ಕೊಪ್ಪಳ: ಬಲ್ಡೋಟ ಕಾರ್ಖಾನೆ ತೊಲಗಿಸಿ ಧರಣಿ ವೇದಿಕೆಯಲ್ಲಿ 257ನೇ ದಿನದ ಧರಣಿಯಲ್ಲಿ ಜುಲೈ 21ರ ಬಸಾಪುರ ಕೆರೆ ಹೋರಾಟ ದೊಡ್ಡ ಪ್ರಮಾಣದಲ್ಲಿ ಯಶಸ್ವಿಗೊಳಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ.
ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯಿಂದ ಜಿಲ್ಲಾಧಿಕಾರಿಗಳು ಇದುವರೆಗೆ ಬಸಾಪುರ ಕೆರೆ ವಿಚಾರದಲ್ಲಿ ಲಿಖಿತ ರೂಪದಲ್ಲಿ ತಮ್ಮ ನಿಲುವನ್ನು ಪ್ರಕಟಿಸಿಲ್ಲ. ಕೂಡಲೇ ಹೈಕೋರ್ಟ್ ಆದೇಶಕ್ಕೆ ಸಂಬಂಧಿಸಿ ಕೆರೆ ಬಲ್ಡೋಟ ಕಂಪನಿಯಿಂದ ಮುಕ್ತವಾಗಿ ಇಡಲಾಗುತ್ತದೆ ಅಥವಾ ಇಲ್ಲವೆಂದು ಲಿಖಿತವಾಗಿ ಆದೇಶ ಮಾಡಬೇಕು. ರಾಜಕಾರಣಿಗಳು ಇಂತಹ ಜ್ವಲಂತ ಸಮಸ್ಯೆ ಬಗ್ಗೆ ಚಕಾರ ಎತ್ತುತ್ತಿಲ್ಲ. ಈ ಸಡಿಲಿಕೆಯಿಂದ ಕಾರ್ಖಾನೆಗಳು ರಾಜಾರೋಷವಾಗಿ ಮಾಲಿನ್ಯ ಮಾಡುತ್ತಾ ಜನರನ್ನು ಬೆದರಿಸುತ್ತಿವೆ.
ಈ ಭೀಕರ ಬರದ ಸಂದರ್ಭದಲ್ಲಿ ಜಾನುವಾರುಗಳು ಬಸಾಪುರ ಕೆರೆ ನೀರು ಕುಡಿಯಲು ಅವಕಾಶವಿಲ್ಲ. ಬಲ್ಡೋಟ ತನ್ನ ಬಂಡವಾಳ ಹೂಡಿಕೆಯ ದರ್ಪ ಮುಂದುವರೆಸಿದರೆ ಬಿಡದಿ ಮಹಿಳೆಯರು ಇಲ್ಲಿ ಹುಟ್ಟುತ್ತಾರೆ. ಕೊಪ್ಪಳ-ಭಾಗ್ಯನಗರ ಲಕ್ಷಗಟ್ಟಲೆ ಜನರು ಸುಮ್ಮನೆ ಕೂಡಲು ಆಗದು. ಇದರ ನಿಜಾಂಶ ಅರಿತು ತನ್ನ ಬೃಹತ್ ಬಂಡವಾಳ ಹೂಡಿಕೆಯಿಂದ ಹಿಂದೆ ಸರಿಯಬೇಕು. ಈಗಿರುವ ಎಂ.ಎಸ್.ಪಿ.ಎಲ್ ಪೆಲ್ಲೆಟ್ ಘಟಕದ ಮಾಲಿನ್ಯವೇ ನಿಯಂತ್ರಣದಲ್ಲಿ ಇಲ್ಲ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಆಂದೋಲನಕ್ಕೆ ಜನರು ಸಿದ್ಧರಾಗಬೇಕಾಗುತ್ತದೆ ಎಂದು ಹೋರಾಟದ ವೇದಿಕೆ ಮೂಲಕ ಕಾರ್ಖಾನೆಗಳಿಗೆ ಎಚ್ಚರಿಕೆ ನೀಡಲಾಯಿತು.
ಧಣಿಯಲ್ಲಿ ಪ್ರಕಾಶಕ ಡಿ.ಎಂ.ಬಡಿಗೇರ್, ರವಿ ಕಾಂತನವರ, ಮೂಕಪ್ಪ ಮೇಸ್ತ್ರಿ ಬಸಾಪುರ, ಶಂಭುಲಿಂಗಪ್ಪ ಹರಗೇರಿ, ರಾಜಶೇಖರ ಏಳುಭಾವಿ, ವೈ.ಎಚ್ ಹಳ್ಳಿಕೇರಿ, ವೆಂಕಣ್ಣಾಚಾರ ಕಟ್ಟಿ, ಯಮನೂರಪ್ಪ ಹಾಲಳ್ಳಿ ವಿಶಾಲಾಕ್ಷಿ ಯರಿಹಂಚಿನಾಳ, ಅಭಿಜಿತ್ ಅಂಡಗಿ, ಶಿವಪ್ಪ ಹಲಗೇರಿ, ಎಸ್ ಮಹಾದೇವಪ್ಪ ಮಾವಿನಮಡು, ಸುಭಾನ ಸಾಬ್ ನೀರಲಗಿ, ಗ್ಯಾನಪ್ಪ ಹುಬ್ಬಳ್ಳಿ ಗೋತಗಿ, ಗವಿಸಿದ್ದಪ್ಪ ಮಾಲಿಪಾಟೀಲ್ ಇನ್ನು ಅನೇಕರು ಪಾಲ್ಗೊಂಡರು.