ರಾಮದುರ್ಗ: ದೇಶದ ಸಂಸ್ಕೃತಿ ಹಾಗೂ ಪರಂಪರೆಗೆ ತಮ್ಮದೆ ಆದ ಕೊಡುಗೆ ನೀಡಿರುವ ಮಹರ್ಷಿ ವಾಲ್ಮೀಕಿ, ವಾಲ್ಮೀಕಿ ಸಮುದಾಯಕ್ಕೆ ಅಷ್ಟೇ ಅಲ್ಲದೆ ಇಡೀ ಮನುಕುಲಕ್ಕೆ ದಾರಿದೀಪವಾಗಿದ್ದು, ಅವರ ಆದರ್ಶಗಳನ್ನು ನಾವೇಲ್ಲಾ ನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಹಶೀಲ್ದಾರ ಪ್ರಕಾಶ ಗಾಯಕವಾಡ ಹೇಳಿದರು.
ಸ್ಥಳೀಯ ವಿದ್ಯಾಚೇತನ ಶಾಲಾ ಆವರಣದಲ್ಲಿರುವ ಗುರು ಭವನದಲ್ಲಿ ತಾಲೂಕಾಡಳಿತ, ತಾಲೂಕಾ ವಾಲ್ಮೀಕಿ ಸಮಾಜದ ನೇತೃತ್ವದಲ್ಲಿ ಹಮ್ಮಿಕೊಂಡ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಮುದಾಯದ ಅಭಿವೃದ್ದಿಗಾಗಿ ಹಲವಾರು ಯೋಜನೆಗಳಿದ್ದು, ಆದ್ದರಿಂದ ಸರಕಾರದ ಸೌಲಭ್ಯಗಳನ್ನು ಸಮುದಾಯದ ಜನರು ಪಡೆದುಕೊಂಡು ಪ್ರಗತಿ ಹೊಂದುವಲ್ಲಿ ಮುಂದಾಗಬೇಕು. ತಮ್ಮ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಸಮಾಜದ ಮುಂಚೂಣಿಗೆ ತರುವಲ್ಲಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ಸುರೇಬಾನ ಶ್ರೀ ಫಲಹಾರ ಶಿವಯೋಗಿಶ್ವರ ಪ.ಪೂ ಮಹಾವಿದ್ಯಾಲಯದ ಉಪನ್ಯಾಸಕ ಪ್ರೊ. ರಮೇಶ ದಾಸನಟ್ಟಿ ಅವರು ಮಹರ್ಷಿ ವಾಲ್ಮೀಕಿ ಅವರ ಜೀವನ ಚರಿತ್ರೆಯ ಕುರಿತು ಮಾತನಾಡಿದರು.
ಭೀಮಸಿ ಕನಕನ್ನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅಧಿಕ ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ಗೌರವಾಧ್ಯಕ್ಷ ಕಾಳಪ್ಪ ಹೂವನ್ನವರ, ಅಧ್ಯಕ್ಷ ಮಾರುತಿ ಕುರಿ, ಉಪಾಧ್ಯಕ್ಷ ಮಹಾದೇವ ತಳವಾರ, ಗ್ಯಾರಂಟಿ ಸಮಿತಿ ಅಧ್ಯಕ್ಷ ಜಿ.ಬಿ. ರಂಗನಗೌಡ್ರ, ಪ್ರಭಾರಿ ತಾ.ಪಂ ಇಓ ಮಹ್ಮದ್‌ಇಜಾನ ಸುಬೂರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಹಣಮಂತ ವಕ್ಕುಂದ, ಮುಖಂಡರಾದ ವೆಂಕನಗೌಡ ಪಾಟೀಲ, ಪ್ರಕಾಶ ತಳವಾರ, ಚುರ್ಚಪ್ಪ ಮಡ್ಡಿನಾಯ್ಕರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಮುದಾಯದ ಇತರರು ಉಪಸ್ಥಿತರಿದ್ದರು.
ಮೆರವಣಿಗೆಗೆ ಚಾಲನೆ:
ಸ್ಥಳೀಯ ತಾಲೂಕ ಪಂಚಾಯತ ಆವರಣದಿಮದ ಆರಂಭಗೊಂಡ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರದ ಭವ್ಯ ಮೆರವಣಿಗೆಗೆ ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ತಾಪಂ ಆವರಣದಿಂದ ಹೊರಟ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವಿದ್ಯಾಚೇತನ ಆವರಣಕ್ಕೆ ತೆರಳಿ ಸಮಾವೇಶಗೊಂಡಿತು.