ತಾಳಿಕೋಟೆ, ಮಹಾರಾಣಾ ಪ್ರತಾಪ್ ಸಿಂಹ ಅವರು ಕೇವಲ ಒಂದು ಸಮಾಜಕ್ಕೆ ಸೀಮಿತವಾದ ನಾಯಕರಲ್ಲ. ಅವರು ಇಡೀ ಭಾರತದ ಹೆಮ್ಮೆಯ ವೀರ, ಮೇವಾಡದ ಕೇಸರಿ. ಆತ್ಮಸ್ಥೈರ್ಯ, ಧೈರ್ಯ, ಸ್ವಾಭಿಮಾನ ಹಾಗೂ ದೇಶಭಕ್ತಿಯ ಪ್ರತೀಕವಾಗಿರುವ ಅವರ ಜೀವನ ಇಂದಿನ ಯುವಜನತೆಗೆ ದೊಡ್ಡ ಸ್ಫೂರ್ತಿಯಾಗಿದೆ. ಯುವಕರು ಮಹಾರಾಣಾ ಪ್ರತಾಪ್ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ದೇಶದ ಏಳಿಗೆಗಾಗಿ ಶ್ರಮಿಸಬೇಕು ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚೀವ ಡಾ. ಅಜಯಸಿಂಗ್ ಧರ್ಮಸಿಂಗ್ ಅವರು ಹೇಳಿದರು.
ನಗರದಲ್ಲಿ ಭಾನುವಾರ ಮಹಾರಾಣಾ ಪ್ರತಾಪ್ ಅವರ ಭವ್ಯ ಕಂಚಿನ ಮೂರ್ತಿ ಅನಾವರಣ ಕಾರ್ಯಕ್ರಮದ ನಂತರ ಎಸ್.ಕೆ.ಕಾಲೇಜ್ ಮೈಧಾನದಲ್ಲಿ ಆಯೋಜಿಸಲಾದ ಸಮಾರಂಭದ ನೇತೃತ್ವ ವಹಿಸಿ ಮಾತನಾಡಿದ ಅವರು, ಈ ಮೂರ್ತಿ ಅನಾವರಣ ಕಾರ್ಯಕ್ರಮ ಕೇವಲ ಒಂದು ಸಮಾಜಕ್ಕೆ ಸೀಮಿತವಾಗಿಲ್ಲ. ಎಲ್ಲ ಸಮಾಜದವರೂ ಗೌರವಿಸುವ ಮಹಾನ್ ವೀರನ ಸ್ಮರಣೆಯ ಕಾರ್ಯಕ್ರಮ ಇದಾಗಿದೆ ಎಂದರು. ಇತಿಹಾಸದಲ್ಲಿ ಅನೇಕ ರಾಜರು, ಮಹಾರಾಜರು ಆಳ್ವಿಕೆ ನಡೆಸಿ ಹೋಗಿದ್ದಾರೆ. ಆದರೆ ಸುಮಾರು ೬೦೦-೭೦೦ ವರ್ಷಗಳ ನಂತರವೂ ಮಹಾರಾಣಾ ಪ್ರತಾಪ್ ಅವರ ಹೆಸರು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. ಇದಕ್ಕೆ ಅವರ ದೇಶಪ್ರೇಮ, ಸ್ವಾಭಿಮಾನ ಮತ್ತು ಮಾತೃಭೂಮಿಗಾಗಿ ಮಾಡಿದ ತ್ಯಾಗವೇ ಕಾರಣವಾಗಿದೆ. ಆದ್ದರಿಂದ ಯುವಕರು ಅವರ ಜೀವನದ ಆದರ್ಶಗಳನ್ನು ಅರಿತುಕೊಳ್ಳಬೇಕು. ಯಾವುದೇ ಸಂದರ್ಭದಲ್ಲಿ ದೇಶದ ಹಿತಕ್ಕೆ ಮೊದಲ ಆದ್ಯತೆ ನೀಡಬೇಕು ಎಂದ ಅವರು ’ಮನ್ ಕೆ ಜೀತೆ ಜೀತ್ ಹೈ, ಮನ್ ಕೆ ಹಾರೆ ಹಾರ್’ ಎಂಬ ಹಿಂದಿ ನಾಣ್ಣುಡಿಯನ್ನು ಉಲ್ಲೇಖಿಸಿದ ಅವರು, ಮನಸ್ಸಿನಲ್ಲಿ ಗೆಲ್ಲುವ ಛಲ ಮತ್ತು ಆತ್ಮವಿಶ್ವಾಸವಿದ್ದರೆ ಯಾವುದೇ ಸವಾಲನ್ನು ಎದುರಿಸಲು ಸಾಧ್ಯ. ಮಹಾರಾಣಾ ಪ್ರತಾಪ್ ಅವರು ಬಯಸಿದ್ದರೆ ವೈಭವದ ಜೀವನ ನಡೆಸಬಹುದಿತ್ತು. ಆದರೆ ತಮ್ಮ ಜನರು ಸಂಕಷ್ಟದಲ್ಲಿರುವಾಗ ತಾವು ಮಾತ್ರ ಸುಖ-ಸೌಲಭ್ಯಗಳೊಂದಿಗೆ ಬದುಕುವುದಿಲ್ಲ ಎಂಬ ದೃಢ ನಿಲುವು ಹೊಂದಿದ್ದರು. ಬೆಳ್ಳಿ ತಟ್ಟೆಯಲ್ಲಿ ಊಟ ಮಾಡುವುದಕ್ಕಿಂತ ಜನರೊಂದಿಗೆ ಸಂಕಷ್ಟ ಹಂಚಿಕೊಳ್ಳುವುದನ್ನೇ ಅವರು ಶ್ರೇಷ್ಠವೆಂದು ಭಾವಿಸಿದ್ದರು. ಇಂತಹ ಸ್ವಾಭಿಮಾನಿ ಜೀವನ ಪ್ರತಿಯೊಬ್ಬರಿಗೂ ಮಾದರಿಯಾಗಬೇಕು ಎಂದ ಅವರು ತಮ್ಮ ತಂದೆ ದಿ.ಧರ್ಮಸಿಂಗ್ ಅವರು ಜೇವರ್ಗಿ ಕ್ಷೇತ್ರದಲ್ಲಿ ವಿವಿಧ ಸಮುದಾಯಗಳ ಜನರ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದದಿಂದ ಎಂಟು ಬಾರಿ ಶಾಸಕರಾಗಿ, ವಿವಿಧ ಖಾತೆಗಳ ಸಚಿವರಾಗಿ ಹಾಗೂ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಲು ಸಾಧ್ಯವಾಯಿತು. ಜೇವರ್ಗಿ ಕ್ಷೇತ್ರದಲ್ಲಿ ರಾಜಪೂತ ಸಮಾಜದ ಜನಸಂಖ್ಯೆ ನೂರಕ್ಕಿಂತ ಕಡಿಮೆ ಇದ್ದರೂ, ಎಲ್ಲ ಸಮಾಜದ ಜನರು ನಮ್ಮ ಕುಟುಂಬಕ್ಕೆ ನಿರಂತರವಾಗಿ ಬೆಂಬಲ ಮತ್ತು ಆಶೀರ್ವಾದ ನೀಡಿದ್ದಾರೆ. ಅವರ ಪ್ರೀತಿ, ವಿಶ್ವಾಸವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಸ್ಮರಿಸಿದರು.
ಕರ್ನಾಟಕದಲ್ಲಿ ರಾಜಪೂತ ಸಮಾಜದ ಜನಸಂಖ್ಯೆ ಕಡಿಮೆ ಪ್ರಮಾಣದಲ್ಲಿದ್ದರೂ, ಸಮಾಜದ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಈ ನಿಟ್ಟಿನಲ್ಲಿ ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಪಕ್ಷಭೇದ ಮರೆತು ಎಲ್ಲ ರಾಜಕೀಯ ಮುಖಂಡರು ಒಗ್ಗಟ್ಟಾಗಿ ರಾಜಪೂತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಪ್ರಯತ್ನಿಸಬೇಕು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಎಲ್ಲರೂ ಸೇರಿ ಮನವಿ ಸಲ್ಲಿಸಿ, ಸರ್ಕಾರದ ಮಟ್ಟದಲ್ಲಿ ಈ ಬೇಡಿಕೆ ಈಡೇರಿಸುವಂತಹ ಪ್ರಾಮಾಣಿಕ ಕೆಲಸ ಮಾಡುತ್ತೇವೆ ಸಮಾಜದ ಯುವಕರು ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ಪ್ರಗತಿ ಸಾಧಿಸಬೇಕಿದೆ. ಕೇವಲ ಸಮುದಾಯದ ಸಂಘಟನೆಗೆ ಸೀಮಿತವಾಗದೆ ಶಿಕ್ಷಣ, ಉದ್ಯೋಗ ಹಾಗೂ ಸಾಮಾಜಿಕ ಅಭಿವೃದ್ಧಿಯತ್ತ ಹೆಚ್ಚಿನ ಗಮನಹರಿಸಬೇಕು. ಸಮಾಜದ ಎಲ್ಲರೂ ಒಗ್ಗಟ್ಟಿನಿಂದ ಮುನ್ನಡೆದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು. ಸ್ವಾಮಿ ವಿವೇಕಾನಂದರ ವಿಚಾರಗಳನ್ನು ಸ್ಮರಿಸಿದ ಅವರು, ಸಮಾಜದ ಬಡವರು ಮತ್ತು ಜನಸಾಮಾನ್ಯರ ಬದುಕಿನಲ್ಲಿ ಸಂತೋಷ ಮೂಡಿಸುವಂತಹ ಕೆಲಸಗಳಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಒಳ್ಳೆಯ ಕಾರ್ಯಗಳಿಗೆ ಎಲ್ಲರ ಸಹಕಾರ ದೊರೆತಾಗ ಅಭಿವೃದ್ಧಿಯ ಹಾದಿ ಸುಗಮವಾಗುತ್ತದೆ. ಆದ್ದರಿಂದ ಯುವಕರು ಸಮಾಜದ ಪ್ರಗತಿಯ ಹೊಣೆಗಾರಿಕೆ ವಹಿಸಿಕೊಳ್ಳಬೇಕು ಎಂದರು.
ವೇದಿಕೆಯಲ್ಲಿ ಶ್ರೀ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು, ಗುಂಡಕನಾಳ ಹಿರೇಮಠದ ಶ್ರೀ ಗುರಲಿಂಗ ಶಿವಾಚಾರ್ಯರು, ಬಾಲತಪಸ್ವಿ ಶ್ರೀ ಸೋಮಲಿಂಗ ಮಹಾಸ್ವಾಮೀಜಿ, ವೇ. ಭೀಮಶಂಕರ ಜೋಶಿ, ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ, ಸಚೀವ ಅಜಯಸಿಂಗ್ ಧರ್ಮಸಿಂಗ್, ಶಾಸಕ ಶಿವಾನಂದ ಪಾಟೀಲ, ಶಾಸಕ ರಾಜುಗೌಡ ಪಾಟೀಲ, ರಾಜ್ಯಸಭಾ ಸದಸ್ಯ ನಾರಾಯಣ ಬಾಂಡ್ಗೆ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ(ಯತ್ನಾಳ), ಆರ್.ಎಸ್.ಪಾಟೀಲ(ಕೂಚಬಾಳ), ಮಾಜಿ ಶಾಸಕ ರಾಜುಗೌಡ ನರಸಿಂಹನಾಯಕ, ಸೋಮನಗೌಡ ಪಾಟೀಲ(ಸಾಸನೂರ), ಎ.ಎಸ್. ಪಾಟೀಲ, ಈಶ್ವರಸಿಂಗ್ ಠಾಕೂರ, ಡಾ.ಬಿ.ವೆಂಕಟಸಿಂಗ್, ಆರ್.ಬಾಲಾಜಿಸಿಂಗ್, ಸುಭಾಸಸಿಂಗ್ ಜಮಾದಾರ, ಶ್ರೀಮತಿ ಸಂದ್ಯಾತಾಯಿ ರಜಪೂತ, ಸೇರಿದಂತೆ ಹಲವು ಗಣ್ಯರು, ಸಮಾಜದ ಮುಖಂಡರು ಉಪಸ್ಥಿತರಿದ್ದರು.