ಮುದ್ದೇಬಿಹಾಳ : ಕೆರೆಗಳಿಗೆ ನೀರು ತುಂಬಿಸಲು ರೈತರು ಒತ್ತಾಯಿಸುತ್ತಿದ್ದರೂ ಆಡಳಿತ ಪಕ್ಷದ ಶಾಸಕರು ರೈತರ ಬಳಿ ಎರಡು ದಿನ ಕಾಲಾವಕಾಶ ಕೇಳಿದ್ದಾರೆ. ನಾವು ನಾಲ್ಕೈದು ದಿನ ಕಾಯುತ್ತೇವೆ ನೀರು ಬಿಡದಿದ್ದರೆ ಹೋರಾಟದ ಮೂಲಕ ನೀರು ಬಿಡಿಸಿಕೊಳ್ಳುತ್ತೇವೆಂದು ಮಾಜಿ ಶಾಸಕ, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ(ನಡಹಳ್ಳಿ) ಎಚ್ಚರಿಸಿದರು.
ತಾಲ್ಲೂಕಿನ ಬಿದರಕುಂದಿ, ಢವಳಗಿ, ಬಸರಕೋಡ, ರೂಡಗಿ ಭಾಗದಲ್ಲಿ ಬೆಳೆ ಹಾನಿ ವೀಕ್ಷಣೆ ಮಾಡಿ ರೈತರೊಂದಿಗೆ ಸಮಾಲೋಚಿಸಿದ ಬಳಿಕ ರೂಢಗಿ ಗ್ರಾಮದ ವ್ಯಾಪ್ತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಾಲ್ಲೂಕಿನಾದ್ಯಂತ ತೀವ್ರ ಬರಗಾಲದ ಪರಿಸ್ಥಿತಿ ಇದೆ ಈ ಸರಕಾರ ಕಾಲುವೆಗಳಿಗೆ ನೀರು ಬಿಡಲು ಹಿಂದೇಟು ಹಾಕುತ್ತಿದೆ. ಉಸ್ತುವಾರಿ ಸಚಿವರನ್ನು ಕೇಳಲು ರೈತರು ಅವರಿದ್ದಲ್ಲಿಯೇ ಹೋಗಿ ನೀರು ಕಾಲುವೆಗಳಿಗೆ ಬಿಡಿ ಎಂದರೆ ನಿಮ್ಮ ಎಂ.ಎಲ್.ಎ ಅವರನ್ನು ಕೇಳುವಂತೆ ಹೇಳಲು ತಿಳಿಸಿ ಕಳಿಸುತ್ತಿದ್ದಾರೆ ನೀವು ಉಸ್ತುವಾರಿ ಮಂತ್ರಿಗಳಾಗಿದ್ದು ಯಾವ ಸಾರ್ಥಕತೆಗಾಗಿ ಎಂದು ನಡಹಳ್ಳಿ ಪ್ರಶ್ನಿಸಿದರಲ್ಲದೇ ಬರಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡದೇ ನಿರ್ಲಕ್ಷ್ಯ ವಹಿಸುತ್ತಿರುವ ಸರಕಾರದ ಧೋರಣೆಯನ್ನು ಖಂಡಿಸುವುದಾಗಿ ಹೇಳಿದರು.
ಬಿದರಕುಂದಿಯ ರೈತ ಮಹಿಳೆ ನಂದಮ್ಮ ಕುರಿ ಮಾತನಾಡಿ, ನಾವು ಸೂರ್ಯಕಾಂತಿ ಬಿತ್ತಿದ್ದೇವೆ. ಆದರೆ ಬೆಳೆ ನಿರೀಕ್ಷೆ ಇಟ್ಟುಕೊಂಡಷ್ಟು ಬೆಳೆದಿಲ್ಲ ಮಳೆ ಆಗದ ಕಾರಣ ಬೆಳೆ ಹಾಳಾಗುತ್ತಿದೆ ಎಕರೆಗೆ ೨೫-೩೦ ಸಾವಿರದವರೆಗೆ ಖರ್ಚು ಮಾಡಿದ್ದು ತೊಂದರೆಯಲ್ಲಿದ್ದೇವೆ ಎಂದು ಹೇಳಿಕೊಂಡರು.
ತೊಗರಿ, ಹತ್ತಿ,ಸೂರ್ಯಕಾಂತಿ,ಸಜ್ಜೆ ಬೆಳೆಯನ್ನು ಮಾಜಿ ಶಾಸಕರು ವೀಕ್ಷಣೆ ಮಾಡಿದರು. ಈ ಸಮಯದಲ್ಲಿ ಜಿಪಂ ಮಾಜಿ ಸದಸ್ಯ ಹೇಮರಡ್ಡಿ ಮೇಟಿ, ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಯುವ ಘಟಕದ ಅಧ್ಯಕ್ಷ ಗಿರೀಶಗೌಡ ಪಾಟೀಲ, ಶ್ರೀಶೈಲ ದೊಡಮನಿ, ರೈತ ಮೋರ್ಚಾ ತಾಲ್ಲೂಕು ಅಧ್ಯಕ್ಷ ಸಂಗಮೇಶ ಹತ್ತಿ, ಸಂತೋಷ ಬಾದರಬಂಡಿ, ಬಸವರಾಜ ಹಿರೇಕುರಬರ, ರೈತರಾದ ಚನ್ನಬಸಪ್ಪಗೌಡ ಪಾಟೀಲ್, ಶಂಕ್ರಪ್ಪ ಸಜ್ಜನ್, ಬಾಪುಗೌಡ ಗರಸಂಗಿ, ಸೋಮಶೇಖರ ಸಜ್ಜನ, ಬಸಮ್ಮ ಮಂಕಣಿ ಸೇರಿದಂತೆ ಬಿದರಕುಂದಿ, ಬಸರಕೋಡ,ರೂಢಗಿ, ಢವಳಗಿ ಗ್ರಾಮದ ರೈತರು ಇದ್ದರು.