ಧರ್ಮವು ಮನುಷ್ಯನೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಪ್ರೊ.ಮ್ಯಾಕ್ಸ್ ಮುಲ್ಲರ ಮನುಷ್ಯನ ಇತಿಹಾಸವೆಂದರೆ ಅದು ಧರ್ಮದ ಇತಿಹಾಸವೇ ಆಗಿದೆ ಎಂದು ಹೇಳಿರುವುದು ಧರ್ಮ ಮತ್ತು ಮನುಷ್ಯನ ಸಂಬಂಧದ ದ್ಯೋತಕವಾಗಿದೆ.
“ದಯವೇ ಧರ್ಮದ ಮೂಲ, ಅಹಿಂಸಾ ಪರಮೋಧರ್ಮಃ” ಮುಂತಾದ ದಾರ್ಶನಿಕ ವಾಕ್ಯಗಳು ದಯೆ, ಕರುಣೆ, ಶಾಂತಿ, ಪ್ರೀತಿ ಮತ್ತು ಮಾನವೀಯತೆ ಧರ್ಮದ ಜೀವಜೀವಾಳವಾಗಿರುವುದನ್ನು ಪ್ರತಿಪಾದಿಸುತ್ತವೆ. ಜಗತ್ತಿನ ಯಾವ ಧರ್ಮವೇ ಇರಲಿ ಅದಕ್ಕೆ ವಿಶ್ವಾಸ, ಶ್ರದ್ಧೆ, ಅನುಭೂತಿ ಮತ್ತು ಆಧ್ಯಾತ್ಮಿಕ ದೃಷ್ಟಿ ಇರಬೇಕಾದುದು ಅತ್ಯವಶ್ಯವಾಗಿದೆ. ಸೇವೆ, ತ್ಯಾಗ, ಪರೋಪಕಾರ ಸೌಹಾರ್ದತೆ ಮತ್ತು ಪ್ರೇಮ ಮುಂತಾದ ಸದ್ಗುಣಗಳು ಧರ್ಮದ ಆದರ್ಶಗಳಾಗಿರುತ್ತವೆ. ಇವುಗಳ ಮೂಲಕ ಮಾನವ ಕಲ್ಯಾಣವನ್ನು ಸಾಧಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.
ಜಗತ್ತಿನಲ್ಲಿರುವ ಪ್ರತಿಯೊಂದು ಧರ್ಮಕ್ಕೂ ಅದರದೇ ಆದ ಅಸ್ತಿತ್ವ ಹಾಗೂ ಅಸ್ಮಿತೆ ಇರುವುದು ವಾಸ್ತವ ಸಂಗತಿ. ಆ ಧರ್ಮಗಳ ಧರ್ಮಗ್ರಂಥ, ಸ್ಥಾಪಕರು, ಧಾರ್ಮಿಕ ನಂಬಿಕೆಗಳು ಮತ್ತು ಆಚರಣೆಗಳು ವಿಭಿನ್ನವಾಗಿದ್ದರೂ ಅವೆಲ್ಲವೂ ಸತ್ಯದ ಕಡೆಗೆ ಮುಖಮಾಡಿವೆ. ಸರ್ವಧರ್ಮ ಸಮಭಾವಕ್ಕೆ ಈ ಸತ್ಯವೇ ಆಧಾರವಾಗಿದೆ. ಪ್ರತಿಯೊಬ್ಬರೂ ಸತ್ಯದ ಜೊತೆಗೆ ತಮ್ಮ ಧರ್ಮ ಹಾಗೂ ಇತರ ಧರ್ಮಗಳಲ್ಲಿರುವ ಸಮಾನ ಅಂಶಗಳನ್ನು ಅರಿತುಕೊಂಡಾಗ ಎಲ್ಲ ಧರ್ಮಗಳ ಗುರಿ ಒಂದೇ ಎಂಬುದು ಅನುಭವಕ್ಕೆ ಬರುವುದಲ್ಲದೆ ಧರ್ಮಗಳಲ್ಲಿ ಸಮನ್ವಯ ಸಾಧ್ಯವಾಗುತ್ತದೆ. ಹಾಗೆಯೇ ಪ್ರೀತಿ, ವಿಶ್ವಾಸ ಮತ್ತು ಸೌಹಾರ್ದತೆಗಳು ವೃದ್ಧಿಸುತ್ತವೆ. ಈ ದಿಶೆಯಲ್ಲಿ ನಮ್ಮ ಗದಗ ನಗರದ ಖ್ಯಾತ ವೈದ್ಯರೂ, ಹೊಸಪೇಟೆ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರೂ ಆಗಿರುವ ಡಾ. ಮಹಮ್ಮದಅಶ್ರಫ್ ಡಿ. ಸಮುದ್ರಿ ಅವರು ರಚಿಸಿದ ಪ್ರಸ್ತುತ ಕೃತಿ ಧರ್ಮ ಸಮನ್ವಯದ ಮಾರ್ಗವನ್ನು ಪ್ರಸ್ತುತಪಡಿಸುವುದಲ್ಲದೆ ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸೌಹಾರ್ದತೆಯನ್ನು ಬೆಳೆಸುವಲ್ಲಿ ಸಮರ್ಥವಾಗಿದೆ.
ನಮ್ಮ ದೇಶ ಭಾರತ ಬಹುತ್ವಕ್ಕೆ ಹೆಸರಾದುದು. ಇಲ್ಲಿಯ ಸಂಸ್ಕೃತಿ ಬಹುತ್ವದ ಸಂಸ್ಕೃತಿ. ವಿವಿಧ ಧರ್ಮ, ಭಾಷೆ, ಪ್ರದೇಶ, ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಎಲ್ಲರೂ ಭಾರತೀಯರು ಎಂಬ ಭಾವದಿಂದ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿರುವುದು ಈ ದೇಶದ ಹಿರಿಮೆ. ಕುವೆಂಪು ಅವರ ದೃಷ್ಟಿಯಲ್ಲಿ ನಮ್ಮ ದೇಶ ಸರ್ವಜನಾಂಗದ ಶಾಂತಿಯ ತೋಟ ಹಾಗೆಯೇ ಸರ್ವಧರ್ಮ ಧೇನುಗಳ ಆಡುಂಬೊಲ. ಈ ಹಿನ್ನೆಲೆಯಲ್ಲಿ ನಮ್ಮ ದೇಶದ ಶಾಂತಿ ಸುವ್ಯವಸ್ಥೆಯನ್ನು, ಪರಸ್ಪರ ಸಾಮರಸ್ಯ ಹಾಗೂ ಸೌಹಾರ್ದತೆಯನ್ನು, ಧಾರ್ಮಿಕ ಸಹಿಷ್ಣುತೆಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯ. ಅನೇಕ ಮಹಾತ್ಮರು, ಸಂತರು, ಶರಣರು ಮತ್ತು ಪ್ರವಾದಿಗಳು ತಮ್ಮ ಅತ್ಯಮೂಲ್ಯ ಬದುಕು ಹಾಗೂ ಸಂದೇಶಗಳ ಮೂಲಕ ನಮ್ಮನ್ನು ಸದಾ ಎಚ್ಚರಿಸುತ್ತಾ ಬಂದಿದ್ದಾರೆ. ಇಂತಹ ಮಹಾತ್ಮರಲ್ಲಿ ಇಸ್ಲಾಂ ಧರ್ಮದ ಪ್ರವರ್ತಕರಾದ ಮಹಮ್ಮದ ಪೈಗಂಬರ ಹಾಗೂ ಲಿಂಗಾಯತ ಧರ್ಮದ ಪ್ರವರ್ತಕರಾಗಿರುವ ಬಸವಣ್ಣನವರ ಅತ್ಯಮೂಲ್ಯ ಸಂದೇಶಗಳನ್ನು ತುಲನಾತ್ಮಕವಾಗಿ ಅಧ್ಯಯನ ಮಾಡಿದ ಡಾ. ಮಹಮ್ಮದ ಅಶ್ರಫ್ ಡಿ. ಸಮುದ್ರಿ ಅವರು ಪ್ರಸ್ತುತ ಕೃತಿಯಲ್ಲಿ ತಮ್ಮ ಅಧ್ಯಯನದ ಸಾರಸರ್ವಸ್ವವನ್ನು ಅಭಿವ್ಯಕ್ತಗೊಳಿಸಿದ್ದಾರೆ.
ಮಹಮ್ಮದ್ ಪೈಗಂಬರರು ಮರುಭೂಮಿಯಲ್ಲಿ ಉದಯಿಸಿದ ಬೆಳಕಾದರೇ ಬಸವಣ್ಣನವರು ಕಾರ್ತಿಕದ ಕತ್ತಲಲ್ಲಿ ಆಕಾಶದೀಪವಾಗಿ ಲೋಕವನ್ನು ಬೆಳಗಿದವರು. ಇವರು ಬೇರೆ ಬೇರೆ ಕಾಲ, ದೇಶ, ಭಾಷೆ ಮತ್ತು ಜನಾಂಗದಲ್ಲಿ ಉದಿಸಿ ಬಂದವರು. ಅವರ ಬದುಕಿನ ವಿಭಿನ್ನ ಅನುಭವಗಳು, ಕಷ್ಟ-ಕಾರ್ಪಣ್ಯಗಳು ಮತ್ತು ಮಾನವೀಯ ಚಿಂತನೆಗಳು ಅವರನ್ನು ಮಹಾನ್‌ವ್ಯಕ್ತಿಗಳನ್ನಾಗಿ ರೂಪಿಸಿರುವುದು ಐತಿಹಾಸಿಕ ಸತ್ಯ. ಅವರಿಬ್ಬರೂ ಶೋಷಣೆಯ ವಿರುದ್ಧ ಹೋರಾಡಿದವರು ಮತ್ತು ಶೋಷಿತರ ಪರ ನಿಲವುಳ್ಳವರು. ಮಹಿಳೆಯರಿಗೆ ಉನ್ನತ ಸ್ಥಾನಮಾನ ಕಲ್ಪಿಸುವ ಮೂಲಕ ಅವರನ್ನು ಗೌರವಿಸಿದವರು. ಸಮಾನತೆಯ ಜೊತೆಗೆ ಪ್ರಾಮಾಣಿಕ ದುಡಿಮೆಗೆ ಒತ್ತು ಕೊಟ್ಟವರು. ಏಕದೇವ ನಿಷ್ಠೆ ಮತ್ತು ಉಪಾಸನೆಯ ಮೂಲಕ ಸಾಮಾಜಿಕ ಸಮಾನತೆಯನ್ನು ಸಾಧಿಸಿದ ಮಹಾಮಹಿಮರು. ಅವರಿಬ್ಬರೂ ಸದಾಚಾರ-ಸದ್ವಿಚಾರ ಮತ್ತು ಸದ್ವಿನಯಕ್ಕೆ ಹೆಸರಾದವರು. ಇವರ ಬದುಕು ಮತ್ತು ಸಂದೇಶಗಳು ಕಾಲಾತೀತವಾದವುಗಳು. ಅವು ಎಲ್ಲ ಕಾಲಕ್ಕೂ ಪ್ರಸ್ತುತವಾಗಬಲ್ಲ ಅಪರಿಮಿತ ಶಕ್ತಿ ಹೊಂದಿರುವುದನ್ನು ಯಾರೂ ಗಮನಿಸಬಹುದು. ಆದರೆ ಪೂರ್ವಾಗ್ರಹವನ್ನು ಬದಿಗಿಟ್ಟು ಅವಲೋಕಿಸಿದಾಗ ಮಾತ್ರ ಇದು ಸಾಧ್ಯ.
ಅಹದ್ ಅಹದ್ ದೇವರು ಒಬ್ಬನೇ ಎಂಬ ಪ್ರವಾದಿಗಳ ಸಂದೇಶ “ದೇವನೊಬ್ಬ ನಾಮ ಹಲವು, ಪರಮ ಪತಿವ್ರತೆಗೆ ಗಂಡನೊಬ್ಬ” ಎಂಬ ಬಸವಣ್ಣನವರ ವಚನದಲ್ಲಿ ಪ್ರತಿಧ್ವನಿಸಿದೆ. ಒಬ್ಬನೇ ದೇವರು ಎಲ್ಲ ಜೀವಿಗಳ ಅಂತರಂಗದಲ್ಲಿ ಪ್ರತಿಬಿಂಬಿಸುವನು. ಸಹಸ್ರ ಕುಂಭ ಉದಕದಲ್ಲಿ ಪ್ರತಿಬಿಂಬಿಸುವ ಸೂರ್ಯನೊಬ್ಬನಲ್ಲದೆ ಮತ್ತೆ ಹಲಬರುಂಟೆ? ಎಂದು ಜೇವರಗಿಯ ಷಣ್ಮುಖ ಸ್ವಾಮಿಗಳು ಪ್ರಶ್ನಿಸುತ್ತಾರೆ.
ಮದೀನಾದ ಪೈಗಂಬರರ ಸಹೋದರತ್ವದ ಚಿಂತನೆ ಬಸವಣ್ಣನವರ “ಇವ ನಮ್ಮವ ಇವ ನಮ್ಮವ” ಎಂಬ ವಚನದಲ್ಲಿದೆ. “ವಸುಧೈವ ಕುಟುಂಬಕಮ್” ಎಂಬ ಉಪನಿಷತ್ತಿನ ಚಿಂತನೆಯೂ ಇದೇ ಆಗಿದೆ. ಹೀಗಿರುವಾಗ ಪರಸ್ಪರ ದ್ವೇಷಿಸುವುದು ಅರ್ಥಹೀನ. ದ್ವೇಷವು ದ್ವೇಷದಿಂದ ಶಮನವಾಗುವುದಿಲ್ಲ. ದ್ವೇಷ ಶಮನವಾಗುವುದು ಪ್ರೀತಿಯಿಂದ ಮಾತ್ರ. ಹಾಗಾಗಿ ಎಲ್ಲರೂ ಪರಸ್ಪರ ಪ್ರೀತಿ ಮತ್ತು ಸಹಕಾರದಿಂದ ವರ್ತಿಸುವುದು ಸಹಬಾಳ್ವೆ ನಡೆಸುವುದು ಅತ್ಯವಶ್ಯ. ಇದನ್ನೇ ಈರ್ವರೂ ಮಹಾತ್ಮರು ತಮ್ಮ ಸಂದೇಶದಲ್ಲಿ ಸ್ಫುಟವಾಗಿಸಿದ್ದಾರೆ. ಇದೂ ಅಲ್ಲದೆ ಪ್ರಮಾಣಿಕ ದುಡಿಮೆ (ಕಾಯಕ)ಯ ಜೊತೆಗೆ ದಾಸೋಹಂಭಾವವೂ ಅತ್ಯವಶ್ಯವಾಗಿದೆ. ಕಾಯಕ ಸಮೃದ್ಧಿಯ ಸಂಕೇತ, ದಾಸೋಹ ಸಂತೃಪ್ತಿಯ ಸಂಕೇತ. ಗಳಿಸುವ ಮತ್ತು ಹಂಚಿಕೊಂಡು ಭೋಗಿಸುವ ವಿಶಿಷ್ಟ ಸಂಸ್ಕೃತಿಯನ್ನು ಮಹಮ್ಮದ ಪೈಗಂಬರ ಮತ್ತು ಬಸವಣ್ಣನವರು ಪ್ರತಿಪಾದಿಸಿದ್ದಾರೆ. ಜಕಾತ್ ಮತ್ತು ದಾಸೋಹ ಭಾವಗಳು ಮನುಷ್ಯನಲ್ಲಿ ಸ್ವಾರ್ಥವನ್ನು ಕಡಿಮೆ ಮಾಡಿ ಮಾನವೀಯ ಭಾವವನ್ನು ಬೆಳೆಸುವಲ್ಲಿ ಸಹಕಾರಿಯಾಗಿವೆ. ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲುಬೇಡ ಎಂಬ ಬಸವಣ್ಣನವರ ಸಪ್ತಶೀಲಗಳು ಮಾನವ ಬದುಕಿನ ಮಂದಾರ. ಇವು ವ್ಯಕ್ತಿಯ ಅಂತರಂಗ ಮತ್ತು ಬಹಿರಂಗಗಳನ್ನು ಪರಿಶುದ್ಧಗೊಳಿಸಿ ದೇವರ ಒಲುಮೆಗೆ ಕಾರಣವಾಗುತ್ತವೆ ಎಂಬ ಮಾತನ್ನು ವಿಶೇಷವಾಗಿ ಉಲ್ಲೇಖಿಸಿರುವ ಡಾ.ಮಹಮ್ಮದ್ ಅಶ್ರಫ್ ಡಿ. ಸಮುದ್ರಿ ಅವರು ದೇಶದ ಯುವಕರು ಈ ಸಂದೇಶಗಳನ್ನು ಅಳವಡಿಸಿಕೊಂಡು ದೇಶವನ್ನು ಮುನ್ನಡೆಸಬೇಕೆಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ.
ನಮ್ಮ ದೇಶದ ಬಹುದೊಡ್ಡ ಶಕ್ತಿ ಎಂದರೆ ಯುವ ಶಕ್ತಿ. ಅವರಿಂದಲೇ ದೇಶದ ಅಭಿವೃದ್ಧಿ ಮತ್ತು ಶಾಂತಿ ಸುವ್ಯವಸ್ಥೆ ನೆಲೆಗೊಳ್ಳಲು ಸಾಧ್ಯ. ಅವರು ದೇಶದ ಉಪ್ಪು. ಅವರು ತಂದುಕೊಡುವ ರುಚಿಯನ್ನು ಯಾರೂ ತಂದು ಕೊಡಲಾರರು. ಅವರು ಜ್ಞಾನವಂತರಾಗಬೇಕು, ಸಂಸ್ಕಾರವಂತರಾಗಬೇಕು. ಅವರಲ್ಲಿ ಪ್ರಮಾಣಿಕತೆ, ಕರ್ತವ್ಯನಿಷ್ಠೆಯಂತಹ ಮೌಲ್ಯಗಳು ಬೆಳೆದು ಬರಬೇಕು. ಅವರು ನಮ್ಮ ಸರ್ವಶ್ರೇಷ್ಠ ಭಾರತೀಯ ಸಂವಿಧಾನವನ್ನು ಗೌರವಿಸುತ್ತ ಅದನ್ನು ಅನುಸರಿಸುವ ವ್ಯಕ್ತಿಗಳಾಗಬೇಕು. ಯುವ ಜನತೆ ಸಂಸ್ಕಾರಯುಕ್ತ ಉನ್ನತ ಶಿಕ್ಷಣವನ್ನು ಪಡೆದು, ನೈತಿಕ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಭಾರತೀಯ ಸಂವಿಧಾನದ ಆಶಯದಂತೆ ಬದುಕಿದರೆ ಅವರು ದೇಶದ ಐಕ್ಯತೆ ಹಾಗೂ ಸಮಗ್ರತೆಯನ್ನು ಸಾಧಿಸುವುದಲ್ಲದೆ ದೇಶವನ್ನು ಅಭಿವೃದ್ಧಿಯ ಸತ್ಫಥದಲ್ಲಿ ಮುನ್ನಡೆಸುವರು. ಅವರ ಪ್ರಾಮಾಣಿಕತೆ, ಪ್ರಯತ್ನ ಮತ್ತು ಸೇವೆಗಳೇ ಭಾರತದ ಜೀವಾಳ. ಅವರು ಪರಸ್ಪರ ಪ್ರೀತಿ, ವಿಶ್ವಾಸ, ಸಾಮರಸ್ಯ, ಸೌಹಾರ್ದತೆ, ಧಾರ್ಮಿಕ ಸಹಿಷ್ಣುತೆಗಳ ಮೂಲಕ ವಿಶ್ವಬಂಧುತ್ವವನ್ನು ಸಾಧಿಸಿದರೆ ಭಾರತವನ್ನು ವಿಶ್ವಗುರುವನ್ನಾಗಿಸಬಲ್ಲರು ಎಂಬ ಒಟ್ಟು ಆಶಯ ಡಾ. ಮಹಮ್ಮದ ಅಶ್ರಫ್ ಡಿ. ಸಮುದ್ರಿ ಅವರ ಈ ಕೃತಿಯಲ್ಲಿ ವ್ಯಕ್ತವಾಗಿದೆ. ಸರಳ ಶೈಲಿಯಲ್ಲಿ ಓದುಗರಿಗೆ ಆಪ್ತವಾಗುವ ರೀತಿಯಲ್ಲಿ ರಚನೆಯಾದ ಈ ಕೃತಿಯನ್ನು ಪ್ರತಿಯೊಬ್ಬರೂ ಓದಿ ಅನುಸರಿಬೇಕು ಮತ್ತು ಭಾರತವನ್ನು ವಿಶ್ವಗುರುವಾಗಿಸಬೇಕು ಎಂದು ಹಾರೈಸುವೆವು.
ಲೇಖಕರು
-ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಗದಗ