ಘಟಪ್ರಭಾ : ಕಲ್ಲೋಳಿ ಪಟ್ಟಣದ ಶ್ರೀ ಸತ್ಯಸಾಯಿ ಸೇವಾ ಸಮಿತಿಯು ಕಳೆದ 41 ವರ್ಷಗಳಿಂದ ನಿರಂತರವಾಗಿ ವಿವಿಧ ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ. ಕಲ್ಲೋಳಿ ಪಟ್ಟಣವು ನಿಜಕ್ಕೂ ದೇವರ ಕಲ್ಲೋಳಿಯಾಗಿದ್ದು, ಇಲ್ಲಿ ನಿರಂತರವಾಗಿ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳು ನಡೆಯುತ್ತಿರುವುದು ನಮ್ಮ ಸೌಭಾಗ್ಯ ಎಂದು ರಾಜ್ಯಸಭೆಯ ಮಾಜಿ ಸಂಸದ ಈರಣ್ಣ ಕಡಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕಲ್ಲೋಳಿ ಪಟ್ಟಣದ ಪ್ರಶಾಂತಿ ಕುಟೀರದಲ್ಲಿ ಅಕ್ಟೋಬರ್ 25ರಂದು ಭಾನುವಾರ ನಡೆದ ಶ್ರೀ ಸತ್ಯಸಾಯಿ ಸೇವಾ ಸಮಿತಿಯ 41ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಸತ್ಯಸಾಯಿ ಮಂದಿರದ ಕಾರ್ಯಚಟುವಟಿಕೆಗಳಿಂದ ಅನೇಕ ಜನರು ವ್ಯಸನಮುಕ್ತರಾಗಿ, ಬಾಬಾರವರ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸತ್ಯಸಾಯಿ ಬಾಬಾರವರ ನಡೆ-ನುಡಿ ಹಾಗೂ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಉತ್ತಮ ಸಮಾಜ ನಿರ್ಮಾಣದತ್ತ ಹೆಜ್ಜೆ ಇಡಬೇಕು ಎಂದು ಕರೆ ನೀಡಿದರು.
ಮುಖ್ಯ ಪ್ರವಚನಕಾರರಾಗಿ ಆಗಮಿಸಿದ್ದ ಅಮಲಜರಿ ಮತ್ತು ಮೆಳ್ಳಿಕೇರಿ ಆಶ್ರಮದ ಪೂಜ್ಯ ಜ್ಞಾನಮಯಾನಂದ ಮಹಾಸ್ವಾಮಿಗಳು ಪ್ರವಚನ ನೀಡಿ, ಶ್ರೀ ಸತ್ಯಸಾಯಿ ಸೇವಾ ಸಮಿತಿಯು ನಿರಂತರವಾಗಿ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸತ್ಯಸಾಯಿ ಸೇವಾ ಸಮಿತಿಯ ಬೆಳಗಾವಿ ಜಿಲ್ಲಾ ಅಧ್ಯಕ್ಷ ವಸಂತ ಬಾಳಿಗಾ ವಹಿಸಿದ್ದರು.
ವಾರ್ಷಿಕೋತ್ಸವದ ಅಂಗವಾಗಿ ಓಂಕಾರ, ಸುಪ್ರಭಾತ, ವೇದಘೋಷ, ನಗರ ಸಂಕೀರ್ತನೆ ಹಾಗೂ ಸಾಯಿ ಸತ್ಯನಾರಾಯಣ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಹಿರಿಯರಾದ ಸುರೇಶ ಕಬ್ಬೂರ, ಸಮಿತಿಯ ಸಂಚಾಲಕ ಶ್ರೀಶೈಲ ತುಪ್ಪದ, ಸಾಯಿಕಿರಣ ಪಟ್ಟಣಶೆಟ್ಟಿ, ಲೋಹಿತ ಕಲಾಲ, ಧರೇಪ್ಪ ಖಾನಗೌಡ್ರ, ಹಣಮಂತ ಖಾನಗೌಡ್ರ, ದೇವೇಂದ್ರ ಬಡಿಗೇರ,ಭೀಮಪ್ಪ ಬಾಗೇವಾಡಿ,ಸಿ ಎಂ ಕಟಗಿ,ಮೂಡಲಗಿ,ಗೋಕಾಕ,ಮಹಾಲಿಂಗಪುರ ಸೇರಿದಂತೆ ಅನೇಕ ಸತ್ಯಸಾಯಿ ಸೇವಾ ಸಮಿತಿ ಸದಸ್ಯರು, ಸತ್ಯಸಾಯಿ ಭಕ್ತರು, ಶಾಲಾ ಮಕ್ಕಳು ಹಾಗೂ ತಾಯಂದಿರು ಉಪಸ್ಥಿತರಿದ್ದರು.