ಹಸಿರು ಕ್ರಾಂತಿ ವರದಿ ಬೆಳಗಾವಿ
ದಿ.ಎಂ.ಬಿ.ದೇಸಾಯಿ ಅವರ ಸ್ಮರಣಾರ್ಥ ಮಾಧ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆಗಾಗಿ ಬೆಳಗಾವಿ ಇಂಡಿಯನ್ ಎಕ್ಸಪ್ರೆಸ್‌ನ ಅಸೋಸಿಯೇಟ್ ಎಡಿಟರ್ ನೌಶಾದ್ ಬಿಜಾಪುರೆ ಅವರಿಗೆ ಶುಕ್ರವಾರ ಇಂಡಿಯನ್ ಎಕ್ಸಪ್ರೆಸ್ ಕಚೇರಿಯಲ್ಲಿ ಲೋಕದರ್ಶನ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕರ್ನಾಟಕ ಪತ್ರಕರ್ತ ಸಂಘ ಹಾಗೂ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸಹಯೋಗದಲ್ಲಿ ಪತ್ರಿಕಾ ದಿನಾಚರಣೆ ನಿಮಿತ್ತ ನೀಡುವ ಲೋಕದರ್ಶನ ದಿನಪತ್ರಿಕೆಯ ಸಂಸ್ಥಾಪಕರು ಹಾಗೂ ಸ್ವಾತಂತ್ರ್ಯ ಯೋಧರಾಗಿರುವ ದಿ.ಎಂ.ಬಿ.ದೇಸಾಯಿ ಹೆಸರಿನಲ್ಲಿ ಸ್ಥಾಪಿಸಲಾಗಿರುವ ಪ್ರಥಮ ವರ್ಷದ ವಾರ್ಷಿಕ ಪ್ರಶಸ್ತಿಯನ್ನು ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಅಧ್ಯಕ್ಷ ಮುರುಗೇಶ ಶಿವಪೂಜಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಪತಕುಮಾರ ಮುಚಳಂಬಿ, ಲೋಕದರ್ಶನ ದಿನಪತ್ರಿಕೆಯ ಸಂಪಾದಕ ಶರದಚಂದ್ರ ದೇಸಾಯಿಯವರ ಪುತ್ರಿ ಜಯಲಕ್ಷ್ಮೀ ಶರದಚಂದ್ರ ದೇಸಾಯಿಯವರು ಪ್ರಶಸ್ತಿ ಫಲಕ ನೀಡಿ, ಶಾಲು ಹೊದಿಸಿ, ಹಾರ ಹಾಕಿ ಸತ್ಕರಿಸಿದರು.
ಈ ವೇಳೆ ಕನ್ನಡಪ್ರಭ ಪ್ರಧಾನ ವರದಿಗಾರ ಶ್ರೀಶೈಲ ಮಠದ, ಇಂಡಿಯನ್ ಎಕ್ಸಪ್ರೆಸ್‌ನ ಜಾಹೀರಾತ ವಿಭಾಗದ ಹಿರಿಯ ವ್ಯವಸ್ಥಾಪಕ ಧನಂಜಯ ಹೊಂಗಲ, ಅಪ್ಪಣ್ಣ ಮೇತ್ರಿ, ಪತ್ರಕರ್ತರಾದ ಸಾಗರ್ ಚೌಗಲೆ ಸೇರಿದಂತೆ ಇಂಡಿಯನ್ ಎಕ್ಸಪ್ರೆಸ್ ಸಿಬ್ಬಂದಿ ಉಪಸ್ಥಿತರಿದ್ದರು.
ನಮ್ಮ ಮನೆತನದ ಹಿರಿಯರ ಹೆಸರಿನಲ್ಲಿ ನೀಡುವ ಪ್ರಶಸ್ತಿಯನ್ನು ಜಿಲ್ಲೆಯ ಹಿರಿಯ ಪತ್ರಕರ್ತರಿಗೆ ಪ್ರದಾನ ಮಾಡುತ್ತಿರುವುದು ಗೌರವದೊಂದಿಗೆ ಖುಷಿಯೂ ಇಮ್ಮಡಿಯಾಗಿದೆ. ಇಂಡಿಯನ್ ಎಕ್ಸಪ್ರೆಸ್‌ನ ಅಸೋಸಿಯೇಟ್ ಎಡಿಟರ್ ನೌಶಾದ್ ಬಿಜಾಪುರೆ ಸರ್ ಮಾಧ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ಓದುವ ಬಳಗ ಹಾಗೂ ಹಲವಾರು ಪತ್ರಕರ್ತರನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರಿಗೆ ನಮ್ಮ ಪತ್ರಿಕೆಯ ಪರವಾಗಿ ತುಂಬು ಹೃದಯದ ಅಭಿನಂದನೆಗಳು.
-ಜಯಲಕ್ಷ್ಮೀ ಶರದಚಂದ್ರ ದೇಸಾಯಿ, ಲೋಕದರ್ಶನ ದಿನಪತ್ರಿಕೆಯ ಸಂಪಾದಕ ಶರದಚಂದ್ರ ದೇಸಾಯಿಯವರ ಪುತ್ರಿ.