ತಾಳಿಕೋಟೆ, ದೇವರ ಹಿಪ್ಪರಗಿ ಮತಕ್ಷೇತ್ರವನ್ನು ಮಾದರಿಯ ಮತಕ್ಷೇತ್ರವನ್ನಾಗಿ ಪರಿವರ್ತಿಸುವ ಸಂಕಲ್ಪ ಹೊಂದಿದ್ದೇನೆ ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಮುಖ್ಯ ಗುರಿಯಾಗಿದೆ ಎಂದು ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ (ಕು. ಸಾಲವಾಡಗಿ) ಅವರು ಹೇಳಿದರು.
ತಾಲೂಕಿನ ಬಿಳೇಭಾವಿ, ಬಿ. ಸಾಲವಾಡಗಿ, ಬಿ. ಸಾಲವಾಡಗಿ ತಾಂಡಾ, ಬಂಡೆಪ್ಪನಹಳ್ಳಿ ಹಾಗೂ ಎಲ್ಲಮ್ಮನ ಕೊಳ್ಳದಲ್ಲಿ ಒಟ್ಟು ೧.೮೦ ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ, ಬಿ. ಸಾಲವಾಡಗಿ ತಾಂಡಾದಲ್ಲಿ ಸಂತ ಸೇವಾಲಾಲ್ ಸಮಾಜದ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ರಾಜ್ಯದಲ್ಲಿ ತಮ್ಮ ಪಕ್ಷದ ಸರ್ಕಾರ ಇಲ್ಲದಿರುವುದರಿಂದ ಅನುದಾನ ಪಡೆಯುವಲ್ಲಿ ಕೆಲವು ತೊಂದರೆಗಳಿವೆ. ಆದರೂ ಮತಕ್ಷೇತ್ರದ ಗ್ರಾಮಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಶಕ್ತಿಮೀರಿ ಪ್ರಯತ್ನಿಸುತ್ತಿದ್ದೇನೆ. ಜನರು ನನ್ನ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸ ಹಾಗೂ ನಂಬಿಕೆಯನ್ನು ಎಂದಿಗೂ ಮರೆಯುವುದಿಲ್ಲ. ಮತದಾರರ ಋಣ ತೀರಿಸುವ ನಿಟ್ಟಿನಲ್ಲಿ ಮತಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತೇನೆ. ಮುಂದೆಯೂ ಇದೇ ರೀತಿಯ ಸಹಕಾರ ಮತ್ತು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು. ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ, ಸಮುದಾಯ ಭವನ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ. ಅನುದಾನದ ಕೊರತೆಯ ನಡುವೆಯೂ ವಿವಿಧ ಮೂಲಗಳಿಂದ ಅನುದಾನ ತಂದು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತಿದ್ದೇನೆ. ಇದಕ್ಕೆ ಜನರ ಸಹಕಾರ ಅತ್ಯಗತ್ಯವಾಗಿದೆ ಎಂದ ಅವರು ಈ ಕಾಮಗಾರಿಗಳಿಂದ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಸಂಪರ್ಕ ಸುಧಾರಿಸುವುದರ ಜೊತೆಗೆ ಸಾರ್ವಜನಿಕ ಹಾಗೂ ಸಮುದಾಯ ಚಟುವಟಿಕೆಗಳಿಗೆ ಅಗತ್ಯವಾದ ಸೌಲಭ್ಯಗಳು ಲಭ್ಯವಾಗಲಿವೆ ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಮಡುಸೌಕಾರ ಬಿರಾದಾರ ಮಾತನಾಡಿ, ಚುನಾವಣೆಯ ಸಂದರ್ಭದಲ್ಲಿ ಶಾಸಕ ರಾಜುಗೌಡ ಪಾಟೀಲ ಅವರು ಸಣ್ಣ ಸಣ್ಣ ಸಮಾಜಗಳ ಅಭಿವೃದ್ಧಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದಾರೆ. ಅನುದಾನವನ್ನು ಹೊಂದಿಸಿಕೊಂಡು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಇರುವುದರಿಂದ ಈ ವಿಚಾರವನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದರು.
೫ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
ಬಿಳೇಭಾವಿ ಗ್ರಾಮದಲ್ಲಿ ೧.೨೦ ಕೋಟಿ ವೆಚ್ಚದ ಸಿಸಿ ರಸ್ತೆ ನಿರ್ಮಾಣ, ಬಿ. ಸಾಲವಾಡಗಿ ಗ್ರಾಮದಲ್ಲಿ ೨೦ ಲಕ್ಷ ವೆಚ್ಚದ ಡಾ. ಬಿ.ಆರ್. ಅಂಬೇಡ್ಕರ್ ಭವನ, ಬಿ. ಸಾಲವಾಡಗಿ ತಾಂಡಾದಲ್ಲಿ ೫ ಲಕ್ಷ ವೆಚ್ಚದ ಸಂತ ಸೇವಾಲಾಲ್ ದೇವಸ್ಥಾನದ ಸಮೀಪ ಸಮುದಾಯ ಭವನ, ಬಂಡೆಪ್ಪನಹಳ್ಳಿ ಗ್ರಾಮದಲ್ಲಿ ೨೫ ಲಕ್ಷ ವೆಚ್ಚದ ಸಿಸಿ ರಸ್ತೆ ಹಾಗೂ ಎಲ್ಲಮ್ಮನ ಕೊಳ್ಳದಲ್ಲಿ ೧೦ ಲಕ್ಷ ವೆಚ್ಚದ ಸಮುದಾಯ ಭವನ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಯಿತು.
ಇದೇ ಸಂದರ್ಭದಲ್ಲಿ ಗ್ರಾಮಸ್ಥರ ವತಿಯಿಂದ ಶಾಸಕ ರಾಜುಗೌಡ ಪಾಟೀಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ತಾಪಂ ಮಾಜಿ ಅಧ್ಯಕ್ಷ ರಾಜುಗೌಡ ಕೋಳೂರ, ಪ್ರಭುಗೌಡ ನಾಡಗೌಡ (ಶಳ್ಳಗಿ), ಶ್ರೀಕಾಂತಗೌಡ ದೊಡ್ಡಮನಿ, ನಾನಾಗೌಡ ಅನಂತರೆಡ್ಡಿ, ನಿಂಗನಗೌಡ ಅಗ್ನಿ, ಸಣ್ಣ ಪೂಜಾರಿ ಮುತ್ಯಾ, ರಾಜುಗೌಡ ಯಾಳಗಿ, ಕಾಡಪ್ಪ ಪೂಜಾರಿ, ಮುತ್ತುಗೌಡ ಅಸ್ಕಿ, ಸಾಹೇಬಗೌಡ ಅನಂತರೆಡ್ಡಿ, ಅಶೋಕ ಅಸ್ಕಿ, ಜಗದೀಶ ದೊಡ್ಡಪೂಜಾರಿ, ನಿಂಗಣ್ಣ ಕಲಬುರ್ಗಿ, ಜಗನ್ನಾಥ ಮಸರಕಲ್ಲ, ಬಸವರಾಜ ಅರಸನಾಳ, ಮಲ್ಲಣ್ಣ ಕೆಸರಟ್ಟಿ, ಶಾಂತಪ್ಪ ಇಣಚಗಲ್, ಬಾಗಪ್ಪ ಬರ್ದೇನಾಳ, ಸಂತ ಸೇವಾಲಾಲ್ ಸಮಾಜದ ಅಧ್ಯಕ್ಷ ಬಾಸು ಜಾಧವ, ರಮೇಶ ಚೌವಾಣ, ಹಣಮಂತ ರಾಠೋಡ, ಬಾಬು ಚೌಹಾಣ, ಮೋಹನ ರಾಥೋಡ ಮೊದಲಾದವರು ಉಪಸ್ಥಿತರಿದ್ದರು.
ದೇವರ ಹಿಪ್ಪರಗಿ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಮುಖ್ಯ ಗುರಿಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ, ಸಮುದಾಯ ಭವನ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ. ರಾಜ್ಯದಲ್ಲಿ ನಮ್ಮ ಪಕ್ಷದ ಸರ್ಕಾರ ಇಲ್ಲದಿದ್ದರೂ, ಅನುದಾನದ ಕೊರತೆಯ ನಡುವೆಯೂ ವಿವಿಧ ಮೂಲಗಳಿಂದ ಅನುದಾನ ತಂದು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತಿದ್ದೇನೆ. ಜನರು ನನ್ನ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸ ಹಾಗೂ ನಂಬಿಕೆಗೆ ಸದಾ ಋಣಿಯಾಗಿದ್ದೇನೆ. ಮತದಾರರ ಆಶಯಗಳಿಗೆ ಸ್ಪಂದಿಸಿ, ಮತಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತೇನೆ. ಈ ಕಾರ್ಯಕ್ಕೆ ಜನರ ಸಹಕಾರ ಅತ್ಯಂತ ಮುಖ್ಯವಾಗಿದೆ.