ಬಳ್ಳಾರಿ, ಅ.10: ನಗರದ ದುರ್ಗಾ ಕಾಲೋನಿ, ಹದ್ದಿನಗುಂಡು ರಸ್ತೆ, ಪಟೇಲ್ ನಗರದಲ್ಲಿರುವ ಶ್ರೀ ಸಣ್ಣದುರ್ಗಮ್ಮ ದೇವಸ್ಥಾನದಲ್ಲಿ 11ನೇ ವರ್ಷದ ದಸರಾ ಶರನ್ನವರಾತ್ರಿ ಮಹೋತ್ಸವವನ್ನು ಅ.11ರಿಂದ 20ರವರೆಗೆ ಹತ್ತು ದಿನಗಳ ಕಾಲ ಭಕ್ತಿಭಾವ ಹಾಗೂ ವೈಭವದಿಂದ ಆಚರಿಸಲಾಗುವುದು ಎಂದು ಶ್ರೀ ದುರ್ಗಾದೇವಿ ಟ್ರಸ್ಟ್ ಅಧ್ಯಕ್ಷ ಮೀನಳ್ಳಿ ತಾಯಣ್ಣ ತಿಳಿಸಿದರು.
ನಗರದ ಸಣ್ಣದುರ್ಗಮ್ಮ ದೇವಸ್ಥಾನದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿದ ತಾಯಣ್ಣ, ಶರನ್ನವರಾತ್ರಿ ಉತ್ಸವದ ಅಂಗವಾಗಿ ಶ್ರೀ ಸಣ್ಣದುರ್ಗಮ್ಮ ದೇವಿಗೆ ಪ್ರತಿದಿನ ವಿಶೇಷ ಅಲಂಕಾರ, ನಿತ್ಯ ಹೋಮ, ಅಭಿಷೇಕ, ಎಲೆ ಪೂಜೆ, ಶ್ರೀಚಕ್ರ ಸಹಿತ ಕುಂಕುಮಾರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಂಜೆ ಲಲಿತ ಸಹಸ್ರನಾಮ ಪಾರಾಯಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಮನವಿ ಮಾಡಿದರು.
ಅ.11ರಂದು ಶ್ರೀ ಬಾಲ ತ್ರಿಪುರ ಸುಂದರಿ ದೇವಿಯ ಅಲಂಕಾರದೊಂದಿಗೆ ಉತ್ಸವಕ್ಕೆ ಚಾಲನೆ ದೊರೆಯಲಿದ್ದು, ಸಹಸ್ರ ಮೋದಕ ಶ್ರೀ ಲಕ್ಷ್ಮೀಗಣಪತಿ ಹೋಮ ನೆರವೇರಲಿದೆ. ಅ.12ರಂದು ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಅಲಂಕಾರ ಹಾಗೂ ಹೋಮ, ಅ.13ರಂದು ಶ್ರೀ ಲಲಿತಾದೇವಿ ಅಲಂಕಾರ ಮತ್ತು ಲಲಿತ ಸಹಸ್ರನಾಮ ಸಹಿತ ಹೋಮ, ಅ.14ರಂದು ಶ್ರೀ ವಾರಾಹಿ ದೇವಿ ಅಲಂಕಾರ ಹಾಗೂ ಶ್ರೀ ಮೇಧಾ ದಕ್ಷಿಣಾಮೂರ್ತಿ ಹೋಮ ನಡೆಯಲಿವೆ.ಅ.15ರಂದು ಶ್ರೀ ಅನ್ನಪೂರ್ಣೇಶ್ವರಿ ದೇವಿಯ ಅಲಂಕಾರ ಮತ್ತು ಶ್ರೀ ಆದಿತ್ಯಾದಿ ನವಗ್ರಹ ಹೋಮ, ಅ.16ರಂದು ಶ್ರೀ ಮಹಾಲಕ್ಷ್ಮೀ ದೇವಿಯ ಅಲಂಕಾರ ಹಾಗೂ ಮಹಾಲಕ್ಷ್ಮೀ ಹೋಮ ನೆರವೇರಲಿದೆ. ಅ.17ರಂದು ಶ್ರೀ ಸರಸ್ವತಿ ದೇವಿಯ ಅಲಂಕಾರ, ಲಕ್ಷ ಕುಂಕುಮಾರ್ಚನೆ ಮತ್ತು ಸರಸ್ವತಿ ದೇವಿ ಹೋಮ ಆಯೋಜಿಸಲಾಗಿದೆ. ಇದೇ ದಿನ ಬೆಳಿಗ್ಗೆ 9 ಗಂಟೆಗೆ ಮಕ್ಕಳಿಗಾಗಿ ವಿಶೇಷ ಸರಸ್ವತಿ ದೇವಿ ಪೂಜೆ ನಡೆಯಲಿದೆ.
ಅ.18ರಂದು ಶ್ರೀ ದುರ್ಗಾದೇವಿಯ ಅಲಂಕಾರದೊಂದಿಗೆ ಚಂಡಿಯಾಗ ಹಾಗೂ ಮಹಾಪೂರ್ಣಾಹುತಿ ನೆರವೇರಲಿದ್ದು, ಬಳಿಕ ಅನ್ನದಾನ ಕಾರ್ಯಕ್ರಮ ನಡೆಯಲಿದೆ. ಅ.19ರಂದು ಶ್ರೀ ಚಂಡೀದೇವಿಯ ಅಲಂಕಾರ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅ.20ರಂದು ದಶಮಿಯ ಅಂಗವಾಗಿ ಅಮ್ಮನವರ ನಿಜರೂಪದ ಅಲಂಕಾರ ಮಾಡಿ, ಸಂಜೆ 3 ಗಂಟೆಯಿಂದ ಪಲ್ಲಕ್ಕಿಯಲ್ಲಿ ಶ್ರೀ ಸಣ್ಣದುರ್ಗಮ್ಮ ದೇವಿಯ ಅದ್ದೂರಿ ಮೆರವಣಿಗೆ ನಡೆಸಲಾಗುವುದು. ದೇವಸ್ಥಾನದಿಂದ ಶ್ರೀ ಅಭಯ ವರದಾಂಜಿನೇಯಸ್ವಾಮಿ ದೇವಸ್ಥಾನದವರೆಗೆ ನೃತ್ಯ ತಂಡಗಳು ಹಾಗೂ ವಾದ್ಯಮೇಳಗಳೊಂದಿಗೆ ಮೆರವಣಿಗೆ ಸಾಗಲಿದ್ದು, ಬನ್ನಿ ಮುಡಿಸುವ ಕಾರ್ಯಕ್ರಮ ನೆರವೇರಲಿದೆ.
ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಪ್ರತಿದಿನ ಸಂಜೆ 6.30ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅ.11ರಂದು ಸೂರ್ಯಕಲಾ ಟ್ರಸ್ಟ್‌ನ ಶ್ರೀ ಕೆ.ಸಿ. ಅಭಿಷೇಕ್ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅ.12ರಂದು ಶ್ರೀ ಎಲಿವಾಳ ಸಿದ್ದಯ್ಯ ಸ್ವಾಮಿ ಕಲಾಬಳಗ, ಗೆಣಿಕೆಹಾಳ್ ತಂಡದಿಂದ ‘ವೀರ ಅಶ್ವತ್ಥಾಮ’, ‘ರೌದ್ರ ಭೀಮನ ಅಟ್ಟಹಾಸ’ ಹಾಗೂ ‘ದುರ್ಯೋಧನ ಅವಸಾನ’ ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ. ಅ.13ರಂದು ಮುರಳಿ ಮತ್ತು ತಂಡದಿಂದ ಕೋಲಾಟ, ಅ.14ರಂದು ತಾಂಡವ ನೃತ್ಯ ಕಲಾ ಟ್ರಸ್ಟ್‌ನ ಶ್ರೀ ವಿನೋದ್ ಕುಮಾರ್ ಹಾಗೂ ಪಟೇಲ್ ನಗರದ ಕಲಾವಿದರಿಂದ ನೃತ್ಯ ಪ್ರದರ್ಶನ ನಡೆಯಲಿದೆ.
ಅ.15ರಂದು ಲೋಕಕಲ್ಯಾಣಾರ್ಥವಾಗಿ ಸಂಜೆ 4 ಗಂಟೆಗೆ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ನೆರವೇರಲಿದೆ. ಅ.16ರಂದು ನಾಟ್ಯ ಅರ್ಚನ ಕಲಾ ಟ್ರಸ್ಟ್ ಹಾಗೂ ಶ್ರೀಮತಿ ಹೇಮಾವತಿ ಅವರ ತಂಡದಿಂದ ಭರತನಾಟ್ಯ ಪ್ರದರ್ಶನ, ಅ.17ರಂದು ಶ್ರೀ ನಾಗಭೂಷಣ ಕಲಾವೃಂದದಿಂದ ಉಡೇವು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅ.18ರಂದು ಚಂಡಿಯಾಗ ಮತ್ತು ಮಹಾಪೂರ್ಣಾಹುತಿ ನಂತರ ಅನ್ನದಾನ ಏರ್ಪಡಿಸಲಾಗಿದೆ. ಅ.19ರಂದು ತುಂಗ ಗಂಗಾ ಸಾಂಸ್ಕೃತಿಕ ಕಲಾ ಟ್ರಸ್ಟ್ ವತಿಯಿಂದ ‘ನಾರದ ಗರ್ವಭಂಗ’ ಹಾಸ್ಯ ನಾಟಕ ಹಾಗೂ ನೃತ್ಯ ವೈಭವ ಕಾರ್ಯಕ್ರಮ ನಡೆಯಲಿದೆ.
ಪ್ರತಿದಿನ ಬೆಳಿಗ್ಗೆ 5.30ರಿಂದ ವಿಶೇಷ ಪೂಜೆ, ಅಭಿಷೇಕ, ಎಲೆ ಪೂಜೆ ಹಾಗೂ ಶ್ರೀಚಕ್ರ ಸಹಿತ ಕುಂಕುಮಾರ್ಚನೆ ನಡೆಯಲಿದ್ದು, ಸಂಜೆ 4ರಿಂದ 6 ಗಂಟೆಯವರೆಗೆ ಶ್ರೀ ಲಲಿತ ಸಹಸ್ರನಾಮ ಪಾರಾಯಣ ಜರುಗಲಿದೆ. ರಾತ್ರಿ 9 ಗಂಟೆಗೆ ವಿಶೇಷ ಪಂಚಾಮೃತ ಅಭಿಷೇಕ ಹಾಗೂ ರಾತ್ರಿ 8.30ಕ್ಕೆ ಮಹಾಮಂಗಳಾರತಿ ನೆರವೇರಿಸಲಾಗುವುದು ಎಂದು ತಿಳಿಸಿದರು.
ಅಕ್ಟೋಬರ್ 15 ರಂದು ಸಂಜೆ 4 ಗಂಟೆಗೆ ನಡೆಯುವ
ಸತ್ಯನಾರಾಯಣ ಸ್ವಾಮಿ ಪೂಜೆಯಲ್ಲಿ ಭಾಗವಹಿಸಲು ಆಸಕ್ತಿಯುಳ್ಳ ದಂಪತಿಗಳು ತಮ್ಮ ಹೆಸರನ್ನು ಕಡ್ಡಾಯವಾಗಿ ನೋಂದಣಿ ಮಾಡಿಸಬೇಕೆಂದು ಈ ಸಂದರ್ಭದಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹನುಮಂತಪ್ಪ, ತಿಪ್ಪಣ್ಣ, ವೆಂಕಟೇಶ್, ಪ್ರಕಾಶ್, ಕೃಷ್ಣ, ಅರ್ಚಕ ಸಂತೋಷ್ ಸ್ವಾಮಿ, ಸುನಿಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.