ಅಥಣಿ: ತಾಲೂಕಿನ ಅಬ್ಬಿಹಾಳ ಗ್ರಾಮದ ರಸ್ತೆ ಬದಿಯಲ್ಲಿರುವ ಸುಮಾರು 2 ಎಕರೆ ಭೂಮಿಯಲ್ಲಿ ಹಲವು ಕುಟುಂಬಗಳು ತಲೆತಲಾಂತರಗಳಿಂದ ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿವೆ. ಆದರೆ ಕೆಲವರು ನಕಲಿ ದಾಖಲೆಗಳ ಆಧಾರದ ಮೇಲೆ ಆ ಜಾಗವನ್ನು ತಮ್ಮ ಹೆಸರಿಗೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ.
ಅಬ್ಬಿಹಾಳ ಗ್ರಾಮದಲ್ಲಿ ವಾಸವಿರುವ ಜಾಗವನ್ನು ಕೆಲವರು ಪ್ರಭಾವಿಗಳು ನಕಲಿ ಸಹಿಗಳನ್ನು ಬಳಸಿ, ಮನೆಗಳು ಇರುವ ಜಾಗವನ್ನು ಇತರರಿಗೆ ಮಾಹಿತಿ ನೀಡದೆ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ ಎಂದು ಅಲ್ಲಿ ವಾಸವಾಗಿರುವ ಕುಟುಂಬದವರು ದೂರಿದ್ದಾರೆ.
ಇದಲ್ಲದೆ ಅಲ್ಲಿ ವಾಸವಿರುವ ಕುಟುಂಬದ ಪುರುಷರು ದಿನರೊಡಿಯಂತೆ ಕೆಲಸಕ್ಕೆ ತೆರಳಿರುವ ವೇಳೆ ಜಾಗವನ್ನು ಖಾಲಿ ಮಾಡುವಂತೆ ಒತ್ತಡ ಹೇರುತ್ತಿದ್ದು, ಜಾಗ ಬಿಡದಿದ್ದರೆ ಜೆಸಿಬಿ ಯಂತ್ರ ಬಳಸಿ ಮನೆಗಳನ್ನು ತೆರವುಗೊಳಿಸುವುದಾಗಿ ಹಾಗೂ ಜೀವ ಬೆದರಿಕೆ ಹಾಕುತ್ತಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ವೇಳೆ ತಮ್ಮ ಮೇಲೆ ಹಲ್ಲೆ ನಡೆಸಿ ಕಿರುಕುಳ ನೀಡಲಾಗುತ್ತಿದೆ ಎಂದು ಅವರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರಕಾಶ್ ಅಂಬೇಡ್ಕರ್ ಬ್ರಿಗೇಡ್ ತಾಲೂಕು ಅಧ್ಯಕ್ಷ ಮಹಾಂತೇಶ್ ಬಾಡಗಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಶಬ್ಬೀರ್ ಸಾತಬಚ್ಚೆ ಅವರ ನೇತೃತ್ವದಲ್ಲಿ ಆ ಕುಟುಂಬಸ್ಥರು ಸಾಂಕೇತಿಕ ಪ್ರತಿಭಟನೆ ನಡೆಸಿ, ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶಿಲ್ಪಾ ಪಾಟೀಲ, ರಂಜನಾ ಪಾಟೀಲ, ಭುವನೇಶ್ವರಿ ದೇಸಾಯಿ, ಕಾಶಿಬಾಯಿ ದೇಸಾಯಿ, ವಿಮಲಾಬಾಯಿ ದೇಸಾಯಿ, ಕಾಶಿಬಾಯಿ ಪಾಟೀಲ, ಸಾವಿತ್ರಿ ಇಂಗಳೆ, ವಿಜ್ವಲಾ, ಪುನಮ್ ಪಾಟೀಲ, ಮಂಗಲಾ ಪಾಟೀಲ, ಶಾಂತಿಬಾಯಿ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.
