ರಾಮದುರ್ಗ: ರಾಜ್ಯದಲ್ಲಿ ವಿದ್ಯುತ್ ಖಾಸಗೀಕರಣ ಪ್ರಕ್ರಿಯೆಯನ್ನು ಕೈಬಿಡುವಂತೆ ಒತ್ತಾಯಿಸಿ ಭಾರತೀಯ ಕಿಸಾನ ಸಂಘ-ಕರ್ನಾಟಕ ಪ್ರದೇಶ ರಾಮದುರ್ಗ ತಾಲೂಕಾ ಘಟಕದಿಂದ ಪದಾಧಿಕಾರಿಗಳು ಹಾಗೂ ರೈತರು ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ಸರ್ಕಾರವು ರಾಜ್ಯದ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಖಾಸಗಿ ಕಂಪನಿಗಳಿಗೆ ವಹಿಸಲು ಮುಂದಾಗಿರುವ ವಿನಯ ಸಾರ್ವಜನಿಕರಲ್ಲಿ, ರೈತರಲ್ಲಿ, ಕಾರ್ಮಿಕರಲ್ಲಿ ಹಾಗೂ ವಿದ್ಯುತ್ ಗ್ರಾಹಕರಲ್ಲಿ ತೀವ್ರ ಆತಂಕ ಮೂಡಿಸಿದೆ. ವಿದ್ಯುತ್ ಎಂಬುದು ಜನ ಸಾಮಾನ್ಯರ ಮೂಲಭೂತ ಅವಶ್ಯಕತೆಯಾಗಿದ್ದು, ಇದನ್ನು ಸಂಪೂರ್ಣವಾಗಿ ಖಾಸಗಿ ಸಂಸ್ಥೆಗಳ ನಿಯಂತ್ರಣಕ್ಕೆ ನೀಡುವುದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ. ವಿದ್ಯುತ ಖಾಸಗೀಕರಣದಿಂದ ಗ್ರಾಮೀಣ ಪ್ರದೇಶಗಳ ರೈತರಿಗೆ ನೀಡಲಾಗುತ್ತಿರುವ ಸಬ್ಸಿಡಿ ಹಾಗೂ ವಿವಿಧ ಸೌಲಭ್ಯಗಳಿಗೆ ದಕ್ಕೆಯಾಗುವ ಸಾಧ್ಯತೆ ಇದೆ. ಅಲ್ಲದೆ ವಿದ್ಯುತ್ ದರಗಳ ಹೆಚ್ಚಾಗುವ ಮೂಲಕ ಸಾಮಾನ್ಯ ಜನರ ಮೇಲೆ ಆರ್ಥಿಕ ಹೊರೆ ಬಿಳಬಹುದು. ಹೆಸ್ಕಾಂ, ಬೆಸ್ಕಾಂ, ಸೇರಿದಂತೆ ರಾಜ್ಯದ ವಿದ್ಯುತ ವಿತರಣಾ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಹಾಗೂ ಗುತ್ತಿಗೆ ಕಾರ್ಮಿಕರ ಉದ್ಯೋಗ ಭದ್ರತೆ ಮೇಲು ಪರಿಣಾಮ ಬೀರುವ ಸಾಧ್ಯತೆ ಇದೆ.
ಆದ್ದರಿಂದ ರಾಜ್ಯ ಸರ್ಕಾರವು ಯಾವುದೇ ಕಾರಣಕ್ಕೂ ವಿದ್ಯುತ್ ಖಾಸಗಿಕರಣ ಪ್ರಕ್ರಿಯೆಯನ್ನು ಮುಂದು ವರೆಸದೆ ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ಈ ನಿರ್ಧಾರವನ್ನು ಹಿಂಪಡೆಯಬೇಕೆಂದು ಮನವಿ ಮೂಲಕ ಒತ್ತಾಯಿಸಿದರು.
ಮನವಿ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಸುರೇಶ ನಂದೇಪ್ಪನವರ, ಜಿಲ್ಲಾ ಉಪಾಧ್ಯಕ್ಷ ಬಸವರಾಜ ಕೋಣನ್ನವರ, ಪದಾಧಿಕಾರಿಗಳು ಹಾಗೂ ರೈತರಾದ ನೀಲಪ್ಪ ವನಕಿ, ಶ್ರೀನಿವಾಸ ದ್ಯಾವಣ್ಣವರ, ನಿಂಗಪ್ಪ ಗುದಗಿ, ಆನಂದ ಪೂಜಾರ, ಅಪ್ಪು ಪಾಟೀಲ, ಈರಣ್ಣ ಚಂಡಕಿ, ರಮೇಶ ಬೇಟಗೇರಿ, ರಾಧಿಕಾ ಧೂತ್, ಬೈಲಪ್ಪ ಜಂಜೇಲಿ, ಮಹಾಂತೇಶ ಕಳಸನ್ನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
