ತಾಳಿಕೋಟೆ, ಮಹಾರಾಣಾ ಪ್ರತಾಪಸಿಂಹರ ಮೂರ್ತಿ ಪ್ರತಿಷ್ಠಾಪನೆಗೆ ರಜಪೂತ್ ಸಮಾಜದ ಏಳು ಕುಟುಂಬಗಳು ಒಗ್ಗೂಡಿ ಸಂಪೂರ್ಣ ವೆಚ್ಚ ಭರಿಸಿರುವುದು ಸ್ವಾಭಿಮಾನ ಮತ್ತು ಸಮಾಜದ ಸಂಘಟನಾ ಶಕ್ತಿಗೆ ಸಾಕ್ಷಿಯಾಗಿದೆ. ಯಾವುದೇ ಸರ್ಕಾರದ ಅನುದಾನ ಪಡೆಯದೆ, ಶಾಸಕರು ಹಾಗೂ ರಾಜಕಾರಣಿಗಳ ಮನೆ ಬಾಗಿಲಿಗೆ ತೆರಳಿ ದೇಣಿಗೆ ಕೇಳದೆ ಸ್ವಂತ ಸಾಮರ್ಥ್ಯದಿಂದ ಇಂತಹ ಐತಿಹಾಸಿಕ ಕಾರ್ಯ ಮಾಡಿರುವ ರಾಜಪೂತ ಸಮಾಜದ ಕಾರ್ಯ ಶ್ಲಾಘನೀಯವಾಗಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದಲ್ಲಿ ಭಾನುವಾರ ನಡೆದ ಮಹಾರಾಣಾ ಪ್ರತಾಪಸಿಂಹರ ಕಂಚಿನ ಮೂರ್ತಿ ಅನಾವರಣ ನಂತರ ಎಸ್.ಕೆ.ಕಾಲೇಜ್ ಮೈಧಾನದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಮೂರ್ತಿ ಪ್ರತಿಷ್ಠಾಪನೆಗೆ ರಾಜಕಾರಣಿಗಳಿಂದ ಹಣ ಪಡೆದು ನಂತರ ಸಣ್ಣಪುಟ್ಟ ವಿಚಾರಗಳಿಗೂ ಅಸಮಾಧಾನ ವ್ಯಕ್ತಪಡಿಸುವ ಬದಲು, ಸಮಾಜದವರೇ ಒಗ್ಗಟ್ಟಿನಿಂದ ಹಣ ಸಂಗ್ರಹಿಸಿ ಸ್ವಾಭಿಮಾನದಿಂದ ಕಾರ್ಯ ನೆರವೇರಿಸಿರುವುದು ಶ್ಲಾಘನೀಯ. ಇನ್ನು ಮುಂದೆ ಯಾವುದೇ ಸಮಾಜದವರು ತಮ್ಮ ರಾಷ್ಟ್ರಪುರುಷರ ಮೂರ್ತಿಗಳನ್ನು ಸ್ಥಾಪಿಸಲು ಮುಂದಾದಾಗ ತಾಳಿಕೋಟೆಗರ ಈ ಕಾರ್ಯವನ್ನು ಮಾದರಿಯಾಗಿಟ್ಟುಕೊಳ್ಳಬೇಕು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಹಾರಾಣಾ ಪ್ರತಾಪಸಿಂಹರನ್ನು ಕೇವಲ ಒಂದು ಸಮುದಾಯದ ನಾಯಕನಾಗಿ ನೋಡದೆ, ಭಾರತದ ಸನಾತನ ಧರ್ಮ, ಸಂಸ್ಕೃತಿ ಮತ್ತು ಸ್ವಾಭಿಮಾನದ ರಕ್ಷಣೆಗಾಗಿ ಹೋರಾಡಿದ ಮಹಾನ್ ವೀರನಾಗಿ ಸ್ಮರಿಸಬೇಕು. ಅವರ ಇತಿಹಾಸವನ್ನು ಜಾತ್ಯತೀತತೆಯ ಚರ್ಚೆಯೊಂದಿಗೆ ಗೊಂದಲಗೊಳಿಸದೆ, ಅವರು ದೇಶಕ್ಕಾಗಿ ಮಾಡಿದ ತ್ಯಾಗ, ಹೋರಾಟ ಮತ್ತು ಶೌರ್ಯವನ್ನು ಮುಂದಿನ ಪೀಳಿಗೆಗೆ ತಿಳಿಸಬೇಕೆಂದ ಅವರು ಇತಿಹಾಸದಲ್ಲಿ ಮಹಾರಾಣಾ ಪ್ರತಾಪಸಿಂಹ ಹಾಗೂ ಛತ್ರಪತಿ ಶಿವಾಜಿ ಮಹಾರಾಜರಂತಹ ವೀರರು ದೇಶದ ಸ್ವಾಭಿಮಾನ ಮತ್ತು ಸಂಸ್ಕೃತಿಯ ರಕ್ಷಣೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಮೊಘಲ್ ಸಾಮ್ರಾಜ್ಯದ ವಿರುದ್ಧ ಹೋರಾಡಿದ ಮಹಾರಣಾಪ್ರತಾಪಸಿಂಹ್ ಮಹಾರಾಜರು ಹಾಗೂ ಹಳದಿಘಾಟಿ ಯುದ್ಧದಲ್ಲಿ ಅಪಾರ ಶೌರ್ಯ ಪ್ರದರ್ಶಿಸಿದ್ದು ಯುವಜನರಿಗೆ ಸ್ಫೂರ್ತಿಯಾಗಬೇಕು ಎಂದರು.
ಗುರು ಗೋವಿಂದ ಸಿಂಗ್ ಅವರ ತ್ಯಾಗ ಮತ್ತು ಧರ್ಮರಕ್ಷಣೆಯ ಹೋರಾಟವನ್ನು ಸ್ಮರಿಸಿದ ಅವರು, ದೇಶದ ಇತಿಹಾಸದಲ್ಲಿ ಅನೇಕ ಮಹನೀಯರು ತಮ್ಮ ಜೀವನವನ್ನೇ ಸಮಾಜ ಮತ್ತು ಸಂಸ್ಕೃತಿಯ ರಕ್ಷಣೆಗಾಗಿ ಸಮರ್ಪಿಸಿದ್ದಾರೆ. ಇಂತಹ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಇಂದಿನ ಯುವಜನರು ಅಳವಡಿಸಿಕೊಳ್ಳಬೇಕು ದೇಶದ ಪ್ರಸ್ತುತ ಪರಿಸ್ಥಿತಿಯಲ್ಲಿ ಸಮಾಜದ ಒಗ್ಗಟ್ಟು, ಜಾಗೃತಿ ಮತ್ತು ಸಂಘಟಿತ ಶಕ್ತಿ ಅತ್ಯಂತ ಅಗತ್ಯವಾಗಿದೆ. ರಾಮಮಂದಿರ ನಿರ್ಮಾಣದ ನಂತರವೂ ಹಿಂದೂ ಸಮಾಜ ತನ್ನ ಸಂಘಟನಾ ಶಕ್ತಿಯನ್ನು ಕಾಪಾಡಿಕೊಳ್ಳಬೇಕು. ದೇಶದ ಏಕತೆ ಮತ್ತು ಸಂಸ್ಕೃತಿಯ ರಕ್ಷಣೆಗೆ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಇಂತಹ ಮಹಾನ್ ವೀರರ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಮಹಾರಾಣಾಪ್ರತಾಪರು ಛತ್ರಪತಿ ಶಿವಾಜಿ ಮಹಾರಾಜರು ಹುಟ್ಟಿಲ್ಲದಿದ್ದರೆ ನಮ್ಮ ದೇಶದ ಪರಸ್ಥಿತಿ ಹೇಗಿರತಿತ್ತು ಎಂಬುದನ್ನು ಅವಲೋಖಿಸಿಕೊಳ್ಳಬೇಕೆಂದು ಹೇಳಿದರು.
ಇನ್ನೋರ್ವ ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ ಅವರು ಮಾತನಾಡಿ ಮಹಾರಾಣಾ ಪ್ರತಾಪ್ ಅವರು ತಮ್ಮ ಜೀವನದ ಸರ್ವಸ್ವವನ್ನೇ ತ್ಯಾಗ ಮಾಡಿ ಸ್ವಾಭಿಮಾನ, ಶೌರ್ಯ ಮತ್ತು ದೇಶಪ್ರೇಮದ ಮಹತ್ವವನ್ನು ಜಗತ್ತಿಗೆ ಸಾರಿದ ಮಹಾನ್ ವೀರರು. ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ತಾಳಿಕೋಟೆಯ ರಾಜಪೂತ ಸಮಾಜದ ಯುವಕರು ಹಾಗೂ ಸಮುದಾಯದ ಜನರು ಒಗ್ಗಟ್ಟಿನಿಂದ, ಸ್ವಾಭಿಮಾನದಿಂದ ಹಣ ಸಂಗ್ರಹಿಸಿ ಭವ್ಯ ಕಂಚಿನ ಮೂರ್ತಿ ನಿರ್ಮಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಇಂದು ನಾವು ಸ್ಮರಿಸುತ್ತಿರುವುದು ಕೇವಲ ಒಬ್ಬ ರಾಜನನ್ನಲ್ಲ; ಸ್ವಾಭಿಮಾನಕ್ಕಾಗಿ ತನ್ನ ಸರ್ವಸ್ವವನ್ನೇ ತ್ಯಾಗ ಮಾಡಿದ ಮಹಾನ್ ತ್ಯಾಗಿಯನ್ನು. ಸುಮಾರು ನಾಲ್ಕು ಶತಮಾನಗಳು ಕಳೆದರೂ ಪ್ರತಿಯೊಬ್ಬ ಭಾರತೀಯನ ಮನದಲ್ಲಿ ದೇಶಾಭಿಮಾನ ಮೂಡಿಸುವ ಶಕ್ತಿ ಮಹಾರಾಣಾ ಪ್ರತಾಪ್ ಅವರ ಚರಿತ್ರೆಗಿದೆ. ಮೇವಾಡದ ದೊರೆ, ಹಿಂದೂ ಸಿಂಹ, ಮಹಾವೀರ ಮಹಾರಾಣಾ ಪ್ರತಾಪ್ ಅವರ ಮೂರ್ತಿಯನ್ನು ತಾಳಿಕೋಟಿಯಲ್ಲಿ ಅನಾವರಣಗೊಳಿಸಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಕ್ಷಣವಾಗಿದೆ ಎಂದರು. ಮಹಾರಾಣಾ ಪ್ರತಾಪ್ ಅವರ ಮೂರ್ತಿಯನ್ನು ಮಾಜಿ ಕೇಂದ್ರ ಸಚಿವ ಹಾಗೂ ಸಂಸದ ಅನುರಾಗ್ ಸಿಂಗ್ ಠಾಕೂರ್ ಅವರಿಂದಲೇ ಅನಾವರಣಗೊಳಿಸಬೇಕು ಎಂಬುದು ರಾಜಪೂತ ಸಮಾಜದ ಮುಖಂಡರ ಆಶಯವಾಗಿತ್ತು. ಈ ಕುರಿತು ಸಮಾಜದ ಮುಖಂಡರು ತಮ್ಮನ್ನು ಭೇಟಿಯಾಗಿ ಮನವಿ ಮಾಡಿದ ನಂತರ ಕಳೆದ ಒಂದು ವರ್ಷದಿಂದ ನಿರಂತರ ಪ್ರಯತ್ನ ನಡೆಸಲಾಗಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಮೂಲಕವೂ ಸಂಪರ್ಕಿಸಿ ಆಹ್ವಾನಿಸಲಾಗಿತ್ತು. ದೆಹಲಿಯಿಂದ ದೂರದ ಸಣ್ಣ ನಗರವಾದ ತಾಳಿಕೋಟಿಗೆ ಅನುರಾಗ್ ಸಿಂಗ್ ಠಾಕೂರ್ ಅವರು ಆಗಮಿಸಿ ಮೂರ್ತಿ ಅನಾವರಣ ಮಾಡಿರುವುದು ಇಡೀ ಸಮಾಜಕ್ಕೆ ಸಂತಸ ಮತ್ತು ಹೆಮ್ಮೆಯ ಸಂಗತಿಯಾಗಿದೆ ಎಂದರು.