ್ನಾಟಕ ಭಾಗದ ಲೇಖಕರು ಮತ್ತು ಪ್ರಕಾಶಕರು ಸಂತಸ ವ್ಯಕ್ತಪಡಿಸಿದ್ದರು. ಆದರೆ ಇದುವರೆಗೆ ಯಾವುದೇ ಮುಂದಿನ ಕ್ರಮ ಕೈಗೊಳ್ಳದಿರುವುದು ಸಾಹಿತ್ಯ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಕಸಾಪ ತಿಳಿಸಿದೆ.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಲ್ಲಿ ಅಗತ್ಯ ಅನುದಾನ ಲಭ್ಯವಿದ್ದರೂ ಯೋಜನೆ ಅನುಷ್ಠಾನಕ್ಕೆ ಬರದಿರುವುದು ಬೇಸರದ ಸಂಗತಿಯಾಗಿದೆ. ಪುಸ್ತಕ ಪ್ರಕಟಣೆಗೆ ಆರ್ಥಿಕ ನೆರವು ಒದಗಿಸುವ ಈ ಯೋಜನೆ ಜಾರಿಯಾದರೆ ಲೇಖಕರು ಮತ್ತು ಪ್ರಕಾಶಕರು ಹೊಸ ಕೃತಿಗಳನ್ನು ಪ್ರಕಟಿಸಲು ಉತ್ತೇಜನ ದೊರೆಯಲಿದೆ. ಅಲ್ಲದೆ, ಕಲ್ಯಾಣ ಕರ್ನಾಟಕ ಭಾಗದ ಸಾಹಿತ್ಯ ಮತ್ತು ಸಾಂಸ್ಕೃತಿಕ ಬೆಳವಣಿಗೆಗೂ ಇದು ಸಹಕಾರಿಯಾಗಲಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಹೀಗಾಗಿ ಜಿಲ್ಲಾಧಿಕಾರಿಗಳು ಈ ವಿಷಯದಲ್ಲಿ ವಿಶೇಷ ಆಸಕ್ತಿ ವಹಿಸಿ, ಸ್ಥಗಿತಗೊಂಡಿರುವ ಪುಸ್ತಕ ಖರೀದಿ ಪ್ರಕ್ರಿಯೆಗೆ ಮರುಚಾಲನೆ ನೀಡಿ, ಲೇಖಕರು ಮತ್ತು ಪ್ರಕಾಶಕರಿಗೆ ಸಿಗಬೇಕಿರುವ ಆರ್ಥಿಕ ನೆರವನ್ನು ಶೀಘ್ರ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ ಮನವಿ ಮಾಡಿದ್ದಾರೆ.
ಈ ಸಂಬಂಧ ಜಿಲ್ಲಾ ಸಾರ್ವಜನಿಕ ಗ್ರಂಥಾಲಯದ ಉಪನಿರ್ದೇಶಕರಿಗೂ ಮನವಿ ಪತ್ರದ ಪ್ರತಿಯನ್ನು ಸಲ್ಲಿಸಲಾಗಿದೆ ಎಂದು ಅವರು ಪತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
