ನಾಲತವಾಡ: ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಿಸುವುದರ ಜತೆಗೆ, ಅವರಿಗೆ ದೊರೆಯುತ್ತಿರುವ ಸೌಲಭ್ಯಗಳ ಗುಣಮಟ್ಟವನ್ನು ಖಾತರಿಪಡಿಸುವುದು ಅಗತ್ಯವಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ವಿಶೇಷ ಘಟಕ ಯೋಜನೆಯ ಅಧೀಕ್ಷಕ ಎಸ್.ಎಚ್. ಜೈನಾಪುರ ಹೇಳಿದರು.
ಸಮೀಪದ ರಕ್ಕಸಗಿ ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಶನಿವಾರ ಅಧಿಕಾರಿಗಳ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿ.ಸರ್ಕಾರ ವಿದ್ಯಾರ್ಥಿಗಳ ಶಿಕ್ಷಣ ಹಾಗೂ ಅಭಿವೃದ್ಧಿಗಾಗಿ ವಿವಿಧ ಸೌಲಭ್ಯಗಳನ್ನು ಒದಗಿಸುತ್ತಿದೆ. ವಿದ್ಯಾರ್ಥಿಗಳು ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ಶಿಕ್ಷಣ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕು. ವಸತಿ ನಿಲಯಗಳಲ್ಲಿನ ಮೂಲಸೌಕರ್ಯ, ಆಹಾರ ವ್ಯವಸ್ಥೆ, ಸ್ವಚ್ಛತೆ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕುರಿತು ಅಧಿಕಾರಿಗಳು ನಿರಂತರವಾಗಿ ಗಮನಹರಿಸಬೇಕು.
ಅಧಿಕಾರಿಗಳ ವಾಸ್ತವ್ಯ ಕಾರ್ಯಕ್ರಮದ ಮೂಲಕ ವಸತಿ ನಿಲಯಗಳ ವಾಸ್ತವ ಸ್ಥಿತಿ ತಿಳಿದುಕೊಂಡು ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಸ್ಪಂದಿಸಲು ಸಾಧ್ಯವಾಗಲಿದೆ. ವಿದ್ಯಾರ್ಥಿಗಳೊಂದಿಗೆ ನೇರವಾಗಿ ಸಂವಾದ ನಡೆಸಿ ಅವರ ಅಗತ್ಯಗಳನ್ನು ತಿಳಿದುಕೊಳ್ಳುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೆಶಕಿ ಬಸಂತಿ.ಜಿ.ಮಠ ಮಾತನಾಡಿ ವಸತಿ ನಿಲಯಗಳಲ್ಲಿನ ವಾಸ್ತವ ಪರಿಸ್ಥಿತಿಯನ್ನು ಅರಿತುಕೊಂಡು, ವಿದ್ಯಾರ್ಥಿಗಳಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳು ಸಮರ್ಪಕವಾಗಿ ತಲುಪುತ್ತಿವೆಯೇ ಎಂಬುದನ್ನು ಪರಿಶೀಲಿಸುವ ಉದ್ದೇಶದಿಂದ ಅಧಿಕಾರಿಗಳ ವಾಸ್ತವ್ಯ ಕಾರ್ಯಕ್ರಮ ರೂಪಿಸಲಾಗಿದೆ. ವಿದ್ಯಾರ್ಥಿಗಳೊಂದಿಗೆ ನೇರವಾಗಿ ಸಂವಾದ ನಡೆಸಿ ಅವರ ಸಮಸ್ಯೆಗಳನ್ನು ತಿಳಿದುಕೊಳ್ಳುವುದರಿಂದ ನಿಲಯಗಳಲ್ಲಿರುವ ನೈಜ ಪರಿಸ್ಥಿತಿ ತಿಳಿಯಲಿದೆ. ಮಕ್ಕಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಅಧಿಕಾರಿಗಳು ವಸತಿ ನಿಲಯಗಳಲ್ಲಿ ವಾಸ್ತವ್ಯ ಹೂಡಿ ವಿದ್ಯಾರ್ಥಿಗಳೊಂದಿಗೆ ಸಮಯ ಕಳೆಯುವ ಮೂಲಕ ಅವರ ಸಮಸ್ಯೆಗಳನ್ನು ಆಲಿಸಲಿದ್ದಾರೆ ಎಂದರು.
ಈ ವೇಳೆ ಪ್ರಾಚಾರ್ಯ ಯಲ್ಲಪ್ಪ ಕನ್ನೂರ, ನಿಲಯ ಪಾಲಕರಾದ ಎಸ್.ಜಿ. ವಾಲೀಕಾರ, ಎಸ್.ಎನ್. ಮಲ್ಲಾಡೆ, ಎಸ್.ಎಂ. ಕಲಬುರ್ಗಿ, ಎನ್.ವಿ. ಕೋರಿ, ಮಹಾಂತೇಶ ತಾಳಿಕೋಟಿ, ಎನ್.ಸಿ. ಗುಡಗುಂಟಿ, ಎಸ್.ಟಿ. ಸಲಗರ, ಯಲ್ಲಪ್ಪ ಬ್ಯಾಲ್ಯಾಳ ಸೇರಿದಂತೆ ಹಲವರು ಇದ್ದರು.