ಹುನಗುಂದ,ಜು,೩೦ ನಿರ್ಭಿಡೆ ಹಾಗೂ ನಿಷ್ಪಕ್ಷಪಾತ ಪತ್ರಿಕೋದ್ಯಮವು ಪ್ರಜಾಪ್ರಭುತ್ವದ ಜೀವಾಳವಾಗಿದ್ದು, ಸಮಾಜದಲ್ಲಿನ ಅನ್ಯಾಯ, ಭ್ರಷ್ಟಾಚಾರ ಹಾಗೂ ಜನಸಾಮಾನ್ಯರ ಸಮಸ್ಯೆಗಳನ್ನು ಧೈರ್ಯದಿಂದ ಬೆಳಕಿಗೆ ತರುವ ಜವಾಬ್ದಾರಿ ಮಾಧ್ಯಮಗಳ ಮೇಲಿದೆ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು. ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ಕರ್ನಾಟಕ ಕಾರ್‍ಯನಿರತ ಪತ್ರಕರ್ತರ ಸಂಘ ತಾಲೂಕ ಘಟಕವು ನಡೆಸಿದ ಪತ್ರಿಕಾ ದಿನಾಚರಣೆ ಹಾಗೂ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಡಿದ ಅವರು ಸತ್ಯ, ನೈತಿಕತೆ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಪತ್ರಕರ್ತರು ಕಾಪಾಡಿಕೊಂಡು ಜನರ ಧ್ವನಿಯಾಗಿ ಕಾರ್ಯನಿರ್ವಹಿಸಬೇಕು. ಪತ್ರಿಕಾ ಸ್ವಾತಂತ್ರ್ಯವನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದ್ದು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಲಪಡಿಸುವಲ್ಲಿ ಮಾಧ್ಯಮಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ದೊಡ್ಡನಗೌಡ ಪಾಟೀಲ ತಿಳಿಸಿದರು. ಚಿತ್ತರ್ರಗಿ ಸಂಸ್ಥಾನಮಠ ಹುನಗುಂದದ ಡಾ. ಗುರುಮಹಾಂತ ಸಾನಿಧ್ಯವಹಿಸಿ ಮಾತನಾಡುತ್ತ ಪತ್ರಿಕೋದ್ಯಮವು ದೇಶದ ಅವಿಭಾಜ್ಯ ಅಂಗವಾಗಿದ್ದು, ಪತ್ರಿಕಾರಂಗ ಇಲ್ಲದಿದ್ದರೆ ದೇಶವೇ ಕುರುಡಾಗುತ್ತಿತ್ತು, ಸಮಾಜದಲ್ಲಿ ನಡೆಯುವ ಸಾಧನೆಗಳು, ವೈಫಲ್ಯಗಳು, ಜನರ ಸಮಸ್ಯೆಗಳು ಹಾಗೂ ಅಭಿವೃದ್ಧಿಯ ನೈಜ ಚಿತ್ರಣವನ್ನು ಜನರಿಗೆ ತಲುಪಿಸುವ ಮಹತ್ತರ ಜವಾಬ್ದಾರಿ ಪತ್ರಕರ್ತರ ಮೇಲಿದೆ ಎಂದು ತಿಳಿಸಿದರು.
ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಮಾತನಾಡಿ ಸರ್ಕಾರದ ಉತ್ತಮ ಯೋಜನೆಗಳು, ಜನೋಪಯೋಗಿ ಕಾರ್ಯಗಳು ಹಾಗೂ ಸಮಾಜದ ಸಾಧಕರನ್ನು ಪರಿಚಯಿಸುವುದರ ಜೊತೆಗೆ, ಆಡಳಿತದ ಲೋಪದೋಷಗಳನ್ನು ನಿರ್ಭಯವಾಗಿ ಬೆಳಕಿಗೆ ತರುವ ಮೂಲಕ ಪ್ರಜಾಪ್ರಭುತ್ವವನ್ನು ಪತ್ರಿಕಾ ರಂಘ ಬಲಪಡಿಸುವ ನಿಟ್ಟಿನಲ್ಲಿ ಕಾರ್‍ಯ ನಿರ್ವಹಿಸಬೇಕು. ಸತ್ಯ, ನೈಜತೆ ಮತ್ತು ನಿಷ್ಪಕ್ಷಪಾತವು ಪತ್ರಿಕೋದ್ಯಮದ ಜೀವಾಳವಾಗಿದೆ ಎಂದರು. ಡಾ. ಗುರುಮಹಾಂತ ಶ್ರೀಗಳನ್ನು, ತಾ.ಲೂಕ ಪ್ರಶಸ್ತಿ ಪಡೆದ ಕಾನಿಪ ಕಾರ್‍ಯದರ್ಶಿ ಮಲ್ಲಿಕಾರ್ಜು ಹೊಸಮನಿ ಅವರನ್ನು ಗೌರವಿಸಿ ಸತ್ಕರಿಸಲಾಯಿತು. ಕಾನಿಪ ಅಧ್ಯಕ್ಷ್ಷ ಅಮರೇಶ ನಾಗೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮಾರಿ ಪೂಜಾ ಮತ್ತು ಕೀರ್ತಿ ಪ್ರಾರ್ಥಿಸಿದರು. ಎಸ್ಕೆ ಕೊನೆಸಾಗರ ನಿರೂಪಿಸಿದರು. ಪರಮ ಪೂಜ್ಯ ಗಚ್ಚಿನಮಠದ ಅಮರೇಶ್ವರ ದೇವರು ಸಾನಿಧ್ಯವಹಿಸಿದ್ದರು. ಜಿಲ್ಲಾ ಕಾರ್‍ಯದರ್ಶಿ ಜಗಧೀಶ ಗಾಣಿಗೇರ, ಉಪಾಧ್ಯಕ್ಷ ಮಲ್ಲಿಕಾರ್ಜುನ ದರಗಾದ, ಸದಸ್ಯ ಸಂಗಮೇಶ ಹೂಗಾರ, ಕಾಲೇಜ ಪ್ರಾಚಾರ್‍ಯ ಸಿಕಂದರ ಧನ್ನೂರ ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ದಿ. ಬಸವವರಾಜ ತೆಗ್ಗಿನಮಠ ಅವರ ಸ್ಮರಣಾರ್ಥ ಮಹಾಂತೆಶ ತೆಗ್ಗಿನಮಠ ಅವರು ಪತ್ರಿಕಾ ವಿತರಕರಿಗೆ ಜರ್ಕಿನ್ ವಿತರಿಸಿದರು. ಭಾಕ್ಸ್; ಯುವ ಪತ್ರಕರ್ತರು ಬರವಣಿಗೆಗೆ ಹೆಚ್ಚಿನ ಒತ್ತು ನೀಡಬೇಕು. ನಿರಂತರ ಓದು, ಅಧ್ಯಯನ ಮತ್ತು ಕ್ಷೇತ್ರ ಅನುಭವದ ಮೂಲಕ ತಮ್ಮ ಲೇಖನ ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕು. ಪತ್ರಿಕಾ ಬರಹವು ಯಾವುದೇ ಒತ್ತಡಕ್ಕೆ ಮಣಿಯದೆ ನೈಜತೆ, ನಿಷ್ಪಕ್ಷಪಾತತೆ ಹಾಗೂ ಸಾಮಾಜಿಕ ಜವಾಬ್ದಾರಿಯಿಂದ ಕೂಡಿರಬೇಕು. ಸಮಾಜದ ಸಮಸ್ಯೆಗಳು, ಜನರ ಸಾಧನೆಗಳು ಮತ್ತು ಅಭಿವೃದ್ಧಿಯ ನಿಜ ಚಿತ್ರಣವನ್ನು ಜನರಿಗೆ ತಲುಪಿಸುವ ಜವಾಬ್ದಾರಿ ಪತ್ರಕರ್ತರ ಮೇಲಿದೆ. ಹಿರಿಯ ಪತ್ರಕರ್ತರ ಅನುಭವ, ಮಾರ್ಗದರ್ಶನದಲ್ಲಿ ನಡೆಯಬೇಕು.
