LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Feature Article

ಗ್ರಂಥಾಲಯ ವಿಜ್ಞಾನಕ್ಕಾಗಿ ಜೀವತೇಯ್ದ ಹಿರಿಜೀವ ಡಾ.ರಂಗನಾಥ

ಆ.12ರಂದು ಗ್ರಂಥಾಲಯ ದಿನಾಚರಣೆ ನಿಮಿತ್ತ ಈ ಲೇಖನ

ಇತಿಹಾಸವು ಕೆಲವರನ್ನು ಕೇವಲ ವ್ಯಕ್ತಿಗಳಾಗಿ ಮಾತ್ರ ದಾಖಲಿಸುವುದಿಲ್ಲ. ಅವರು ಒಂದು ಯುಗದ ಪರಿವರ್ತನೆಯ ಸಂಕೇತಗಳಾಗಿ, ಸಮಾಜದ ಚಿಂತನೆಯ ದಿಕ್ಕನ್ನೇ ಬದಲಿಸಿದ ಮಹನೀಯರಾಗಿ ಶಾಶ್ವತ ಸ್ಥಾನವನ್ನು ಪಡೆಯುತ್ತಾರೆ. ಅಂತಹ ಅಪರೂಪದ ಮಹನೀಯರಲ್ಲಿ ಡಾ.ಶಿಯಾಲಿ ರಾಮಾಮೃತ ರಂಗನಾಥನ್ (ಡಾ.ಎಸ್‌.ಆರ್‌.ರಂಗನಾಥ) ಅವರು ಅಗ್ರಗಣ್ಯರು. ಭಾರತೀಯ ಗ್ರಂಥಾಲಯ ವಿಜ್ಞಾನದ ಪಿತಾಮಹರೆಂದು ಜಗತ್ತಿನಾದ್ಯಂತ ಗೌರವಿಸಲ್ಪಡುವ ಅವರು ಜ್ಞಾನದ ಹರಿವಿಗೆ ಹೊಸ ದಾರಿಗಳನ್ನು ತೆರೆದರು. ಆದರೆ, ಅವರ ಈ ಸಾಧನೆಯ ಹಾದಿ ಸುಗಮವಾಗಿರಲಿಲ್ಲ. ಅದು ಮುಳ್ಳುಗಳಿಂದ ಕೂಡಿದ ದಾರಿ, ಸವಾಲುಗಳಿಂದ ಕೂಡಿದ ಪಯಣ, ತ್ಯಾಗ ಮತ್ತು ತಪಸ್ಸಿನಿಂದ ಅರಳಿದ ಜೀವನಯಾತ್ರೆಯಾಗಿತ್ತು.
ಗಣಿತಶಾಸ್ತ್ರದ ಅಧ್ಯಾಪಕರಾಗಿದ್ದ ರಂಗನಾಥನ್ ಅವರಿಗೆ ಗ್ರಂಥಾಲಯ ಲೋಕದೊಂದಿಗೆ ಯಾವುದೇ ನಂಟಿರಲಿಲ್ಲ. ಗ್ರಂಥಪಾಲಕತ್ವ ಅವರ ಆಯ್ಕೆಯಾಗಿರಲಿಲ್ಲ. ತುತ್ತಿನ ಅನಿವಾರ್ಯತೆಯಾಗುತ್ತದೆ ಅಷ್ಟೇ, ಬದುಕಿನ ವಿಚಿತ್ರ ತಿರುವೊಂದು ಅವರನ್ನು ಮದ್ರಾಸ್ ವಿಶ್ವವಿದ್ಯಾಲಯದ ಗ್ರಂಥಪಾಲಕರನ್ನಾಗಿ ಮಾಡಿತು. ಹೊಸ ವೃತ್ತಿಯ ಪರಿಚಯವಿಲ್ಲದ ಆ ದಿನಗಳಲ್ಲಿ, ಪ್ರತಿಯೊಂದು ಘಟನೆಯೂ ಅವರಿಗೆ ಹೊಸ ಪಾಠವಾಗಿತ್ತು, ಪ್ರತಿಯೊಂದು ದಿನವೂ ಹೊಸ ಅನುಭವವಾಗಿತ್ತು. ಆದರೆ, ಕಲಿಯುವ ಉತ್ಸಾಹ ಮತ್ತು ಸಾಧಿಸುವ ಛಲ ಅವರ ಕೈಹಿಡಿದವು. ಅಜ್ಞಾತವಾಗಿದ್ದ ಕ್ಷೇತ್ರವನ್ನೇ ತಮ್ಮ ಜೀವನದ ಧ್ಯೇಯವಾಗಿ ಮಾಡಿಕೊಂಡರು.

ಅವರು ಕನಸು ಕಂಡ ಗ್ರಂಥಾಲಯವು ಕೇವಲ ಪುಸ್ತಕಗಳನ್ನು ಸಂಗ್ರಹಿಸುವ ಕೋಣೆಯಾಗಿರಲಿಲ್ಲ. ಅದು ಸಮಾಜದ ಪ್ರತಿಯೊಬ್ಬರಿಗೂ ಜ್ಞಾನದ ಬಾಗಿಲು, ತೆರೆದಿರುವ ಜೀವಂತ ಸಂಸ್ಥೆಯಾಗಿರಬೇಕೆಂದು ಅವರು ಬಯಸಿದರು. ಅವರು ಲಂಡನ್‌ನಲ್ಲಿ ತರಬೇತಿ ಮುಗಿಸಿ, ಮುಕ್ತ-ಪ್ರವೇಶ ಕಪಾಟು ವ್ಯವಸ್ಥೆ (ಓದುಗರೇ ನೇರವಾಗಿ ಪುಸ್ತಕಗಳನ್ನು ಮುಟ್ಟಿ ಆಯ್ಕೆ ಮಾಡುವ ಪದ್ಧತಿ) ನಂತಹ ಆಧುನಿಕ ಆಲೋಚನೆಗಳೊಂದಿಗೆ ಭಾರತಕ್ಕೆ ಮರಳಿದರು. ಆಗ ಅವರಿಗೆ ತಮ್ಮದೇ ಸಿಬ್ಬಂದಿ ಹಾಗೂ ಹಳೆಯ ಪದ್ಧತಿಗಳಿಗೆ ಅಂಟಿಕೊಂಡಿದ್ದ ಸಂಪ್ರದಾಯವಾದಿಗಳಿಂದ ತೀವ್ರ ಮತ್ತು ಆಕ್ರಮಣಕಾರಿ ಪ್ರತಿರೋಧ ಎದುರಾಯಿತು. ಆದರೂ ಛಲಬಿಡದೇ ಅವರು ಸಾಧನೆಯ ಹಾದಿ ತುಳಿದರು. ಮತ್ತೊಬ್ಬರಿಗೆ ಪ್ರೇರಣೆಯಾಗುವಂತೆ ಗ್ರಂಥಾಲಯದಲ್ಲಿ ಸಾಧನೆ ಮಾಡಿದರು. ಆದರೆ, ಸಂಪ್ರದಾಯವಾದಿ ಮನೋಭಾವಗಳು ಅವರ ದಾರಿಗೆ ಅಡ್ಡಿಯಾದವು. ಮುಕ್ತ ಪ್ರವೇಶ, ವೈಜ್ಞಾನಿಕ ವರ್ಗೀಕರಣ, ಓದುಗ ಕೇಂದ್ರಿತ ಸೇವೆಗಳು, ಗ್ರಂಥಾಲಯ ಶಿಕ್ಷಣ ಇಂತಹ ಪ್ರತಿಯೊಂದು ಹೊಸ ಆಲೋಚನೆಯೂ ವಿರೋಧದ ಅಲೆಗಳನ್ನು ಎಬ್ಬಿಸಿತು. ಅವರ ಕನಸುಗಳನ್ನು ಕೆಲವರು ಅಸಾಧ್ಯವೆಂದರು, ಕೆಲವರು ಅವುಗಳನ್ನು ಅತಿರೇಕದ ಕಲ್ಪನೆಗಳೆಂದು ತಿರಸ್ಕರಿಸಿದರು.

ಬೆನ್ನಹಿಂದೆ ಕುಹಕವಾಡಿದರು:
ತನ್ನವರೆಂದುಕೊಂಡವರೇ ತಣ್ಣಗೆ ವಿರೋಧಿಗಳಾದರು. ಆದರೆ, ಸತ್ಯದ ಮೇಲೆ ನಂಬಿಕೆಯಿದ್ದ ವ್ಯಕ್ತಿಯನ್ನು ವಿರೋಧಗಳು ಎಂದಿಗೂ ಸೋಲಿಸಲಾರವು ಎಂಬುವುದನ್ನು ಅವರು ತಮ್ಮ ಬದುಕಿನ ಮೂಲಕ ಸಾಬೀತುಪಡಿಸಿದರು. ಒಡಲೊಳಗಿನ ಕಿಚ್ಚು ತನ್ನ ಸುಡಲೊಲ್ಲದೆ ಪರರ ಸುಡದು ಎನ್ನುವಂತಾಯಿತು ವಿರೋಧಿಸಿದವರ ಪರಿಸ್ಥಿತಿ. ಅವರ ಹೋರಾಟವು ಕೇವಲ ಚಿಂತನೆಗಳ ಮಟ್ಟದಲ್ಲೇ ಸೀಮಿತವಾಗಿರಲಿಲ್ಲ. ಅಂದಿನ ಸಂದರ್ಭದಲ್ಲಿ ಗ್ರಂಥಾಲಯಗಳ ದಯನೀಯ ಆರ್ಥಿಕ ಸ್ಥಿತಿ, ಪುಸ್ತಕಗಳ ಕೊರತೆ, ತರಬೇತಿ ಪಡೆದ ಸಿಬ್ಬಂದಿಯ ಅಭಾವ, ಆಡಳಿತದ ನಿರಾಸಕ್ತಿ ಇವೆಲ್ಲವೂ ಅವರ ಕನಸುಗಳಿಗೆ ಅಡ್ಡಗಾಲಾಗಿದ್ದವು. ಆದರೂ ಅವರು ನಿರಾಶೆಯ ಬೆನ್ನೇರಲಿಲ್ಲ. ಅಧಿಕಾರಿಗಳ ಬಾಗಿಲು ತಟ್ಟಿದರು. ಸಮಾಜದಲ್ಲಿ ಅರಿವು ಮೂಡಿಸಿದರು, ಸರ್ಕಾರದ ಮನವೊಲಿಸಿದರು. ಪ್ರತಿಯೊಂದು ಅಡೆತಡೆಯನ್ನೂ ಅವರು ಅವಕಾಶವನ್ನಾಗಿ ಪರಿವರ್ತಿಸಿಕೊಂಡರು.

ಕೋಲನ್ ವರ್ಗೀಕರಣ ಪದ್ಧತಿಯ ಸೃಷ್ಟಿ ಅವರ ಪ್ರತಿಭೆಗೊಂದು ಸೋಪಾನವಾಯಿತು. ಅದು ಕೇವಲ ಒಂದು ವರ್ಗೀಕರಣ ಪದ್ಧತಿಯಲ್ಲ, ಜ್ಞಾನದ ಅನಂತ ಪ್ರಪಂಚವನ್ನು ವೈಜ್ಞಾನಿಕವಾಗಿ ವ್ಯವಸ್ಥಿತಗೊಳಿಸುವ ಮಹತ್ತರ ಪ್ರಯತ್ನವಾಗಿತ್ತು. ಅದನ್ನು ರೂಪಿಸಲು ಅವರು ಅನೇಕ ವರ್ಷಗಳ ಕಾಲ ಹಗಲು-ರಾತ್ರಿ ಶ್ರಮಿಸಿದರು. ಆರಂಭದಲ್ಲಿ ಅದರ ಸಂಕೀರ್ಣತೆ ಅರ್ಥಮಾಡಿಕೊಳ್ಳಲು ಹಲವರಿಗೆ ಸಾಧ್ಯವಾಗಲಿಲ್ಲ. ಆದರೆ, ಕಾಲವೇ ಅವರ ದೂರದೃಷ್ಟಿಗೆ ಸಾಕ್ಷಿಯಾಯಿತು. ಇಂದು ವಿಶ್ವದ ಮಾಹಿತಿ ಸಂಘಟನೆ ಕ್ಷೇತ್ರದಲ್ಲಿ ಅವರ ಚಿಂತನೆಗೆ ವಿಶಿಷ್ಟ ಸ್ಥಾನವಿದೆ. ಗ್ರಂಥಾಲಯ ವಿಜ್ಞಾನದ ಪಂಚ ಸೂತ್ರಗಳು, ಅವರ ಮಹತ್ತರ ಕೊಡುಗೆಯ ಮೈಲಿಗಲ್ಲು ಎಂದರೂ ತಪ್ಪಾಗಲಿಕ್ಕಿಲ್ಲ. ಅವು ಕೇವಲ ಗ್ರಂಥಾಲಯದ ನಿಯಮಗಳಲ್ಲ, ಮಾನವಕೇಂದ್ರಿತ ಜ್ಞಾನತತ್ವದ ಘೋಷಣೆಯಾಗಿವೆ.
1.ಗ್ರಂಥಗಳು ಉಪಯೋಗಕ್ಕಾಗಿ
2.ಪ್ರತಿಯೊಬ್ಬ ಓದುಗರಿಗೂ ಅವರ ಗ್ರಂಥ

3.ಪ್ರತಿಯೊಂದು ಗ್ರಂಥಕ್ಕೂ ಅದರ ಓದುಗ
4.ಓದುಗರ ಸಮಯ ಉಳಿಸಿ

5.ಗ್ರಂಥಾಲಯವು ಬೆಳೆಯುವ ಜೀವಂತ ಸಂಸ್ಥೆ
ಈ ತತ್ವಗಳು ಅಂದಿಗೂ, ಇಂದಿಗೂ ಮುಂದೆಯೂ ಗ್ರಂಥಾಲಯ ಸೇವೆಯ ಜೀವನಾಡಿಯಾಗಿವೆ.

ರಂಗನಾಥನ್ ಅವರ ಕನಸು ವಿಶ್ವವಿದ್ಯಾಲಯಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಗ್ರಾಮೀಣ ಪ್ರದೇಶದ ಸಾಮಾನ್ಯ ನಾಗರಿಕನ ಕೈಗೂ ಜ್ಞಾನದ ಬೆಳಕು ತಲುಪಬೇಕು ಎಂಬುದು ಅವರ ಆಶಯವಾಗಿತ್ತು. ಅದಕ್ಕಾಗಿ ಅವರು ಸಾರ್ವಜನಿಕ ಗ್ರಂಥಾಲಯ ಕಾಯ್ದೆಗಳ ಜಾರಿಗೆ ಜೀವಮಾನದ ಹೋರಾಟ ನಡೆಸಿದರು. ರಾಜಕೀಯ ನಿರಾಸಕ್ತಿ, ಆಡಳಿತಾತ್ಮಕ ವಿಳಂಬ ಮತ್ತು ಆರ್ಥಿಕ ಸಂಕಷ್ಟಗಳು ಅವರ ದಾರಿಯನ್ನು ಕಠಿಣಗೊಳಿಸಿದರೂ, ಅವರ ಸಂಕಲ್ಪವನ್ನು ದುರ್ಬಲಗೊಳಿಸಲಿಲ್ಲ. ಅವರ ಜೀವನದಲ್ಲಿ ಪ್ರಶಸ್ತಿಗಳಿಗಿಂತ ಪರಿಶ್ರಮವೇ ಹೆಚ್ಚಿತ್ತು. ಗೌರವಕ್ಕಿಂತ ತ್ಯಾಗವೇ ಹೆಚ್ಚು. ವಿಶ್ವಮಟ್ಟದಲ್ಲಿ ಮಾನ್ಯತೆ ಪಡೆದರೂ, ಸ್ವದೇಶದಲ್ಲಿ ಅವರ ಮಹತ್ವವನ್ನು ಅರಿಯಲು ಸಮಾಜಕ್ಕೆ ಸಮಯ ಬೇಕಾಯಿತು. ಆದರೂ ಅವರು ಮಾನ್ಯತೆಗಾಗಿ ಕೆಲಸ ಮಾಡಲಿಲ್ಲ, ಜ್ಞಾನಸೇವೆಯೇ ಅವರ ಧೈಯವಾಗಿತ್ತು. ಅರವತ್ತಕ್ಕೂ ಹೆಚ್ಚು ಗ್ರಂಥಗಳು, ಸಾವಿರಾರು ಸಂಶೋಧನಾ ಲೇಖನಗಳು ಮತ್ತು ಅನೇಕ ಪೀಳಿಗೆಗಳ ಗ್ರಂಥಪಾಲಕರನ್ನು ರೂಪಿಸಿದ ಅವರ ಪರಿಶ್ರಮವೇ ಅವರ ನಿಜವಾದ ಪ್ರಶಸ್ತಿಯಾಯಿತು. ಇದರ ಮುಂದೆ ಪದ್ಮಶ್ರೀ ಮುಂತಾದ ಅನೇಕ ಪ್ರಶಸ್ತಿ, ಸನ್ಮಾನಗಳು ಗೌಣವೇ ಸರಿ. ಅವರ ಗ್ರಂಥಾಲಯ ವಿಜ್ಞಾನದ ಪಂಚ ಸೂತ್ರಗಳು ಆಧುನಿಕ ಡಿಜಿಟಲ್ ಯುಗದಲ್ಲೂ ಪ್ರಸ್ತುತ.
ಡಾ.ಎಸ್.ಆರ್.ರಂಗನಾಥನ್ ಅವರ ಬದುಕನ್ನೊಮ್ಮೆ ಸೂಕ್ಷ್ಮವಾಗಿ ಅವಲೋಕಿಸಿದಾಗ ತಿಳಿದು ಬರುವ ಮಹತ್ವದ ಸಂದೇಶವೆಂದರೇ ನಿಜವಾದ ಪರಿವರ್ತನೆ ಎಂದಿಗೂ ಸುಲಭವಾಗಿ ಬರುವುದಿಲ್ಲ. ಅದು ನಿರಂತರ ಪರಿಶ್ರಮ, ಅಚಲ ನಂಬಿಕೆ, ತ್ಯಾಗ ಮತ್ತು ಧೈರ್ಯದ ಫಲ. ಅವರು ಎದುರಿಸಿದ ಪ್ರತಿಯೊಂದು ಸವಾಲು ಅವರ ವ್ಯಕ್ತಿತ್ವವನ್ನು ಇನ್ನಷ್ಟು ಉನ್ನತಗೊಳಿಸಿತು. ಅವರು ರೂಪಿಸಿದ ಪ್ರತಿಯೊಂದು ತತ್ವವು ಮುಂದಿನ ಪೀಳಿಗೆಗಳಿಗೆ ದಾರಿದೀಪವಾಯಿತು.

ಇಂದು ಪ್ರತಿಯೊಂದು ಗ್ರಂಥಾಲಯದ ಕಪಾಟಿನಲ್ಲಿ ಜೋಡಿಸಲಾದ ಪುಸ್ತಕಗಳಲ್ಲಿ, ಓದುಗರಿಗಾಗಿ ತೆರೆದಿರುವ ಬಾಗಿಲುಗಳಲ್ಲಿ, ಮಾಹಿತಿ ಸಂಘಟನೆಯ ವೈಜ್ಞಾನಿಕ ವಿಧಾನಗಳಲ್ಲಿ ಮತ್ತು ಜ್ಞಾನವನ್ನು ಸಮಾಜದ ಹಕ್ಕು ಎಂದು ನೋಡುವ ಪ್ರತಿಯೊಂದು ಚಿಂತನೆಯಲ್ಲೂ ಡಾ.ಎಸ್.ಆರ್.ರಂಗನಾಥನ್ ಅವರ ಜೀವಂತ ಸಾನ್ನಿಧ್ಯ ಅಡಗಿದೆ. ಅವರು ಕೇವಲ ಗ್ರಂಥಪಾಲಕರಲ್ಲ, ಜ್ಞಾನವನ್ನು ಸಮಾಜದ ಸಂಪತ್ತಾಗಿ ರೂಪಿಸಿದ ಮಹಾನ್ ದಾರ್ಶನಿಕರು. ಅವರು ಕೇವಲ ತತ್ವಗಳನ್ನು ಬರೆದವರಲ್ಲ. ತಮ್ಮ ಜೀವನವನ್ನೇ ಒಂದು ಮಹಾಗ್ರಂಥವನ್ನಾಗಿ ಬರೆದ ಅಮರ ಜ್ಞಾನಯೋಗಿ. ಅವರ ಜೀವನಗಾಥೆ ನಮಗೆ ಕಲಿಸುವುದು ಒಂದೇ ಸವಾಲುಗಳು ಮಹತ್ವದ ಸಾಧನೆಗಳಿಗೆ ಅಡ್ಡಿಯಲ್ಲ, ಅವೇ ಅವುಗಳ ಅಡಿಪಾಯ.


ಡಾ.ಎಸ್.ಆರ್.ರಂಗನಾಥನ್ ಅವರಿಗೆ ಸಂದ ಪ್ರಶಸ್ತಿಗಳು ಅವೆಷ್ಟೋ. 1935 ರಲ್ಲಿ ಬ್ರಿಟನ್ ಸರ್ಕಾರ ರಾವಸಾಹೇಬ ಬರುದು ನೀಡಿ ಗೌರವಿಸಿತು. ದೆಹಲಿ ವಿಶ್ವವಿದ್ಯಾಲಯ 1948ರಲ್ಲಿ ಡಿ.ಅಟ್ ಪದವಿ, 1957 ರಲ್ಲಿ ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ ಹಾಗೂ ಪಿಟ್ಸ್‌ಬರ್ಗ್ ವಿಶ್ವವಿದ್ಯಾಲಯ 1964ರಲ್ಲಿ ಇವರಿಗೆ ಡಿ.ಅಟ್ ಪದವಿ ನೀಡಿ ಗೌರವಿಸಿತು. ಅಮೆರಿಕದ ಮಾರ್ಗರೇಟ್ ಮಾನ್, ಮಾರ್ಕಟೈನ್ ಸೊಸೈಟಿಯ ಗ್ರಾಂಡ್ ನೈಟ್‌ ಆಫ್‌ ಪೀಸ್ ಮುಂತಾದ ಪ್ರಶಸ್ತಿಗಳು ಅವರ ಮುಕುಟವನ್ನು ಅಲಂಕರಿಸಿವೆ.

ದೆಹಲಿ ವಿಶ್ವವಿದ್ಯಾಲಯದ ಅಂದಿನ ಕುಲಪತಿಯಾಗಿದ್ದ ಬ್ರಿಟಿಷ್‌ ಆಡಳಿತಗಾರ ಸರ್ ಮಾರಿಸ್ ಗೈಯರ್ (1939-1950) ಡಾ.ಎಸ್.ಆರ್.ರಂಗನಾಥನ್ ಅವರನ್ನು ಭಾರತೀಯ ಗ್ರಂಥಾಲಯ ವಿಜ್ಞಾನದ ಪಿತಾಮಹ ಎಂದು ಕರೆಯುತ್ತಾರೆ.


ಡಾ.ಎಸ್.ಆರ್.ರಂಗನಾಥನ್ ಭೌತಿಕ ಕಾಯ ದಿನಾಂಕ 27 ಸೆಪ್ಟೆಂಬರ್‌ 1972 ನಮ್ಮನ್ನು ಅಗಲಿದರೂ ಅವರ ದಾರಿಯ ಹೆಜ್ಜೆಗುರುತುಗಳು ಮುಂದಿನ ಪೀಳಿಗೆಗೆ ರಹದಾರಿಗಳಾಗಿ ಉಳಿಯತೊಡಗಿವೆ. ಹೀಗೆ ತಮ್ಮ ಇಡೀ ಬದುಕನ್ನು ಗ್ರಂಥಾಲಯ ವಿಜ್ಞಾನಕ್ಕಾಗಿ ತೇಯ್ದ ಹಿರಿಯ ಜೀವವೊಂದು ಇನ್ನಿಲ್ಲವಾಗಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಥಣಿ ಕ್ಷೇತ್ರಕ್ಕೆ ಮತ್ತೊಂದು ಹೆಮ್ಮೆಯ ಕ್ಷಣ: ಲಕ್ಷ್ಮಣ ಸವದಿಗೆ ಸಹಕಾರ ಹಾಗೂ ಕೃಷಿ ಮಾರುಕಟ್ಟೆ ಖಾತೆನೀರು ಹೇಗೆ ಬಿಡಿಸಿಕೊಳ್ಳಬೇಕೆಂಬುದು ನಮಗೆ ಗೊತ್ತಿದೆ - ನಡಹಳ್ಳಿಆ.೧೪ರಂದು ’ಉತ್ಸವ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿ’ ಉದ್ಘಾಟನೆವಿದ್ಯಾರ್ಥಿ ದಶೆಯಲ್ಲೇ ವಿವಿಧ ಕೌಶಲ ಮೈಗೂಡಿಸಿಕೊಂಡರೆ ಭವಿಷ್ಯ ಭದ್ರ: ಸಂಗಮೇಶ ಹಳ್ಳೂರದೆಹಲಿ ಹೈಕೋರ್ಟ್ ಮಾಜಿ ನ್ಯಾಯಮೂರ್ತಿ ಯಶವಂತ್ ವರ್ಮಾ ಮೇಲಿನ ಮೂರೂ ದೋಷಾರೋಪಗಳು ಸಾಬೀತು: ಸಂಸದೀಯ ತನಿಖಾ ಸಮಿತಿಯ ಸ್ಫೋಟಕ ವರದಿಇಂಡಿ: ಹಿರೇಮಸಳಿ ಸರ್ಕಾರಿ ಉರ್ದು ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಉಚಿತ ಸ್ಕಾರ್ಫ್ ವಿತರಣೆ; ಹೊಸೂರು ಕುಟುಂಬದ ಶೈಕ್ಷಣಿಕ ಕಾಳಜಿಗೆ ಶ್ಲಾಘನೆನೂತನ ಸಚಿವರಿಗೆ ಖಾತೆ ಹಂಚಿಕೆ ಅಂತಿಮ, ರಾಜಪಾಲರ ಅನುಮೋದನೆಗೆ ಕಾಯುತ್ತಿರುವ ಸಚಿವರುಕೆಪಿಎಸ್‌ಸಿ ಅಕ್ರಮ ಆರೋಪದ ಬಿಸಿ: ಪರೀಕ್ಷಾ ನಿಯಂತ್ರಕರ ಎತ್ತಂಗಡಿ, ಆಯೋಗಕ್ಕೆ ಹೊಸ ಐಎಎಸ್ ಅಧಿಕಾರಿಗಳ ಸರಪಳಿ ಪಾಲಿಕೆಗೆ 4 ಸ್ಥಾಯಿ ಸಮಿತಿಗಳಿಗೆ ಸದಸ್ಯರ ಅವಿರೋಧ ಆಯ್ಕೆಚಂದ್ರನ ಮೇಲಿನ ಶಾಶ್ವತ ಮಾನವ ನೆಲೆ ನಿರ್ಮಾಣಕ್ಕೆ ಇಸ್ರೋ ಜೊತೆ ಕೈಜೋಡಿಸಲು ಮುಂದಾದ ನಾಸಾ