ಬೆಳಗಾವಿ ಜುಲೈ15: ಹನ್ನೆರಡನೆಯ ಶತಮಾನದ ಶರಣರ ವಚನಗಳು ಸಮಾಜಕ್ಕೆ ನೈತಿಕ ಶಿಕ್ಷಣವನ್ನು ನೀಡುತ್ತವೆ. ಮನದ ಕಲ್ಮಶವನ್ನು ನಿವಾರಿಸಿ ಜ್ಞಾನವನ್ನು ಸ್ಫುರಿಸುವಲ್ಲಿ ವಚನಗಳ ಕೊಡುಗೆ ಅನನ್ಯವಾಗಿದೆ ಎಂದು ಸಾಹಿತಿ ಇಂಗ್ಲೀಷ ಪ್ರಾಧ್ಯಾಪಕಿ ಪ್ರೊ ಜಯಶ್ರೀ ಅಬ್ಬಿಗೇರಿ ಹೇಳಿದರು.
ಅವರು ಬೆಳಗಾವಿ ಶಿವಬಸವನಗರದ ಲಿಂಗಾಯತ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯು ಹಮ್ಮಿಕೊಂಡಿದ್ದ ಅಮವಾಸ್ಯೆ ಅನುಭಾವ ಗೋಷ್ಠಿಯಲ್ಲಿ ವಚನಗಳಲ್ಲಿ ವ್ಯಕ್ತಿತ್ವ ವಿಕಸನ ಪರಿಕಲ್ಪನೆ ವಿಷಯ ಕುರಿತು ಮಾತನಾಡಿದರು.
ಶರಣರ ವಚನಗಳಲ್ಲಿ ಜೀವನ ಮೌಲ್ಯ ಅಡಗಿದೆ. ಅತ್ಯಂತ ಸರಳವಾಗಿ ಬದುಕಿನ ಸೂತ್ರಗಳನ್ನು ಸೂತ್ರಿಕರಿಸಿದವರು ಶರಣರು. ಬಸವಣ್ಣನವರ ಕಳಬೇಡ ಕೊಲಬೇಡ ಹುಸಿಯನುಡಿಯಲು ಬೇಡ ವಚನ ಮಾನವನ ಸುಂದರ ಬದುಕಿಗೆ ಬಹುದೊಡ್ಡ ವ್ಯಾಖ್ಯಾನವಾಗಿದೆ. ನಮ್ಮ ಅಂತರಂಗ ಶುದ್ಧಿ ಹಾಗೂ ಬಹಿರಂಗ ಶುದ್ಧಿಗೆ ಇನ್ನೇನು ಬೇಕು. ಒತ್ತಡದ ಬದುಕಿನಲ್ಲಿ ನಡೆಯುತ್ತಿರುವ ನಮಗೆ ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡಿದ್ದೇವೆ. ಸಂಯಮವನ್ನು ಕಳೆದುಕೊಂಡು ಬದುವಂತಾಗಿರುವ ಈ ಸಮಯದಲ್ಲಿ ಸಮಾಧಾನ, ವ್ಯವಧಾನ, ಅವಧಾನಗಳನ್ನು ಅತ್ಯಂತ ಮಾರ್ಮಿಕವಾಗಿ ಶರಣರು ತಿಳಿಸಿಕೊಟ್ಟಿದ್ದಾರೆ. ಅವರು ಹೇಳಿರುವ ಕಾಯಕ ದಾಸೋಹ ಪ್ರಸಾದ ಸೂತ್ರಗಳು ಜೀವನಕ್ಕೆ ಅಡಿಪಾಯವಾಗಿವೆ. ಕರ್ಮಸಿದ್ಧಾಂತವನ್ನು ಅವರು ಹೇಳಿದ ರೀತಿ ನಮ್ಮ ಜೀವನಕ್ಕೆ ಸೋಪಾನವಾಗಿದೆ. ವಚನಗಳನ್ನು ಅಧ್ಯಯನಿಸಿ ನಮ್ಮ ಜೀವನವನ್ನು ರೂಪಿಸಿಕೊಳ್ಳಬೇಕೆಂದು ಹಲವಾರು ಉದಾಹರಣೆಗಳ ಮೂಲಕ ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಅವರು ಮಾತನಾಡಿ, ಶರಣರ ವಚನಗಳಲ್ಲಿ ಎಲ್ಲವೂ ಅಡಗಿದೆ. ನಿಜವಾದ ಜೀವನದರ್ಶನವನ್ನು ಅಲ್ಲಿ ಕಾಣಬಹುದು. ಅವು ಅನುಭಾವದ ಮಹಾಬೆಳಕಾಗಿವೆ. ನುಡಿದಂತೆ ನಡೆದವರು ಶರಣರು. ನಮ್ಮ ನಡೆ ನುಡಿ ಶುದ್ಧವಾಗಿದ್ದರೆ ಬದುಕು ಸುಂದರಗೊಳ್ಳುತ್ತದೆ. ಮಹಾಸಭೆಯು ಇಂತಹ ರಚನಾತ್ಮಕವಾದ ಉಪನ್ಯಾಸಗಳನ್ನು ಸಂಯೋಜಿಸಿ ಸಮಾಜವನ್ನು ಸಂಘಟಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಸಾನ್ನಿಧ್ಯವನ್ನು ವಹಿಸಿದ್ದ ಕಾರಂಜಿಮಠದ ಪೂಜ್ಯ ಗುರುಸಿದ್ಧ ಮಹಾಸ್ವಾಮೀಜಿಯವರು ಆಶೀರ್ವಚನ ನೀಡುತ್ತಾ, ಮನೋಕ್ಲೇಶನಗಳನ್ನು ನಿವಾರಿಸುವ ಶಕ್ತಿ ವಚನಗಳಲ್ಲಿ ಅಡಗಿದೆ. ಅವು ಕನ್ನಡದ ಉಪನಿಷತ್ತುಗಳು. ಇಂದು ಜೀವನ ಬಹಳ ಸಂಕುಚಿತಗೊಳ್ಳುತ್ತಿದೆ. ಹತ್ತುಹಲವಾರ ಜಂಜಡಗಳಲ್ಲಿ ಕಾಲವನ್ನು ಕಳೆಯುತ್ತಿದ್ದೇವೆ. ಅವೆಲ್ಲವುಗಳಿಗೆ ಉತ್ತರವೆಂಬಂತೆ ಇರುವ ವಚನಗಳು ನಮಗೆ ಮನೋಔಷಧಿಯಾಗಿವೆ. ಪ್ರಾಂಜಲಮನಸ್ಸಿನಿಂದ ಅವುಗಳನ್ನು ಓದಿವಂತಾಗಬೇಕು. ಯುವ ಜನಾಂಗವು ಈ ಎಡೆಗೆ ಹೊರಳಬೇಕು. ಮಹಾಸಭೆಯ ಕಾರ್ಯ ಸ್ತುತ್ಯಾರ್ಹವೆಂದು ನುಡಿದರು.
ಇದೇ ಸಂದರ್ಭದಲ್ಲಿ ವಚನೋತ್ಸವವನ್ನು ಯಶಸ್ವಿಯಾಗಿ ಸಂಘಟಿಸಿದ ಜೆಎನ್‌ಎಂಸಿ ಸಹಪ್ರಾಧ್ಯಾಪಕರಾದ ಡಾ.ಅವಿನಾಶ ಕವಿಯವರನ್ನು ಸತ್ಕರಿಸಲಾಯಿತು
ಮಹಾದೇವಿ ಪಾಟೀಲ ವಚನ ಪ್ರಾರ್ಥನೆ ಮಾಡಿದರು. ಸೋಮಲಿಂಗ ಮಾವಿನಕಟ್ಟಿ, ಪಾರ್ವತಿ ತುಪ್ಪದ ಅತಿಥಿಗಳನ್ನು ಪರಿಚಯಿಸಿದರು. ಸವಿತಾ ವಿರೂಪಾಕ್ಷಿ ವಚನ ವಿಶ್ಲೇಷಣೆ ಮಾಡಿದರು. ಮಹಾದೇವಿ ಅಜವಾನ ನಿರೂಪಿಸಿದರು. ಆರ್.ಪಿ.ಪಾಟೀಲ ವಂದಿಸಿದರು. ಎ.ಬಿ.ಮಡಿವಾಳರ ದಾಸೋಹ ಸೇವೆಗೈದರು.
ಡಾ.ಎಚ್.ಬಿ.ರಾಜಶೇಕರ, ಪ್ರಸಾದ ಹಿರೇಮಠ, ಬಾಲಚಂದ್ರ ಬಾಗಿ, ವಾಯ್.ಬಿ.ಮೆಣಸಿನಕಾಯಿ, ವ್ಹಿ.ಕೆ.ಪಾಟೀಲ, ವಿದ್ಯಾ ಹುಂಡೇಕರ, ಸರೋಜನಿ ನಿಶಾನದಾರ, ಜ್ಯೋತಿ ಬಾದಾಮಿ, ಡಾ.ಗುರುದೇವಿ ಹುಲೆಪ್ಪನವರಮಠ, ಶೈಲಜಾ ಭಿಂಗೆ, ಶೈಲಜಾ ಸಂಸುದ್ದಿ ಮೊದಲಾದವರು ಉಪಸ್ಥಿತರಿದ್ದರು.