ಬಳ್ಳಾರಿ, ಆ.10:: ಕಾಂಗ್ರೆಸ್ ಪಕ್ಷವು ಇಂದಿರಾ ಗಾಂಧಿ ಅವರ ಕಾಲದಲ್ಲಿ ವಿಮಾನದ ವೇಗದಲ್ಲಿ ಬೆಳೆಯುತ್ತಿತ್ತು. ಆದರೆ ಇಂದು ಭ್ರಷ್ಟಾಚಾರ ಮತ್ತು ಆಡಳಿತ ವೈಫಲ್ಯದಿಂದಾಗಿ ಅದರ ವೇಗ ಎತ್ತಿನಗಾಡಿಯಂತಾಗಿದೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ರಾಜ್ಯದಲ್ಲಿನ ಕಾಂಗ್ರೆಸ್ ಪಕ್ಷದ ಸರ್ಕಾರವನ್ನು ಟೀಕಿಸಿದರು.
ನಗರದ ತಮ್ಮ ಗೃಹ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಶ್ರೀರಾಮುಲು , ಕಾಂಗ್ರೆಸ್ ಪಕ್ಷದವರು ಮೂರು ತಲೆಮಾರುಗಳಿಗೆ ಆಗುವಷ್ಟು ಭ್ರಷ್ಟಾಚಾರ ಮಾಡಿದ್ದಾರೆ ಎಂದು ಆರೋಪಿಸಿದ ಶ್ರೀರಾಮುಲು, 1948ರಲ್ಲಿ ಜವಾಹರಲಾಲ್ ನೆಹರು ಅವರ ಕಾಲದಲ್ಲಿ ನಡೆದ ಜೀಪ್ ಹಗರಣ ದೇಶದಲ್ಲಿ ನಡೆದ ಪ್ರಮುಖ ಹಗರಣಗಳಲ್ಲಿ ಒಂದಾಗಿದೆ ಎಂದು ಹೇಳಿದರು.
ನೆಹರು ಮತ್ತು ಇಂದಿರಾ ಗಾಂಧಿ ಅವರ ಕಾಲದ ವಿಚಾರಗಳನ್ನು ಪ್ರಸ್ತಾಪಿಸಲು ಕಾರಣವಿದೆ. ಇಂದು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಭ್ರಷ್ಟಾಚಾರದ ಆರೋಪ ಎದುರಿಸಿ ಜೈಲಿಗೆ ಹೋಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಿ. ನಾಗೇಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಲಾಗಿದೆ ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದರು.
ವಾಲ್ಮೀಕಿ ನಿಗಮದ ಹಣದ ಅಕ್ರಮ ವರ್ಗಾವಣೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ ಅವರು, ಈ ಪ್ರಕರಣದಲ್ಲಿ ಚಂದ್ರಶೇಖರ್ ಅವರ ಸಾವಿಗೂ ನಾಗೇಂದ್ರ ಅವರೇ ಕಾರಣ ಎಂಬ ಆರೋಪಿಸಿ ಈ ಘಟನೆಯಿಂದ ಚಂದ್ರಶೇಖರ್ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ ಎಂದರು.
ಬೀದಿ ಬದಿ ವ್ಯಾಪಾರಿಗಳ ಬದುಕಿಗೆ ತೊಂದರೆ ಉಂಟಾಗಿದೆ ಎಂದು ಆರೋಪಿಸಿದ ಅವರು, "ಬೀದಿ ಬದಿ ವ್ಯಾಪಾರಿಗಳ ಜೀವನವನ್ನು ಬೀದಿಗೆ ತಂದಿರುವುದು ಸರಿಯೇ?" ಎಂದು ನಾಗೇಂದ್ರ ಅವರನ್ನು ಪ್ರಶ್ನಿಸಿದರು.
ನಾಗೇಂದ್ರ ಅವರ ವಿರುದ್ಧದ ಪ್ರಕರಣಗಳ ಹಿನ್ನೆಲೆಯಲ್ಲಿ ನ್ಯಾಯಾಲಯವು ದೇಶ ಬಿಟ್ಟು ಹೋಗದಂತೆ ಆದೇಶಿಸಿರುವುದನ್ನು ಉಲ್ಲೇಖಿಸಿದ ಶ್ರೀರಾಮುಲು, ಮುಂದಿನ ದಿನಗಳಲ್ಲಿ ಬಳ್ಳಾರಿಗೆ ತೆರಳದಂತೆ ಆದೇಶ ಬಂದರೆ ಬಳ್ಳಾರಿ ಜನರ ಪರಿಸ್ಥಿತಿ ಏನಾಗಲಿದೆ ಎಂದು ಪ್ರಶ್ನಿಸಿದರು.
"ನಾಗೇಂದ್ರ ಅವರಿಗೆ ನಾಚಿಕೆ, ಮಾನ, ಮರ್ಯಾದೆ ಇದ್ದರೆ ಸ್ವಯಂಪ್ರೇರಿತವಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು" ಎಂದು ಅವರು ಆಗ್ರಹಿಸಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಬೇಕು. ಅವರು ರಾಜೀನಾಮೆ ನೀಡುವವರೆಗೆ ವಿಧಾನಸಭೆ ಅಧಿವೇಶನ ಸುಗಮವಾಗಿ ನಡೆಯದಂತೆ ಹೋರಾಟ ನಡೆಸುವಂತೆ ಪಕ್ಷದ ನಾಯಕರಿಗೆ ಮನವಿ ಮಾಡುತ್ತೇನೆ ಎಂದರು.
ಇದೇ ವೇಳೆ, ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ವಾರಕ್ಕೊಮ್ಮೆ ಸಚಿವರನ್ನು ಬದಲಾಯಿಸುವಂತಹ ಪರಿಸ್ಥಿತಿ ನಿರ್ಮಾಣವಾದರೆ ಮಾತ್ರ ಕಾಂಗ್ರೆಸ್‌ನಲ್ಲಿನ ಬಂಡಾಯಕ್ಕೆ ಪರಿಹಾರ ಸಿಗಬಹುದು. ಸರ್ಕಾರದೊಳಗಿನ ಈ ಗೊಂದಲವನ್ನು ನೋಡುತ್ತಿದ್ದರೆ ಮುಖ್ಯಮಂತ್ರಿ ಕುರ್ಚಿಯೂ ಅಲುಗಾಡುವ ಸಾಧ್ಯತೆ ಕಾಣುತ್ತಿದೆ ಎಂದು ಶ್ರೀರಾಮುಲು ವ್ಯಂಗ್ಯವಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಂಸದ ಸಣ್ಣ ಫಕೀರಪ್ಪ, ಮಹಾನಗರ ಪಾಲಿಕೆ ಸದಸ್ಯರಾದ ಶ್ರೀನಿವಾಸ್ ಮೊತ್ಕಾರ್, ಹನುಮಂತಪ್ಪ, ಗುಡಿಗಂಟಿ ಹನುಮಂತ, ಕೆ.ಎಸ್. ಅಶೋಕ್, ಮುಖಂಡರಾದ ಓಬಳೇಶ್, ತಿಮ್ಮಪ್ಪ, ವೇಮಣ್ಣ, ಭೀಮಲಿಂಗ, ಸುಗುಣ ಸೇರಿದಂತೆ ಇತರರಿದ್ದರು.