LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಮನುಷ್ಯ ಮನುಷ್ಯರ ಮಧ್ಯೆ ಭಾವಗಳು ಅರಳಬೇಕು

ಭಾವೈಕ್ಯತೆಯ ಬೆಳಕು ಕೃತಿಯ ಬಿಡುಗಡೆಯಲ್ಲಿ ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳ ಅಭಿನುಡಿ

ಹಸಿರು ಕ್ರಾಂತಿ ವರದಿ ಗದಗ
ಜಗತ್ತಿನಲ್ಲಿ ಶಾಂತಿ, ನೆಮ್ಮದಿ, ಪ್ರೀತಿ ಮೂಡಬೇಕೆಂದರೇ ಮನುಷ್ಯ ಮನುಷ್ಯರ ಮಧ್ಯೆ ಭಾವಗಳು ಅರಳಬೇಕಾಗಿದೆ ಎಂದು ಗದುಗಿನ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ನುಡಿದರು.

ನಗರದ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಅಡಿಯಲ್ಲಿ ಜರುಗಿದ 2812ನೇ  ಶಿವಾನುಭವ ಹಾಗೂ ಡಾ.ಮಹಮ್ಮದ್ ಅಶ್ರಫ್ ದಸ್ತಗಿರಿಸಾಹೇಬ್ ಸಮುದ್ರಿಯವರ ರಚಿಸಿದ ಭಾವೈಕ್ಯತೆಯ ಬೆಳಕು ಕೃತಿಯ ಬಿಡುಗಡೆ ಹಾಗೂ ವಿಶ್ವಹಿರಿಯರ ದಿನಾಚರಣೆಯ ನಿಮಿತ್ತ ಮಾಜಿ ಸಚಿವರಾದ ಎಸ್.ಎಸ್.ಪಾಟೀಲ, ನಿವೃತ್ತ ಶಿಕ್ಷಕರಾದ ಚನ್ನಯ್ಯ ತೋಟಯ್ಯ ಹಿರೇಮಠ, ಎಸ್.ಎಂ.ವಾಲಿಯವರ ಗೌರವ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವದಿಸಿ ಮಾತನಾಡಿದ ಅವರು, ವಿಶ್ವದ ಹಲವುಡೆ ಯುದ್ಧ ಇಂದು ಮನೆ ಮಾಡಿದ್ದು, ಭಯಗೃಸ್ಥ ವಾತಾವರಣದಲ್ಲಿ ಜನರು ಬದುಕುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. 

ಭಾರತ ಅನೇಕತೆಯಲ್ಲಿ ಏಕತೆ ಹೊಂದಿದೆ. ಪ್ರತಿಯೊಂದರಲ್ಲಿಯೂ ವೈವಿಧ್ಯತೆಯನ್ನು ಒಳಗೊಂಡಿರುವ ವಿಶ್ವದ ಏಕೈಕ ದೇಶ ಭಾರತ ಮಾತ್ರ. ಜಗತ್ತಿನಲ್ಲಿ ವಿವಿಧ ಪ್ರದೇಶಗಳಲ್ಲಿ ವಿವಿಧ ಕಾಲದಲ್ಲಿ ಅನೇಕ ಪ್ರವಾದಿಗಳು ಸಮಾಜ ಸುಧಾರಕರು, ಹೋರಾಟಗಾರರು ಜನ್ಮ ತಳೆದಿದ್ದಾರೆ ಎಂದರು.

ಕಣ್ಣಿಗೆ ಕಾಣದ ದೇವರಿಗಿಂತ ಕಾಣುವ ದೇವರುಗಳಾದ ತಂದೆ, ತಾಯಿ, ಹಿರಿಯರು ಹಾಗೂ ಗುರುಗಳನ್ನು ಗೌರವಿಸುವ ಸಮಾಜವೇ ಸುಸಂಸ್ಕೃತ ಸಮಾಜ. ಅವರನ್ನು ಗೌರವಯುತವಾಗಿ ಕಾಣುವ ಅನುಸರಿಸುವ ಗುಣವನ್ನು ಹೊಸ ತಲೆಮಾರು ಮಾಡಬೇಕಾಗಿದೆ. ಹಳೆ ಬೇರು, ಹೊಸ ಚಿಗುರು ಇದ್ದಾಗಲೇ ಮರ ಸೊಬಗಾಗಿ ಕಾಣುವಂತೆ ಮನೆಯಲ್ಲಿ ಹಿರಿಯರಿದ್ದರೇ ಚಂದ ಎಂದರು.

ಗದುಗಿನ ಜಮಾತ್-ಎ-ಇಸ್ಲಾಂ ಅಧ್ಯಕ್ಷ ಎ.ಐ.ಶೇಖ ಭಾವೈಕ್ಯತೆಯ ಬೆಳಕು ಕೃತಿ ಪರಿಚಯ ಮಾಡಿ ಮಾತನಾಡಿ, ಭಾವಕ್ಯತೆಯ ಬೆಳಕು ಕೃತಿ ನಮ್ಮೆಲ್ಲರನ್ನು ಒಂದುಗೂಡಿಸುವ  ಏಕತೆ ಸಾಧಿಸುವ ಅಪರೂಪದ ಕೃತಿಯಾಗಿದೆ. ಡಾ.ಸಮುದ್ರಿಯವರು ನಿಜಕ್ಕೂ ಭಾರತದ ಬಹುತ್ವವನ್ನು ಇದರಲ್ಲಿ ಎತ್ತಿ ಹಿಡಿಯುವುದರೊಂದಿಗೆ, ಮೊದಲು ನಾವೆಲ್ಲರೂ ಭಾರತೀಯರು ಎಂಬುವುದನ್ನು ಸಾಧಿಸಿದ್ದಾರೆ. ಈ ಕೃತಿಯನ್ನು ಯುವಕರಿಗೆ ಅರ್ಪಿಸಿರುವುದು ನಿಜಕ್ಕೂ ಹೆಮ್ಮೆಪಡುವ ವಿಷಯ ಎಂದು ಶ್ಲಾಘಿಸಿದರು.

ಕೃತಿಯ ಲೇಖಕ ಎಂ.ಡಿ.ಸಮುದ್ರಿ ಮಾತನಾಡಿ, ಭಾವೈಕ್ಯತೆಯ ಬೆಳಕು ಕೃತಿ ಬರೆಯಲು ನನ್ನ ತಂದೆ, ತಾಯಿ, ಕುಟುಂಬ ಪರಿವಾರ  ಗುರುಗಳು ಆದಿಯಾಗಿ ಅನೇಕರ ಸಹಾಯ ಸಹಕಾರವನ್ನು ಸ್ಮರಿಸಿ ಅವರಿಗೆ ಚಿರಋಣಿಯಾಗಿದ್ದೇನೆ ಎಂದು ಸ್ಮರಿಸಿದರು.

ಗೌರವ ಅತಿಥಿಗಳಾದ ಎಸ್.ಎಸ್.ಪಾಟೀಲ, ಚನ್ನಯ್ಯ ತೋಟಯ್ಯ ಹಿರೇಮಠ, ಎಸ್.ಎಂ.ವಾಲಿಯವರು ತಮ್ಮ ಅನುಭವಗಳನ್ನು ಹಂಚಿಕೊಂಡರು. 

ವಚನ ಸಂಗೀತ ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ, ಧರ್ಮಗ್ರಂಥ ಪಠಣ ಕು.ಸ್ಫೂರ್ತಿ ಸೈದಾಪೂರ, ವಚನ ಚಿಂತನ ಪುಷ್ಪಾವತಿ ಮನೋಹರ ಮಾಲಿಪಾಟೀಲ ನೆರವೇರಿಸಿದರು. ದಾಸೋಹ ಸೇವೆಯನ್ನು ಚನ್ನಮ್ಮ ಚಳ್ಳಮರದ, ಲಿಂಗೈಕ್ಯ   ಕಾಶಿನಾಥಗೌಡ ಸಿದ್ಧನಗೌಡ ಪಾಟೀಲರ ಸ್ಮರಣಾರ್ಥ ಅವರ ಧರ್ಮಪತ್ನಿ ಲಲಿತಾ ಕಾಶಿನಾಥಗೌಡ ಪಾಟೀಲ ಹಾಗೂ ಪರಿವಾರ, ಬಾಗಲಕೋಟೆಯ ಗಿರಿಜಾದೇವಿ ಚನ್ನಬಸಯ್ಯ ಕನಕೇರಿಮಠ ಸ್ಮರಣಾರ್ಥ ಅವರ ಕುಟುಂಬ ವರ್ಗ, ಹುಣಸಗಿಯ ರೇವಣಸಿದ್ದಪ್ಪ ಚನ್ನಪ್ಪ ಬ್ಯಾಕೋಡ ಕುಟುಂಬ ವರ್ಗದವರು ಕೈಗೊಂಡಿದ್ದರು. ಶಿವಾನುಭವದಲ್ಲಿ ಹಿರಿಯರಾದ ಡಾ.ಜಿ.ಬಿ.ಪಾಟೀಲ, ಶಿವನಗೌಡ ಗೌಡರ ಆದಿಯಾಗಿ ಅನೇಕ ಗಣ್ಯಮಾನ್ಯರು ಉಪಸ್ಥಿತರಿದ್ದರು.

ಶರಣರು ಕಂಡ ಅನಾದಿ ಬಸವಣ್ಣ ವಿಷಯದ ಕುರಿತು ಶರಣೆ ಗಿರಿಜಕ್ಕ ಧರ್ಮರಡ್ಡಿ ಅವರು ಪ್ರವಚನದ ಮಾಡಿದರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಡಾ.ಉಮೇಶ ವೀ.ಪುರದ ಸ್ವಾಗತಿಸಿದರು. ಶಿವಾನುಭವ ಸಮಿತಿಯ ಚೇರಮನ್‌ ಡಾ.ರಮೇಶ ಮ. ಕಲ್ಲನಗೌಡರ ಕಾರ್ಯಕ್ರಮ ನಿರೂಪಣೆ ಮಾಡಿದರು.


ನಮ್ಮ ನಿಮ್ಮ ಹಾಗೆ ಜನಿಸಿದರೂ ಇಡೀ ಮನುಕುಲದ ಬಗ್ಗೆ ಪ್ರೀತಿ, ಎಲ್ಲರಲ್ಲಿಯೂ ದಯೆ ಮನೆ ಮಾಡಬೇಕೆಂದು ಭ್ರಾತೃತ್ವ ಭಾವ ಬೆಳೆಸಲು ಕಾರಣರಾದವರು ಪ್ರವಾದಿ ಮುಹಮ್ಮದ್ ಪೈಗಂಬರ್, ಜಗಜ್ಯೋತಿ ಬಸವೇಶ್ವರರು, ಬುದ್ಧ, ಮಹಾವೀರ ಆದಿಯಾಗಿ ಅನೇಕರು ಪ್ರಮುಖರು. ಇಂಥವರ ಆದರ್ಶ, ಮೌಲ್ಯಗಳನ್ನು ನಾವು ರೂಢಿಸಿಕೊಳ್ಳಬೇಕಾದ ಜರೂರತ್ತು ಇಂದು ಇದೆ. ಇಂತಹ ಈ ಮೇಲಿನ ಅನೇಕ ಮಾನವೀಯ ಮೌಲ್ಯಗಳನ್ನು ಡಾ.ಎಂ.ಡಿ.ಸಮುದ್ರಿಯವರು ಬರೆದ ಭಾವೈಕ್ಯತೆ ಬೆಳಕು ಕೃತಿ ಒಳಗೊಂಡಿದೆ.
-ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಗದುಗಿನ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST