ಹೊಸಪೇಟೆ, ಅ.10: ನಗರದ ಗೌತಮ ಬುದ್ಧ ಫಂಕ್ಷನ್ ಹಾಲ್‌ನಲ್ಲಿ ಗಾನಗಂಗಾ ಕಲಾ ಪ್ರತಿಷ್ಠಾನದ ವತಿಯಿಂದ ಲಿಂಗೈಕ್ಯ ಡಾ. ಪಂಡಿತ್ ಪುಟ್ಟರಾಜ ಕವಿ ಗವಾಯಿಗಳ ಪುಣ್ಯಸ್ಮರಣೆಯ ಅಂಗವಾಗಿ ಸಂಗೀತ ನಮನ ಕಾರ್ಯಕ್ರಮವನ್ನು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಂಪ್ಲಿಯ ಉದ್ಯಮಿ ಹಾಗೂ ಸಮಾಜಸೇವಕ ಕೆ.ಎಂ. ಹೇಮಯ್ಯಸ್ವಾಮಿ, ಪಂಡಿತ್ ಪುಟ್ಟರಾಜ ಗವಾಯಿಗಳು ಹಾಗೂ ಪಂಚಾಕ್ಷರಿ ಗವಾಯಿಗಳು ಗದಗದಲ್ಲಿ ವೀರೇಶ್ವರ ಪುಣ್ಯಾಶ್ರಮವನ್ನು ಸ್ಥಾಪಿಸಿ, ಸಾವಿರಾರು ಅಂಧ, ಅಂಗವಿಕಲ ಹಾಗೂ ಅನಾಥ ಮಕ್ಕಳಿಗೆ ಉಚಿತವಾಗಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಿಸುವ ಮೂಲಕ ಅವರ ಬದುಕಿಗೆ ಬೆಳಕಾಗಿದ್ದಾರೆ. ಅನೇಕ ವಿದ್ಯಾರ್ಥಿಗಳ ಜೀವನ ರೂಪಿಸಿದ ಅವರು, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹಲವು ಪ್ರಶಸ್ತಿ-ಪುರಸ್ಕಾರಗಳನ್ನು ಪಡೆದಿದ್ದಾರೆ ಎಂದು ಸ್ಮರಿಸಿದರು.
ಪುಟ್ಟರಾಜ ಗವಾಯಿಗಳ ಪುಣ್ಯಸ್ಮರಣೆಯನ್ನು ಪ್ರತಿವರ್ಷ ನಿರಂತರವಾಗಿ ಆಯೋಜಿಸುತ್ತಿರುವ ಗಾನಗಂಗಾ ಕಲಾ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಗಾಯಕ ಯಲ್ಲಪ್ಪ ಭಂಡಾರಧಾರ್ ಅವರ ಕಾರ್ಯವನ್ನು ಶ್ಲಾಘಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಕಲಿಗಳ ಕ್ರಿಯಾಶೀಲ ಸಮಿತಿಯ ಅಧ್ಯಕ್ಷ ಹಾಗೂ ವಕೀಲ ಪಿ. ವೆಂಕಟೇಶ್, ಉಪಾಧ್ಯಕ್ಷ ಗುಜ್ಜಲ್ ಗಣೇಶ್ ಸೇರಿದಂತೆ ಮಾರಣ್ಣ, ಹಲೋಜೋಶಿ, ತುರವನೂರು ಮಲ್ಲಿಕಾರ್ಜುನ, ಗಂಟೆ ಸೋಮಶೇಖರ್, ಚಿದಾನಂದ ರಾರಾವಿ, ಚಲನಚಿತ್ರ ನಿರ್ದೇಶಕ ಜೋಗಿ ತಾಯಪ್ಪ, ಗಾಯಕಿ ಕಮಲಾ ಕುಲಕರ್ಣಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಪ್ರಶಸ್ತಿ ಪ್ರದಾನ: ಹೊಸಪೇಟೆಯ ಸಂಗೀತ ಶಿಕ್ಷಕಿ ಪುಷ್ಪಾವತಿ ಹಾಗೂ ಸಿರುಗುಪ್ಪದ ಚಿದಾನಂದ ರಾರಾವಿ ಅವರಿಗೆ ಗಾನಗಂಗಾ ಸಂಗೀತ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜೋಗಿ ತಾಯಪ್ಪ ಅವರಿಗೆ ವಿಜಯನಗರ ಕಲಾರತ್ನ ಪ್ರಶಸ್ತಿ, ಕಮಲಾ ಕುಲಕರ್ಣಿ ಅವರಿಗೆ ಪುಟ್ಟರಾಜ ಅನುಗ್ರಹ ಪ್ರಶಸ್ತಿ, ಪಿ. ವೆಂಕಟೇಶ್ ಹಾಗೂ ಗುಜ್ಜಲ್ ಗಣೇಶ್ ಅವರಿಗೆ ವಿಜಯನಗರ ಕಲಾಪೋಷಕ ಪ್ರಶಸ್ತಿ ಮತ್ತು ಕುಮಾರಿ ಪ್ರಿಯಾ ಅವರಿಗೆ ವಿಜಯನಗರ ಉದಯೋನ್ಮುಖ ಯುವನಾಯಕಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಗಾನಗಂಗಾ ಕಲಾ ಪ್ರತಿಷ್ಠಾನದ ಅಧ್ಯಕ್ಷ ಯಲ್ಲಪ್ಪ ಭಂಡಾರಧಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.