ಕೊಪ್ಪಳ ಜುಲೈ ೧೫: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಛೇರಿ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ಮೌಲಾನಾ ಆಜಾದ್ ಪಬ್ಲಿಕ್ ಶಾಲೆ, ದಿಡ್ಡಿಕೇರಿಯಲ್ಲಿ “ಡೆಂಗ್ಯೂ ವಿರೋಧಿ ಮಾಸಾಚರಣೆ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೇವಮ್ಮ ಇವರು ಮಾತನಾಡಿ, ಈಡಿಸ್ ಜಾತಿಯ ಸೋಂಕಿತ ಸೊಳ್ಳೆ ಕಚ್ಚುವುದರಿಂದ ಡೆಂಗ್ಯೂ ಹರಡುತ್ತದೆ. ನೀರಿನಲ್ಲಿ ಸೋಂಕಿತ ಈಡಿಸ್ ಜಾತಿಯ ಸೊಳ್ಳೆಗಳು ಮೊಟ್ಟೆಗಳನ್ನಿಟ್ಟು ಸಂತಾನಾಭಿವೃದ್ಧಿ ಮಾಡುತ್ತವೆ. ಮನುಷ್ಯರಿಗೆ ಕಚ್ಚುವುದರಿಂದ ಈ ಖಾಯಿಲೆ ಹರಡುತ್ತದೆ. ಈ ರೋಗದ ಲಕ್ಷಣಗಳು ವಿಪರೀತ ಜ್ವರ, ತಲೆನೋವು, ವಾಂತಿ, ಕಣ್ಣಿನ ಹಿಂಭಾಗದಲ್ಲಿ ನೋವು, ಮೈಮೇಲೆ ಬಿಲ್ಲೆ ಆಕಾರದ ಕೆಂಪು ಗಂಧೆಗಳು, ಕಪ್ಪು ಮಲವಿಸರ್ಜನೆ, ವಸಡುಗಳಲ್ಲಿ ರಕ್ತಸ್ರಾವ ಇಂತಹ ಲಕ್ಷಣಗಳಿದ್ದರೆ ತಮ್ಮ ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ರಕ್ತ ಪರೀಕ್ಷೆ ಮಾಡಿಸಿ, ಚಿಕಿತ್ಸೆ ಪಡೆದುಕೊಳ್ಳಬೇಕು ಅಥವಾ ಆರೋಗ್ಯ ಸಿಬ್ಬಂದಿಗಳನ್ನು ಭೇಟಿ ಮಾಡಿ. ಯಾವುದೇ ಕಾರಣಕ್ಕೂ ಜ್ವರದ ಬಗ್ಗೆ ನಿರ್ಲಕ್ಷತನ ಮಾಡಬಾರದು. ಆದ್ದರಿಂದ ಶಾಲಾ ವಿದ್ಯಾರ್ಥಿಗಳಾದ ತಾವು ತಮ್ಮ ಶಾಲೆಗಳಲ್ಲಿ, ಮನೆಗಳಲ್ಲಿ, ನೀರು ಶೇಖರಿಸುವ ಡ್ರಮ್, ಬ್ಯಾರಲ್, ಸಿಮೆಂಟ್ ತೊಟ್ಟಿ, ಕಲ್ಲಿನ ದೋಣಿ ಇನ್ನಿತರ ನೀರು ಸಂಗ್ರಹ ಪರಿಕರಗಳನ್ನು ವಾರದಲ್ಲಿ ೨ ಬಾರಿ ಸ್ವಚ್ಚವಾಗಿ ತೊಳೆದು, ಬಿಸಿಲಿನಲ್ಲಿ ಒಣಗಿಸಿ ಪುನಃ ನೀರು ತುಂಬಬೇಕು. ನೀರಿನ ಸಲಕರಣೆಗಳಿಗೆ ಸೊಳ್ಳೆ ಹೋಗದಂತೆ ಭದ್ರವಾಗಿ ಮುಚ್ಚಳದಿಂದ ಮುಚ್ಚಬೇಕು, ಸಾಯಂಕಾಲ ವೇಳೆ ಮನೆಯ ಮುಂದೆ ಬೇವಿನ ಸೊಪ್ಪಿನ ಹೊಗೆ ಹಾಕಬೇಕು. ಸೊಳ್ಳೆ ಕಡಿತದಿಂದ ದೂರವಿರಲು ವೈಯಕ್ತಿಕ ರಕ್ಷಣೆ ಮಾಡಿಕೊಳ್ಳಬೇಕು. ಮನೆಯ ಸುತ್ತ-ಮುತ್ತಲೂ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಲಾರ್ವಾ ನಾಶಕ್ಕಾಗಿ ಸ್ವಚ್ಚಗೊಳಿಸತ್ತಿರಬೇಕು. ಆರೋಗ್ಯ ಇಲಾಖೆ ಸಿಬ್ಬಂದಿಗಳು ಮತ್ತು ಆಶಾ ಕಾರ್ಯಕರ್ತೆಯರು ತಮ್ಮ ಮನೆಗೆ ಭೇಟಿ ನೀಡಿದಾಗ ಸಹಕರಿಸಿ, ಕೈಜೋಡಿಸಬೇಕೆಂದು ತಿಳಿಸಿದರು. “ಡೆಂಗ್ಯೂ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ” ತಮ್ಮ ಮನೆಯ ಸುತ್ತ-ಮುತ್ತ ಘನ ತ್ಯಾಜ್ಯ ವಸ್ತುಗಳಾದ ಟೈರ್, ಒರಳುಕಲ್ಲು, ತೆಂಗಿನಚಿಪ್ಪು, ಒಡೆದ ಪ್ಲಾಸ್ಟಿಕ್ ಬಕೆಟ್ ಇತ್ಯಾದಿಗಳನ್ನು ಮನೆಯ ಮೇಲೆ ಮತ್ತು ಅಕ್ಕ-ಪಕ್ಕದಲ್ಲಿ ಬಿಸಾಡಬಾರದು. ಸ್ವಚ್ಚತೆ ಕಾಪಾಡಬೇಕು ಶಾಲಾ ಆವರಣದಲ್ಲಿ ಸೊಳ್ಳೆಗಳಿಂದ ಮುಕ್ತಿ ಹೊಂದಲು “ಈಡಿಸ್ ಸೊಳ್ಳೆ ಉತ್ಪತ್ತಿ ರಹಿತ ಆವರಣ” ಹಾಗೂ “ಪ್ರತಿ ಶುಕ್ರವಾರ ಡೆಂಗಿ ನಿಯಂತ್ರಣ ಅಭಿಯಾನ”ದ ಅಂಗವಾಗಿ ಒಣಗಿದ ದಿನ ಆಚರಿಸಲಾಗುತ್ತದೆ ಎಂದು ತಿಳಿಸಿದರು.
ಶಾಲಾ ಮುಖ್ಯೋಪಾಧ್ಯಾಯರಾದ ಪ್ರಕಾಶ ಇವರು ಮಾತನಾಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ಹಮ್ಮಿಕೊಳ್ಳುವ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಗಿವೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ತಮ್ಮ ತಮ್ಮ ಗ್ರಾಮಗಳಲ್ಲಿ ಹಾಗೂ ಸುತ್ತ್ತ ಮುತ್ತ್ತಲಿನ ಸಾರ್ವಜನಿಕರಿಗೆ ಅರಿವು ಮೂಡಿಸುವಂತೆ ತಿಳಿಸಿದರು.
ಆರೋಗ್ಯ ನಿರೀಕ್ಷಣಾಧಿಕಾರಿ ಲೋಹಿತ್ ಒಡ್ಡೋಡಗಿ ಇವರು ಮಾತನಾಡಿ, ಮಳೆಗಾಲದಲ್ಲಿ ಹರಡುವ ಸಾಂಕ್ರಾಮಿಕ ರೋಗಗಳು ಮತ್ತು ಅವುಗಳ ನಿಯಂತ್ರಣ, ಮುಂಜಾಗ್ರತೆ ಕುರಿತು ವಿವರವಾಗಿ ಮಾತನಾಡಿದರು ಮತ್ತು ಇತರೆ ಕ್ಷಯರೋಗ ನಿರ್ಮೂಲನೆ, ಕುಷ್ಠರೋಗ ನಿರ್ಮೂಲನೆ ಹಾಗೂ ಹದಿ-ಹರೆಯದವರ ಆರೋಗ್ಯ ರಕ್ಷಣೆ, ಹೆಚ್.ಪಿ.ವಿ ಲಸಿಕೆ, ರಾಷ್ಟ್ರೀಯ ಹಾವು ಕಡಿತ ಹಾಗೂ ನಾಯಿ ಕಡಿತ ನಿಯಂತ್ರಣ ಕಾರ್ಯಕ್ರಮ ಕುರಿತು ವಿವರವಾಗಿ ಮತನಾಡಿದರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು, ಆರೋಗ್ಯ ಇಲಾಖೆ ಸಿಬ್ಬಂದಿ, ಶಾಲಾ ಮಕ್ಕಳು ಸೇರಿದಂತೆ ಇತರರು ಉಪಸ್ಥಿತರಿದ್ದರು.