ಬೆಳಗಾವಿ: ರಾಜ್ಯದಲ್ಲಿ ಮಳೆ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ತಕ್ಷಣ ಬರ ಪರಿಹಾರ ಘೋಷಿಸಿ, ಬೆಳೆಹಾನಿಗೊಳಗಾದ ರೈತರ ನೆರವಿಗೆ ಧಾವಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಆಗ್ರಹಿಸಿದರು.

ಸೋಮವಾರ ನಗರದ ಹೋರ ವಲಯದ ಖಾಸಗಿ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯಲ್ಲಿ ಭಾನುವಾರ ದಿಂದ ಬರ ಅಧ್ಯಯನದ ಕಾರ್ಯವನ್ನು ಮಾಡಲಾಗುತ್ತಿದೆ. ಬೆಳಗಾವಿ ಜಿಲ್ಲೆಯ ವಿವಿಧ ಭಾಗಗಳಿಗೆ ಭೇಟಿ ನೀಡಿ ರೈತರೊಂದಿಗೆ ನೇರವಾಗಿ ಮಾತುಕತೆ ನಡೆಸಿದ ಅವರು, ಜಿಲ್ಲೆಯಲ್ಲಿನ ಬರ ಪರಿಸ್ಥಿತಿ ಹಾಗೂ ರೈತರ ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆಯುವ ಕಾರ್ಯ ಮಾಡಲಾಗಿದೆ ಎಂದರು.
ಇಂದಿನ ಕೃಷಿಯಲ್ಲಿ ಬೀಜ, ರಸಗೊಬ್ಬರ, ಕೀಟನಾಶಕ, ಕಾರ್ಮಿಕರ ಕೂಲಿ ಹಾಗೂ ಯಂತ್ರೋಪಕರಣಗಳ ಬಾಡಿಗೆ ಸೇರಿದಂತೆ ಉತ್ಪಾದನಾ ವೆಚ್ಚ ಗಣನೀಯವಾಗಿ ಹೆಚ್ಚಾಗಿದೆ. ಆದರೆ ಮಳೆ ಕೊರತೆಯಿಂದ ಬೆಳೆ ಹಾನಿಯಾದಾಗ ರೈತರು ಆದಾಯ ಮಾತ್ರವಲ್ಲದೆ, ಕೃಷಿಗೆ ಮಾಡಿದ ಮೂಲ ಹೂಡಿಕೆಯನ್ನೂ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಕೇವಲ ಸಾಂಕೇತಿಕ ಪರಿಹಾರ ನೀಡದೆ, ಬೆಳೆಹಾನಿಯ ಪ್ರಮಾಣ, ರೈತರ ನಷ್ಟ ಹಾಗೂ ಉತ್ಪಾದನಾ ವೆಚ್ಚವನ್ನು ಪರಿಗಣಿಸಿ ಸೂಕ್ತ ಪರಿಹಾರ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಬೆಳೆ ವಿಮೆಗೆ ಅರ್ಹರಾಗಿರುವ ರೈತರಿಗೆ ವಿಮಾ ಮೊತ್ತ ತ್ವರಿತವಾಗಿ ದೊರೆಯುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಕಚೇರಿಯಲ್ಲಿ ಕುಳಿತು ಅಧಿಕಾರಿಗಳಿಂದ ವರದಿ ಪಡೆಯುವುದಕ್ಕೆ ಸೀಮಿತವಾಗದೆ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿ ಪರಿಶೀಲಿಸಬೇಕು ಎಂದು ಆಗ್ರಹಿಸಿದರು.

ಕಾಗದದ ಮೇಲಿನ ಸಮೀಕ್ಷೆ ಬೇಡ: ಬೆಳೆಹಾನಿ ಸಮೀಕ್ಷೆಯಲ್ಲಿ ಲಾವಣಿ ತೆಗೆದುಕೊಂಡು ಕೃಷಿ ಮಾಡುವ ಅರ್ಹ ರೈತರನ್ನು ಯಾವುದೇ ಕಾರಣಕ್ಕೂ ಕೈಬಿಡಬಾರದು. ತಾಲೂಕು ಅಥವಾ ಹೋಬಳಿ ಮಟ್ಟಕ್ಕೆ ಮಾತ್ರ ಸಮೀಕ್ಷೆಯನ್ನು ಸೀಮಿತಗೊಳಿಸದೆ, ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೆಳೆಹಾನಿಯ ಪ್ರಮಾಣವನ್ನು ಸಮರ್ಪಕವಾಗಿ ದಾಖಲಿಸಿ, ಅರ್ಹ ಪ್ರತಿಯೊಬ್ಬ ರೈತನಿಗೂ ಪರಿಹಾರ ತಲುಪುವ ವ್ಯವಸ್ಥೆ ಮಾಡಬೇಕು. ರೈತರು ಪರಿಹಾರಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿಯನ್ನು ಸರ್ಕಾರ ನಿರ್ಮಿಸಬಾರದು ಎಂದು ಹೇಳಿದರು.
ಸಾಲದ ಹೊರೆ ಹೆಚ್ಚುತ್ತಿರುವ ರೈತರಿಗೆ ನೆರವು ಅಗತ್ಯ : ಬೆಳೆ ನಷ್ಟದಿಂದ ರೈತರ ಆದಾಯ ಕುಸಿದಿರುವ ಸಂದರ್ಭದಲ್ಲಿ ಕೃಷಿ ಸಾಲ ಸೇರಿದಂತೆ ಇತರ ಆರ್ಥಿಕ ಹೊರೆ ಮತ್ತಷ್ಟು ಒತ್ತಡ ತಂದಿದೆ. ಹೀಗಾಗಿ ಬರಪೀಡಿತ ಪ್ರದೇಶಗಳ ರೈತರ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸಿ ಸರ್ಕಾರ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಮುಂದಿನ ಹಂಗಾಮಿನ ಕೃಷಿ ಚಟುವಟಿಕೆಗಳನ್ನು ಆರಂಭಿಸಲು ಅಗತ್ಯ ನೆರವು ಮತ್ತು ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ಬರದ ಪರಿಣಾಮ ಕೇವಲ ಬೆಳೆಗಳಿಗೆ ಸೀಮಿತವಾಗದೆ, ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆಯೂ ಉಂಟಾಗುವ ಸಾಧ್ಯತೆಯಿದೆ. ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಮುನ್ನ ಅಗತ್ಯವಿರುವ ಗ್ರಾಮಗಳಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ರೈತರಿಗೆ ಮೂಲಭೂತ ನೆರವು ಒದಗಿಸಲು ಸರ್ಕಾರ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದರು.
ರೈತರ ವಿಚಾರದಲ್ಲಿ ರಾಜಕೀಯ ಮಾಡದೆ ಕಾರ್ಯನಿರ್ವಹಿಸಲಿ: ರೈತರ ಸಂಕಷ್ಟದ ಸಂದರ್ಭದಲ್ಲಿ ರಾಜಕೀಯ ಆರೋಪ-ಪ್ರತ್ಯಾರೋಪಗಳಲ್ಲಿ ಕಾಲಹರಣ ಮಾಡದೆ, ನೆಲಮಟ್ಟದಲ್ಲಿ ಕಾರ್ಯನಿರ್ವಹಿಸಿ ರೈತರ ನೋವು ಮತ್ತು ನಷ್ಟವನ್ನು ಅರಿತು ತಕ್ಷಣ ಪರಿಹಾರ ಘೋಷಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ರೈತರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಸರ್ಕಾರ ವಿಫಲವಾದರೆ, ಬಿಜೆಪಿ ರೈತರ ಪರವಾಗಿ ಧ್ವನಿ ಎತ್ತಿ ರಾಜ್ಯಾದ್ಯಂತ ಹಾಗೂ ಮುಂಬರುವ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.
“ರೈತ ದೇಶದ ಬೆನ್ನೆಲುಬು ಎಂದು ಹೇಳುವುದಷ್ಟೇ ಸಾಕಾಗುವುದಿಲ್ಲ. ಸಂಕಷ್ಟದ ಸಂದರ್ಭದಲ್ಲಿ ರೈತರ ಬೆನ್ನಿಗೆ ಸರ್ಕಾರ ನಿಲ್ಲಬೇಕು. ಬೆಳೆ ಹಾನಿಗೊಳಗಾದ ರೈತರಿಗೆ ತಕ್ಷಣ ಪರಿಹಾರ ನೀಡಿ, ಮುಂದಿನ ಕೃಷಿ ಹಂಗಾಮಿಗೆ ರೈತರು ಸಿದ್ಧರಾಗುವಂತೆ ಅಗತ್ಯ ನೆರವು ನೀಡಬೇಕು. ಬರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಉನ್ನತ ಮಟ್ಟದ ಸಭೆ ನಡೆಸಬೇಕು. ಬೆಳೆಹಾನಿಯ ಸಮಗ್ರ ಸಮೀಕ್ಷೆ, ತ್ವರಿತ ಪರಿಹಾರ, ಬೆಳೆ ವಿಮೆ ವಿತರಣೆ, ಕುಡಿಯುವ ನೀರು ಹಾಗೂ ಮೇವಿನ ವ್ಯವಸ್ಥೆ ಸೇರಿದಂತೆ ರೈತರ ಹಿತಕ್ಕಾಗಿ ಸಮಗ್ರ ಪ್ಯಾಕೇಜ್ ರೂಪಿಸಬೇಕು” ಎಂದು ಒತ್ತಾಯಿಸಿದರು.
ಈ ವೇಳೆ ಜಿಲ್ಲಾ ಅಧ್ಯಕ್ಷ ಸುಭಾಸ್ ಪಾಟೀಲ, ಶಾಸಕ ಅಭಯ ಪಾಟೀಲ, ಶಾಸಕ ವಿಠ್ಠಲ ಹಲಗೇಕರ್, ಮಾಜಿ ಶಾಸಕ ಸಂಜಯ ಪಾಟೀಲ, ಮಾಜಿ ಶಾಸಕ ಅನಿಲ ಬೆನಕೆ, ರೈತ ಮೋರ್ಚಾ ಅಧ್ಯಕ್ಷ ಜಗದೀಶ ಬೂದಿಹಾಳ, ಮಾಧ್ಯಮ ಸಂಚಾಲಕ ಸಚಿನ್ ಕಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಮಾದಮ್ಮನವರ, ಧನಶ್ರೀ ದೇಸಾಯಿ, ರಾಜಶೇಖರ ಡೋಣಿ, ಮುರಗೇಂದ್ರಗೌಡ ಪಾಟೀಲ್ ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡಿದ್ದರು.