ರನ್ನ ಬೆಳಗಲಿ: ಆ.೨೭ - ಮಾದಕ ವಸ್ತುಗಳ ಸೇವನೆ ನಿಧಾನ ಆತ್ಮಹತ್ಯೆಯಂತಿದ್ದು, ವಿದ್ಯಾರ್ಥಿಗಳು ಹಾಗೂ ಯುವಜನರು ಯಾವುದೇ ಕಾರಣಕ್ಕೂ ಇಂತಹ ದುಶ್ಚಟಗಳಿಗೆ ಬಲಿಯಾಗಬಾರದು. ಉತ್ತಮ ಆರೋಗ್ಯ, ಶಿಸ್ತುಬದ್ಧ ಜೀವನ ಹಾಗೂ ಮಾನಸಿಕ ನೆಮ್ಮದಿಗಾಗಿ ಪ್ರತಿನಿತ್ಯ ಯೋಗಾಭ್ಯಾಸವನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳಬೇಕು ಎಂದು ಯೋಗ ಶಿಕ್ಷಕ ರಾಘವೇಂದ್ರ ನೀಲಣ್ಣವರ ಹೇಳಿದರು.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಳಲಿ ಗ್ರಾಮದ ಬಂಗಾರಬೆಂಚ್ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ), ಮುಧೋಳ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಬೆಳ್ತಂಗಡಿ, ಜಿಲ್ಲಾ ಜನಜಾಗೃತಿ ವೇದಿಕೆ, ಬಾಗಲಕೋಟೆ ಹಾಗೂ ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿ, ಬೆಂಗಳೂರು ಇವರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ’ಸ್ವಾಸ್ಥ್ಯ ಸಂಕಲ್ಪ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಾದಕ ವಸ್ತುಗಳ ದು?ರಿಣಾಮಗಳ ಕುರಿತು ಮಾತನಾಡಿದ ಅವರು, ಡ್ರಗ್ಸ್, ಮದ್ಯ, ತಂಬಾಕು ಸೇರಿದಂತೆ ವಿವಿಧ ಮಾದಕ ವಸ್ತುಗಳ ಚಟ ವ್ಯಕ್ತಿಯ ಆರೋಗ್ಯವನ್ನು ಮಾತ್ರವಲ್ಲದೆ ಕುಟುಂಬದ ನೆಮ್ಮದಿ, ಆರ್ಥಿಕ ಸ್ಥಿತಿ, ಶಿಕ್ಷಣ, ಉದ್ಯೋಗ ಹಾಗೂ ಸಾಮಾಜಿಕ ಜೀವನದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ. ಇಂದು ಶಾಲಾ ಮಕ್ಕಳು, ಯುವಕರು, ವಿದ್ಯಾವಂತರು, ಸಾಧಕರು ಹಾಗೂ ಮಹಿಳೆಯರೂ ವಿವಿಧ ರೀತಿಯ ವ್ಯಸನಗಳಿಗೆ ಒಳಗಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಮಾದಕ ವಸ್ತುಗಳಿಗೆ ಆಕರ್ಷಿತರಾಗುವುದು ಈ ಶತಮಾನದ ದೊಡ್ಡ ದುರಂತಗಳಲ್ಲಿ ಒಂದಾಗಿದೆ ಎಂದರು.
ಸ್ವಾಸ್ಥ್ಯ ಸಂಕಲ್ಪದ ಮಹತ್ವ ಕುರಿತು ವಿವರಿಸಿದ ಅವರು, ಆರೋಗ್ಯವೆಂದರೆ ಕೇವಲ ರೋಗದಿಂದ ಮುಕ್ತವಾಗಿರುವುದಲ್ಲ; ದೈಹಿಕ, ಮಾನಸಿಕ ಹಾಗೂ ಸಾಮಾಜಿಕವಾಗಿ ಸದೃಢವಾಗಿರುವುದೇ ನಿಜವಾದ ಸ್ವಾಸ್ಥ್ಯ. ವಿದ್ಯಾರ್ಥಿಗಳು ಆರೋಗ್ಯಕರ ಆಹಾರ ಸೇವನೆ, ನಿಯಮಿತ ವ್ಯಾಯಾಮ ಮತ್ತು ಯೋಗಾಭ್ಯಾಸ, ಸಮರ್ಪಕ ನಿದ್ರೆ, ಸ್ವಚ್ಛತೆ, ಉತ್ತಮ ಚಿಂತನೆ ಹಾಗೂ ಉತ್ತಮ ಸ್ನೇಹವಲಯವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಾದಕ ವಸ್ತುಗಳ ಚಟಕ್ಕೆ ಕಡಿವಾಣ ಹಾಕುವಲ್ಲಿ ಯೋಗ, ಧ್ಯಾನ, ಪ್ರಾಣಾಯಾಮ ಹಾಗೂ ಸಕಾರಾತ್ಮಕ ಚಿಂತನೆಗಳು ಪ್ರಮುಖ ಪಾತ್ರವಹಿಸುತ್ತವೆ. ಯೋಗವು ದೇಹದ ಆರೋಗ್ಯದ ಜೊತೆಗೆ ಮನಸ್ಸಿನ ಏಕಾಗ್ರತೆ, ಆತ್ಮವಿಶ್ವಾಸ ಮತ್ತು ಮಾನಸಿಕ ಸ್ಥಿರತೆಯನ್ನು ಬೆಳೆಸಲು ಸಹಕಾರಿಯಾಗಿದೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಪ್ರತಿನಿತ್ಯ ಯೋಗಾಭ್ಯಾಸಕ್ಕೆ ಸಮಯ ಮೀಸಲಿಡಬೇಕು ಎಂದು ಅವರು ತಿಳಿಸಿದರು.
ಮಾದಕ ವಸ್ತುಗಳಿಂದ ದೂರವಿರುವ ಸಂಕಲ್ಪವನ್ನು ಪ್ರತಿಯೊಬ್ಬರೂ ಕೈಗೊಳ್ಳಬೇಕು. ನಾನು ಯಾವುದೇ ಮಾದಕ ವಸ್ತುವನ್ನು ಸೇವಿಸುವುದಿಲ್ಲ, ಇತರರಿಗೂ ನೀಡುವುದಿಲ್ಲ ಹಾಗೂ ಮಾದಕ ವಸ್ತುಗಳ ದು?ರಿಣಾಮಗಳ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುತ್ತೇನೆ ಎಂಬ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ರಾಘವೇಂದ್ರ ನೀಲಣ್ಣವರ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯ ಬಿ.ಎ. ಗೋಡಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಆರೋಗ್ಯ ಮತ್ತು ವ್ಯಸನಮುಕ್ತ ಜೀವನದ ಕುರಿತು ಜಾಗೃತಿ ಮೂಡಿಸುವ ಇಂತಹ ಕಾರ್ಯಕ್ರಮಗಳು ಅತ್ಯಂತ ಅಗತ್ಯವಾಗಿವೆ. ಸಂಪನ್ಮೂಲ ವ್ಯಕ್ತಿಗಳು ನೀಡಿದ ಉತ್ತಮ ಮೌಲ್ಯಗಳು ಹಾಗೂ ಸಂದೇಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ವಲಯ ಮೇಲ್ವಿಚಾರಕಿ ಚಂದ್ರಕಲಾ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನಡೆಯುತ್ತಿರುವ ವಿವಿಧ ಜನಪರ ಹಾಗೂ ಸಮಾಜಮುಖಿ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಶಿಕ್ಷಕರಾದ ಎಚ್.ಎಸ್. ಅಗಸರ, ಶೈಲಾ ಕಾಂಬಳೆ, ಸೇವಾಪ್ರತಿನಿಧಿ ಪೂರ್ಣಿಮಾ ಹಿರೇಮಠ ಹಾಗೂ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.