ವಿಜಯನಗರ (ಹೊಸಪೇಟೆ).08 : ವಿಶ್ವವಿಖ್ಯಾತ ಪ್ರವಾಸಿ ತಾಣವಾದ ಹಂಪಿಯ ಸಮಗ್ರ ಅಭಿವೃದ್ಧಿ ಹಾಗೂ ಪ್ರವಾಸಿಗರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ನಗರಾಭಿವೃದ್ಧಿ ಇಲಾಖೆ, ಹಂಪಿ ಅಭಿವೃದ್ಧಿ ಪ್ರಾಧಿಕಾರ, ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಹಾಗೂ ರಾಜ್ಯ ಪುರಾತತ್ವ ಇಲಾಖೆಗಳು ಜಂಟಿಯಾಗಿ ಕಾರ್ಯನಿರ್ವಹಿಸಲಿವೆ ಎಂದು ಇಂಧನ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ನಗರದ ಹೊಸ ಮಲಪನಗುಡಿಯಲ್ಲಿನ ಹಂಪಿ ಹೆರಿಟೇಜ್ ರೆಸಾರ್ಟ್ನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ಹಂಪಿಯ ಮೂಲಸೌಕರ್ಯಗಳ ಸುಧಾರಣೆಗೆ ಸಂಬಂಧಿಸಿದಂತೆ ಕೇವಲ ಪ್ರವಾಸೋದ್ಯಮ ಇಲಾಖೆಯಷ್ಟೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಇದರಲ್ಲಿ ಹಲವು ಇಲಾಖೆಗಳು ಭಾಗಿಯಾಗಿರುವುದರಿಂದ ಮುಂದಿನ ದಿನಗಳಲ್ಲಿ ನಗರಾಭಿವೃದ್ಧಿ ಸಚಿವರು ಹಾಗೂ ಪಂಚಾಯತ್ ರಾಜ್ ಸಚಿವರ ನೇತೃತ್ವದಲ್ಲಿ ಜಂಟಿ ಸಭೆಯೊಂದನ್ನು ಆಯೋಜಿಸಿ, ಇರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು. ಸದ್ಯ ಕೇಂದ್ರ ಸರ್ಕಾರದ ಜಂಟಿ ಕಾರ್ಯದರ್ಶಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಹಲವು ಪ್ರಮುಖ ಸಲಹೆ ಪಡೆಯಲಾಗಿದೆ ಎಂದರು.
ಗ್ಲೋಬಲ್ ಡೆಸ್ಟಿನೇಷನ್ ಡೆವಲಪ್‌ಮೆಂಟ್ ಯೋಜನೆಯಡಿ ರಾಜ್ಯಾದ್ಯಂತ ಒಟ್ಟು 50 ತಾಣಗಳ ಗುರಿ ಹೊಂದಲಾಗಿದ್ದರೂ, ಆರಂಭಿಕ ಹಂತದಲ್ಲಿ ಅತ್ಯಂತ ವ್ಯವಸ್ಥಿತವಾಗಿ 5 ರಿಂದ 10 ಪ್ರಮುಖ ತಾಣಗಳನ್ನು ಮಾತ್ರ ಆಯ್ದುಕೊಂಡು ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಈ ಮೊದಲ ಹಂತದ ಯಶಸ್ಸು ಇಡೀ ದೇಶದ ಪ್ರವಾಸೋದ್ಯಮದ ಭವಿಷ್ಯದ ದಿಕ್ಸೂಚಿಯಾಗಲಿದೆ. ಈ ನಿಟ್ಟಿನಲ್ಲಿ ಕರ್ನಾಟಕದ ಐತಿಹಾಸಿಕ ರಾಜಧಾನಿ ಹಂಪಿಗೆ ಪ್ರಥಮ ಆಧ್ಯತೆ ನೀಡಲಾಗಿದೆ. ಹಂಪಿಯಲ್ಲಿ ಕಳೆದ 2-3 ವರ್ಷಗಳಿಂದಲೇ ಅತ್ಯಂತ ವಿವರವಾದ 'ಮಾಸ್ಟರ್ ಪ್ಲಾನ್' ಮತ್ತು ಸುಧಾರಿತ ಜಿಐಎಸ್ ತಂತ್ರಜ್ಞಾನ ಆಧಾರಿತ ಮ್ಯಾಪಿಂಗ್ ಕಾರ್ಯಗಳು ಪೂರ್ಣಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
3 ಸಾವಿರ ಕೋಟಿವರೆಗಿನ ಬೃಹತ್ ಹೂಡಿಕೆ ಮತ್ತು ಸಹಭಾಗಿತ್ವ
ಕೇಂದ್ರ ಸರ್ಕಾರವು ಈ ಯೋಜನೆಗೆ ಸುಮಾರು ರೂ.1,400 ರಿಂದ ರೂ. 1,500 ಕೋಟಿಗಳ ಮೂಲಭೂತ ಅನುದಾನದ ನೆರವು ನೀಡಲಿದೆ. ಖಾಸಗಿ ಹೂಡಿಕೆದಾರರು, ಸ್ಟೇಕ್‌ಹೋಲ್ಡರ್‌ಗಳು ಮತ್ತು ರಾಜ್ಯ ಸರ್ಕಾರಗಳ ಸಕ್ರಿಯ ಸಹಭಾಗಿತ್ವದೊಂದಿಗೆ ಒಟ್ಟು ಹೂಡಿಕೆಯನ್ನು ರೂ. 2,500 ರಿಂದ ರೂ. 3,000 ಕೋಟಿ ರೂಪಾಯಿಗಳಿಗೆ ಹೆಚ್ಚಿಸುವ ಬೃಹತ್ ಯೋಜನೆ ಇದಾಗಿದೆ.
ಇದರಿಂದ ಭಾರತೀಯ ಪ್ರವಾಸಿಗರು ವಿದೇಶ ಪ್ರವಾಸಗಳಿಗಾಗಿ ವಾರ್ಷಿಕವಾಗಿ ಬಿಲಿಯನ್ ಗಟ್ಟಲೆ ಹಣವನ್ನು ಖರ್ಚು ಮಾಡುತ್ತಿದ್ದಾರೆ. ಭಾರತದಲ್ಲೇ ಜಾಗತಿಕ ಗುಣಮಟ್ಟದ ಸೌಲಭ್ಯ ಸಿಕ್ಕರೆ, ಈ ದೇಶೀಯ ಪ್ರವಾಸಿಗರು ಭಾರತದಲ್ಲೇ ಉಳಿಯುವುದರಿಂದ ದೇಶದ ಆರ್ಥಿಕತೆಗೆ ಭಾರಿ ಲಾಭವಾಗಲಿದೆ. ಅದಲ್ಲದೇ ಪ್ರವಾಸೋದ್ಯಮದ ಈ ಬೃಹತ್ ಮೇಲ್ದರ್ಜೆಯಿಂದಾಗಿ ಪ್ರವಾಸಿ ಮಾರ್ಗದರ್ಶಿಗಳು, ಹೋಟೆಲ್ ಉದ್ಯಮ, ಸಾರಿಗೆ ವಲಯ ಮತ್ತು ಸ್ಥಳೀಯ ಕರಕುಶಲ ಕಲಾವಿದರಿಗೆ ಲಕ್ಷಾಂತರ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಆಶಯ ವ್ಯಕ್ತಪಡಿಸಿದರು.
ಪ್ರವಾಸಿ ಸೌಲಭ್ಯಗಳು ಮತ್ತು ಸಾರಿಗೆ ವ್ಯವಸ್ಥೆ : ಹಂಪಿಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ 20 ಪ್ರಮುಖ ಸ್ಥಳಗಳಲ್ಲಿ ಸಂಪೂರ್ಣ ಟ್ರಾವೆಲರ್ ರೂಟ್‌ಗಳನ್ನು ಗುರುತಿಸಲಾಗಿದ್ದು, ಸದ್ಯ 5 ರೂಟ್‌ಗಳು ಸಿದ್ಧವಾಗಿವೆ. ಪ್ರವಾಸಿಗರ ಸುಲಭ ಸಂಚಾರಕ್ಕೆ ಅನುವು ಮಾಡಿಕೊಡಲು ಪರಿಸರ ಸ್ನೇಹಿ ಇ-ವಾಹನಗಳ ಸಂಚಾರಕ್ಕೆ ಇಂದು ಸಾಂಕೇತಿಕವಾಗಿ 5 ಇ-ವಾಹನಗಳಿಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು. ಪ್ರವಾಸಿಗರು ಬೆಳಿಗ್ಗೆ ಬೇಗನೆ ಹಂಪಿಗೆ ಆಗಮಿಸುವುದರಿಂದ, ಅವರ ಅನುಕೂಲಕ್ಕಾಗಿ ಮುಂಜಾನೆ 4 ಗಂಟೆಯಿಂದಲೇ ವಿಶೇಷ ಸಾರಿಗೆ ಬಸ್‌ಗಳ ಸೌಲಭ್ಯವನ್ನು ಕಲ್ಪಿಸುವ ಕುರಿತು ಸಾರಿಗೆ ಇಲಾಖೆಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಹಂಪಿಯಲ್ಲಿ ಕಾಂಕ್ರೀಟ್ ಕಾಮಗಾರಿಗಳನ್ನು ಕೈಗೊಳ್ಳದಂತೆ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಕಠಿಣ ನಿಯಮಗಳಿವೆ. ಆದಾಗ್ಯೂ, ಪ್ರವಾಸಿಗರು ಹಾಗೂ ಭಕ್ತರ ಅನುಕೂಲಕ್ಕಾಗಿ ನದಿಯ ಸ್ನಾನಘಟ್ಟದ ಬಳಿ ಅಗತ್ಯ ಸುರಕ್ಷತಾ ಕ್ರಮಗಳು ಹಾಗೂ ಮೂಲಸೌಕರ್ಯಗಳನ್ನು ಒದಗಿಸುವ ಬಗ್ಗೆ ಎ.ಎಸ್.ಐ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ವ್ಯವಸ್ಥೆ ಮಾಡಲಾಗುವುದು. ವಿಜಯನಗರದ ಇತಿಹಾಸ ಬಿಂಬಿಸುವ ಕಲ್ಯಾಣಿ ಹಾಗೂ ಪ್ರಮುಖ ಸ್ಮಾರಕಗಳ ಪುನಶ್ಚೇತನ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಪ್ರಗತಿ ಪರಿಶೀಲನೆ ನಡೆಸಲಾಗುವುದು ಎಂದರು.
ಮೈಸೂರು ದಸರಾದಂತೆ ಹಂಪಿ ಉತ್ಸವಕ್ಕೂ ತನ್ನದೇ ಆದ ಐತಿಹಾಸಿಕ ಹಿನ್ನೆಲೆಯಿದೆ. ಹಂಪಿ ಉತ್ಸವದ ದಿನಾಂಕ ನಿಗದಿ ಹಾಗೂ ಅದರ ವ್ಯವಸ್ಥಿತ ಆಚರಣೆಯ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು. ಕೋವಿಡ್ ನಂತರದ ದಿನಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಚುರುಕುಗೊಳ್ಳುತ್ತಿದ್ದು, ಸ್ಥಳೀಯ ಉದ್ಯಮಗಳಿಗೆ ಆಸರೆಯಾಗುವ ನಿಟ್ಟಿನಲ್ಲಿ ಉತ್ಸವವನ್ನು ಯಶಸ್ವಿಯಾಗಿ ಆಯೋಜಿಸಲು ಸರ್ಕಾರ ಬದ್ಧವಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
---
