ಬಾಗಲಕೋಟೆ, ಜುಲೈ ೦೮: ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿ ಅತೀ ಹೆಚ್ಚು ಬಾಣಂತಿಯರ ಸಾವು ಆಗಿರುವುದು ವರದಿಯಾಗಿದ್ದು, ತಾಲೂಕು ಆರೋಗ್ಯ ಅಧಿಕಾರಿ ಸೇರಿದಂತೆ ಎಲ್ಲಾ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಹೆರಿಗೆ ಸಾವುಗಳನ್ನು ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಂಗಪ್ಪ ಸೂಚಿಸಿದರು.
ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಇತ್ತಿಚಿಗೆ ಜರುಗಿದ ಆರೋಗ್ಯ ಇಲಾಖೆಯ ಜಿಲ್ಲಾ ಮಟ್ಟದ ಕಣ್ಗಾವಲು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವರದಿಯಾದಂತಹ ಹೆರಿಗೆ ಸಾವಿನ ಹೆಣ್ಣು ಮಕ್ಕಳೆಲ್ಲ ಅತೀ ಸಣ್ಣ ವಯಸ್ಸಿನವರಾಗಿದ್ದು, ಮೇಲ್ನೋಟಕ್ಕೆ ಬಾಲ್ಯವಿವಾಹಕ್ಕೆ ಒಳಗಾಗಿರಬಹುದೆಂದು ಕಂಡುಬರುತ್ತಿರುವುದರಿಂದ ಬಾಲ್ಯ ವಿವಾಹ ಕುರಿತು ಇನ್ನೂ ಹೆಚ್ಚಿನ ಜನ ಜಾಗೃತಿ ಮೂಡಿಸುವ ಕಾರ್ಯವನ್ನು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮಾಡಬೇಕು ಎಂದು ಹೇಳಿದರು.
ಆರೋಗ್ಯ ಇಲಾಖೆ ಅಧಿಕಾರಿಗಳು ಆಶಾ ಕಾರ್ಯಕರ್ತೆಯರಿಗೆ ಸರಿಯಾದ ತರಬೇತಿಯನ್ನು ನೀಡಬೇಕು, ಗ್ರಾಮೀಣ ಪ್ರದೇಶಗಳಲ್ಲಿ ಗರ್ಭೀಣಿ ಸ್ರೀಯರು ಆಶಾ ಕಾರ್ಯಕರ್ತೆಯರನ್ನೇ ಹೆಚ್ಚು ನಂಬುವುದರಿಂದ ಸರಿಯಾದ ಸಮಯಕ್ಕೆ ಪ್ರಾಥಮಿಕ ಆರೋಗ್ಯ ಕೆಂದ್ರಗಳಲ್ಲಿ ಆರೋಗ್ಯ ತಪಾಷಣೆಗೆ ಒಳಪಡಿಸುವುದು, ಔಷಧಿ ದೊರಕಿಸಿ ಕೊಡುವ ಕೆಲಸ ಮಾಡಬೇಕು. ಹೆರಿಗೆ ನೋವು ಕಾಣಿಸಿಕೊಳ್ಳುವ ಸಂದರ್ಭಗಳಲ್ಲಿ ಗರ್ಭೀಣಿ ಸ್ರ್ತೀ ಇರುವ ಅಂಬ್ಯುಲೆನ್ಸ್‌ನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಖಾಸಗಿ ಆಸ್ಪತ್ರೆಗಳಲ್ಲಿ ಸೀಜರಿನ್ ಹೆರಿಗೆ ಮಾಡಿಸಲಾಗುತ್ತದೆ ಎಂಬ ದೂರುಗಳಿದ್ದು, ಈ ಕುರಿತು ಆರೋಗ್ಯ ಅಧಿಕಾರಿಗಳು ಗಮನ ಹರಿಸಬೇಕು ಎಂದು ಎಚ್ಚರಿಸಿದರು.
ಹುಚ್ಚು ನಾಯಿ ಕಡಿತದ ಸಾವು ಹಾಗೂ ಹಾವು ಕಡಿತದಿಂದ ಸಾವು ಸಂಭವಿಸಿರುವುದು ಕೂಡ ಸಾಕಷ್ಟು ಸಂಖ್ಯೆಯಲ್ಲಿ ವರದಿಯಾಗಿದೆ. ಜಿಲ್ಲೆಯಲ್ಲಿ ಜನೇವರಿಯಿಂದ ಜೂನ್ ಮಾಹೆಯವರೆಗೆ ೧೭೧೯೬ ಹುಚ್ಚು ನಾಯಿ ಕಡಿತದ ಪ್ರಕರಣಗಳು ದಾಖಲಾಗಿ, ರೇಬೀಸ್ ನಿಂದ ೬ ಸಾವು ಸಂಭವಿಸಿರುತ್ತವೆ. ಅದೇ ರೀತಿ ಜನೇವರಿಯಿಂದ ಜೂನ್ ಮಾಹೆಯವರೆಗೆ ೩೦೯ ಹಾವು ಕಡಿತದ ಪ್ರಕರಣಳು ದಾಖಲಾಗಿ ೫ ಸಾವುಗಳು ಸಂಭವಿಸಿರುತ್ತವೆ. ಹುಚ್ಚು ನಾಯಿ ಕಡಿತ ಮತ್ತು ಹಾವು ಕಡಿತದ ಪ್ರಕರಣಗಳಿಗೆ ಸಕಾಲದಲ್ಲಿ ಲಸಿಕೆ ನೀಡುವ ಕೆಲಸವಾಗಬೇಕು ಅಲ್ಲದೇ ಸಾರ್ವಜನಿಕರಲ್ಲಿ ಈ ಕುರಿತು ಹೆಚ್ಚಿನ ಸಂಖ್ಯೆಯಲ್ಲಿ ಜನ ಜಾಗೃತಿ ಮೂಡಿಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಮಂಜುನಾಥ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ದಯಾನಂದ ಕರೇಣ್ಣನವರ, ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಮಹೇಶ ಕೋನಿ, ತಾಲೂಕು ವೈಧ್ಯಾಧಿಕಾರಿ ಡಾ. ಮಂಜುಳಾ ಸೇರಿದಂತೆ ಇತರರು ಇದ್ದರು.
