ರನ್ನ ಬೆಳಗಲಿ: ನ. ೧೩: ಹಳಗನ್ನಡದ ಮಹಾಕವಿ ರನ್ನ ಹಾಗೂ ಗಂಗರ ಮಂತ್ರಿ ಚಾವುಂಡರಾಯರ ನಡುವೆ ಗುರುಕುಲದ ಸಹಪಾಠಿತ್ವದ ಜೊತೆಗೆ ಆತ್ಮೀಯ ಸ್ನೇಹ ಸಂಬಂಧವಿತ್ತು ಎಂದು ಚಂದ್ರಶೇಖರ ದೇಸಾಯಿ ಹೇಳಿದರು.ಪಟ್ಟಣದ ಶ್ರೀ ಸಿದ್ಧಾರೂಢ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ’ತಿಂಗಳಿಗೊಂದು ರನ್ನ’ ಉಪನ್ಯಾಸ ಮಾಲಿಕೆಯಲ್ಲಿ ಅತಿಥಿ ಉಪನ್ಯಾಸಕರಾಗಿ ಭಾಗವಹಿಸಿ ರನ್ನನ ಜೀವನ ಚರಿತ್ರೆ ಹಾಗೂ ಗದಾಯುದ್ಧ ಕೃತಿಯ ಕುರಿತು ಮಾತನಾಡಿದರು. ರನ್ನನ ಸಾಹಿತ್ಯ ಜೀವನದ ಆರಂಭದಲ್ಲಿ ಚಾವುಂಡರಾಯರು ಪ್ರಮುಖ ಬೆಂಬಲಿಗರಾಗಿದ್ದರು. ಅವರ ಸ್ನೇಹದ ಕುರುಹಾಗಿ ಇಂದ್ರಗಿರಿ ಬೆಟ್ಟದಲ್ಲಿ ಇಬ್ಬರ ಹೆಸರುಗಳು ಕೆತ್ತಲ್ಪಟ್ಟಿವೆ. ಚಾವುಂಡರಾಯರು ತೋರಿದ ಪ್ರೀತಿ ಹಾಗೂ ಮಾಡಿದ ಉಪಕಾರಕ್ಕೆ ಕೃತಜ್ಞತೆಯಾಗಿ ರನ್ನನು ತನ್ನ ಮಗನಿಗೆ ’ರಾಯ’ ಎಂದು ಹೆಸರಿಟ್ಟಿದ್ದನು ಎಂದು ವಿವರಿಸಿದರು.ಮುಖ್ಯ ಅತಿಥಿಯಾಗಿ ಮಾತನಾಡಿದ ಯುವಸಾಹಿತಿ ಮಲ್ಲಿಕಾರ್ಜುನ ಅರಬಿ, ಹತ್ತು ಆಶ್ವಾಸಗಳ ೫೭೬ ಪದ್ಯಗಳನ್ನು ಒಳಗೊಂಡಿರುವ ಗದಾಯುದ್ಧ ಕೃತಿಯು ರನ್ನನ ಪಾಂಡಿತ್ಯಕ್ಕೆ ಮುಕುಟಪ್ರಾಯವಾಗಿದ್ದು, ಹಳಗನ್ನಡ ಸಾಹಿತ್ಯದಲ್ಲಿ ಮಹತ್ವದ ಸ್ಥಾನ ಪಡೆದಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಎ. ಮುಗಳಖೋಡ ವಹಿಸಿದ್ದರು. ಎಂ.ಬಿ. ಮುರಗೋಡ, ವಿ.ಎಂ. ಹೊಸೂರ, ಪಿ.ಕೆ. ಪವಾರ, ಅಕ್ಷತಾ ಕುಲಗೋಡ, ಬಿ.ಎಂ. ಹವಾಲ್ದಾರ, ಆನಂದ ಹೊಸಟ್ಟಿ, ಅನೀಲ ನಡವಿನಮನಿ, ಮಂಜುನಾಥ ಪೂಜಾರಿ, ಅಮನ್ ಇನಾಂದಾರ ಹಾಗೂ ಆರ್ಯನ್ ತೆರವಿ ಉಪಸ್ಥಿತರಿದ್ದರು.ಬಿ.ಪಿ. ಚೋಪಡೆ ಗುರುಗಳು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.