ಗದಗ: ಇದೇ ಆಗಷ್ಟ್ 26 ರಂದು ಗದಗ-ಬೆಟಗೇರಿ ಅವಳಿ ನಗರದ ಗ್ರಾಮ ದೇವತೆಯರಾದ ಶ್ರೀ ದ್ಯಾಮವ್ವ, ಶ್ರೀ ದುರಗಮ್ಮ ದೇವಿಯರ ಅದ್ದೂರಿ ಮೇರವಣಿಗೆ ಬೆಳಿಗ್ಗೆ 11:00 ಗಂಟೆಗೆ ಆರಂಭವಾಗಿ ರಾತ್ರಿ 8:00 ಗಂಟೆಯವರೆಗೆ ನಡೆಯಲಿದೆ ಎಂದು ಜಾತ್ರಾ ಸಮಿತಿಯ ಸಂಘಟನಾ ಕಾರ್ಯದರ್ಶಿ ರಾಜು ಖಾನಪ್ಪನವರ ಹೇಳಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಕ್ಕಲಗೇರಿ ಓಣಿಯಿಂದ ಮೇರವಣಿಗೆ ಪ್ರಾರಂಭವಾಗಲಿದೆ. ತವರು ಮನೆಯಿಂದ ಗಂಡನ ಮನೆಗೆ ಶ್ರೀ ದೇವಿಯರನ್ನು ಬಿಳ್ಕೊಡುವ ಅದ್ದೂರಿ ಕಾರ್ಯಕ್ರಮ ಇದಾಗಿದ್ದು, ಗಂಜಿ ಬಸವೇಶ್ವರ ಸರ್ಕಲ್, ರಾಚೋಟೇಶ್ವರ ದೇವಸ್ಥಾನ, ಹನುಮಾನ್ ಗರಡಿ, ಚೌಡಿ ಕೂಟ, ಮಾಬುಸುಬಾನಿ ಕಟ್ಟಿ ಮಾರ್ಗವಾಗಿ ಕಿಲ್ಲಾ ಓಣಿಯ ವರೆಗೂ ಮೇರವಣಿಗೆ ನಡೆಯಲಿದೆ ಎಂದರು.
ಆಗಷ್ಟ್ 26 ರಂದು ಕಿರಾಣಿ ಅಂಗಡಿ, ಹೋಟೆಲ್, ಸಲೂನ್ ಶಾಪ್ ಸೇರಿದಂತೆ ಎಲ್ಲ ವ್ಯಾಪಾರಿಗಳು ತಮ್ಮ ದಿನನಿತ್ಯದ ಕಾರ್ಯ ಬದಿಗಿಟ್ಟು ಅದ್ದೂರಿ ಮೇರವಣಿಗೆ ಯಶಸ್ವಿಗೋಳಿಸಲು ಸಹಕರಿಸಬೇಕು. ಮೇರವಣಿಗೆಯಲ್ಲಿ ದೇವಿಯರನ್ನು ಕಣ್ತುಂಬಿಕೊಳ್ಳಲು ಇದೊಂದು ಸುವರ್ಣ ಅವಕಾಶವಾಗಿದೆ. ಒತ್ತಾಯಪೂರ್ವಕವಾಗಿ ಬಂದ್ ಮಾಡಬೇಕು ಎಂದು ಹೇಳುವುದಿಲ್ಲ ಸ್ವಯಂ ಪ್ರೇರಿತವಾಗಿ, ಭಕ್ತಿಪೂರ್ವಕವಾಗಿ ಬಂದ್ ಮಾಡಬೇಕು ಎಂದು ತಿಳಿಸಿದರು.
ಪ್ರಸಕ್ತ ವರ್ಷ ವಿಶೇಷವಾಗಿ ಬಂಡಾರದ ಜಾತ್ರೆ ನಡೆಯಲಿದ್ದು, ಭಕ್ತರು ನೀಡಿದ 15 ಟನ್ ಬಂಡಾರದಿಂದ ಸಂಭ್ರಮಿಸೋಣ. ಮಹಿಳೆಯರು ಹಾಗೂ ಮಕ್ಕಳು ಈ ಜಾತ್ರೆಯಲ್ಲಿ ಭಾಗವಹಿಸಬೇಕು. ಅವಳಿ ನಗರದ ದೇವಸ್ಥಾನಗಳ ಅರ್ಚಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಮೇರವಣಿಗೆಯಲ್ಲಿ 108 ಡೊಳ್ಳು, 5 ರಿಂದ 6 ಸಮ್ಮಾಳ, ಆನೆ, ಒಂಟೆ, ಕುದುರೆ, ವೇಷಾಧಾರಿಗಳು ಹಾಗೂ ಚಂಡಿ ವಾದ್ಯಗಳು ಸೇರಿದಂತೆ ವಿವಿಧ ಕಲಾ ತಂಡಗಳು ಭಾಗವಹಿಸಲಿವೆ ಎಂದರು.
ಕಿಲ್ಲಾ ಓಣಿಯಲ್ಲಿ ಆಗಷ್ಟ್ 28 ರಂದು ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯಲಿವೆ. ಈ ವೇಳೆ ಒಕ್ಕಲಗೇರಿ ಹಾಗೂ ಕಿಲ್ಲಾ ಓಣಿಯ ಬೀಗರೆಲ್ಲರೂ ಸಮಗಾಮ ಆಗಲಿದ್ದು, ಮಹಾ ಅನ್ನಸಂತರ್ಪಣಾ ಕಾರ್ಯಕ್ರಮ ಕೂಡ ನೇರವೆರಲಿದೆ. ನಾಡಿನಾಧ್ಯಂತ ಸಹಸ್ರಾರು ಸಂಖ್ಯೆಯ ಭಕ್ತರು ಆಗಮಿಸಿ ಯಶಸ್ವಿಗೋಳಿಸಬೇಕು ಎಂದರು.
ಈ ವೇಳೆ ಶ್ರೀಧರ್ ವಜ್ರಬಂಡಿ, ವೀರಣ್ಣ ಮೇಟಿ, ನವೀನ ನಾಲವಾಡ, ನರಸಪ್ಪ ತುಕ್ಕಪ್ಪನವರ, ಗಂಗಾಧರ ಮೇಲಗೇರಿ, ಹೆಮಂತ್ ಗಿಡ್ಡಹನುಮಣ್ಣನವರ, ನಾಗರಾಜ ಮೆಣಸಗಿ, ಕಿರಣ್ ಕಮತರ, ಮಹೇಶ ಪಡಗದ, ಬಸವರಾಜ ಮಡಿವಾಳರ, ಸುನಿಲ್ ಮಲ್ಲು ಮಹಾಂತಶೆಟ್ಟರ ಸೇರಿದಂತೆ ಹಲವರು ಉಪಸ್ಥಿತರಿದ್ದರು.