ಚನ್ನಮ್ಮನ ಕಿತ್ತೂರು: ತಾಲೂಕಿನ ಮರಿಗೇರಿ ಗ್ರಾಮದ ಮುಖ್ಯ ರಸ್ತೆಯ ದುಸ್ಥಿತಿಯಿಂದಾಗಿ ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳು ಪರದಾಡುವಂತಾಗಿದೆ. ತಕ್ಷಣವೇ ರಸ್ತೆ ದುರಸ್ತಿ ಹಾಗೂ ನಿರ್ಮಾಣ ಕಾರ್ಯ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕಬ್ಬು ಬೆಳೆಗಾರರ ಸಂಘ ಹಾಗೂ ಮರಿಗೇರಿ ಗ್ರಾಮಸ್ಥರು ಗುರುವಾರ ಕಿತ್ತೂರು ತಹಶೀಲ್ದಾರ್ ಮತ್ತು ತಾಲೂಕು ದಂಡಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಕಳೆದ 20-25 ವರ್ಷಗಳ ಹಿಂದೆ ಲೋಕೋಪಯೋಗಿ ಇಲಾಖೆಯಿಂದ ಈ ರಸ್ತೆಗೆ ಎರಡು ಬಾರಿ ಡಾಂಬರೀಕರಣ ಮಾಡಲಾಗಿತ್ತು. ಆದರೆ ಕಳೆದ 10 ವರ್ಷಗಳಿಂದ ಈ ರಸ್ತೆಯು ಸಂಪೂರ್ಣವಾಗಿ ಹಾಳಾಗಿದ್ದು, ಸಂಚಾರಕ್ಕೆ ಲಾಯಕ್ಕಿಲ್ಲದಂತಾಗಿದೆ. ರಸ್ತೆ ಹದಗೆಟ್ಟಿರುವುದರಿಂದ ಗ್ರಾಮಕ್ಕೆ ಬಸ್ ಹಾಗೂ ಇತರ ಯಾವುದೇ ವಾಹನಗಳು ಬರುತ್ತಿಲ್ಲ. ಇದರಿಂದಾಗಿ ಪ್ರತಿನಿತ್ಯ ಶಾಲೆ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ, ದಿನನಿತ್ಯದ ಕೆಲಸ ಕಾರ್ಯಗಳಿಗಾಗಿ ಕಿತ್ತೂರು ಪಟ್ಟಣಕ್ಕೆ ಪ್ರಯಾಣಿಸುವ ಗ್ರಾಮಸ್ಥರಿಗೆ ಹಾಗೂ ತಮ್ಮ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ರೈತರಿಗೆ ತೀವ್ರ ತೊಂದರೆಯಾಗುತ್ತಿದೆ.
ಈ ಸಮಸ್ಯೆಯ ಕುರಿತು ಈಗಾಗಲೇ ಹಲವು ದಿನಪತ್ರಿಕೆಗಳಲ್ಲಿ ವರದಿಗಳು ಪ್ರಕಟವಾಗಿದ್ದರೂ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸಿ ಶೀಘ್ರದಲ್ಲೇ ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕು. ಇಲ್ಲವಾದರೆ ರೈತರನ್ನು ಸಂಘಟಿಸಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಪ್ರವೀಣ್ ಸರದಾರ ಎಚ್ಚರಿಸಿದರು.
ಈ ವೇಳೆ ರೈತ ಮುಖಂಡ ಬಿಷ್ಠಪ್ಪ ಶಿಂದೆ, ಸತೀಶ ಲಂಗೋಟಿ, ಫಕ್ಕಿರಪ್ಪ ಜಾಂಗಟಿ, ಲೋಕೋಪಯೋಗಿ ಇಲಾಖೆಯ ಶ್ರೀಧರ ಪೂಜಾರಿ ಸೇರಿದಂತೆ ಮರಿಗೇರಿ ಗ್ರಾಮಸ್ಥರು ಇದ್ದರು.
ಚಿತ್ರ: ರಸ್ತೆ ದುತಸ್ಥಿಗೆ ಆಗ್ರಹಿಸಿ ಕಬ್ಬು ಬೆಳೆಗಾರರ ಸಂಘ ಹಾಗೂ ಮರಿಗೇರಿ ಗ್ರಾಮಸ್ಥರು ಕಿತ್ತೂರು ತಹಶೀಲ್ದಾರ್ ಮತ್ತು ತಾಲೂಕು ದಂಡಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.