ಅಥಣಿ : ಮಹಿಳೆಯರು ಇಂದು ಕೇವಲ ಮನೆಯ ನಾಲ್ಕು ಗೋಡೆಗಳಿಗೆ ಸೀಮಿತವಾಗಿಲ್ಲ, ಆತ್ಮವಿಶ್ವಾಸ ಮತ್ತು ಜ್ಞಾನ ವಿಕಾಸದಿಂದ ಸ್ವಾವಲಂಬಿ ಬದುಕು ನಡೆಸುವುದರ ಜೊತೆಗೆ ಆಡಳಿತ, ಶಿಕ್ಷಣ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ಪುರುಷರಿಗೆ ಸಮಾನವಾಗಿ ಬೆಳೆಯುತ್ತಿದ್ದಾರೆ. ಮಹಿಳೆ ಸಂಸಾರದ ಕಣ್ಣು ಎಂಬ ಕಾಲವೊಂದಿತ್ತು, ಆದರೆ ಈ ಆಧುನಿಕ ಯುಗದಲ್ಲಿ ಸಮಾಜದ ಕಣ್ಣಾಗಿದ್ದಾಳೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಜಿಲ್ಲಾ ಪ್ರಾದೇಶಿಕ ನಿರ್ದೇಶಕಿ ಶ್ರೀಮತಿ ದಯಾಶೀಲ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಶುಕ್ರವಾರ ಪಟ್ಟಣದ ಕೆ ಎಲ್ ಇ ಸಂಸ್ಥೆಯ ಖೋತ ಸಭಾಂಗಣದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಅಥಣಿ ಶಾಖೆಯಿಂದ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ಹಮ್ಮಿಕೊಳ್ಳಲಾಗಿದ್ದ ತಾಲೂಕಾ ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಪೂಜ್ಯನೀಯ ಸ್ಥಾನವಿದೆ. ಶಿಕ್ಷಣ ಪಡೆದುಕೊಂಡ ಮಹಿಳೆಯರು ಇಂದು ಪ್ರತಿಯೊಂದು ಕ್ಷೇತ್ರದಲ್ಲಿ ಪುರುಷರಿಗೆ ಸಮನಾಗಿ ಕೆಲಸ ಮಾಡುತ್ತಿದ್ದಾರೆ. ಕುಟುಂಬದ ಪ್ರಗತಿಯ ಜೊತೆಗೆ ದೇಶದ ಪ್ರಗತಿಯಲ್ಲಿಯೂ ಕೂಡ ಮಹಿಳೆಯರ ಪಾತ್ರ ಮಹತ್ತರವಾಗಿದೆ. ಮಹಿಳೆಯರ ಸ್ವಾವಲಂಬಿ ಬದುಕಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಜೀವನಾಡಿಯಾಗಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ದಂಪತಿಗಳು ಸಮಾಜದ ಅಭಿವೃದ್ಧಿಯ ಜೊತೆಗೆ ಮಹಿಳೆಯರ ಸಬಲೀಕರಣಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದಾರೆ. ಅವುಗಳ ಬಗ್ಗೆ ಜ್ಞಾನ ಮತ್ತು ತರಬೇತಿ ಪಡೆದುಕೊಂಡು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಸ್ವಯಂ ಉದ್ಯೋಗಗಳನ್ನು ಕೈಗೊಳ್ಳುವ ಮೂಲಕ ತಮ್ಮ ಕುಟುಂಬದ ಪ್ರಗತಿ ಮತ್ತು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಮಹಿಳೆಯರ ಸಬಲೀಕರಣದಿಂದ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಿಪಿಐ ಎಲ್. ಬಿ. ಅಗ್ನಿ ಮಾತನಾಡಿ ಮಹಿಳೆಯರ ಸಬಲೀಕರಣಕ್ಕಾಗಿ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆಯ ಟ್ರಸ್ಟ್ ಅನುಷ್ಠಾನಗೊಳಿಸುತ್ತಿರು ವ ಕಾರ್ಯಕ್ರಮಗಳ ಬಗ್ಗೆ ಮುಕ್ತ ಕಂಠದಿಂದ ಶ್ಲಾಘಿಸಿದ ಅವರು ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ಹತ್ತಿಕ್ಕ ಬೇಕಾದರೆ ಮಹಿಳೆಯರಿಗೆ ಕಾನೂನು ಅರಿವು ಮತ್ತು ಇಂತಹ ವಿಚಾರಗೋಷ್ಠಿಗಳು ಪೂರಕವಾಗಿವೆ. ಮಹಿಳೆಯರು ತಮ್ಮ ಮೇಲ ನಡೆಯುತ್ತಿರುವ ಕಿರುಕುಳ ಪ್ರಕರಣಗಳ ವಿಚಾರದಲ್ಲಿ ಯಾವುದೇ ಆತಂಕ ಪಡದೆ ಪೊಲೀಸ್ ಇಲಾಖೆಯ ಗಮನಕ್ಕೆ ತರುವಂತೆ ಸಲಹೆ ನೀಡಿದರು.
ಸ್ತ್ರೀರೋಗ ತಜ್ಞ ಡಾ. ರೋಹಿಣಿ ಗುಂಜಿಗಾವಿ ಮಾತನಾಡಿ ಆಧುನಿಕ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಛಾಪು ಮೂಡಿಸುತ್ತಿರುವುದು ಹೆಮ್ಮೆಯ ವಿಷಯ. ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳ ಜೊತೆಗೆ ಅನೇಕ ಸ್ವಯಂ ಉದ್ಯೋಗಗಳನ್ನು ಕೈಗೊಂಡು ಮಹಿಳೆಯರು ಸ್ವಾವಲಂಬಿಯಾಗಿ ಬದುಕುತ್ತಿರುವುದು ಹೆಮ್ಮೆಯ ಸಂಗತಿ. ಒಬ್ಬ ಮಹಿಳೆಗೆ ತನ್ನ ಕುಟುಂಬದ ಸಹಕಾರ ಮತ್ತು ಬೆಂಬಲವಿದ್ದರೆ ಸಮಾಜದಲ್ಲಿ ಯಾವ ರೀತಿ ಸ್ವಾವಲಂಬಿಯಾಗಿ ಬಾಳಬಹುದು ಮತ್ತು ಸ್ವ-ಉದೋಗ್ಯ ಮಾಡಬಹುದು ಎಂಬುದನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಕಾಣಬಹುದಾಗಿದೆ. ಮಹಿಳೆಯರು ಕುಟುಂಬದ ನಿರ್ವಹಣೆ, ಸ್ವಯಂ ಉದ್ಯೋಗದ ಮಧ್ಯೆ ತಮ್ಮ ಆರೋಗ್ಯವನ್ನು ನಿರ್ಲಕ್ಷಿಸಬಾರದು. ಇಡೀ ಕುಟುಂಬದ ಜವಾಬ್ದಾರಿ ಮಹಿಳೆಯ ಮೇಲೆ ಇರುವುದರಿಂದ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆಂದು ಸಲಹೆ ನೀಡಿದರು.
ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಅಮರ ದುರ್ಗಣ್ಣವರ, ಸಂಪನ್ಮೂಲ ಅಧಿಕಾರಿ ದೀಪಾ ನಂದಗಾoವ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕಿ ಲೀಲಾವತಿ ಮಾತನಾಡಿ ಮಹಿಳೆಯರ ಸಬಲೀಕರಣ ಮಾಡುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉದ್ದೇಶಗಳನ್ನು ತಿಳಿಸಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಹಿಳೆಯರು ತಮ್ಮಲ್ಲಿರುವ ಕೌಶಲ್ಯವನ್ನು
ಸಮರ್ಪಕವಾಗಿ ಬಳಸಿಕೊಂಡು ಸ್ವಾವಲಂಬಿ ಜೀವನದ ಜೊತೆಗೆ ಸಮಾಜದಲ್ಲಿ ಗೌರವಯುತ ಸ್ಥಾನ ಪಡೆಯಲು ಶ್ರಮಿಸಬೇಕು ಎಂದು ಮಹಿಳೆಯರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕಾರ್ಯಕ್ರಮದಡಿ
ಸ್ವಯಂ ಉದ್ಯೋಗದ ತರಬೇತಿ ಪಡೆದುಕೊಂಡು ಪ್ರಗತಿ ಬಂಧು ಸ್ವಸಹಾಯ ಸಂಘದ ಮೂಲಕ ಆರ್ಥಿಕ ನೆರವು ಪಡೆದುಕೊಂಡು ಸ್ವಯo ಉದ್ಯೋಗಗಳನ್ನು ಆರಂಭಿಸಿ ಅನೇಕ ಮಹಿಳೆಯರಿಗೆ ಪ್ರೇರಣೆಯಾದ ಸುನಿತಾ ಅಂಬಿ, ಜಯಶ್ರೀ ಪೂಜಾರಿ, ಶೋಭಾ ಖೋಬ್ರಿ, ಸುಜಾತಾ ಕೊಕಟನೂರ, ಶೈಲಶ್ರೀ ಗುರವ ಅವರನ್ನು ಸನ್ಮಾನಿಸಲಾಯಿತು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸದಸ್ಯರಿಂದ ಕಿರು ನಾಟಕ, ಕೋಲಾಟ ಮತ್ತು ನೃತ್ಯಗಳು ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರನ್ನು ರಂಜಿಸಿದವು.
ಯೋಜನಾಧಿಕಾರಿ ಜಗದೀಶ್ ಕೆ ಎಚ್ ಸ್ವಾಗತಿಸಿದರು. ಜಿಲ್ಲಾ ನಿರ್ದೇಶಕಿ ಲೀಲಾವತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾಂತೇಶ ಮಠಪತಿ ನಿರೂಪಿಸಿದರು. ಆಶಾ ಬೋಗುರ ವಂದಿಸಿದರು.