LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Feature Article

ಗ್ರಂಥಾಲಯ ಉಳಿಸಿ, ಪುಸ್ತಕ ಸಂಸ್ಕೃತಿ, ಉಳಿಸಿ

ಗ್ರಂಥಾಲಯ ವಿಜ್ಞಾನ ಪಿತಾಮಹ ಡಾ.ಎಸ್.ಆರ್.ರಂಗನಾಥ ಜನ್ಮ ದಿನದ ಗೌರವಾರ್ಥ ದೇಶಾದ್ಯಂತ ಇಂದು ರಾಷ್ಟ್ರೀಯ ಗ್ರಂಥಾಲಯ ದಿನ ಆಚರಣೆ

ಆ.12 ಇದು ಕೇವಲ ಒಂದು ದಿನದ ಆಚರಣೆಯಲ್ಲ, ಭಾರತದ ಗ್ರಂಥಾಲಯ ಕ್ಷೇತ್ರಕ್ಕೆ ಹೊಸದಿಕ್ಕು ತೋರಿಸಿದ ಮಹಾನ್‌ ಚಿಂತಕ, ಗ್ರಂಥಾಲಯ ವಿಜ್ಞಾನದ ಪಿತಾಮಹ ಡಾ.ಎಸ್.ಆರ್.ರಂಗನಾಥನ್‌ ಅವರ ಜನ್ಮದಿನ. ಅವರ ಸ್ಮರಣಾರ್ಥ ದೇಶಾದ್ಯಂತ ರಾಷ್ಟ್ರೀಯ ಗ್ರಂಥಪಾಲಕರ ದಿನ ಆಚರಿಸಲಾಗುತ್ತದೆ. ಪುಸ್ತಕಗಳು ಜ್ಞಾನವನ್ನುನೀಡುತ್ತವೆ, ಗ್ರಂಥಾಲಯಗಳು ಆ ಜ್ಞಾನವನ್ನು ಜನಸಾಮಾನ್ಯರಿಗೆ ತಲುಪಿಸುತ್ತವೆ ಎಂಬ ಆಶಯದೊಂದಿಗೆ ನಮ್ಮ ದೇಶದ ಗ್ರಂಥಾಲಯಗಳು ದಶಕಗಳಿಂದ ಜ್ಞಾನ, ಶಿಕ್ಷಣ,ಸಂಸ್ಕೃತಿ ಮತ್ತು ಸಂಶೋಧನೆಯ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿವೆ. ಆದರೆ, ಇಂದು ಕರ್ನಾಟಕದ ಗ್ರಂಥಾಲಯ ಕ್ಷೇತ್ರ ಎದುರಿಸುತ್ತಿರುವ ಪರಿಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ.

ಎರಡು ದಶಕಗಳಿಂದ ನೇಮಕಾತಿ ಇಲ್ಲ:

ಕರ್ನಾಟಕದ ವಿಶ್ವವಿದ್ಯಾಲಯಗಳು, ಪದವಿ ಮತ್ತು ಇತರ ಕಾಲೇಜುಗಳು, ವಿವಿಧ ಸರ್ಕಾರಿ ಇಲಾಖೆಗಳು ಹಾಗೂ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಗ್ರಂಥಪಾಲಕರು ಮತ್ತು ಗ್ರಂಥಾಲಯ ವೃತ್ತಿಪರರ ಹುದ್ದೆಗಳು ಹಲವಾರು ವರ್ಷಗಳಿಂದ ಖಾಲಿಯಾಗಿವೆ. ಕಳೆದ ಸುಮಾರು 2 ದಶಕಗಳಿಂದ ಸಮರ್ಪಕ ಮತ್ತು ನಿರಂತರ ನೇಮಕಾತಿ ನಡೆಯದಿರುವುದು ಗ್ರಂಥಾಲಯ ಕ್ಷೇತ್ರದ ಮೇಲೆ ಗಂಭೀರ ಪರಿಣಾಮಬೀರುತ್ತಿದೆ. ಗ್ರಂಥಾಲಯದಲ್ಲಿಪುಸ್ತಕಗಳು, ನಿಯತಕಾಲಿಕೆಗಳು, ಅಪರೂಪದದಾಖಲೆಗಳು, ಹಸ್ತಪ್ರತಿಗಳು ಹಾಗೂ ಇಂದು ವೇಗವಾಗಿ ಹೆಚ್ಚುತ್ತಿರುವ ಡಿಜಿಟಲ್‌ ಸಂಪನ್ಮೂಲಗಳ ಸಂರಕ್ಷಣೆ, ವರ್ಗೀಕರಣ, ದಾಖಲಾತಿ ಮತ್ತು ಓದುಗರಿಗೆ ಸೂಕ್ತಮಾಹಿತಿ ಒದಗಿಸುವ ಕಾರ್ಯಕ್ಕೆ ತರಬೇತಿ ಪಡೆದ ಗ್ರಂಥಪಾಲಕರು ಅತ್ಯಗತ್ಯ.

ಪುಸ್ತಕಗಳ ಖರೀದಿ ಮಾತ್ರ ಗ್ರಂಥಾಲಯ ಸೇವೆಯಲ್ಲ: ಪುಸ್ತಕಗಳನ್ನು ಖರೀದಿ ಮಾಡುವುದಷ್ಟೇ ಗ್ರಂಥಾಲಯ ಸೇವೆಯಲ್ಲ, ಅವುಗಳನ್ನು ಸಂರಕ್ಷಿಸಿ, ವ್ಯವಸ್ಥಿತಗೊಳಿಸಿ, ಓದುಗರಿಗೆ ತಲುಪಿಸಿ, ಜ್ಞಾನವನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವವರು ಗ್ರಂಥಾಲಯ ವೃತ್ತಿಪರರು. ಇಂದು ಡಿಜಿಟಲ್‌ ಯುಗದಲ್ಲಿ ಗ್ರಂಥಾಲಯಗಳ ಪಾತ್ರ ಕಡಿಮೆಯಾಗಿಲ್ಲ, ಬದಲಾಗಿ ಇನ್ನಷ್ಟು ವಿಸ್ತರಿಸಿದೆ. ಮುದ್ರಿತ ಪುಸ್ತಕಗಳ ಜೊತೆಗೆ ಇ-ಪುಸ್ತಕಗಳು, ಇ-ಜರ್ನಲ್‌ಗಳು, ಡಿಜಿಟಲ್‌ ಆರ್ಕೈವ್‌ಗಳು, ಆನ್‌ಲೈನ್‌ ಡೇಟಾಬೇಸ್‌ಗಳು ಹಾಗೂ ವಿವಿಧ ವಿದ್ಯುನ್ಮಾನ ಮಾಹಿತಿಯ ಮೂಲಗಳನ್ನು ನಿರ್ವಹಿಸುವ ಜವಾಬ್ದಾರಿ ಗ್ರಂಥಪಾಲಕರ ಮೇಲಿದೆ. ರಾಷ್ಟ್ರೀಯಮಟ್ಟದಲ್ಲಿಯೂ ಗ್ರಂಥಾಲಯಗಳ ಆಧುನೀಕರಣ ಮತ್ತು ಡಿಜಿಟಲ್‌ ಸಂಪನ್ಮೂಲಗಳ ವಿಸ್ತರಣೆಗೆ ಗ್ರಂಥಪಾಲಕರಿಲ್ಲದ ಗ್ರಂಥಾಲಯ ಆತ್ಮವಿಲ್ಲದ ದೇಹದಂತೆ ಹಲವಾರು ಶಿಕ್ಷಣ ಸಂಸ್ಥೆಗಳಲ್ಲಿ ಗ್ರಂಥಾಲಯಗಳು ಇದ್ದರೂ,ಅವುಗಳನ್ನು ಸಮರ್ಥವಾಗಿ ನಿರ್ವಹಿಸಲು ಅಗತ್ಯವಿರುವ ಕಾಯಂ ಗ್ರಂಥಪಾಲಕರು ಇಲ್ಲದಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಒಂದು ಕಡೆ ಸರ್ಕಾರ ಜ್ಞಾನಾಧಾರಿತ ಸಮಾಜ, ಡಿಜಿಟಲ್‌ ಕರ್ನಾಟಕ ಮತ್ತು ಗುಣಮಟ್ಟದ ಶಿಕ್ಷಣದ ಬಗ್ಗೆ ಮಾತನಾಡುತ್ತಿದೆ. ಮತ್ತೊಂದೆಡೆ, ಜ್ಞಾನವನ್ನುವಿದ್ಯಾರ್ಥಿಗಳು, ಸಂಶೋಧಕರು, ಶಿಕ್ಷಕರು ಮತ್ತು ಸಾರ್ವಜನಿಕರಿಗೆ ತಲುಪಿಸುವ ಗ್ರಂಥಾಲಯ ವ್ಯವಸ್ಥೆಯಲ್ಲಿಯೇ ಅಗತ್ಯಮಾನವ ಸಂಪನ್ಮೂಲದ ಕೊರತೆ ಮುಂದುವರಿದರೆ ಈ ಗುರಿಗಳನ್ನುಸಾಧಿಸುವುದು ಹೇಗೆ?

ಗ್ರಂಥಾಲಯವಿಲ್ಲದೆ ಶಿಕ್ಷಣ ಅಪೂರ್ಣ: ಕರ್ನಾಟಕ ಸರ್ಕಾರಕ್ಕೆ ನಮ್ಮ ಪ್ರಮುಖ ಮನವಿಗಳು ರಾಷ್ಟ್ರೀಯ ಗ್ರಂಥಪಾಲಕರ ದಿನದ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಗ್ರಂಥಾಲಯ ಕ್ಷೇತ್ರದ ಸಮಸ್ಯೆಗಳಿಗೆ ತುರ್ತು ಆದ್ಯತೆ ನೀಡಬೇಕು.

1. ವಿಶ್ವವಿದ್ಯಾಲಯಗಳು, ಕಾಲೇಜುಗಳು, ಸರ್ಕಾರಿ ಇಲಾಖೆಗಳು ಮತ್ತು ಸಾರ್ವಜನಿಕ ಗ್ರಂಥಾಲಯಗಳಲ್ಲಿ ಖಾಲಿ ಇರುವ ಗ್ರಂಥಪಾಲಕರ ಹಾಗೂ ಗ್ರಂಥಾಲಯ ಸಿಬ್ಬಂದಿಯ ಹುದ್ದೆಗಳನ್ನು ತಕ್ಷಣ ಗುರುತಿಸಿ ಭರ್ತಿ ಮಾಡಬೇಕು.

2.ಸುಮಾರು ಎರಡು ದಶಕಗಳಿಂದ ಸ್ಥಗಿತಗೊಂಡಿರುವ ನೇಮಕಾತಿ ಪ್ರಕ್ರಿಯೆಗೆ ವಿಶೇಷ ಆದ್ಯತೆ ನೀಡಿ, ಕಾಯಂ ನೇಮಕಾತಿಗೆ ಕಾಲಬದ್ಧ ಕಾರ್ಯಕ್ರಮ ರೂಪಿಸಬೇಕು.

3.ನಿವೃತ್ತಿ, ರಾಜೀನಾಮೆ ಮತ್ತು ಇತರ ಕಾರಣಗಳಿಂದ ಖಾಲಿಯಾಗುವ ಹುದ್ದೆಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ, ಮುಂದಿನ ದಿನಗಳಲ್ಲಿ ಹುದ್ದೆಗಳು ವರ್ಷಗಟ್ಟಲೆ ಖಾಲಿ ಉಳಿಯದಂತೆ ನಿಯಮಿತ ನೇಮಕಾತಿ ವ್ಯವಸ್ಥೆ ಜಾರಿಗೆ ತರಬೇಕು.

4.ಸಾರ್ವಜನಿಕ ಗ್ರಂಥಾಲಯಗಳನ್ನು ಆಧುನೀಕರಿಸುವುದರ ಜೊತೆಗೆ, ಅವುಗಳಲ್ಲಿನ ಮಾನವ ಸಂಪನ್ಮೂಲವನ್ನು ಬಲಪಡಿಸಬೇಕು.

5. ಅಪರೂಪದ ಪುಸ್ತಕಗಳು, ಹಳೆಯ ದಾಖಲೆಗಳು ಮತ್ತು ಕನ್ನಡದ ಅಮೂಲ್ಯ ಸಾಹಿತ್ಯ ಸಂಪತ್ತನ್ನು ಸಂರಕ್ಷಿಸಲು ಡಿಜಿಟಲೀಕರಣ ಮತ್ತು ಡಿಜಿಟಲ್‌ ಸಂರಕ್ಷಣೆಗೆ ವಿಶೇಷ ಯೋಜನೆ ರೂಪಿಸಬೇಕು.

6.ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳು, ಸಂಶೋಧಕರು ಹಾಗೂ ಸಾಮಾನ್ಯ ಓದುಗರಿಗೆ ಆಧುನಿಕ ಗ್ರಂಥಾಲಯ ಸೇವೆಗಳನ್ನು ಒದಗಿಸಲು ಅಗತ್ಯವಾದ ತಂತ್ರಜ್ಞಾನ ಮತ್ತು ತರಬೇತಿಯನ್ನು ಗ್ರಂಥಾಲಯ ವೃತ್ತಿಪರರಿಗೆ ನೀಡಬೇಕು.

ಇದು ಕೇವಲ ಗ್ರಂಥಪಾಲಕರ ಉದ್ಯೋಗದ ಪ್ರಶ್ನೆಯಲ್ಲ. ನಮ್ಮಬೇಡಿಕೆ ಕೇವಲ ಉದ್ಯೋಗಕ್ಕಾಗಿ ಅಲ್ಲ. ಇದು ಕರ್ನಾಟಕದ ಜ್ಞಾನ ಸಂಪತ್ತಿನ ಸಂರಕ್ಷಣೆಯ ಪ್ರಶ್ನೆ. ಇದು ಪುಸ್ತಕ ಸಂಸ್ಕೃತಿಯ ಉಳಿವಿನ ಪ್ರಶ್ನೆ. ಇದು ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ. ಇದು ಸಂಶೋಧನೆಯ ಬೆಳವಣಿಗೆಯ ಪ್ರಶ್ನೆ. ಇದು ಕನ್ನಡಸಾಹಿತ್ಯ ಮತ್ತು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿಯ ಪ್ರಶ್ನೆ. ಒಂದು ಪುಸ್ತಕ ಕಳೆದು ಹೋದರೆ ಒಂದು ಜ್ಞಾನದ ಕೊಂಡಿ ಕಳೆದು ಹೋಗುತ್ತದೆ. ಒಂದು ಅಪರೂಪದ ದಾಖಲೆ ನಾಶವಾದರೆ ಇತಿಹಾಸದ ಒಂದು ಪುಟವೇಶಾಶ್ವತವಾಗಿ ಕಳೆದು ಹೋಗಬಹುದು. ಆದ್ದರಿಂದ ಗ್ರಂಥಾಲಯಗಳನ್ನು ಕೇವಲ ಸರ್ಕಾರಿ ಕಟ್ಟಡಗಳೆಂದು ಪರಿಗಣಿಸದೆ, ರಾಜ್ಯದ ಜ್ಞಾನ ಮತ್ತು ಸಾಂಸ್ಕೃತಿಕ ಪರಂಪರೆಯ ಭಂಡಾರಗಳೆಂದು ಪರಿಗಣಿಸಬೇಕು.

ರಂಗನಾಥನ್‌ ಅವರ ಕನಸಿನ ಗ್ರಂಥಾಲಯ ವ್ಯವಸ್ಥೆ ನಿರ್ಮಿಸೋಣ. ಡಾ.ಎಸ್.ಆರ್.ರಂಗನಾಥನ್‌ ಅವರು ತಮ್ಮ ಜೀವನವನ್ನೇ ಭಾರತದ ಗ್ರಂಥಾಲಯಕ್ಷೇತ್ರದ ಅಭಿವೃದ್ಧಿಗೆ ಸಮರ್ಪಿಸಿದ್ದರು. ಅವರ ಚಿಂತನೆಗಳು ಇಂದಿಗೂ ಗ್ರಂಥಾಲಯ ಸೇವೆಗೆ ಮಾರ್ಗದರ್ಶಕವಾಗಿವೆ. ಅವರ ಜನ್ಮದಿನವನ್ನು ಆಚರಿಸುವುದರ ನಿಜವಾದ ಅರ್ಥವೆಂದರೆ ಕೇವಲ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದಲ್ಲ. ಅವರು ಕಂಡಜ್ಞಾನ ಸಮಾಜದ ಕನಸನ್ನು ಸಾಕಾರಗೊಳಿಸುವುದು.

ಆದ್ದರಿಂದ ಕರ್ನಾಟಕ ಸರ್ಕಾರವು ಈ ರಾಷ್ಟ್ರೀಯ ಗ್ರಂಥಪಾಲಕರ ದಿನದಂದು ರಾಜ್ಯದ ಗ್ರಂಥಾಲಯ ಕ್ಷೇತ್ರಕ್ಕೆ ಹೊಸಚೈತನ್ಯ ನೀಡುವ ಐತಿಹಾಸಿಕ ನಿರ್ಧಾರ ಕೈಗೊಳ್ಳಬೇಕು. ಖಾಲಿ ಹುದ್ದೆಗಳನ್ನು ಭರ್ತಿಮಾಡಿ. ಗ್ರಂಥಾಲಯಗಳನ್ನು ಬಲಪಡಿಸಿ. ಗ್ರಂಥಪಾಲಕರನ್ನು ನೇಮಿಸಿ, ಪುಸ್ತಕಗಳನ್ನು ಸಂರಕ್ಷಿಸಿ, ಡಿಜಿಟಲ್‌ ಜ್ಞಾನವನ್ನು ವಿಸ್ತರಿಸಿ. ಓದುವ ಸಂಸ್ಕೃತಿಯನ್ನು ಉಳಿಸುವುದು ಡಾ.ಎಸ್.ಆರ್.ರಂಗನಾಥನ್‌ ಅವರಿಗೆ ನಾವು ಸಲ್ಲಿಸಬಹುದಾದ ನಿಜವಾದ ಗೌರವ....

-ಡಾ.ಎಲ್.ಎಸ್.ಕಾಡದೇವರಮಠ, ಅಧ್ಯಕ್ಷರು, ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಥಣಿ ಕ್ಷೇತ್ರಕ್ಕೆ ಮತ್ತೊಂದು ಹೆಮ್ಮೆಯ ಕ್ಷಣ: ಲಕ್ಷ್ಮಣ ಸವದಿಗೆ ಸಹಕಾರ ಹಾಗೂ ಕೃಷಿ ಮಾರುಕಟ್ಟೆ ಖಾತೆನೀರು ಹೇಗೆ ಬಿಡಿಸಿಕೊಳ್ಳಬೇಕೆಂಬುದು ನಮಗೆ ಗೊತ್ತಿದೆ - ನಡಹಳ್ಳಿಆ.೧೪ರಂದು ’ಉತ್ಸವ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿ’ ಉದ್ಘಾಟನೆವಿದ್ಯಾರ್ಥಿ ದಶೆಯಲ್ಲೇ ವಿವಿಧ ಕೌಶಲ ಮೈಗೂಡಿಸಿಕೊಂಡರೆ ಭವಿಷ್ಯ ಭದ್ರ: ಸಂಗಮೇಶ ಹಳ್ಳೂರದೆಹಲಿ ಹೈಕೋರ್ಟ್ ಮಾಜಿ ನ್ಯಾಯಮೂರ್ತಿ ಯಶವಂತ್ ವರ್ಮಾ ಮೇಲಿನ ಮೂರೂ ದೋಷಾರೋಪಗಳು ಸಾಬೀತು: ಸಂಸದೀಯ ತನಿಖಾ ಸಮಿತಿಯ ಸ್ಫೋಟಕ ವರದಿಇಂಡಿ: ಹಿರೇಮಸಳಿ ಸರ್ಕಾರಿ ಉರ್ದು ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಉಚಿತ ಸ್ಕಾರ್ಫ್ ವಿತರಣೆ; ಹೊಸೂರು ಕುಟುಂಬದ ಶೈಕ್ಷಣಿಕ ಕಾಳಜಿಗೆ ಶ್ಲಾಘನೆನೂತನ ಸಚಿವರಿಗೆ ಖಾತೆ ಹಂಚಿಕೆ ಅಂತಿಮ, ರಾಜಪಾಲರ ಅನುಮೋದನೆಗೆ ಕಾಯುತ್ತಿರುವ ಸಚಿವರುಕೆಪಿಎಸ್‌ಸಿ ಅಕ್ರಮ ಆರೋಪದ ಬಿಸಿ: ಪರೀಕ್ಷಾ ನಿಯಂತ್ರಕರ ಎತ್ತಂಗಡಿ, ಆಯೋಗಕ್ಕೆ ಹೊಸ ಐಎಎಸ್ ಅಧಿಕಾರಿಗಳ ಸರಪಳಿ ಪಾಲಿಕೆಗೆ 4 ಸ್ಥಾಯಿ ಸಮಿತಿಗಳಿಗೆ ಸದಸ್ಯರ ಅವಿರೋಧ ಆಯ್ಕೆಚಂದ್ರನ ಮೇಲಿನ ಶಾಶ್ವತ ಮಾನವ ನೆಲೆ ನಿರ್ಮಾಣಕ್ಕೆ ಇಸ್ರೋ ಜೊತೆ ಕೈಜೋಡಿಸಲು ಮುಂದಾದ ನಾಸಾ