ಯರಗಟ್ಟಿ,ಜು,೨೫ : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರೂಪಿಸಿರುವ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ಇದರ ಯಶಸ್ವಿ ಅನುಷ್ಟಾನಕ್ಕೆ ವ್ಯಾಪಕ ಪ್ರಚಾರ ಮತ್ತು ಅನುಸರಣಾ ಕಾರ್ಯ ರೂಢಿಸಲಾಗುತ್ತಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯರಗಟ್ಟಿ ತಾಲೂಕಿನ ಕೃಷಿ ಅಧಿಕಾರಿ ಬಸವರಾಜ ಶಿಗ್ಗಾಂವಿ ತಿಳಿಸಿದರು.
ಸಮೀಪದ ತಲ್ಲೂರು ಗ್ರಾಮದ ಬಸವೇಶ್ವರ ಪ್ರೌಢ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾದ ಸ್ವಾಸ್ಥ್ಯ ಸಂಕಲ್ಪ ಯೋಜನೆಯನ್ನು ಯರಗಟ್ಟಿ ಬಾಲಕಿಯರ ವಸತಿ ನಿಲಯ ಪಾಲಕರಾದ ಹಾಗೂ ಸಂಪನ್ಮೂಲ ವ್ಯಕ್ತಿಯಾದ ಆಶಾ ಪರೀಟ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕುಟುಂಬದ ಕಣ್ಮಣಿಗಳಾಗಿದ್ದು ಪೋಷಕರ ಅಭಿಲಾಷೆಯಂತೆ ಅವರು ವಿದ್ಯಾಭ್ಯಾಸದಲ್ಲಿ ತೊಡಗಿ ಪ್ರಗತಿ ಸಾಧಿಸಬೇಕು. ವಿದ್ಯಾರ್ಥಿಗಳು ತಮ್ಮ ಆರೋಗ್ಯ ಪಾಲನೆಗೆ ಹಲವು ಮೂಲ ತಿಳುವಳಿಕೆಗಳನ್ನು ಗಳಿಸುವ ಅಗತ್ಯವಿದೆ ಎಂದರು.
ಇಂದಿನ ದಿನಮಾನದಲ್ಲಿ ಮದ್ಯವ್ಯಸನ, ಗುಟ್ಕಾ, ಧೂಮಪಾನಗಳಿಂದ ಯುವ ಜನತೆಯ ಜೀವನ ಹಾಳಾಗುತ್ತಿದೆ. ಸಹವಾಸ ದೋಷ, ಆಕಸ್ಮಿಕ ಆಕರ್ಷಣೆಗಳ ಕಾರಣ ದುಶ್ಚಟ ಒಮ್ಮೆ ಆರಂಭವಾದರೆ ಬದುಕು ವಿನಾಶದ ಹಾದಿಯಲ್ಲಿ ಸಾಗುತ್ತದೆ ಇದರಿಂದ ವೈಯಕ್ತಿಕ ಜೀವನದ ಜೊತೆ ಜೊತೆಗೆ ಸಮಾಜದ ಸ್ವಾಸ್ಥ್ಯ ಸಹ ಹಾಳಾಗುತ್ತದೆ ಎಂದು ವಿವರಿಸಿದರು. ವಿದ್ಯಾರ್ಥಿ ಜೀವನದ ದೆಸೆಯಿಂದಲೇ ಉತ್ತಮ ಕ್ರಿಯಾಶೀಲ ಹವ್ಯಾಸಗಳನ್ನು ರೂಢಿಸಿಕೊಂಡು ಉತ್ತಮ ಸಮಾಜ ಕಟ್ಟುವ ಕಾರ್ಯಕ್ರಮಕ್ಕೆ ದೃಢ ಸಂಕಲ್ಪ ಕೈಗೊಳ್ಳಬೇಕು ಎಂದರು.
ಮುಖ್ಯ ಶಿಕ್ಷಕ ಎಂ. ಎಚ್. ದುಂಡನಕೊಪ್ಪ, ಎ. ಜೆ. ಕಾಂಬಳೆ, ಎಸ್. ಎಫ್. ಬಡಿಗೇರ, ಜೆ. ಎ. ಕೊಟ್ರಶೆಟ್ಟಿ, ಎಲ್. ವ್ಹಿ. ಪಾಟೀಲ, ಬಿ. ಸಿ. ಸೂಣದೊಳ್ಳಿ, ಎ. ಎಚ್. ಕುದರಿ, ಸೇವಾನಿರತ ಹಾಗೂ ಪ್ರಗತಿ ಬಂಧು ತಂಡದ ಸದಸ್ಯರು ಇದ್ದರು.
