LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Belagavi

ವಚನಾನುಸಂಧಾನ ವ್ಯಕ್ತಿತ್ವವನ್ನು ರೂಪಿಸುತ್ತದೆ : ತೋಂಟದ ಶ್ರೀ

ಬೆಳಗಾವಿ: ವಚನಗಳು ಕೇವಲ ಧಾರ್ಮಿಕ ಹಾಗೂ ತಾತ್ತ್ವಿಕ ಸಾಹಿತ್ಯದ ಸಂಪತ್ತಲ್ಲ; ಅವು ವ್ಯಕ್ತಿಯ ಅಂತರಂಗವನ್ನು ಪರಿವರ್ತಿಸಿ, ಬದುಕಿನ ಮೌಲ್ಯಗಳನ್ನು ರೂಪಿಸುವ ಜೀವನದರ್ಶನಗಳಾಗಿವೆ. ವಚನಗಳ ಅನುಸಂಧಾನ, ಅಧ್ಯಯನ ಮತ್ತು ಮನನದಿಂದ ವ್ಯಕ್ತಿತ್ವದಲ್ಲಿ ಘನತೆ ಮೂಡುವುದರ ಜೊತೆಗೆ ಸಮಾಜದಲ್ಲಿ ಸಮತೆ, ಸಹಬಾಳ್ವೆ ಮತ್ತು ಮಾನವೀಯ ಮೌಲ್ಯಗಳು ಗಟ್ಟಿಯಾಗುತ್ತವೆ ಎಂದು ಗದುಗಿನ ಜಗದ್ಗುರು ತೋಂಟದಾರ್ಯಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ಅವರು ಇಲ್ಲಿನ ಶಿವಬಸವ ನಗರದ ನಾಗನೂರು ರುದ್ರಾಕ್ಷಿ ಮಠದ ಎಸ್.ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಸಭಾಭವನದಲ್ಲಿ  ಭಾನುವಾರ ನಡೆದ ಡಾ. ಫ.ಗು. ಹಳಕಟ್ಟಿಯವರು ಸಂಕಲಿಸಿದ ‘ವಚನಶಾಸ್ತ್ರಸಾರ’ ಗ್ರಂಥ ರಚನೆಯ ಶತಮಾನೋತ್ಸವದ ಅಂಗವಾಗಿ ಬಸವರಾಜ ವೆಂಕಟಾಪುರ ಶರಣರು ರಚಿಸಿದ ‘ಶೂನ್ಯಲಿಂಗ ವಿವೇಚನೆ’ ವ್ಯಾಖ್ಯಾನ ಗ್ರಂಥದ ಲೋಕಾಪರ್ಣೆ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮುಂದುವರೆದು ಮಾತನಾಡಿದ ಶ್ರೀಗಳು ಬಸವಾದಿ ಶಿವಶರಣರು ತಮ್ಮ ಅನುಭವದ ನೆಲೆಯಲ್ಲಿ ರಚಿಸಿದ ವಚನಗಳು ಕನ್ನಡ ಸಾಹಿತ್ಯದ ಅಮೂಲ್ಯ ನಿಧಿಯಾಗಿವೆ. ಸರಳವಾದ ಪದಗಳಲ್ಲಿ ಆಳವಾದ ತಾತ್ತ್ವಿಕ ವಿಚಾರಗಳನ್ನು ಕಟ್ಟಿಕೊಟ್ಟಿರುವ ವಚನಗಳು ಓದುಗರನ್ನು ಆತ್ಮಾವಲೋಕನದತ್ತ ಕರೆದೊಯ್ಯುತ್ತವೆ. ವಚನಗಳನ್ನು ಓದುವುದು ಸರಳವೆನಿಸಿದರೂ ಅವುಗಳ ಒಳಾರ್ಥವನ್ನು ಸಂಪೂರ್ಣವಾಗಿ ಗ್ರಹಿಸುವುದು ಅಷ್ಟು ಸುಲಭವಲ್ಲ ಎಂದರು. ಡಾ. ಫ.ಗು. ಹಳಕಟ್ಟಿಯವರ ವಚನಸಾಹಿತ್ಯದ ಸೇವೆಯನ್ನು ಸ್ಮರಿಸಿದ ಅವರು ಹಳಕಟ್ಟಿಯವರು ತಮ್ಮ ಜೀವನವನ್ನೇ ವಚನಗಳ ಸಂರಕ್ಷಣೆ, ಸಂಗ್ರಹ, ಸಂಶೋಧನೆ ಮತ್ತು ಸಂಪಾದನೆಗೆ ಮುಡಿಪಾಗಿಟ್ಟ ಪರಿಣಾಮವಾಗಿ ಇಂದು ಅಪಾರ ಪ್ರಮಾಣದ ವಚನಸಾಹಿತ್ಯ ನಮ್ಮ ಕೈಗೆಟುಕಿದೆ. ಹಳೆಯ ಹಸ್ತಪ್ರತಿಗಳು, ಚದುರಿಹೋಗಿದ್ದ ವಚನಗಳು ಮತ್ತು ಅಲಭ್ಯವಾಗಿದ್ದ ಸಾಹಿತ್ಯವನ್ನು ಹುಡುಕಿ ಸಂಗ್ರಹಿಸಿ, ಸಂಶೋಧಿಸಿ, ಪ್ರಕಟಿಸುವ ಮೂಲಕ ಹಳಕಟ್ಟಿಯವರು ಕನ್ನಡ ಸಾಹಿತ್ಯ ಲೋಕಕ್ಕೆ ಅಪೂರ್ವ ಕೊಡುಗೆ ನೀಡಿದ್ದಾರೆ ಎಂದರು.

ವಚನಗಳ ಅಧ್ಯಯನ ಕೇವಲ ಪಂಡಿತರ ವಲಯಕ್ಕೆ ಸೀಮಿತವಾಗಬಾರದು. ಸಾಮಾನ್ಯ ಓದುಗರಿಗೂ ವಚನಗಳ ಅಂತರಂಗ ಅರ್ಥವಾಗುವಂತೆ ಅವುಗಳ ಕುರಿತು ಸರಳವಾದ ವ್ಯಾಖ್ಯಾನ, ಟೀಕೆ, ಭಾಷ್ಯ ಮತ್ತು ಸಹಚಿಂತನೆಯ ಕೃತಿಗಳು ಹೆಚ್ಚು ಹೆಚ್ಚು ಪ್ರಕಟವಾಗಬೇಕು. ಆಗ ವಚನಗಳಲ್ಲಿರುವ ಜೀವನಮೌಲ್ಯಗಳು ಸಮಾಜದ ಎಲ್ಲ ವರ್ಗಗಳಿಗೂ ತಲುಪಲು ಸಾಧ್ಯವಾಗುತ್ತದೆ. ಈ ದೃಷ್ಟಿಯಿಂದ ಬಸವರಾಜ ವೆಂಕಟಾಪುರ ಶರಣರು ರಚಿಸಿರುವ ‘ಶೂನ್ಯಲಿಂಗ ವಿವೇಚನೆ’ ಕೃತಿ ಮಹತ್ವ ಪಡೆದಿದೆ ಎಂದು ತೋಂಟದ ಶ್ರೀ ಹೇಳಿದರು.

 ‘ಶೂನ್ಯಲಿಂಗ ವಿವೇಚನೆ’ ಕೃತಿಯ ಲೋಕಾರ್ಪಣೆ ನೆರವೇರಿಸಿ ಮಾತನಾಡಿದ ಮಂಡ್ಯದ ಖ್ಯಾತ ವಿದ್ವಾಂಸ ಡಾ. ಪ್ರದೀಪಕುಮಾರ ಹೆಬ್ರಿ, ಅನುಭವಮೂಲದ ವಚನಗಳಲ್ಲಿರುವ ಗಹನವಾದ ತಾತ್ತ್ವಿಕ ವಿಚಾರಗಳನ್ನು ಆಧುನಿಕ ಪರಿಭಾಷೆಯಲ್ಲಿ ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಸರಳ, ಸುಲಭ ಮತ್ತು ಸುಸ್ಪಷ್ಟ ಶೈಲಿಯಲ್ಲಿ ನಿರೂಪಿಸಿರುವುದು ಈ ಕೃತಿಯ ವಿಶೇಷತೆ. ವಚನಗಳ ಭಾಷೆ ಸರಳವಾಗಿದ್ದರೂ ಅವುಗಳ ಅಂತರಂಗದಲ್ಲಿ ಅಡಗಿರುವ ತತ್ತ್ವದ ಆಳ ಅಪಾರವಾಗಿದೆ. ಶರಣರ ಅನುಭವದ ಹಿನ್ನೆಲೆಯಲ್ಲಿ ರೂಪುಗೊಂಡ ಈ ವಚನಗಳನ್ನು ಕೇವಲ ಮೇಲ್ನೋಟದ ಅರ್ಥದಲ್ಲಿ ಓದುವುದರಿಂದ ಅವುಗಳ ಸಂಪೂರ್ಣ ಆಶಯವನ್ನು ಗ್ರಹಿಸಲು ಸಾಧ್ಯವಿಲ್ಲ. ಅವುಗಳ ತಾತ್ತ್ವಿಕ ಹಿನ್ನೆಲೆ, ಅನುಭಾವದ ನೆಲೆ ಮತ್ತು ಶರಣರ ಬದುಕಿನ ದೃಷ್ಟಿಕೋನವನ್ನು ಅರಿತುಕೊಂಡಾಗ ಮಾತ್ರ ವಚನಗಳ ನಿಜವಾದ ಅರ್ಥ ತೆರೆದುಕೊಳ್ಳುತ್ತದೆ. ಈ ನಿಟ್ಟಿನಲ್ಲಿ ‘ಶೂನ್ಯಲಿಂಗ ವಿವೇಚನೆ’ ಮುಂದಿನ ಪೀಳಿಗೆಗೆ ಮಾರ್ಗದರ್ಶಕ ಕೃತಿಯಾಗಲಿದೆ. ಶರಣರ ವಚನಗಳು ಮನುಷ್ಯನನ್ನು ಹೊರಗಿನ ಆಡಂಬರದಿಂದ ಅಂತರಂಗದ ಶುದ್ಧತೆಯ ಕಡೆಗೆ ಕರೆದೊಯ್ಯುತ್ತವೆ. ಕಾಯಕ, ದಾಸೋಹ, ಸಮತೆ, ಕರುಣೆ, ಸತ್ಯ, ಪ್ರಾಮಾಣಿಕತೆ ಮತ್ತು ಆತ್ಮಾನುಸಂಧಾನದಂತಹ ಮೌಲ್ಯಗಳನ್ನು ಬದುಕಿನ ಭಾಗವಾಗಿಸಿಕೊಳ್ಳುವಂತೆ ಅವು ಪ್ರೇರೇಪಿಸುತ್ತವೆ. ಹೀಗಾಗಿ ವಚನಗಳ ಅಧ್ಯಯನವು ಕೇವಲ ಸಾಹಿತ್ಯದ ಅಧ್ಯಯನವಲ್ಲ; ಅದು ಬದುಕಿನ ಅಧ್ಯಯನವೂ ಆಗಿದೆ ಎಂದರು.

ಕಾರ್ಯಕ್ರಮದ ನೇತೃತ್ವವನ್ನು ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ವಹಿಸಿದ್ದರು.

 ಕಾರ್ಯಕ್ರಮದಲ್ಲಿ ಬೈಲೂರಿನ ಬಸವ ಮಹಾಂತ ಸ್ವಾಮೀಜಿ, ಬಸವಕಲ್ಯಾಣದ ಶಿವಾನಂದ ಸ್ವಾಮೀಜಿ, ಬಸವ ದೇವರು, ಶಿರಗುಪ್ಪದ ಬಸವಭೂಷಣ ಸ್ವಾಮೀಜಿ ಹಾಗೂ ಹಾರೂಗೇರಿಯ ಐ.ಆರ್. ಮಠಪತಿ ಅವರು ಮಾತನಾಡಿ ವಚನಸಾಹಿತ್ಯದ ಮಹತ್ವ ಮತ್ತು ಅದರ ಅಧ್ಯಯನದ ಅಗತ್ಯವನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಸಾಹಿತಿ ಪ್ರಕಾಶ ಗಿರಿಮಲ್ಲನವರ ಕೃತಿಯ ಪರಿಚಯ ಮಾಡಿಕೊಟ್ಟರು. ಕೃತಿಯ ಲೇಖಕರಾದ  ಬಸವರಾಜಪ್ಪ ವೆಂಕಟಾಪುರ ಶರಣರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ ತೋಂಟದ ಸಿದ್ಧಲಿಂಗ ಸ್ವಾಮೀಜಿಯವರಂತಹ ಗುರುಗಳ ಕೃಪೆಯಿಂದ ತಮ್ಮ ಬದುಕು ದಿವ್ಯಪಥದತ್ತ ಸಾಗಿತು. ವಚನಸಾಹಿತ್ಯದ ಅಧ್ಯಯನ,ಶರಣರ ಚಿಂತನೆಗಳು ತಮ್ಮ ಬದುಕನ್ನು ರೂಪಿಸಿದ ಬಗೆಯನ್ನು ವಿವರಿಸಿದರು.

ಸಮಾರಂಭಕ್ಕೆ ಶಿರಗುಪ್ಪ, ಹೆಬ್ಬಾಳ, ಬೆಳಕೂಡ, ಸಿಂಧನೂರು ಹಾಗೂ ಗದಗ ಸೇರಿದಂತೆ ವಿವಿಧ ಪ್ರದೇಶಗಳಿಂದ ಆಗಮಿಸಿದ್ದ ಗ್ರಂಥದಾಸೋಹಿಗಳನ್ನು  ಶ್ರೀಗಳು  ಸನ್ಮಾನಿಸಿದರು.

ಮಾತೆ ವಾಗ್ದೇವಿತಾಯಿ, ಸಿದ್ಧರಾಮಪ್ಪ ನಡಕಟ್ಟಿ, ಡಾ. ಅವಿನಾಶ ಕವಿ, ಲಿಂಗಾಯತ ಕ್ರಾಂತಿ ಸಂಪಾದಕರಾದ ಶಿವಾನಂದ ಮೆಟ್ಯಾಲ್, ಶಂಕರ ಗುಡಸ, ಸಿ.ಎಂ. ನರಸಣ್ಣವರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಪ್ರೇಮಕ್ಕ ಅಂಗಡಿ  ಸ್ವಾಗತಿಸಿದರು. ರಾಜಶೇಖರ ಪಾಟೀಲ ನಿರೂಪಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯುಪಿಐ ಬಳಕೆದಾರರಿಗೆ ಹೊಸ ಶುಲ್ಕವಿಲ್ಲ: ರಾಜ್ಯಸಭೆಯಲ್ಲಿ ವಿಪಕ್ಷಗಳ ಸಭಾತ್ಯಾಗದ ನಡುವೆ ಪ್ರಮುಖ ಹಣಕಾಸು ಮಸೂದೆಗಳಿಗೆ ಅಂಗೀಕಾರಬೆಳಗಾವಿಯ 'ಪ್ರಯತ್ನ' ಸಂಘಟನೆಯಿಂದ ಖಾನಾಪುರದ ಸರ್ಕಾರಿ ಪಿಯು ಕಾಲೇಜಿಗೆ 39 ಡೆಸ್ಕ್ ದೇಣಿಗೆಹುಬ್ಬಳ್ಳಿ ಧಾರವಾಡ 74 ಪಶ್ಚಿಮ ವಿಧಾನ ಸಭಾ ಮತ ಕ್ಷೇತ್ರದ ವತಿಯಿಂದ ಸಂಘಟನ್ ಸೃಜನ ಅಭಿಯಾನ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಲು ಪ್ರಾಮಾಣಿಕ ಪ್ರಯತ್ನ : ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ  ಚಂದ್ರಶೇಖರ ನುಗ್ಲಿ  ಭರವಸೆರಾಜ್ಯದ ರೈತರಿಗೆ ಕೂಡಲೇ ಬರ ಪರಿಹಾರ ಘೋಷಿಸಿ: ಎನ್. ರವಿಕುಮಾರ್.ಕಿತ್ತೂರು ಗತವೈಭವಕ್ಕೆ ಹೊಸ ಸ್ಪರ್ಶ: ಪರಂಪರೆ ಸಂರಕ್ಷಣೆಗೆ ತಜ್ಞರ ಮಹತ್ವದ ಸಲಹೆಗಳುಯುವಕರು ಆರೋಗ್ಯಯುತ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು : ಸರ್ವೋತ್ತಮ ಜಾರಕಿಹೊಳಿಪ್ರೌಢಶಾಲಾ ಮಕ್ಕಳಿಗಾಗಿ ಹಾಸ್ಯ ಭಾಷಣ ಸ್ಪರ್ಧೆ ಸ್ಪರ್ಧೆಗಳು ಮಕ್ಕಳಲ್ಲಿ ಆತ್ಮ ವಿಶ್ವಾಸ ಹೆಚ್ಚಿಸುತ್ತವೆ : ಡಾ. ಅರವಿಂದ ಕುಲಕರ್ಣಿವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ವಸತಿ ನಿಲಯಗಳು ಪೂರಕವಾಗಲಿವಚನಾನುಸಂಧಾನ ವ್ಯಕ್ತಿತ್ವವನ್ನು ರೂಪಿಸುತ್ತದೆ : ತೋಂಟದ ಶ್ರೀ