ಹಸಿರು ಕ್ರಾಂತಿ ವರದಿ ವಿಜಯಪುರ
ಸಾರ್ವಜನಿಕರಿಗೆ ವಿದ್ಯುತ್ ಸಂಪರ್ಕ ನೀಡಲು ಸರ್ಕಾರ ಹೊರಡಿಸಿದ ಆದೇಶವನ್ನೇ ಗಾಳಿಗೆ ತೂರಿದ ಇಂಧನ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸದಿದ್ದರೇ ಸೆ.15 ರಂದು ಉಗ್ರಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ರೈತ ಭಾರತ ಪಕ್ಷವು ಜಿಲ್ಲಾಧಿಕಾರಿಗಳ ಮೂಲಕ ಸಿಎಂ, ಡಿಸಿಎಂ ಸೇರಿದಂತೆ ಇಲಾಖೆಯ ಸಚಿವರಿಗೆ ಮನವಿಪತ್ರ ನೀಡಿ ಎಚ್ಚರಿಕೆ ನೀಡಿದರು.
ಇಂಧನ ಇಲಾಖೆ ಹಾಗೂ ನಗರಾಭಿವೃದ್ಧಿ ಇಲಾಖೆ ಹತ್ತಾರು ಸಮಸ್ಯೆಗಳು ಹಾಗೆ ಉಳಿದಿದ್ದು ಅವುಗಳಿಗೆ ಸಂಬಂಧಿಸಿದಂತೆ ಈಗಾಗಲೇ ಹಲವಾರು ಬಾರಿ ಎಲ್ಲರಿಗೂ ಮನವಿ ಪತ್ರಗಳನ್ನು ನೀಡಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಸೆ.15 ರಂದು ಅಂಬೇಡ್ಕರ್ ಸರ್ಕಲ್ ಹತ್ತಿರ ಜನ್ ಝಿ ಮಾದರಿಯಲ್ಲಿ ಹೋರಾಟ ಹಮ್ಮಿಕೊಳ್ಳಲಾಗುತ್ತಿದ್ದು, ಸ್ಥಳಕ್ಕೆ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರು, ಇಂಧನ ಸಚಿವರು, ನಗರಾಭಿವೃದ್ಧಿ ಸಚಿವರು ಮತ್ತು ಇಲಾಖೆಗೆ ಸಂಬಂಧಪಟ್ಟ ಪ್ರಧಾನ ಕಾರ್ಯದರ್ಶಿಗಳು ಬಂದು ಸಮಸ್ಯೆ ಬಗೆಹರಿಸುವವರೆಗೆ ಹೋರಾಟ ಮುಂದುವರಿಸುತ್ತೇವೆ ಎಂದು ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಗುಡುಗಿದರು.
ಇಂಧನ ಇಲಾಖೆಯಲ್ಲಿ ಹತ್ತಾರು ಸಮಸ್ಯೆಗಳನ್ನು ಶೀಘ್ರ ಪರಿಹರಿಸಬೇಕು. ಹಲವಾರು ಬೇಡಿಕೆಗಳಲ್ಲಿ ಅತೀ ಪ್ರಮುಖವಾದ ರಾಜ್ಯದ ವಿದ್ಯುತ್ ಗ್ರಾಹಕರು ಕಟ್ಟಿದ, ಕಟ್ಟುವ ಮನೆಗಳಿಗೆ ಹಾಗೂ ವ್ಯಾಪಾರ ಮಾಡುವ ಸ್ಥಾವರಗಳಿಗೆ ವಿದ್ಯುತ್ ಸಂಪರ್ಕ ನಿರಂತರವಾಗಿ ನೀಡುವುದು, ಪ್ರತಿ ವರ್ಷ ಎಎಸ್‌ಡಿ ಹಣ ಕಟ್ಟಿಸಿಕೊಳ್ಳುತ್ತಿದ್ದು ಅದನ್ನು ಐಎಸ್ಡಿ ಹೆಡ್ಡಿನಲ್ಲಿ ಕಟ್ಟಿಸಿಕೊಳ್ಳಬೇಕು, ತಾತ್ಕಾಲಿಕ ವಿದ್ಯುತ್ ಸ್ಥಾವರಗಳ ಡಿಪಾಸಿಟ್ ಹಣ ಕಡಿಮೆ ಮಾಡಬೇಕು, ಮೊದಲೇ ಬರಗಾಲ ಇರುವುದರಿಂದ ರೈತರಿಗೆ ಅನುಕೂಲ ಮಾಡಿಕೊಡಲು ರೈತರ ಪಂಪ್‌ಸೆಟ್ ದಂಡದ ಹಣವನ್ನು ₹15,000 ಶೂನ್ಯಕ್ಕೆ ಇಳಿಸಬೇಕು, ರೈತರ ವಿದ್ಯುತ್ ಪರಿವರ್ತಕಗಳ ವಿದ್ಯುತ್ ಪರಿವೀಕ್ಷಕರ ಫೀಯನ್ನು ₹3100-10,500 ಏರಿಸಿದ್ದು, ಅದನ್ನು ಪುನಃ ₹3100ಕ್ಕೆ ಇಳಿಸಬೇಕು, ಯಾವುದೇ ವಿದ್ಯುತ್ ಪರ್ವೀಕ್ಷಕರ ಕಚೇರಿಯಲ್ಲಿ ಆನ್‌ಲೈನ್ ಮೂಲಕ ಅರ್ಜಿಯನ್ನು ಹಾಕಿದ ಮೇಲೆ ಅದಕ್ಕೆ ತುಂಬಿರುವ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳದೇ ಕೆಲಸ ಮುಗಿಯುವವರೆಗೆ ಅದರಲ್ಲಿಯೇ ಇರಬೇಕು ಅಥವಾ ಆ ಕೆಲಸ ಆಗದಿದ್ದರೇ ಅರ್ಜಿದಾರರಿಗೆ ಪುನಃ ಹಣ ನೀಡಬೇಕು, ಎಲ್ಲ ವಿದ್ಯುತ್ ಕಂಪನಿಗಳ ಅಧಿಕಾರಿಗಳ ಸಿಗ್ನೇಚರ್‌ನ್ನು ಡಿಜಿಟಲ್ ಆಗಿ ಪರಿವರ್ತಿಸಬೇಕು, 2024ರ ಡಿ.7 ರಿಂದ ಇಲ್ಲಿಯವರೆಗೆ ಹೊಸದಾಗಿ ಪಡೆದಿರುವ ವಿದ್ಯುತ್ ಸಂಪರ್ಕಗಳಿಗೆ ಉಚಿತ ಗೃಹಜ್ಯೋತಿ ಯೋಜನೆ ನೀಡಬೇಕು, ಗೃಹಜ್ಯೋತಿ ಯೋಜನೆಗೆ 2022 -23ರ ಸರಾಸರಿ ಯೂನಿಟ್‌ಗಳನ್ನು ತೆಗೆದುಕೊಳ್ಳುತ್ತಿದ್ದು ವರ್ಷಗಳು ಬದಲಾದಂತೆ ಸರಾಸರಿ ಯೂನಿಟ್‌ಗಳು ಬದಲಾವಣೆಯಾಗಬೇಕು, ಎಲ್ಲ ವಿದ್ಯುತ್ ಗುತ್ತಿಗೆದಾರರ ಕಾಮಗಾರಿಗಳ ಬಿಲ್‌ನ್ನು ಬೇಗನೆ ನೀಡಬೇಕು ಹಾಗೂ ಇಂಧನ ಇಲಾಖೆಯ ಉದ್ಯೋಗಿಗಳ ಮೆಡಿಕಲ್ ಬಿಲ್ ಹಾಗೂ ಲೀವ್ ಸೆರಂಡರ್ ಹಣವನ್ನು ಬೇಗನೆ ನೀಡಬೇಕು ಎಂದು ಆಗ್ರಹಿಸಿದರು.
ನಗರಾಭಿವೃದ್ಧಿ ಇಲಾಖೆಯ ಸಮಸ್ಯೆಗಳನ್ನು ಶೀಘ್ರ ಪರಿಹರಿಸಿ:
ನಗರಾಭಿವೃದ್ಧಿ ಇಲಾಖೆಯ ಹಲವಾರು ಸಮಸ್ಯೆಗಳಿದ್ದು ಅವುಗಳಲ್ಲಿ ಪ್ರಮುಖ ಬೇಡಿಗಳಾದ ಇ ಸ್ವತ್ತು ಆಸ್ತಿಯ ಪಹಣಿಯನ್ನು ಬೇಗನೆ ಸಾರ್ವಜನಿಕರಿಗೆ ಸಿಗುವ ಹಾಗೆ ಮಾಡಬೇಕು, ಬಿಲ್ಡಿಂಗ್ ಕಟ್ಟಲು ಮತ್ತು ಮುಕ್ತಾಯ ಪ್ರಮಾಣ ಪತ್ರವನ್ನು ಬೇಗನೆ ಸಿಗುವ ಹಾಗೆ ಮಾಡಬೇಕು, ಎಲ್ಲ ಮನೆಗಳಿಗೆ ಎಲ್ಲ ಮಾದರಿಯ ವಿದ್ಯುತ್ ಸಂಪರ್ಕ ನೀಡಲು ಹೆಸ್ಕಾಂಗೆ ಸೂಚನೆ ನೀಡಬೇಕು, ಹಲವಾರು ಬಡಾವಣೆಗಳಿಗೆ ಬಿಲ್ಡಿಂಗ್ ಕಟ್ಟಲು ಅನುಮತಿ ನೀಡುತ್ತಿಲ್ಲ, ಅದನ್ನು ಬೇಗನೆ ಸಮಸ್ಯೆ ಬಗೆಹರಿಸಬೇಕು ಎಂದು ರೈತ ಭಾರತ ಪಕ್ಷ ಒತ್ತಾಯಿಸಿತು.
ಸಿಎಂ, ಡಿಸಿಎಂ, ಇಂಧನ ಸಚಿವರು, ನಗರಾಭಿವೃದ್ಧಿ ಸಚಿವರು, ಬೃಹತ್ ಕೈಗಾರಿಕಾ ಸಚಿವರು, ಮುಖ್ಯ ಕಾರ್ಯದರ್ಶಿಗಳು, ಇಂಧನ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷರು, ಮುಖ್ಯ ವಿದ್ಯುತ್ ಪರಿವೀಕ್ಷಕರು, ಹುಬ್ಬಳ್ಳಿ ಹೆಸ್ಕಾಂ ನಿಗಮ ಮಂಡಳಿ ಅಧ್ಯಕ್ಷರು, ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು, ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ವಿಜಯಪುರ ಮಹಾನಗರ ಪಾಲಿಕೆಯ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಪಂಚ ಗ್ಯಾರಂಟಿಯ ಮಹತ್ವಾಂಕ್ಷೆಯ ಘೋಷಣೆಯಾದ ಗೃಹಜ್ಯೋತಿ ಯೋಜನೆಯಡಿ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡುತ್ತೇನೆಂದು ಘೋಷಿಸಿದ್ದ ಕಾಂಗ್ರೆಸ್ ಸರ್ಕಾರವು, ತನ್ನ ಹೇಳಿಕೆಗೆ ಬದ್ಧವಾಗಿರದೇ ಸರಾಸರಿ ಆಧಾರದ ಮೇಲೆ ಶೇ.10 ರಷ್ಟು ಮಾತ್ರ ಹೆಚ್ಚುವರಿಯಾಗಿ ನೀಡಿದ್ದಲ್ಲದೇ ಸದ್ಯ ಇಲ್ಲಿಯವರೆಗೆ ಯಾವುದೇ ಹೆಚ್ಚುವರಿ ಯುನಿಟ್‌ನ್ನು ನೀಡದೇ ಜನರ ಕಣ್ಣಿಗೆ ಮಣ್ಣು ಎರಚುತ್ತಿದ್ದಾರೆ. ಇರುವುದನ್ನೇ ನೆಟ್ಟಗೆ ಕೊಡದೇ ಹತ್ತಾರು ತಾಂತ್ರಿಕ ಸಮಸ್ಯೆಗಳನ್ನು ತಂದೊಡ್ಡಿ ಜನರನ್ನು ಮತ್ತಷ್ಟು ಸಮಸ್ಯೆಗಳ ಸಂಕೋಲೆಗೆ ದೂಡುತ್ತಿದ್ದಾರೆ. ಕೂಡಲೇ ಸಮಸ್ಯೆ ಪರಿಹರಿಸದಿದ್ದರೇ ರೈತ ಭಾರತ ಪಕ್ಷದಿಂದ ಹೋರಾಟ ಮಾಡಲಾಗುವುದು.
-ಮಲ್ಲಿಕಾರ್ಜುನ್ ಬಿ ಕೆಂಗನಾಳ, ರಾಜ್ಯಾಧ್ಯಕ್ಷರು ರೈತ ಭಾರತ ಪಕ್ಷ ಕರ್ನಾಟಕ.