ಮಂಡ್ಯ, ಜುಲೈ.06: ಮಂಡ್ಯದಲ್ಲಿ ಜನತಾ ದರ್ಶನ ಪಾಲಿಟಿಕ್ಸ್ ಶುರುವಾಗಿದೆ. ನಿನ್ನೆ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಜನತಾ ದರ್ಶನ ಕಾರ್ಯಕ್ರಮ ಮಾಡಿದ್ದರು. ಇಂದು ಸಚಿವ ಎನ್. ಚಲುವರಾಯಸ್ವಾಮಿ ಅವರು ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಕೇಂದ್ರ ಸಚಿವ ಕುಮಾರಸ್ವಾಮಿ ಜನತಾ ದರ್ಶನ ಬೆನ್ನಲ್ಲೆ, ರಾಜ್ಯ ಸಚಿವ ಚಲುವರಾಯಸ್ವಾಮಿರಿಂದಲೂ ಜನತಾ ದರ್ಶನ ನಡೆಯಲಿದೆ.
ಹನುಮ ಧ್ಚಜ ವಿವಾದ ನಡೆದ ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಜನತಾ ದರ್ಶನ ಕಾರ್ಯಕ್ರಮ ನಡೆಯಲಿದೆ. ಮಂಡ್ಯ ಶಾಸಕ ಗಣಿಗ ರವಿಕುಮಾರ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಇಂದಿನ ಕಾರ್ಯಕ್ರಮಕ್ಕೆ ಹೆಚ್ಚಿನ ಜನರನ್ನು ಸೇರಿಸಲು ಕೈ ನಾಯಕರು ತಯಾರಿ ನಡೆಸಿದ್ದಾರೆ. ನಿನ್ನೆ ನಡೆದ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಅವರ ಜನತಾ ದರ್ಶನಕ್ಕೆ ರಾಜ್ಯ ಸರ್ಕಾರ ಜಿಲ್ಲೆಯ ಅಧಿಕಾರಿ ವರ್ಗ ಕಳಿಸಿರಲಿಲ್ಲ. ಆದರೆ ಇಂದಿನ ಜನತಾ ದರ್ಶನಕ್ಕೆ 53 ಇಲಾಖೆಗಳ ಜಿಲ್ಲೆಯ ಅಧಿಕಾರಿಗಳು ಖುದ್ದು ಹಾಜರಿರಲು ಸೂಚನೆ ನೀಡಿದೆ. ಕುಮಾರಸ್ವಾಮಿ ಅವರಿಗೆ ಟಕ್ಕರ್ ಕೊಡಲು ಕೈ ನಾಯಕರು ಮುಂದಾಗಿದ್ದಾರೆ.