ಹಸಿರು ಕ್ರಾಂತಿ ವರದಿ ಬೆಳಗಾವಿ
ಮಾರಿಹಾಳ ಪಿಕೆಪಿಎಸ್‌ಗೆ 2ನೇ ಬಾರಿಗೆ ರಾಜ್ಯಮಟ್ಟದ ಉತ್ತಮ ಸಹಕಾರ ಸಂಘ ಪ್ರಶಸ್ತಿ ದೊರೆತಿರುವುದು ಸಹಕಾರ ಕ್ಷೇತ್ರದಲ್ಲಿ ಹೆಮ್ಮೆಯ ಸಾಧನೆ. ಈ ಪ್ರಶಸ್ತಿ ಸಂಘದ ಮುಂದಿನ ಸಾಧನೆಗಳಿಗೆ ಹೊಸ ಸ್ಫೂರ್ತಿ ಮತ್ತು ಜವಾಬ್ದಾರಿಯಾಗಲಿದೆ ಎಂದು ಮಾರಿಹಾಳ ಪಿಕೆಪಿಎಸ್ ಅಧ್ಯಕ್ಷ ಮಲ್ಲಿಕಾರ್ಜುನ ಮಾದಮ್ಮನವರ ಹೇಳಿದರು.
ಅಥಣಿಯಲ್ಲಿ ನಡೆದ 73ನೇ ಸಹಕಾರ ಸಪ್ತಾಹ-2026ರ ಸಂದರ್ಭದಲ್ಲಿ ಮಾರಿಹಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ರಾಜ್ಯ ಸಹಕಾರ ಸಚಿವ ಲಕ್ಷ್ಮಣ ಸವದಿ ಅವರಿಂದ ಪ್ರತಿಷ್ಠಿತ ಉತ್ತಮ ಸಹಕಾರ ಸಂಘ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಪ್ರಶಸ್ತಿ ದೊರೆತಿರುವುದು ಅತ್ಯಂತ ಸಂತೋಷದ ಹಾಗೂ ಹೆಮ್ಮೆಯ ಸಂಗತಿಯಾಗಿದೆ. ಈ ಮಹತ್ವದ ಪ್ರಶಸ್ತಿಯನ್ನು ನೀಡಿ ಸಂಘದ ಕಾರ್ಯಚಟುವಟಿಕೆಗಳು, ಸಾಧನೆ ಹಾಗೂ ಸಹಕಾರ ಕ್ಷೇತ್ರಕ್ಕೆ ಸಲ್ಲಿಸಿರುವ ಕೊಡುಗೆ ಗುರುತಿಸಿ ಗೌರವಿಸಿದ ಸಹಕಾರ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಹಾಗೂ ಪ್ರಶಸ್ತಿ ಆಯ್ಕೆ ಸಮಿತಿಯ ಎಲ್ಲ ಸದಸ್ಯರಿಗೆ ಸಂಘದ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಗೂ ಸಂಘದ ಪ್ರತಿಯೊಬ್ಬ ಸದಸ್ಯರ ಸಹಕಾರ ಮತ್ತು ಸಮರ್ಪಣಾ ಮನೋಭಾವ ಈ ಸಾಧನೆಯ ಹಿಂದೆ ಪ್ರಮುಖ ಪಾತ್ರ ವಹಿಸಿದೆ. ನಮ್ಮ ಆಡಳಿತ ಮಂಡಳಿಯಲ್ಲಿಯೇ 2ನೇ ಅವಕಾಶ ದೊರೆತಿರುವುದು ಶ್ಲಾಘನೀಯ ಎಂದು ಹರ್ಷ ವ್ಯಕ್ತಪಡಿಸಿದರು.
ಕಳೆದ ಸಾಲಿನಲ್ಲಿ ₹119 ಕೋಟಿ ವ್ಯವಹಾರ ಮಾಡಿ ₹72 ಲಕ್ಷ ಲಾಭಗಳಿಸಿದೆ. ಸಹಕಾರ ಸಂಘಗಳು ಕೇವಲ ಹಣಕಾಸಿನ ವ್ಯವಹಾರಗಳಿಗೆ ಸೀಮಿತವಾಗದೇ ರೈತರ ಆರ್ಥಿಕ ಸಬಲೀಕರಣ, ಗ್ರಾಮೀಣ ಅಭಿವೃದ್ಧಿ ಹಾಗೂ ಸ್ವಾವಲಂಬಿ ಸಮಾಜ ನಿರ್ಮಾಣದ ಪ್ರಮುಖ ಕೇಂದ್ರಗಳಾಗಬೇಕು. ಈ ನಿಟ್ಟಿನಲ್ಲಿ ಮಾರಿಹಾಳ ಪಿಕೆಪಿಎಸ್ ಪಡೆದಿರುವ ಪ್ರಶಸ್ತಿಯು ಇತರ ಸಹಕಾರ ಸಂಘಗಳಿಗೂ ಪ್ರೇರಣೆಯಾಗಲಿ. ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಪಾರದರ್ಶಕ ಆಡಳಿತ, ಜನಪರ ಕಾರ್ಯಚಟುವಟಿಕೆಗಳು ಹಾಗೂ ರೈತಪರ ಸೇವೆಗಳ ಮೂಲಕ ಮಾರಿಹಾಳ ಪಿಕೆಪಿಎಸ್ ಇನ್ನಷ್ಟು ಎತ್ತರಕ್ಕೆ ಬೆಳೆಸಲು ಸಂಘಟಿತ ಕಾರ್ಯಚಟುವಟಿಕೆ ಹಮ್ಮಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮಹದೇವ ಧನಾಯಿ, ನಿರ್ದೇಶಕರಾದ ಶಂಕರಗೌಡ ನಿರ್ವಾನಿ, ಸಂಜಯ ಚಾಟೆ, ಕಲಗೌಡ ಅಗಸಗಿ, ವಿನೋದ ಚೌಹಾನ, ರಾಮಪ್ಪ ಹನ್ನೂರ, ಗುರುನಾಥ ಅಕ್ಕತಂಗೇರಹಾಳ, ಸವಿತಾ ಧರ್ಮೋಜಿ, ಗಿರಿಜಾ ಪಾಟೀಲ, ಸುಗಂಧ ಪೂಜಾರಿ, ಸಿಇಒ ರುದ್ರಪ್ಪ ಚೆನ್ನನವರ ಇದ್ದರು.
ಈ ಪ್ರಶಸ್ತಿಯು ಕೇವಲ ಒಂದು ಸಂಘಕ್ಕೆ ಸಂದ ಗೌರವವಲ್ಲ, ಸಂಘದ ಮೇಲೆ ನಂಬಿಕೆಯಿಟ್ಟು ವ್ಯವಹರಿಸುತ್ತಿರುವ ರೈತರು, ಸದಸ್ಯರು, ಠೇವಣಿದಾರರು ಹಾಗೂ ಹಿತೈಷಿಗಳ ವಿಶ್ವಾಸಕ್ಕೆ ಸಂದ ಗೌರವವಾಗಿದೆ. ಸಂಘದ ಆಡಳಿತ ಮಂಡಳಿಯ ಉಪಾಧ್ಯಕ್ಷರು ಹಾಗೂ ಎಲ್ಲ ನಿರ್ದೇಶಕರು ಸಂಘದ ಅಭಿವೃದ್ಧಿಗಾಗಿ ತೋರಿರುವ ಬದ್ಧತೆ, ದೂರದೃಷ್ಟಿ, ಪಾರದರ್ಶಕ ಆಡಳಿತ ಮತ್ತು ಪರಿಶ್ರಮ ನಿಜಕ್ಕೂ ಅಭಿನಂದನೀಯ.
-ಮಲ್ಲಿಕಾರ್ಜುನ ಮಾದಮ್ಮನವರ, ಅಧ್ಯಕ್ಷರು, ಪಿಕೆಪಿಎಸ್ ಮಾರಿಹಾಳ.