ಮುದ್ದೇಬಿಹಾಳ: ತಾಲೂಕಿನ ಹುಲ್ಲೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಟ್ಟಗಿ ಗ್ರಾಮದ ಕೆರೆಯ ದಡದಲ್ಲಿ ವಿಕಸಿತ ಭಾರತ – ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಆಜೀವಿಕಾ ಮಿಷನ್ (ಗ್ರಾಮೀಣ) (VB-G RAM G) ಕಾರ್ಯಕ್ರಮದಡಿ ಕಾರ್ಯನಿರ್ವಹಿಸುತ್ತಿರುವ ನರೇಗಾ ಕೂಲಿ ಕಾರ್ಮಿಕರಿಗೆ ವಿಶ್ವ ಮಧುಮೇಹ ದಿನಾಚರಣೆಯ ಅಂಗವಾಗಿ ಕಾಳಗಿ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಯಿತು.
ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಂಗನಗೌಡ ಬಿರಾದಾರ ಅವರು, ಕಾರ್ಮಿಕರು ತಮ್ಮ ದೈನಂದಿನ ಕೆಲಸದ ಜೊತೆಗೆ ಆರೋಗ್ಯದ ಕಡೆಗೂ ಹೆಚ್ಚಿನ ಗಮನಹರಿಸಬೇಕು. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ವಿವಿಧ ಕಾಯಿಲೆಗಳನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಿ ಚಿಕಿತ್ಸೆ ಪಡೆಯಲು ಅನುಕೂಲವಾಗುವಂತೆ ಕಾಮಗಾರಿ ಸ್ಥಳಗಳಲ್ಲಿಯೇ ಆರೋಗ್ಯ ತಪಾಸಣೆ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕಾರ್ಮಿಕರ ಆರೋಗ್ಯ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಕಾಳಗಿ ಸಮುದಾಯ ಆರೋಗ್ಯ ಕೇಂದ್ರದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಎಸ್. ಗೌಡರ ಮಾತನಾಡಿ, ಅನಾರೋಗ್ಯಕರ ಆಹಾರ ಪದ್ಧತಿ, ನಿದ್ರೆಯ ಕೊರತೆ, ಮಾನಸಿಕ ಒತ್ತಡ, ದೈಹಿಕ ಚಟುವಟಿಕೆಗಳ ಕೊರತೆ ಹಾಗೂ ಅನುವಂಶಿಕ ಕಾರಣಗಳಿಂದ ಮಧುಮೇಹ ಕಾಯಿಲೆ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಪ್ರತಿಯೊಬ್ಬರೂ ನಿಯಮಿತವಾಗಿ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಪರೀಕ್ಷಿಸಿಕೊಳ್ಳಬೇಕು. ಶಿಸ್ತುಬದ್ಧ ಆಹಾರ ಪದ್ಧತಿ, ನಿಯಮಿತ ವ್ಯಾಯಾಮ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳುವ ಮೂಲಕ ಮಧುಮೇಹವನ್ನು ನಿಯಂತ್ರಿಸಬಹುದು. ಮಧುಮೇಹ ನಿಯಂತ್ರಣಕ್ಕೆ ಬಾರದಿದ್ದಲ್ಲಿ ಕಣ್ಣು, ಮೂತ್ರಪಿಂಡ ಹಾಗೂ ನರಮಂಡಲದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಮಧುಮೇಹ ಮತ್ತು ರಕ್ತದೊತ್ತಡ ತಪಾಸಣೆ ಹಾಗೂ ಅಗತ್ಯ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಳಗಿ ಸಮುದಾಯ ಆರೋಗ್ಯ ಕೇಂದ್ರದ ಎನ್‌ಸಿಡಿ ಆಪ್ತ ಸಮಾಲೋಚಕ ವೀರೇಶ ದಿಂಡವಾರ ಅವರು ಮಧುಮೇಹ ರೋಗದ ಲಕ್ಷಣಗಳು, ಕಾರಣಗಳು, ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಚಿಕಿತ್ಸೆಯ ಕುರಿತು ಕಾರ್ಮಿಕರಿಗೆ ಮಾಹಿತಿ ನೀಡಿದರು.
ಶಿಬಿರದಲ್ಲಿ ಒಟ್ಟು 78 ನರೇಗಾ ಕೂಲಿ ಕಾರ್ಮಿಕರಿಗೆ ರಕ್ತದೊತ್ತಡ, ಮಧುಮೇಹ, ಕೆಮ್ಮು, ನೆಗಡಿ ಹಾಗೂ ಜ್ವರ ಸೇರಿದಂತೆ ವಿವಿಧ ಆರೋಗ್ಯ ತಪಾಸಣೆಗಳನ್ನು ನಡೆಸಲಾಯಿತು.
ಕಾರ್ಯಕ್ರಮದ ಕುರಿತು ಹುಲ್ಲೂರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜು ವಂದಾಲ ಮಾತನಾಡಿದರು. ಕಾರ್ಮಿಕರ ಪ್ರತಿನಿಧಿಯಾಗಿ ಜಟ್ಟಗಿ ಗ್ರಾಮದ ಚಿದಾನಂದ ಮುತ್ತಗಿ ಮಾತನಾಡಿ, ತಾಲೂಕು ಪಂಚಾಯಿತಿ ಹಾಗೂ ಹುಲ್ಲೂರ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕೂಲಿ ಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ಆರೋಗ್ಯ ಶಿಬಿರ ಆಯೋಜಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹುಲ್ಲೂರ ಗ್ರಾಮ ಪಂಚಾಯಿತಿಯ ಜ್ಞಾನೇಶ್ ಮುರಾಳ, ತಾಲೂಕು ಪಂಚಾಯಿತಿ ಸಂಯೋಜಕ ಪರಮೇಶ ಹೊಸಮನಿ, ಪಂಚಾಯಿತಿ ಕಾರ್ಯದರ್ಶಿ ಖನಿಜ ಫಾತಿಮಾ ರಾಜಹಮ್ಮದ್, ಹುಲ್ಲೂರ ಉಪಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿ ಮುತ್ತಣ್ಣ ಕಬಾಡೆ, ಎಲ್.ಟಿ.ಓ. ಸಂಕಮ್ಮ ಹರವಿ ಸೇರಿದಂತೆ ಆರೋಗ್ಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.