ತಾಳಿಕೋಟೆ, ಮಹಾರಾಣಾ ಪ್ರತಾಪ್ ಅವರು ರಾಜಮಹಲ್, ವೈಭವದ ಜೀವನವನ್ನು ತ್ಯಜಿಸಿ ಕಾಡು-ಮೇಡುಗಳಲ್ಲಿ ವಾಸಿಸಿ, ಹುಲ್ಲಿನ ರೊಟ್ಟಿಯನ್ನು ತಿಂದು ಬದುಕಿದರೂ ತಮ್ಮ ಧರ್ಮ, ಸ್ವಾಭಿಮಾನ ಹಾಗೂ ಮಾತೃಭೂಮಿಯ ರಕ್ಷಣೆಯ ಸಂಕಲ್ಪದಿಂದ ಹಿಂದೆ ಸರಿಯಲಿಲ್ಲ. ಅವರ ತ್ಯಾಗ, ಶೌರ್ಯ, ಧೈರ್ಯ ಮತ್ತು ರಾಷ್ಟ್ರಪ್ರೇಮ ಇಂದಿನ ಪೀಳಿಗೆಗೆ ಮಾತ್ರವಲ್ಲ, ಮುಂದಿನ ಅನಂತ ಪೀಳಿಗೆಗಳಿಗೂ ಆದರ್ಶವಾಗಬೇಕು ಎಂದು ಮಾಜಿ ಕೇಂದ್ರ ಸಚಿವ ಹಾಗೂ ಸಂಸದ ಅನುರಾಗ್‌ಸಿಂಗ್ ಠಾಕೂರ್ ಹೇಳಿದರು.
ನಗರದಲ್ಲಿ ಭಾನುವಾರ ಮಹಾರಾಣಾ ಪ್ರತಾಪ್ ಅವರ ಭವ್ಯ ಕಂಚಿನ ಮೂರ್ತಿ ಅನಾವರಣ ಕಾರ್ಯಕ್ರಮದ ನಂತರ ಎಸ್.ಕೆ.ಕಾಲೇಜ್ ಮೈಧಾನದಲ್ಲಿ ಆಯೋಜಿಸಲಾದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಮಹಾರಾಣಾ ಪ್ರತಾಪ್ ಅವರು ತಮ್ಮ ರಾಜಸಿಂಹಾಸನದ ಬಗ್ಗೆ ಚಿಂತಿಸದೆ ದೇಶ, ಧರ್ಮ ಮತ್ತು ಸನಾತನ ಸಂಸ್ಕೃತಿಯ ರಕ್ಷಣೆಗಾಗಿ ಜೀವನವನ್ನೇ ಸಮರ್ಪಿಸಿದ ಮಹಾನ್ ವ್ಯಕ್ತಿ. ಅಂತಹ ಮಹಾವೀರನ ಮೂರ್ತಿ ಅನಾವರಣ ಕಾರ್ಯಕ್ರಮಕ್ಕೆ ಆಗಮಿಸಿರುವ ನಾವೆಲ್ಲರೂ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಹಿಮಾಚಲ ಪ್ರದೇಶದಿಂದ ದೀರ್ಘ ಪ್ರಯಾಣ ಮಾಡಿ ತಾಳಿಕೋಟೆಗೆ ಆಗಮಿಸಿರುವುದನ್ನು ಉಲ್ಲೇಖಿಸಿದ ಅವರು, ದೈಹಿಕ ಆಯಾಸಕ್ಕಿಂತ ಮಹಾರಾಣಾ ಪ್ರತಾಪ್ ಅವರ ಮೇಲಿನ ಅಭಿಮಾನ ಮತ್ತು ಗೌರವವೇ ದೊಡ್ಡದು. ನಾನೂ ಅವರ ಸಂತಾನ ಎಂಬ ಭಾವನೆಯಿಂದ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು. ಮಹಾರಾಣಾ ಪ್ರತಾಪ್ ಅವರ ಶೌರ್ಯ, ತಪಸ್ಸು, ಧರ್ಮನಿಷ್ಠೆ ಹಾಗೂ ಮಾತೃಭೂಮಿಗಾಗಿ ನಡೆಸಿದ ಹೋರಾಟ ಪ್ರತಿಯೊಬ್ಬ ಭಾರತೀಯನಲ್ಲೂ ಸ್ವಾಭಿಮಾನ ಮತ್ತು ರಾಷ್ಟ್ರಪ್ರೇಮವನ್ನು ಜಾಗೃತಗೊಳಿಸುತ್ತದೆ. ಅವರು ಕೇವಲ ಒಬ್ಬ ರಾಜನಲ್ಲ; ಸ್ವಾತಂತ್ರ್ಯ, ಸ್ವಾಭಿಮಾನ, ಸಂಘರ್ಷ ಮತ್ತು ಶೌರ್ಯದ ಪ್ರತೀಕವಾಗಿದ್ದಾರೆ. ತಮ್ಮ ಪ್ರೀತಿಯ ಚೇತಕ್ ಕುದುರೆಯ ಮೇಲೆ ಸವಾರಿ ಮಾಡಿ ಶತ್ರುಗಳನ್ನು ಎದುರಿಸಿದ ಅವರ ಸಾಹಸ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿದೆ ಎಂದು ಸ್ಮರಿಸಿದರು. ಭಗವದ್ಗೀತೆಯ ೧೮ನೇ ಅಧ್ಯಾಯದ ೪೩ನೇ ಶ್ಲೋಕವನ್ನು ಉಲ್ಲೇಖಿಸಿದ ಅವರು, ಶೌರ್ಯ, ತೇಜಸ್ಸು, ಧೈರ್ಯ, ಚಾತುರ್ಯ ಮತ್ತು ದಾನಶೀಲತೆ ಕ್ಷತ್ರಿಯರ ಸಹಜ ಗುಣಗಳಾಗಿವೆ. ರಾಜಪೂತ ಸಮಾಜವೆಂದರೆ ಕೇವಲ ಒಂದು ಜಾತಿಯ ಗುರುತಲ್ಲ; ದೇಶದ ರಕ್ಷಣೆ, ಸಮಾಜದ ಗೌರವ ಮತ್ತು ಧರ್ಮದ ಸಂರಕ್ಷಣೆಯ ಹೊಣೆಗಾರಿಕೆಯನ್ನು ಹೊತ್ತಿರುವ ಪರಂಪರೆಯಾಗಿದೆ ಎಂದರು. ಸಮಾಜದಲ್ಲಿ ಒಗ್ಗಟ್ಟು ಅತ್ಯಂತ ಮುಖ್ಯ. ಜಾತಿ-ಭೇದಗಳನ್ನು ಮೀರಿ ದೇಶದ ಹಿತಕ್ಕಾಗಿ ಎಲ್ಲರೂ ಒಂದಾಗಿ ಕೆಲಸ ಮಾಡಬೇಕು. ಮಹಾರಾಣಾ ಪ್ರತಾಪ್ ಅವರ ಜೀವನ ನಮಗೆ ಕಲಿಸುವುದು ಸ್ವಾಭಿಮಾನದಿಂದ ಬದುಕುವುದು, ಮತ್ತು ಮಾತೃಭೂಮಿಯ ಗೌರವವನ್ನು ಎತ್ತಿಹಿಡಿಯುವುದಾಗಿದೆ. ಅವರ ಮೂರ್ತಿ ಕೇವಲ ಕಂಚಿನ ಪ್ರತಿಮೆಯಾಗಿ ಉಳಿಯದೆ, ಯುವಜನತೆಯಲ್ಲಿ ದೇಶಪ್ರೇಮ ಮತ್ತು ಕರ್ತವ್ಯಪ್ರಜ್ಞೆ ಮೂಡಿಸುವ ಸ್ಫೂರ್ತಿಯ ಕೇಂದ್ರವಾಗಬೇಕು ಎಂದು ’ಹಿಂದೂ ತನ್-ಮನ, ಹಿಂದೂ ಜೀವನ, ರಗ್-ರಗ್ ಹಿಂದೂ ಮೇರಾ ಪರಿಚಯ’ ಎಂಬ ಸಾಲುಗಳನ್ನು ಉಲ್ಲೇಖಿಸಿ, ಭಾರತ ಮಾತೆಯ ಜಯಘೋಷಗಳನ್ನು ಮೊಳಗಿಸಿದರು.
ರಜಪೂತ ಸಮಾಜದ ಅಧ್ಯಕ್ಷ ಹರಿಸಿಂಗ್ ಮೂಲಿಮನಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಹಾರಾಣಾಪ್ರತಾಪಸಿಂಹ ಅವರ ಕಂಚಿನ ಪುತ್ಥಳಿ ಪ್ರತಿಷ್ಠಾಪನೆಗೆ ಧನ ಸಹಾಯ ಒದಗಿಸಿದ ಸಮಾಜದ ವಿಜಯಸಿಂಗ್ ದಿಲೀಪಸಿಂಗ್ ಹಜೇರಿ, ಬಾಲಾಜಿಸಿಂಗ್ ಮಾದುಸಿಂಗ್ ಹಜೇರಿ, ಸಂಜೀವಕುಮಾರ ಲಕ್ಷ್ಮಣಸಿಂಗ್ ಹಜೇರಿ, ದಿ. ಶ್ರೀಮತಿ ಬಿಂದಾಬಾಯಿ ಅಂಬರಸಿಂಗ್ ಹಜೇರಿ ಅವರ ಸ್ಮರಣಾರ್ಥ, ದಿ. ಶ್ರೀಮತಿ ಶಾಂತಾಬಾಯಿ ವಿಠ್ಠಲಸಿಂಗ್ ಮೂಲಿಮನಿ ಅವರ ಸ್ಮರಣಾರ್ಥ, ದಿ.ವಿಠ್ಠಲಸಿಂಗ್ ಅಮರಸಿಂಗ್ ಹಜೇರಿ ಸ್ಮರಣಾರ್ಥ ಹಾಗೂ ದಿ. ಮಾಧುಸಿಂಗ್ ಸತ್ಯನಾರಾಯಣಸಿಂಗ್ ವಿಜಾಪೂರ ಅವರ ಸ್ಮರಣಾರ್ಥ ದೇಣಿಗೆ ನೀಡಿದ ಕುಟುಂಭಸ್ಥರಿಗೆ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಶ್ರೀ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು, ಗುಂಡಕನಾಳ ಹಿರೇಮಠದ ಶ್ರೀ ಗುರಲಿಂಗ ಶಿವಾಚಾರ್ಯರು, ಬಾಲತಪಸ್ವಿ ಶ್ರೀ ಸೋಮಲಿಂಗ ಮಹಾಸ್ವಾಮೀಜಿ, ವೇ. ಭೀಮಶಂಕರ ಜೋಶಿ, ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ, ಸಚೀವ ಅಜಯಸಿಂಗ್ ಧರ್ಮಸಿಂಗ್, ಶಾಸಕ ಶಿವಾನಂದ ಪಾಟೀಲ, ಶಾಸಕ ರಾಜುಗೌಡ ಪಾಟೀಲ, ರಾಜ್ಯಸಭಾ ಸದಸ್ಯ ನಾರಾಯಣ ಬಾಂಡ್ಗೆ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ(ಯತ್ನಾಳ), ಆರ್.ಎಸ್.ಪಾಟೀಲ(ಕೂಚಬಾಳ), ಮಾಜಿ ಶಾಸಕ ರಾಜುಗೌಡ ನರಸಿಂಹನಾಯಕ, ಸೋಮನಗೌಡ ಪಾಟೀಲ(ಸಾಸನೂರ), ಎ.ಎಸ್. ಪಾಟೀಲ, ಈಶ್ವರಸಿಂಗ್ ಠಾಕೂರ, ಡಾ.ಬಿ.ವೆಂಕಟಸಿಂಗ್, ಆರ್.ಬಾಲಾಜಿಸಿಂಗ್, ಸುಭಾಸಸಿಂಗ್ ಜಮಾದಾರ, ಶ್ರೀಮತಿ ಸಂದ್ಯಾತಾಯಿ ರಜಪೂತ, ಸೇರಿದಂತೆ ಹಲವು ಗಣ್ಯರು, ಸಮಾಜದ ಮುಖಂಡರು ಉಪಸ್ಥಿತರಿದ್ದರು.