ಬೆಳಗಾವಿ: ಇಂದು ಸಾಂಸ್ಕೃತಿಕ ಜಗತ್ತು ನಿರೀಕ್ಷಿತ ಎತ್ತರಕ್ಕೆ ಬೆಳೆಯುತ್ತಿಲ್ಲ. ಪ್ರತಿಯೊಂದು ಕ್ಷೇತ್ರವೂ ವಾಣಿಜ್ಯೀಕರಣಗೊಳ್ಳುತ್ತಿದ್ದು, ಸಾಂಸ್ಕೃತಿಕ ಕ್ಷೇತ್ರ ಸಂಕುಚಿತವಾಗುತ್ತಿರುವುದು ವಿಷಾದನೀಯ. ಸಾಂಸ್ಕೃತಿಕ ಲೋಕ ಸಂಪೂರ್ಣವಾಗಿ ಬದಲಾಗುತ್ತಿದ್ದು, ಬದುಕು ತನ್ನ ಸತ್ವವನ್ನು ಕಳೆದುಕೊಳ್ಳುತ್ತಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಕನ್ನಡ ನಾಡು-ನುಡಿಗೆ ಶಕ್ತಿ ತುಂಬಿದ ಹಿರಿಯ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಬಿ.ಎ. ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಮಾಡುತ್ತಿರುವುದು ಶ್ಲಾಘನೀಯ ಎಂದು ಹಿರಿಯ ವಿದ್ವಾಂಸ ಡಾ. ಗುರುಪಾದ ಮರಿಗುದ್ದಿ ಹೇಳಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಬಿ.ಎ. ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಸಾಂಸ್ಕೃತಿಕ ಲೋಕದ ಇಂದಿನ ಸ್ಥಿತಿಗತಿಗಳ ಕುರಿತು ಕಳವಳ ವ್ಯಕ್ತಪಡಿಸಿದರು.
ಸಾಹಿತ್ಯ ಮತ್ತು ಕಲೆಗಳ ಮಹತ್ವದ ಕುರಿತು ಮಾತನಾಡಿದ ಡಾ. ರಾಮಕೃಷ್ಣ ಮರಾಠೆ, ಸಾಹಿತ್ಯ ಮತ್ತು ಕಲೆಗಳಿಲ್ಲದೆಯೂ ಬದುಕಬಹುದು. ಆದರೆ ಉತ್ತಮ ಬದುಕಿಗೆ ಸಾಹಿತ್ಯ ಹಾಗೂ ಕಲೆಗಳು ಅತ್ಯಗತ್ಯ. ಅವು ಮನುಷ್ಯನ ಬದುಕನ್ನು ವಿಕಸಿತಗೊಳಿಸುವುದರ ಜೊತೆಗೆ ಉಲ್ಲಸಿತಗೊಳಿಸುತ್ತವೆ. ಗಡಿಭಾಗದ ಬೆಳಗಾವಿಯಲ್ಲಿ ಕನ್ನಡ ನಾಡು-ನುಡಿ ಬೆಳೆಯಲು ಹಾಗೂ ಉಳಿಯಲು ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸಂಘ-ಸಂಸ್ಥೆಗಳು ಶ್ರಮಿಸುತ್ತಿರುವುದು ಸಂತಸದ ಸಂಗತಿ. ಸತ್ವಯುತ ಬದುಕಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಅಗತ್ಯವಾಗಿವೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಬೆಳಗಾವಿಯ ನ್ಯಾಯಾಲಯಗಳಲ್ಲಿ ಪ್ರಪ್ರಥಮ ಬಾರಿಗೆ ಕನ್ನಡದಲ್ಲಿ ವಾದ ಮಂಡಿಸಿದ ನ್ಯಾಯವಾದಿ ಎಸ್.ಎಂ. ಕುಲಕರ್ಣಿ ಅವರಿಗೆ, ಬೆಳಗಾವಿ ಗಡಿಭಾಗದಲ್ಲಿ ಕನ್ನಡ ಭಾಷೆಯ ನೆಲೆಗಟ್ಟನ್ನು ಬಲಪಡಿಸಲು ಸಲ್ಲಿಸಿದ ಸೇವೆಯನ್ನು ಗುರುತಿಸಿ 'ಕನ್ನಡ ಗಡಿ ತಿಲಕ' ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ. ಭವ್ಯಾ ಅಶೋಕ ಸಂಪಗಾರ ಹಾಗೂ ಶಿವರಾಜ ಅರಳಿ ಅವರಿಗೆ 'ಜನ್ನ ಸನದಿ ಸಾಹಿತ್ಯ ರಾಜ್ಯ ಪ್ರಶಸ್ತಿ' ನೀಡಿ ಗೌರವಿಸಲಾಯಿತು. ಪ್ರಶಸ್ತಿಗಳನ್ನು ಗೋಪಾಲ ಜಿನಗೌಡ ಅವರು ಪ್ರದಾನ ಮಾಡಿದರು.
ಕಾರ್ಯಕ್ರಮದ ಆರಂಭದಲ್ಲಿ ಎ. ಎ. ಸನದಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಪಿ.ಜಿ. ಕೆಂಪನ್ನವರ ಅಭಿನಂದನಾ ನುಡಿಗಳನ್ನಾಡಿದರು. ಸಿ.ಎಂ. ಬೂದಿಹಾಳ ಪ್ರಶಸ್ತಿ ಪತ್ರ ವಾಚನ ಮಾಡಿದರು. ಡಾ. ರಾಮಕೃಷ್ಣ ಮರಾಠೆ ಅಧ್ಯಕ್ಷತೆ ವಹಿಸಿದ್ದರು. ಆಶಾ ಯಮಕನಮರಡಿ ಕಾರ್ಯಕ್ರಮ ನಿರೂಪಿಸಿದರು. ಬಸವರಾಜ ಗಾರ್ಗಿ ವಂದಿಸಿದರು.
ಸಮಾರಂಭದಲ್ಲಿ ಗಣ್ಯರಾದ ಪ್ರೊ. ಶಿವಶಂಕರ ಹಿರೇಮಠ, ಬಿ.ಎಸ್. ಗವಿಮಠ, ಹಮೀದಾ ದೇಸಾಯಿ, ಶಿರೀಶ ಜೋಶಿ, ಹೇಮಾ ಸೋನೊಳ್ಳಿ, ಲಲಿತಾ ಕೋಪರ್ಡೆ, ಪ್ರೇಮಾ ತಾಶೀಲ್ದಾರ್, ಮಧುಕರ ಗುಂಡೆನಟ್ಟಿ, ಬಿ.ಎನ್. ದೇಶಪಾಂಡೆ, ಜಯಂತ ಕುಲಕರ್ಣಿ, ಅಕ್ಬರ್ ಸನದಿ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಹಾಗೂ ಗಣ್ಯರು ಉಪಸ್ಥಿತರಿದ್ದರು.