ಈ ವಿಶ್ವ ಮಧುಮೇಹ ದಿನದಂದು ನಾವೆಲ್ಲರೂ ಒಂದು ಪ್ರತಿಜ್ಞೆ ಮಾಡೋಣ. "ಆರಂಭಿಕ ಪತ್ತೆ, ಆರಂಭಿಕ ಕ್ರಮ, ಆರೋಗ್ಯಕರ ಜೀವನ." ನಮ್ಮ ಊಟ, ನಮ್ಮ ನಡಿಗೆ, ನಮ್ಮ ಜೀವನಶೈಲಿಯೇ ನಮ್ಮ ಔಷಧಿ. ಇಂದಿನಿಂದಲೇ ಬದಲಾಗೋಣ....
ಇನ್ಸೂಲಿನ್ ಕಂಡುಹಿಡಿದ ವಿಜ್ಞಾನಿ ಸರ್ ಫ್ರೆಡ್ರಿಕ್ ಬ್ಯಾಂಟಿಂಗ್ ಜನ್ಮದಿನ ನಿಮಿತ್ತ ಪ್ರತಿ ವರ್ಷ ನವೆಂಬರ್ 14 ರಂದು ವಿಶ್ವ ಮಧುಮೇಹ ದಿನವನ್ನಾಗಿ ಆಚರಿಸಲಾಗುತ್ತದೆ. ಮಧುಮೇಹದ ಬೆದರಿಕೆಯ ವಿರುದ್ಧ ಜಾಗೃತಿ ಮೂಡಿಸಲು 1991ರಲ್ಲಿ ಅಂತಾರಾಷ್ಟ್ರೀಯ ಮಧುಮೇಹ ಒಕ್ಕೂಟ (IDF) ಮತ್ತು ವಿಶ್ವ ಆರೋಗ್ಯ ಸಂಸ್ಥೆ (WHO) ಇದನ್ನು ಸ್ಥಾಪಿಸಿದವು. 2006ರಲ್ಲಿ ಇದು ವಿಶ್ವಸಂಸ್ಥೆಯ ಅಧಿಕೃತ ದಿನಾಚರಣೆಯಾಗಿ ಘೋಷಿಸಲ್ಪಟ್ಟಿತು.
2026-27ರ ಥೀಮ್ ಮಧುಮೇಹದ ಮೇಲಿನ ಆರಂಭಿಕ ಕ್ರಮ (Early Action on Diabetes). ಈ ಥೀಮ್‌ನ ಸಂದೇಶ ಮಧುಮೇಹ ಬಂದ ಮೇಲೆ ಚಿಕಿತ್ಸೆ ಮಾಡುವುದಕ್ಕಿಂತ ಬರುವ ಮೊದಲೇ ಪತ್ತೆಹಚ್ಚಿ, ತಡೆಗಟ್ಟುವುದು ಮುಖ್ಯ ಎನ್ನುವುದನ್ನು ಜಾಗೃತಿ ಮೂಡಿಸುವುದು.
ರೋಗಲಕ್ಷಣಗಳು ಕಾಣಿಸಿಕೊಳ್ಳುವ ಮುನ್ನವೇ ಮಧುಮೇಹವನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚುವುದು. ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಮತ್ತು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಹೃದಯ ಸಂಬಂಧಿ ರೋಗಗಳು, ಮೂತ್ರಪಿಂಡ ವೈಫಲ್ಯ, ಕಣ್ಣಿನ ದೃಷ್ಟಿ ನಷ್ಟ ಇತ್ಯಾದಿ ತಡೆಗಟ್ಟಲು ಜಾಗೃತಿ ಮೂಡಿಸುವುದು. ಸಮಯಕ್ಕೆ ಸರಿಯಾದ ರೋಗನಿರ್ಣಯ ಮತ್ತು ಆರೋಗ್ಯಕರ ಜೀವನಶೈಲಿಯನ್ನು (ಆಹಾರ ಮತ್ತು ವ್ಯಾಯಾಮ) ಉತ್ತೇಜಿಸುವುದು ಈ ಬಾರಿಯ ಜಾಗೃತಿ ಅಭಿಯಾನವಾಗಿದೆ.
ಜಾಗತಿಕ ಅಭಿವೃದ್ಧಿಗೂ ತೊಡಕು:
ಮದುಮೇಹ ಕಾಯಿಲೆ ಜಾಗತಿಕ ಅಭಿವೃದ್ಧಿಗೂ ತೊಡಕಾಗಿದ್ದು, ಎಷ್ಟರಮಟ್ಟಿಗೆ ಎಂದರೇ ಆರೋಗ್ಯ ರಕ್ಷಣೆಗಾಗಿ ವಿಶ್ವದಾದ್ಯಂತ ಖರ್ಚು ಮಾಡುತ್ತಿರುವ ಹಣದಲ್ಲಿ ಒಂದು ಪಾಲನ್ನು ಮಧುಮೇಹ ಕಾಯಿಲೆ ನಿರ್ವಹಣೆಗಾಗಿಯೇ ವ್ಯಯಿಸಲಾಗುತ್ತಿದೆ. ಹೀಗಾಗಿ ಈ ರೋಗವನ್ನು ನಿಯಂತ್ರಿಸಲು ಹಾಗೂ ನಿರ್ವಹಣೆ ಮಾಡಲು ಜನಸಾಮಾನ್ಯರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕಾದ ಅಗತ್ಯ ಹಾಗೂ ಅನಿವಾರ್ಯತೆವಿದೆ.
ಜಗತ್ತಿನಲ್ಲಿ ಮಧುಮೇಹದ ಸಮಾಜೋ-ಆರ್ಥಿಕ ದುಷ್ಪರಿಣಾಮ((Socio-Economic Adverse Effects)ಗಳನ್ನು ಎದುರಿಸುತ್ತಿರುವ ರಾಷ್ಟ್ರಗಳಲ್ಲಿ ಭಾರತವೇ ಮುಂಚೂಣಿಯಲ್ಲಿದೆ. ಮಧುಮೇಹ ಹಾಗೂ ಅದರಿಂದ ಸಂಭವಿಸುವ ಇತರ ಸಮಸ್ಯೆಗಳ ನಿಯಂತ್ರಣ ಹಾಗೂ ಅಸಮರ್ಪಕ ನಿರ್ವಹಣೆಗಳಲ್ಲಿ ಎಡವುತ್ತಿದ್ದು, ದೇಶದಲ್ಲಿ ಹೆಚ್ಚಿನ ಜನರ ಆರೋಗ್ಯ ಅಪಾಯಕ್ಕೆ ಸಿಲುಕುತ್ತಿರುವುದು ಹಲವು ವರದಿಗಳಲ್ಲಿ ಉಲ್ಲೇಖಿಸಲಾಗಿದೆ.
ಮಧುಮೇಹ ಅಪಾಯಕಾರಿ ರೋಗ ಅಲ್ಲವೇ ಅಲ್ಲ. ದೇಹದಲ್ಲಿನ ಸಕ್ಕರೆ ಅಂಶದ ಪ್ರಮಾಣ, ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್ ಅಂಶಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ನಿಟ್ಟಿನಲ್ಲಿ ದೇಶದ ಜನರ ದೈನಂದಿನ ಜೀವನದಲ್ಲಿ ದೈಹಿಕ ಚಟುವಟಿಕೆಗಳು ಮತ್ತು ಕ್ರೀಡೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಆರೋಗ್ಯಕರ ಮತ್ತು ಫಿಟ್ ಆಗಿರಲು ಪ್ರೋತ್ಸಾಹಿಸುವ ಸದಾಶಯದೊಂದಿಗೆ ರಾಷ್ಟ್ರೀಯ ಅಭಿಯಾನವಾದ ಫಿಟ್ ಇಂಡಿಯಾ ಚಳುವಳಿ (Fit India Movement) ಆರಂಭಿಸಿ ಜನರ ಆರೋಗ್ಯ ಕಾಳಜಿ, ಜಾಗೃತಿ ಮೂಡಿಸಲಾಗುತ್ತಿದೆ. ನಿಯಮಿತ ಆಹಾರ ಪದ್ಧತಿ ಹಾಗೂ ವ್ಯಾಯಾಮದಂತಹ ದೈಹಿಕ ಚಟುವಟಿಕೆಗಳನ್ನು ನಿತ್ಯ ಪಾಲಿಸಿ ನಮ್ಮ ಜೀವನ ಶೈಲಿ ಬದಲಿಸಿಕೊಳ್ಳಲು, ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಪ್ರೋತ್ಸಾಹಿಸಲಾಗುತ್ತಿದೆ.
ಭಾರತದಲ್ಲಿ ಆತಂಕಕಾರಿ ಪರಿಸ್ಥಿತಿ:
ಅಂತಾರಾಷ್ಟ್ರೀಯ ಮಧುಮೇಹ ಒಕ್ಕೂಟದ (IDF-International Diabetes Federation) ವರದಿಯ ಪ್ರಕಾರ ಭಾರತದಲ್ಲಿ ಮಧುಮೇಹದ ಹರಡುವಿಕೆಯು 2009ರಲ್ಲಿ ಶೇ.7.1 ರಷ್ಟಿದ್ದರೇ, 2019ರ ವೇಳೆಗೆ ಶೇ 8.9ಕ್ಕೆ ಏರಿಕೆಯಾಗಿತ್ತು. 20 ರಿಂದ 77 ವರ್ಷ ವಯಸ್ಸಿನ ಜನ ಮಧುಮೇಹದ ಸಮಸ್ಯೆ ಎದುರಿಸುತ್ತಿದ್ದು, 2045ರ ವೇಳೆಗೆ ಸುಮಾರು 13.42 ಕೋಟಿ ಜನರು ಮದುಮೇಹಿಗಳಾಗಬಹುದೆಂದು ಅಂದಾಜಿಸಲಾಗಿದೆ.
ICMR-INDIAB ಅಧ್ಯಯನದ ಪ್ರಕಾರ ಭಾರತದಲ್ಲಿ ಸುಮಾರು 10.1 ಕೋಟಿ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಇದು ವಯಸ್ಕರ ಜನಸಂಖ್ಯೆಯ ಶೇ.11.4 ರಷ್ಟು. ಅದಕ್ಕಿಂತ ದೊಡ್ಡ ಆತಂಕವೆಂದರೇ ಇನ್ನೂ 13.6 ಕೋಟಿ ಜನರು ಪ್ರಿ-ಡಯಾಬಿಟಿಸ್ ಹಂತದಲ್ಲಿದ್ದಾರೆ. ಇವರಲ್ಲಿ ಶೇ.60 ಜನರು ಮುಂದಿನ ದಿನಗಳಲ್ಲಿ ಮಧುಮೇಹಕ್ಕೆ ತುತ್ತಾಗುವ ಸಾಧ್ಯತೆಗಳಿವೆ. ನಗರಗಳಲ್ಲಿ ಈ ಪ್ರಮಾಣ ಶೇ.24.4 ರಷ್ಟು ಇದ್ದರೇ, ಗ್ರಾಮೀಣ ಪ್ರದೇಶಗಳಲ್ಲೂ ಶೇ.12.6 ರಷ್ಟಿದೆ. ಮಧುಮೇಹ ಈಗ ಕೇವಲ ವಯಸ್ಸಾದವರ ಕಾಯಿಲೆಯಲ್ಲ, 30ರ ಹರೆಯದ ಯುವಕರನ್ನೂ ಆವರಿಸುತ್ತಿದೆ ಎನ್ನುವುದೇ ದೊಡ್ಡ ಆತಂಕ ಹಾಗೂ ಕಳವಳಕಾರಿ ಸಂಗತಿ.
ಏಕೆ ಹೆಚ್ಚುತ್ತಿದೆ ಮಧುಮೇಹ?
1. ಬದಲಾದ ಜೀವನಶೈಲಿ: ಕಡಿಮೆ ದೈಹಿಕ ಚಟುವಟಿಕೆ, ಗಂಟೆಗಟ್ಟಲೆ ಕುಳಿತು ಕೆಲಸ, ಮೊಬೈಲ್, ಟಿವಿ ವೀಕ್ಷಣೆ ನೋಡುವ ಹವ್ಯಾಸ.
2. ಬದಲಾದ ಆಹಾರ ಪದ್ಧತಿ: ಜಂಕ್ ಫುಡ್, ಸಕ್ಕರೆ ಪಾನೀಯಗಳು, ಮೈದಾ, ಸಂಸ್ಕರಿಸಿದ ಆಹಾರ ಸೇವನೆ ಹೆಚ್ಚು, ನಾರಿನಂಶವುಳ್ಳ ಪದಾರ್ಥಗಳ ಕನಿಷ್ಠ ಬಳಕೆ.
3. ಬೊಜ್ಜು: ಭಾರತದಲ್ಲಿ 25.4 ಕೋಟಿ ಜನರು ಸಾಮಾನ್ಯ ಬೊಜ್ಜು ಮತ್ತು 35.1 ಕೋಟಿ ಜನರು ಹೊಟ್ಟೆಯ ಬೊಜ್ಜಿನಿಂದ ಬಳಲುತ್ತಿದ್ದಾರೆ.
4. ಒತ್ತಡ ಮತ್ತು ನಿದ್ರಾಹೀನತೆ: ಮಾನಸಿಕ ಒತ್ತಡ, ತಡರಾತ್ರಿಯವರೆಗೆ ಎಚ್ಚರ ಇರುವುದು.
5. ವಂಶವಾಹಿ: ತಂದೆ-ತಾಯಿಗೆ ಇದ್ದರೇ ಮಕ್ಕಳಿಗೆ ಬರುವ ಸಾಧ್ಯತೆ ಹೆಚ್ಚು.
ಲಕ್ಷಣಗಳ ನಿರ್ಲಕ್ಷಿಸದೇ ಆರಂಭಿಕ ಪತ್ತೆ ಮಾಡಿ:
ಆಗಾಗ ಮೂತ್ರ ವಿಸರ್ಜನೆ, ಅತಿಯಾದ ಬಾಯಾರಿಕೆ, ಹಸಿವು, ತೂಕ ಇಳಿಕೆ, ಸುಸ್ತು, ಗಾಯ ಬೇಗ ಮಾಯದಿರುವುದು, ಕೈ-ಕಾಲು ಜೋಮು ಹಿಡಿಯುವುದು, ದೃಷ್ಟಿ ಮಂಜಾಗುವುದು, ಇವು ಮಧುಮೇಹದ ಮುನ್ಸೂಚನೆಗಳಾಗಿರಬಹುದು. ಆದರೆ, ಶೇ.50 ಕ್ಕೂ ಹೆಚ್ಚು ಜನರಿಗೆ ತಮಗೆ ಮಧುಮೇಹ ಇದೆ ಎಂಬುವುದೇ ಗೊತ್ತಿರುವುದಿಲ್ಲ. ಅದಕ್ಕಾಗಿಯೇ ಈ ವರ್ಷದ ಥೀಮ್ ಹೇಳುವುದು ಲಕ್ಷಣ ಬರುವ ಮೊದಲೇ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಜಾಗೃತಿ ಮೂಡಿಸಲಾಗುತ್ತಿದೆ.
ನಿಯಂತ್ರಣ ತಪ್ಪಿದರೇ ಆಗುವುದಾದರೂ ಏನು?:
ಮಧುಮೇಹಿಗಳಲ್ಲಿ ಕೊಲೆಸ್ಟ್ರಾಲ್ ಹಾಗೂ ಅಧಿಕ ರಕ್ತದೊತ್ತಡ ಸಮಸ್ಯೆ ತುಂಬಾ ಸಾಮಾನ್ಯ. ಮಧುಮೇಹವು ಸೂಕ್ಷ್ಮ ರಕ್ತನಾಳಗಳ (ಮೈಕ್ರೊ ವಾಸ್ಕ್ಯುಲರ್) ಮೇಲುಂಟು ಮಾಡುವ ಹಾನಿಯು ಮೂತ್ರಕೋಶ ಸಂಬಂಧಿ ರೋಗ ಮತ್ತು ನರರೋಗ, ಕಣ್ಣಿನ ಸಮಸ್ಯೆ ಕಾರಣವಾದರೇ, ದೊಡ್ಡ ರಕ್ತನಾಳಗಳ (ಮ್ಯಾಕ್ರೊ ವಾಸ್ಕ್ಯುಲರ್) ಮೇಲುಂಟು ಮಾಡುವ ಹಾನಿಯು ಹೃದಯಾಘಾತ ಹಾಗೂ ಹೃದಯ ಸಂಬಂಧಿ ಸಮಸ್ಯೆಗಳು ಸೇರಿದಂತೆ ಪಾರ್ಶ್ವ ವಾಯುವಿಗೆ ಕಾರಣವಾಗುತ್ತವೆ. ಹೃದಯಾಘಾತ, ಪಾರ್ಶ್ವವಾಯು, ಕಿಡ್ನಿ ವೈಫಲ್ಯ, ಕಣ್ಣಿನ ರೆಟಿನಾ ಹಾನಿ, ಕಾಲುಗಳ ನರಗಳ ಹಾನಿ ಮತ್ತು ಕಾಲು ಕತ್ತರಿಸುವ ಪರಿಸ್ಥಿತಿ. ಭಾರತದಲ್ಲಿ ಸಾಂಕ್ರಾಮಿಕವಲ್ಲದ ಕಾಯಿಲೆಗಳಿಂದ ಆಗುವ ಸಾವುಗಳು ಈಗ ಶೇ.60ಕ್ಕೆ ಏರಿವೆ. ಹೀಗಾಗಿ ಆರಂಭದಲ್ಲಿ ಪತ್ತೆ ಹಚ್ಚಿ ಮುನ್ನೆಚ್ಚರಿಕೆ ಅನುಸರಿಸಿದರೇ ಆರೋಗ್ಯಯುತ ಜೀವನಕ್ಕೆ ರಹದಾರಿ ಮಾಡಿಕೊಟ್ಟಂತೆ. ಹೀಗಾಗಿ ಮಧುಮೇಹಿಗಳು ನಿತ್ಯ ತಪಾಷಣೆ, ನಾರಿನ ಅಂಶಗಳುಳ್ಳ ಪದಾರ್ಥಗಳ ಸೇವನೆ, ಕಡಿಮೆ ಪ್ರಮಾಣದ ಕೊಬ್ಬಿನಂಶವಿರುವ ಪ್ರೋಟೀನ್ ಮತ್ತು ಆರೋಗ್ಯಕಾರಿ ಕೊಬ್ಬು ಒಳಗೊಂಡ ಸಮತೂಕದ ಆಹಾರ ಸೇವನೆ ಜೊತೆಗೆ ದೈಹಿಕ ಚಟುವಟಿಕೆಗಳ ಪಾತ್ರ ಅತ್ಯಂತ ಮುಖ್ಯವಾಗಿದೆ.
ತಡೆಗಟ್ಟಲು ಆರಂಭಿಕ ಕ್ರಮಕೈಗೊಳ್ಳಿ:
-ನಿತ್ಯ 30-45 ನಿಮಿಷ ಲಘು ನಡಿಗೆ ಇಲ್ಲವೇ ವ್ಯಾಯಾಮ ಮಾಡಿ.
-ಕೇವಲ ಶೇ.5-7 ತೂಕ ಇಳಿಸಿದರೂ ಮಧುಮೇಹ ಬರುವ ಅಪಾಯ ಶೇ.58 ರಷ್ಟು ಕಡಿಮೆಯಾಗುವುದು.
-ಸಿರಿಧಾನ್ಯ, ತರಕಾರಿ, ಹಣ್ಣು, ಕಾಳುಗಳು, ನಾರಿನಂಶ ಹೆಚ್ಚು ಸೇವಿಸಿ ಸಕ್ಕರೆ, ಎಣ್ಣೆ ಬಳಕೆ ಕಡಿಮೆ ಮಾಡಿ.
-30 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ವರ್ಷಕ್ಕೆ ಒಮ್ಮೆ HbA1c ಪರೀಕ್ಷೆ ಮಾಡಿಸಿಕೊಳ್ಳಬೇಕು.
-ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರಿ.
ಮಧುಮೇಹವು ಗುಣಪಡಿಸಲಾಗದ ಕಾಯಿಲೆ ಎಂಬ ಭಯ ಬೇಡ. ಆದರೆ, ನಿರ್ಲಕ್ಷಿಸಿದರೇ ದೀರ್ಘ ಕಾಲದ ಬದುಕಿಗೆ ಮಾರಕ. ಈ ವಿಶ್ವ ಮಧುಮೇಹ ದಿನದಂದು ನಾವೆಲ್ಲರೂ ಒಂದು ಪ್ರತಿಜ್ಞೆ ಮಾಡೋಣ. "ಆರಂಭಿಕ ಪತ್ತೆ, ಆರಂಭಿಕ ಕ್ರಮ, ಆರೋಗ್ಯಕರ ಜೀವನ." ನಮ್ಮ ಊಟ, ನಮ್ಮ ನಡಿಗೆ, ನಮ್ಮ ಜೀವನಶೈಲಿಯೇ ನಮ್ಮ ಔಷಧಿ. ಇಂದಿನಿಂದಲೇ ಬದಲಾಗೋಣ....
-ಡಾ.ಬಾಬುರಾಜೇಂದ್ರ ಬಿ.ನಾಯಿಕ್
ಶ್ರೀ ತುಳಸಿಗಿರೀಶ್ ಡಯಾಬಿಟಿಸ್ ಹಾಸ್ಪಿಟಲ್ಸ್, ವಿಜಯಪುರ-ಬಾಗಲಕೋಟೆ.